ವಾಸ್ತವ ಬೇರೆ, ಆಸೆ ಬೇರೆ!
ನೀವು ಸ್ವಚ್ಚ ಸರ್ವೇಕ್ಷಣ್ ಅಭಿಯಾನ ಎನ್ನುವ ಕೇಂದ್ರ ಸರಕಾರದ ಯೋಜನೆಯನ್ನು ಕೇಳಿರುತ್ತೀರಿ. ಅದಕ್ಕೆ ಸಂಬಂಧಪಟ್ಟಂತೆ ನೀವು ಗೂಗಲ್ ನಲ್ಲಿ ಸ್ವಚ್ಚ ಸರ್ವೇಕ್ಷಣ್ ಅಭಿಯಾನ ಎಂದು ಟೈಪ್ ಮಾಡಿದರೆ ಒಂದು ಸೈಟ್ ಒಪನ್ ಆಗುತ್ತದೆ. ಅದರಲ್ಲಿ ಅವರು ಕೆಲವು ಪ್ರಶ್ನೆಗಳನ್ನು ಡ್ರಾಫ್ಟ್ ಮಾಡಿದ್ದಾರೆ. ಅದನ್ನು ನೀವು ತುಂಬಿಸಿ ಕಳಿಸಿದರೆ ನಿಮ್ಮ ನಗರ ಕೂಡ ಅಪ್ಪಿತಪ್ಪಿ ಪ್ರಶಸ್ತಿಗೆ ಭಾಜನವಾದರೂ ಆಗಬಹುದು. ಅದರಲ್ಲಿ ಮೊದಲ ಪ್ರಶ್ನೆ ನಿಮ್ಮ ಊರು ಯಾವಾಗಲೂ ಸ್ವಚ್ಚವಾಗಿರುತ್ತದೆಯಾ? ಮಂಗಳೂರಿನವರು ಏನೆಂದು ಉತ್ತರ ಕೊಡಬೇಕು. ಎರಡನೇ ಪ್ರಶ್ನೆ ನಿಮಗೆ ಕಸ ಬಿಸಾಡಲು ಯಾವಾಗಲೂ ಡಸ್ಟ್ ಬಿನ್ ಲಭ್ಯವಿದೆಯಾ? ಇದಕ್ಕೆ ಮಂಗಳೂರಿಗರು ಉತ್ತರ ಹೌದು ಎಂದು ಯಾವತ್ತಾದರೂ ಕೊಡಲು ಆಗುತ್ತದೆಯಾ? ಮೂರನೇ ಪ್ರಶ್ನೆ: ನಿತ್ಯ ಮನೆಮನೆ ಕಸ ಸಂಗ್ರಹ ಆಗುತ್ತದೆಯಾ? ಇದಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಆರವತ್ತು ವಾರ್ಡಿನ ನಾಗರಿಕರಲ್ಲಿ ಎಷ್ಟು ಜನ ಹೌದು ಎಂದು ಉತ್ತರ ಬರೆಯಲು ಆಗುತ್ತದೆ. ನಿಮ್ಮ ಐನೂರು ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ಇದೆಯಾ ಎಂದು ಕೇಳಲಾಗಿದೆ. ಉತ್ತರ ಬರೆಯುವ ಮೊದಲು ನೀವು ಹತ್ತು ನಿಮಿಷ ಯೋಚಿಸಬೇಕು. ಇಂತಹ ಇನ್ನಷ್ಟು ಪ್ರಶ್ನೆಗಳು ಇರುತ್ತವೆ. ಆದರೆ ಯಾವುದಕ್ಕೂ ಖುಷಿಯಿಂದ ಉತ್ತರ ಬರೆಯುವ ಪರಿಸ್ಥಿತಿಯಲ್ಲಿ ಮಂಗಳೂರಿನವರು ಇಲ್ಲ. ಆದರೂ ಇಂತಹ ಅಭಿಯಾನದಲ್ಲಿ ಭಾಗವಹಿಸಿ ಮತ್ತು ನಮ್ಮ ಪಾಲಿಕೆಗೆ ಉತ್ತಮ ಅಂಕಗಳನ್ನು ಕೊಟ್ಟು ಉತ್ತಮ ಗ್ರೇಡಿನಲ್ಲಿ ಪ್ರಶಸ್ತಿ ಬರುವ ಹಾಗೆ ಮಾಡಿ ಎಂದು ಪಾಲಿಕೆ ಕಡೆಯಿಂದ ನಗರದ ಜನರಿಗೆ ದಂಬಾಲು ಬೀಳಲಾಗುತ್ತದೆ.
ವಾಸ್ತವ ಬೇರೆ, ಆಸೆ ಬೇರೆ!
ಸ್ವಚ್ಚತಾ ಪ್ರಶಸ್ತಿ ಪಡೆಯಲು ಈ ಸೈಟ್ ನಲ್ಲಿ ಹೆಚ್ಚೆಚ್ಚು ನಾಗರಿಕರು ಫಾರಂ ತುಂಬಿ ಕಳುಹಿಸಿಕೊಡುವುದು ಅತ್ಯಗತ್ಯ, ಜನರಲ್ಲಿ ಜಾಗೃತಿ ಮೂಡಿಸಲು ಜಾಹೀರಾತು, ಹೋರ್ಡಿಂಗ್, ಪ್ರಕಟನೆ ಅದು ಇದು ಎಂದು ಪ್ರಚಾರ ಮಾಡಲಾಗುತ್ತದೆ. ನಮಗೂ ನಮ್ಮ ನಗರಕ್ಕೆ ಸ್ವಚ್ಚತೆಯಲ್ಲಿ ಪ್ರಶಸ್ತಿ ಬರಬೇಕು ಎನ್ನುವ ಆಸೆ ಇದೆ. ಆದರೆ ಹೃದಯದ ಮೇಲೆ ಕಲ್ಲಿಟ್ಟು, ಕಣ್ಣಿಗೆ ಬಟ್ಟೆ ಕಟ್ಟಿ ಅಭಿಯಾನದಲ್ಲಿ ಭಾಗವಹಿಸಲು ಮಾತ್ರ ಬೇಸರ. ಯಾಕೆಂದರೆ ವಾಸ್ತವ ಕಣ್ಣ ಮುಂದೆ ಇದೆಯಲ್ಲ. ಮಕ್ಕಳು ಶಾಲೆಯ ಆರಂಭದಿಂದ ಪ್ರತಿದಿನ ಪಾಠಗಳನ್ನು ರಿವಿಜನ್ ಮಾಡುತ್ತಾ ಬಂದರೆ ಪರೀಕ್ಷೆ ಹತ್ತಿರ ಬರುವಾಗ ಅಷ್ಟು ಟೆನ್ಷನ್ ನಲ್ಲಿ ಇರುವುದಿಲ್ಲ. ಅದೇ ಕಾಟಾಚಾರಕ್ಕೆ ಓದಿದಂತೆ ಮಾಡಿ ಇದ್ದುಬಿಟ್ಟರೆ ಪರೀಕ್ಷೆಯಲ್ಲಿ ಏನಾದರೂ ಮಾಡಿ ಮೇಲೆ ಹಾಕಪ್ಪ ಎಂದು ನಂಬಿದ ಎಲ್ಲಾ ಶಕ್ತಿಗಳನ್ನು ಪ್ರಾರ್ಥಿಸಬೇಕಾಗುತ್ತದೆ. ಮಂಗಳೂರಿನಲ್ಲಿ ಪ್ರತಿ ತಿಂಗಳು ಒಂದೂವರೆ ಕೋಟಿ ರೂಪಾಯಿಯಷ್ಟು ಹಣ ಸ್ವಚ್ಚತೆಗೆ ಖರ್ಚು ಆಗುತ್ತದೆ. ಹಾಗೆ ಖರ್ಚು ಆಗುವ ಹಣವನ್ನು ಕಳೆದ ಏಳೆಂಟು ವರ್ಷಗಳಿಂದ ಲೆಕ್ಕ ಹಾಕಿದರೆ ಇಷ್ಟೊತ್ತಿಗೆ ಮಂಗಳೂರು ಸಿಂಗಾಪುರ ಆಗಬೇಕಿತ್ತು. ಆದರೆ ನಮ್ಮ ಊರು ಹೇಗಿದೆ. ಪಾಲಿಕೆಯವರು ಗುತ್ತಿಗೆದಾರರಿಂದ ಕೆಲಸ ಮಾಡಿಸುವುದಿಲ್ಲ. ಗುತ್ತಿಗೆ ತೆಗೆದುಕೊಂಡ ಕಂಪೆನಿ ಇವರಿಗೆ ಬಗ್ಗುವುದಿಲ್ಲ. ಬೆರಳೆಣಿಕೆಯ ಕಡೆ ಸಿಸಿಟಿವಿ ಅಳವಡಿಸಿ ಅಲ್ಲಿ ಕಸ ಹಾಕುವವರನ್ನು ಹಿಡಿದು ದಂಡ ಹಾಕಿದ್ದೇವೆ ಎಂದು ಪಾಲಿಕೆಯವರು ಮಾಧ್ಯಮಗಳಲ್ಲಿ ಹೇಳುತ್ತಾರೆ. ಅದು ಬಿಟ್ಟರೆ ಬೇರೆ ಏನಿದೆ? ಎಷ್ಟೋ ಕಡೆ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಏರಿಯಾಗಳಲ್ಲಿ ತ್ಯಾಜ್ಯದ ರಾಶಿ ಬಂದು ಬಿದ್ದರೂ ಕೇಳುವವರಿಲ್ಲ. ಡಿವೈಡರ್, ಫುಟ್ ಪಾತ್ ಗಳ ಕೆಳಗೆ ಗುಡಿಸುವವರಿಗೆ ಗತಿ ಇಲ್ಲ. ಒಂದು ಮೀಟರ್ ತೋಡನ್ನು ಸ್ವಚ್ಚ ಮಾಡುವುದು ಇಲ್ಲಿಯ ತನಕ ಎಷ್ಟು ಸಲ ನಡೆದಿದೆಯೋ ಪಾಲಿಕೆಯವರಿಗೆ ಗೊತ್ತೆ ಇಲ್ಲ. ಹೀಗೆಲ್ಲಾ ಇರುವಾಗ ನಾವು ತಿರುಕನ್ನು ಕನಸನ್ನು ಕಾಣುತ್ತಾ ಪ್ರಶಸ್ತಿಯನ್ನು ನಿರೀಕ್ಷೆ ಮಾಡುವುದು ನಿಜಕ್ಕೂ ನಮಗೆ ನಾವೇ ಮಾಡುವ ಆತ್ಮದ್ರೋಹ.
ಪ್ಲಾಸ್ಟಿಕ್ ನಿಷೇಧ ಕೂಡ ಹಗಲುಗನಸು!
ಇನ್ನು ಕಳೆದ ತಿಂಗಳು ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ನಿಷೇಧ ಅಭಿಯಾನವನ್ನು ಆಚರಿಸಲಾಯಿತು. ಏಕಬಳಕೆ ಪ್ಲಾಸ್ಟಿಕ್ ಅನ್ನು ಎಲ್ಲಿಯಾದರೂ ಬಳಸುತ್ತಿದ್ದರೆ ಉದಾಹರಣೆಗೆ ಕ್ಯಾರಿ ಬ್ಯಾಗ್, ಬ್ಯಾನರ್ಸ್, ಬಂಟಿಂಗ್ಸ್, ಫ್ಲೆಕ್ಸ್, ಕಪ್, ಸ್ಪೂನ್, ಶೀಟ್, ಸ್ಟ್ರಾ, ಥರ್ಮಕಾಲ್ ಸಹಿತ ಅವುಗಳ ಮೇಲೆ ಕ್ರಮ ತೆಗೆದುಕೊಳ್ಳಲು ಪಾಲಿಕೆ ಏನಾದರೂ ಮಾಡಬೇಕಿತ್ತು. ಆದರೆ ಆಗಲಿಲ್ಲ. ಮೂಲ್ಕಿ, ಪುತ್ತೂರು ಸಹಿತ ಕೆಲವು ಸ್ಥಳಿಯಾಡಳಿತದವರು ಅಲ್ಲಲ್ಲಿ ರೇಡ್ ಮಾಡಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದಾರೆ. ಆದರೆ ಎಲ್ಲಿಯಾದರೂ ಮಹಾನಗರ ಪಾಲಿಕೆಯ ಒಳಗೆ ಹೀಗೆ ರೇಡ್ ಆಗಿರುವುದನ್ನು ನೋಡಿದ್ದಿರಾ? ಏಕೆ ಆಗಲ್ವಾ? ಎರಡು ಕಡೆ ಬಿಸಿ ಮುಟ್ಟಿಸಿದರೆ 2016 ರಿಂದ ಜಾರಿಯಲ್ಲಿರುವ ಏಕಬಳಕೆ ಪ್ಲಾಸ್ಟಿಕ್ ನಿಷೇಧಕ್ಕೂ ಅರ್ಥ ಬರುತ್ತಿತ್ತು. ಆದರೆ ಇವರು ಮಾಡಿಲ್ಲ?
Leave A Reply