ನಗರವೋ ನರಕವೋ ನರರ ಕೈಯಲ್ಲಿದೆ!
ಬೀದಿಬದಿ ವ್ಯಾಪಾರಿಗಳ ವಿಷಯ ಮಾತನಾಡುವಾಗ ಕೆಲವರು ಬೇರೆಯದ್ದೇ ವಾದ ಮಾಡುತ್ತಾರೆ. ಅದೇನೆಂದರೆ ಅಂಗಡಿ ತೆರೆದು, ಟ್ರೇಡ್ ಲೈಸೆನ್ಸ್ ಮಾಡಿಸಿ, ಟ್ಯಾಕ್ಸ್ ಕಟ್ಟಿ, ಬಾಡಿಗೆ ಕಟ್ಟಿ, ಲಕ್ಷಾಂತರ ರೂ ಸಾಲ ಮಾಡಿ ಸಾಮಾನು ಶೇಖರಿಸಿ ವ್ಯಾಪಾರ ವಹಿವಾಟು ಮಾಡಲು ಆಗದವರು ಸಣ್ಣಪುಟ್ಟ ಬೀದಿಬದಿ ವ್ಯಾಪಾರ ಮಾಡುತ್ತಾ ಬದುಕು ಸಾಗಿಸಬೇಕು ಎಂದುಕೊಂಡರೆ ತಪ್ಪೇನು? ಅವರ ಹೊಟ್ಟೆಯ ಮೇಲೆ ಹೊಡೆಯುವುದು ಸರಿಯಾ ಎಂದು ಪ್ರಶ್ನಿಸುತ್ತಾರೆ. ಇಲ್ಲಿ ತಪ್ಪು ಮತ್ತು ಸರಿಯ ಪ್ರಶ್ನೆಯೇ ಬರುವುದಿಲ್ಲ. ಯಾಕೆಂದರೆ ಬೀದಿಬದಿ ವ್ಯಾಪಾರ ಮಾಡುವುದು ತಪ್ಪಲ್ಲ. ಆದರೆ ಎಲ್ಲಿ, ಹೇಗೆ, ಏನು ವ್ಯಾಪಾರ ಮಾಡುತ್ತಾರೆ ಎನ್ನುವುದೇ ಈಗ ಇರುವ ಸಂಗತಿ.
ಮಂಗಳೂರು ಮಹಾನಗರ ಪಾಲಿಕೆಯವರು ಆಗಾಗ ಮನಸ್ಸು ಬಂದರೆ ಬೀದಿಬದಿ ವ್ಯಾಪಾರಿಗಳ ಮೇಲೆ ರೇಡ್ ಮಾಡುತ್ತಾರೆ. ಆಗ ಅಲ್ಲಿಗೆ ಓಡಿ ಬಂದು ಎಡಪಂಥಿಯ ಸಂಘಟನೆಗಳು ಪ್ರತಿಭಟನೆ ಮಾಡುತ್ತವೆ. ನೂರು ಜನ ವ್ಯಾಪಾರಿಗಳ ಬದುಕಿನ ಪ್ರಶ್ನೆ ಎಂದು ಕಮ್ಯೂನಿಸ್ಟ್ ಮುಖಂಡರು ಬೊಬ್ಬೆ ಹೊಡೆಯುತ್ತಾರೆ. ಅಲ್ಲಿ ನೂರು ಜನರ ಜೀವನ ನಡೆಯಬೇಕು ಎಂದು ಅವರು ಹೇಗೆ ಬೇಕಾದರೆ ಹಾಗೆ ವ್ಯಾಪಾರ ಮಾಡಲಿ ಎಂದು ಸುಮ್ಮನೆ ಬಿಟ್ಟರೆ ಆ ರಸ್ತೆಗಳಲ್ಲಿ ಹೋಗುವ ಎಷ್ಟೋ ಸಂಖ್ಯೆಯ ಪಾದಚಾರಿಗಳ, ವಾಹನ ಸವಾರರ ಪ್ರಾಣಕ್ಕೆ ಎರವಲಾಗುವ ಸಾಧ್ಯತೆ ಇದೆ. ಯಾಕೆಂದರೆ ಸೆಂಟ್ರಲ್ ಮಾರುಕಟ್ಟೆಯ ಸಮೀಪದ ಲಿಂಕಿಂಗ್ ಟವರ್ಸ್ ಇರುವ ರಸ್ತೆ ಯಾವಾಗಲೂ ಜನಜಂಗುಳಿಯಿಂದ ತುಂಬಿರುತ್ತದೆ. ಆ ರಸ್ತೆಯಲ್ಲಿ ಮೊದಲೇ ವಾಹನಗಳ ಓಡಾಟ ಜಾಸ್ತಿ. ಅದರೊಂದಿಗೆ ಲಿಂಕಿಂಗ್ ಟವರ್ಸ್ ನಲ್ಲಿ ಸರಿಯಾದ ಪಾರ್ಕಿಂಗ್ ಇಲ್ಲದೇ ಬಹುತೇಕ ಗ್ರಾಹಕರು ವಾಹನಗಳನ್ನು ಕಟ್ಟಡದ ಎದುರಿನಲ್ಲಿಯೇ ಪಾರ್ಕ್ ಮಾಡಿಕೊಂಡು ಹೋಗುತ್ತಾರೆ. ಅರ್ಧ ರಸ್ತೆ ಪಾರ್ಕಿಂಗ್ ಗೋಸ್ಕರ ಮೀಸಲಿಟ್ಟಂತೆ ಆಗಿದೆ. ಇನ್ನು ನಮ್ಮ ತೆರಿಗೆಯ ಹಣದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಆ ಕಟ್ಟಡದ ಎದುರಿನ ಫುಟ್ ಪಾತ್ ನವೀಕರಣ ಮಾಡಲಾಗಿದೆ. ಆದರೆ ಆ ಫುಟ್ ಪಾತ್ ಗಳನ್ನು ಬೀದಿಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿರುತ್ತಾರೆ. ಅವರು ಫುಟ್ ಪಾತ್ ಗಳನ್ನು ಮಾತ್ರವಲ್ಲ, ಒಂದಿಷ್ಟು ರಸ್ತೆಯನ್ನು ಕೂಡ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಾ ಇರುತ್ತಾರೆ. ಫುಟ್ ಪಾತಿಗೆ ಬ್ಯಾರಿಕೇಡ್ ಹಾಕಿದರೂ ಪ್ರಯೋಜನ ಇಲ್ಲ. ಹಾಗಾದರೆ ಪಾದಚಾರಿಗಳು, ವಾಹನ ಸವಾರರು ಎಲ್ಲಿ ಹೋಗಬೇಕು.
ವೆಂಡರ್ ಸ್ಟ್ರೀಟ್ ಯಾಕೆ?
ಅಲ್ಲಿ ಅವರು ವ್ಯಾಪಾರ ಮಾಡುವುದರಿಂದ ಅಪಾಯ ತಪ್ಪಿದ್ದಲ್ಲ. ಅದಕ್ಕಾಗಿ ಅವರು ವ್ಯಾಪಾರವೇ ಮಾಡಬಾರದು ಎನ್ನುವುದು ಕೂಡ ಸರಿಯಲ್ಲ. ಯಾಕೆಂದರೆ ಅವರ ಹೊಟ್ಟೆಪಾಡಿನ ವಿಷಯ. ಅದಕ್ಕೆ ಮೋದಿಯವರ ಕೇಂದ್ರ ಸರಕಾರ ಬೀದಿ ವ್ಯಾಪಾರಿಗಳ ವಿಧಿ (ವೆಂಡರ್ ಸ್ಟ್ರೀಟ್) ಎನ್ನುವ ಯೋಜನೆಯನ್ನು ರೂಪಿಸಿದೆ. ಆ ಮೂಲಕ ನಗರದ ಕೆಲವು ಸ್ಥಳಗಳನ್ನು ನಿಗದಿಗೊಳಿಸಿ ಅಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎನ್ನುವ ನಿಯಮ ಇದೆ. ಅದಕ್ಕಾಗಿ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ಕೊಡುವ ಸ್ಕೀಮ್ ಕೂಡ ಇದೆ. ಮಂಗಳೂರಿನಲ್ಲಿಯೂ ಇಂತಹ ಯೋಜನೆ ಅನುಷ್ಟಾನಗೊಳಿಸಲು ಪ್ರಯತ್ನಿಸಲಾಗಿದೆ. ಆದರೆ ಪಾಲಿಕೆ ನಿಗದಿಗೊಳಿಸಿದ ಜಾಗದಲ್ಲಿ ಈ ವ್ಯಾಪಾರಿಗಳು ವ್ಯಾಪಾರಕ್ಕೆ ಕೂರುವುದಿಲ್ಲ. ಇದರಿಂದ ಅಂತಹ ಸ್ಥಳಗಳು ಪಾಳುಬಿದ್ದಂತೆ ಆಗಿವೆ. ಇನ್ನು ಈ ವ್ಯಾಪಾರಿಗಳು ವ್ಯಾಪಾರ ಮಾಡುವ ಕೆಎಸ್ ಆರ್ ಟಿಸಿ, ಕಂಕನಾಡಿ, ಮಣ್ಣಗುಡ್ಡೆ, ಮಂಗಳಾ ಕ್ರೀಡಾಂಗಣದ ಬಳಿ ಸಿಲೆಂಡರ್, ಗ್ಯಾಸ್ ಬಳಸಿ ಆಹಾರ ತಯಾರಿಸಿ ಮಾರುತ್ತಾರೆ. ಇದರ ಸನಿಹದಲ್ಲಿಯೇ ಕೆಲವರು ಸಿಗರೇಟ್ ಸೇದುತ್ತಾ ನಿಂತಿರುತ್ತಾರೆ. ಗೂಡಂಗಡಿಯ ಸುತ್ತಲೂ ಮಹಿಳೆಯರು, ಮಕ್ಕಳು ಇರುತ್ತಾರೆ. ಎಲ್ಲಿಯಾದರೂ ಸ್ವಲ್ಪ ಹೆಚ್ಚು ಕಡಿಮೆ ಆದರೆ ಎಲ್ಲರನ್ನು ದೇವರೇ ಉಳಿಸಬೇಕು.
ಏನು ಬೇಕಾದರೂ ಮಾರಬಹುದಾ?
ಇನ್ನೊಂದು ವಿಷಯ ಏನೆಂದರೆ ಬೀದಿಬದಿ ವ್ಯಾಪಾರಿಗಳು ಇಂತಹುದೇ ಮಾರಬೇಕು ಎನ್ನುವ ನಿಯಮ ಇದೆ. ಆದರೆ ಇವರಲ್ಲಿ ಕೆಲವರು ಚೈನೀಸ್ ಆಹಾರ ಖಾದ್ಯವನ್ನು ಸೇರಿಸಿ ತಿನ್ನುವ ಅಷ್ಟೂ ತಿಂಡಿಗಳನ್ನು ಅಲ್ಲಿಯೇ ತಯಾರಿಸಿ ಮಾರುತ್ತಾರೆ. ಇನ್ನು ಈ ಬೀದಿಬದಿ ವ್ಯಾಪಾರಿಗಳು ತಮ್ಮದೇ ಸಿಂಡಿಕೇಟ್ ಮಾಡಿಕೊಂಡು ವ್ಯಾಪಾರ ಮಾಡುತ್ತಾರೆ. ಯಾರಾದರೂ ಬಂದರೆ ಇವರು ಅವರನ್ನು ಓಡಿಸುತ್ತಾರೆ. ಈಗ 280 ನೋಂದಾಯಿತ ಬೀದಿಬದಿ ವ್ಯಾಪಾರಿಗಳು ಇದ್ದಾರೆ. ಅವರಿಗೆ ಇಂತಿಂತಹ ಬೇರೆ ಬೇರೆ ಸ್ಥಳಗಳನ್ನು ನಿಗದಿಪಡಿಸಿ ಅಲ್ಲಿಯೇ ವ್ಯಾಪಾರ ಮಾಡಬೇಕು ಎಂದು ಹೇಳಬೇಕು. ಅವರು ತಮ್ಮ ಏರಿಯಾ ಬಿಟ್ಟು ಬರಬಾರದು ಎಂಬ ನಿಯಮ ತರಬೇಕು. ಪಾಪದವರು ಬದುಕಬೇಕು ಎನ್ನುವುದು ಎಷ್ಟು ಮುಖ್ಯವೋ, ಎಲ್ಲರೂ ಕೂಡ ಹೀಗೆ ಸುಲಭದ ದಾರಿ ಕಂಡು ಹಿಡಿದು ರಸ್ತೆಯ ಮೇಲೆ ವ್ಯಾಪಾರಕ್ಕೆ ಇಳಿದರೆ ಅದನ್ನು ವ್ಯವಸ್ಥಿತ ನಗರ ಎನ್ನುತ್ತಾರಾ ಅಥವಾ ನರಕ ಎನ್ನುತ್ತಾರಾ? ಅವರೇ ಯೋಚಿಸಬೇಕು.
Leave A Reply