ಜೈ ಭೀಮ್ ಸಿನೆಮಾಕ್ಕೆ ರಾಷ್ಟ್ರಪ್ರಶಸ್ತಿ ಸಿಗಬೇಕಿತ್ತು. ಯಾಕೆಂದರೆ…
ಸಿನೆಮಾಗಳಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗಳ ಘೋಷಣೆಯಾಗಿದೆ. 69 ನೇ ನ್ಯಾಶನಲ್ ಫಿಲಂ ಆವಾರ್ಡ್ ಗಳಲ್ಲಿ ಜೈ ಭೀಮ್ ಸಿನೆಮಾಕ್ಕೆ ಯಾವುದೇ ಕ್ಯಾಟಗರಿಯಲ್ಲಿ ಒಂದೇ ಒಂದು ಪ್ರಶಸ್ತಿ ಕೂಡ ಲಭಿಸಿಲ್ಲ ಎನ್ನುವುದಕ್ಕೆ ತೆಲುಗು ಸ್ಟಾರ್ ನಾನಿ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಹಿಂದುಳಿದವರ ಮೇಲೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ನಡೆಸುವ ದಬ್ಬಾಳಿಕೆಯ ಕಥೆ ಹೊಂದಿರುವ ಜೈ ಭೀಮ್ ಸಿನೆಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಬರಬೇಕಿತ್ತು ಎಂದು ಸಿನಿಪ್ರಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಜೈ ಭೀಮ್ ಕಣ್ಣು ತೆರೆಸುವ ಸಿನೆಮಾ. ರಾಜ್ಯದ ಗಡಿಭಾಗದಲ್ಲಿ ವಾಸಿಸುವ ಜನರು ಅದು ಆದಿವಾಸಿ ಎಂದು ಬೇಕಾದರೆ ಅಂದುಕೊಳ್ಳಿ, ಸರಕಾರದ ದಾಖಲೆಗಳಲ್ಲಿರುವ ಹಿಂದುಳಿದ ಜಾತಿಯವರು ಎಂದು ಅಂದುಕೊಳ್ಳಿ, ಗಿರಿಜನರು ಎಂದು ಅಂದುಕೊಳ್ಳಿ ಅವರು ಹೇಗೆ ಸುಲಭವಾಗಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎನ್ನುವುದು ನಗರದಲ್ಲಿ ವಾಸಿಸುವ ಸುಶಿಕ್ಷಿತರೆನಿಸಿಕೊಂಡ ಜನರಿಗೆ ಗೊತ್ತೇ ಆಗುವುದಿಲ್ಲ.
ಕಥೆ ನಡೆಯುವುದೇ ಹಳ್ಳಿಯಂಚಿನ ಪ್ರದೇಶದಲ್ಲಿ. ಅಲ್ಲೊಂದು ಹಳೆ ಪೊಲೀಸ್ ಠಾಣೆ. ಅದರ ಠಾಣಾ ವ್ಯಾಪ್ತಿಯಲ್ಲಿ ಪ್ರಮುಖರೊಬ್ಬರ ಮನೆಯಲ್ಲಿ ಬಂಗಾರ ಕದ್ದುಹೋಗುತ್ತದೆ. ಅವರು ಪೊಲೀಸರಿಗೆ ದೂರು ಕೊಡುತ್ತಾರೆ. ಅದನ್ನು ಕದ್ದವರು ಪೊಲೀಸರಿಗೆ ಅದರಲ್ಲಿ ಪಾಲು ಕೊಟ್ಟು ತಮ್ಮನ್ನು ಬಂಧಿಸದಂತೆ ನೋಡಿಕೊಳ್ಳುತ್ತಾರೆ. ಕಳ್ಳತನ ಯಾವುದಾದರೂ ಪಾಪದವರ ಮೇಲೆ ಹಾಕಿ ಬಂಧಿಸಲು ಪೊಲೀಸರು ಹೊರಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ಊರಂಚಿನಲ್ಲಿ ಗುಡಿಸಲು ಕಟ್ಟಿ ಬದುಕು ಸಾಗಿಸುವ ಒಂದು ಗುಂಪು ಕಣ್ಣಿಗೆ ಬೀಳುತ್ತದೆ. ಅದರಲ್ಲಿ ಮೂವರನ್ನು ಎತ್ತಿ ಹಾಕಿ ತಂದು ಕಳ್ಳತನ ಒಪ್ಪಿಕೊಳ್ಳುವಂತೆ ಥರ್ಡ್ ರೇಟ್ ಪೊಲೀಸ್ ಟಾರ್ಚರ್ ನೀಡುತ್ತಾರೆ. ಪೊಲೀಸರ ಹೊಡೆತ ತಾಳಲಾರದೇ ರಾತ್ರಿ ಒಬ್ಬ ಲಾಕಪ್ಪಿನಲ್ಲಿ ಪ್ರಾಣ ಬಿಡುತ್ತಾನೆ. ಅವನನ್ನು ಊರ ಸರಹದ್ದಿನಲ್ಲಿ ಹಾಕಿ ಅಪಘಾತ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತದೆ. ಉಳಿದ ಇಬ್ಬರನ್ನು ಬೇರೆ ಪೊಲೀಸ್ ಸ್ಟೇಶನ್ ಲಾಕಪ್ಪಿಗೆ ಹಾಕಿ ಅವರು ಎಸ್ಕೇಪ್ ಆದರು ಎಂದು ಕಥೆ ಕಟ್ಟಲಾಗುತ್ತದೆ.
ಸತ್ತವನ ಬಸುರಿ ಹೆಂಡತಿಗೆ ನ್ಯಾಯ ಕೊಡಿಸಲು ನಾಯಕ ಸೂರ್ಯ ಹೇಗೆ ಹೋರಾಡುತ್ತಾನೆ. ಪ್ರಾಣವನ್ನು ಪಣಕ್ಕಿಟ್ಟು ಅವಳಿಗೆ ಮತ್ತು ಅವಳ ಮಗುವಿಗೆ ನ್ಯಾಯ ಕೊಡಿಸುತ್ತಾನೆ ಎನ್ನುವುದನ್ನು ನಿರ್ದೇಶಕ ಗ್ಯಾನವೆಲ್ ಅದ್ಭುತವಾಗಿ ಬರೆದು ಚಿತ್ರೀಕರಿಸಿದ್ದಾರೆ. ನಾಯಕ ನಟ ಸೂರ್ಯ ಎಂದಿನಂತೆ ಶಾಂತ ನಟನೆ. ಪೋಷಕ ಪಾತ್ರಧಾರಿಗಳು ಕಣ್ಣ ಮುಂದೆನೆ ಇದ್ದಾರೋ ಎನಿಸುವಂತೆ ನಟನೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ನೈಜ ಕಥಾ ಎಳೆಯನ್ನು ಅಚ್ಚುಕಟ್ಟಾದ ಚಿತ್ರಕಥೆಯ ಮೂಲಕ ಜನರಿಗೆ ತಲುಪಿಸಿದ ಜೈ ಭೀಮ್ ಗೆ ಕಥೆ ಸಹಿತ ಯಾವುದೇ ವಿಭಾಗದಲ್ಲಿಯೂ ರಾಷ್ಟ್ರೀಯ ಪ್ರಶಸ್ತಿ ಸಿಗದೇ ಇರುವುದು ಚಿತ್ರಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ.
Leave A Reply