ಸುಪ್ರೀಂಕೋರ್ಟ್ ನಿಯಮ ಪಾಲಿಸಲ್ವಾ ಆಯುಕ್ತರೇ?
ಬೆಂಗಳೂರಿನ ಕಾಂಗ್ರೆಸ್ ಕಚೇರಿಯ ಮುಂದೆ ಫ್ಲೆಕ್ಸ್ ಹಾಕಿದ್ದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರಿಗೆ 50000 ರೂಪಾಯಿ ದಂಡ ವಿಧಿಸಿತು. ನಾನೇ ಮಾದರಿಯಾಗುತ್ತೇನೆ ಎಂದು ಡಿಕೆಶಿ ದಂಡ ಕಟ್ಟಿದರು. ಗುಲ್ಬರ್ಗಾದಲ್ಲಿ ಫ್ಲೆಕ್ಸ್ ಹಾಕಿದ್ದಕ್ಕೆ ಪ್ರಿಯಾಂಕ್ ಖರ್ಗೆ ದಂಡ ಕಟ್ಟಿದರು. ಹೀಗೆ ಕಾಂಗ್ರೆಸ್ ಈ ಫ್ಲೆಕ್ಸ್ ವಿಷಯದಲ್ಲಿ ಮಾದರಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ. ಆದರೆ ಬಿಬಿಎಂಪಿ, ಗುರ್ಬರ್ಗಾ ಪಾಲಿಕೆಗೆ ಇರುವ ಇಚ್ಚಾಶಕ್ತಿ ನಮ್ಮ ಮಂಗಳೂರು ಮಹಾನಗರ ಪಾಲಿಕೆಗೆ ಇಲ್ವಲ್ಲಾ ಎಂದು ನೋಡಿದಾಗ ತುಂಬಾ ಆಶ್ಚರ್ಯವಾಗುತ್ತದೆ ಮತ್ತು ಇವರ ನಿರ್ಲಕ್ಷ್ಯತನದ ಬಗ್ಗೆ ತಾತ್ಸಾರ ಮೂಡುತ್ತದೆ.
ಯಾಕೆ ಮನಪಾ ಗಟ್ಟಿ ನಿರ್ಧಾರ ಮಾಡಲ್ಲ!
ಕಾಂಗ್ರೆಸ್ಸಿನ ರಾಜ್ಯ ಸರಕಾರವೇ ಫ್ಲೆಕ್ಸ್ ವಿರುದ್ಧ ಅಭಿಯಾನವನ್ನು ಆರಂಭಿಸಿರುವಾಗ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆಗೆ ಯಾಕೆ ಫ್ಲೆಕ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಜುಗರ? ನೈತಿಕತೆ ಇಲ್ವಾ? ಪಾಲಿಕೆಯ ಕಟ್ಟಡ ಇರುವ ಲಾಲ್ ಭಾಗ್ ನಲ್ಲಿಯೇ ಫುಟ್ ಪಾತ್ ಉದ್ದಕ್ಕೂ ಫ್ಲೆಕ್ಸ್ ಗಳ ಬಾಲವೇ ಉದ್ದಕ್ಕೆ ಹರಡಿಕೊಂಡಿರುತ್ತದೆ. ಇನ್ನು ಗಣೇಶ್ ಚೌತಿಯ ಸಡಗರ ಶುರು. ನನ್ನದು ಒಂದು ಇರಲಿ ಎಂದು ಎಲ್ಲಾ ಕಡೆ ಗಣೇಶೋತ್ಸವದ ಫ್ಲೆಕ್ಸ್ ನಿಲ್ಲಿಸುವುದರಲ್ಲಿ ಸ್ಪರ್ಧೆ ಇದ್ದೇ ಇದೆ. ಫ್ಲೆಕ್ಸ್ ಹಾಕಿಸುವವರಿಗೆ ದೇವರ ಮೇಲಿನ ಭಕ್ತಿ 10% ಮಾತ್ರ. ಎಲ್ಲರಿಗೂ ತಮ್ಮ ಸಂಸ್ಥೆ, ಅಂಗಡಿ, ಮಳಿಗೆ, ಸಂಘಟನೆಯ ಹೆಸರು ದೊಡ್ಡದಾಗಿ ಬರೆಯಬೇಕು ಎನ್ನುವುದೇ ಮುಖ್ಯ ಉದ್ದೇಶ. ಇಡೀ ಫ್ಲೆಕ್ಸ್ ನಲ್ಲಿ ಒಂದು ಮುಷ್ಟಿ ಜಾಗ ಗಣೇಶನ ಚಿತ್ರಕ್ಕೆ ಮೀಸಲಾಗಿದ್ದರೆ ಉಳಿದ ಕಡೆ ಎಲ್ಲಾ ಹಾಕಿಸಿದವರ ಜಾಹೀರಾತೇ ತುಂಬಿರುತ್ತದೆ. ಒಟ್ಟಿನಲ್ಲಿ ತಾವು ಮಿಂಚಲು ಗಣೇಶೋತ್ಸವ ಒಂದು ನೆಪವಾಗಿ ಹೆಚ್ಚಿನವರು ಬಳಕೆ ಮಾಡುತ್ತಾರೆ.
ಕಣ್ಣುಮುಚ್ಚಿ ಕುಳಿತ ಪಾಲಿಕೆ!
ಪಾಲಿಕೆ ಕಮೀಷನರ್ ಹಾಗಾದ್ರೆ ಸುಪ್ರೀಂಕೋರ್ಟ್ ಆದೇಶವನ್ನು ಫ್ಲೆಕ್ಸ್ ವಿಷಯದಲ್ಲಿ ಯಾಕೆ ಅನುಷ್ಟಾನಕ್ಕೆ ತರಲು ಹೋಗುವುದಿಲ್ಲ. ಹಾಗಾದರೆ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮಂಗಳೂರಿಗೆ ಅನ್ವಯಿಸುವುದಿಲ್ವಾ? ಒಂದು ವೇಳೆ ಮೇಯರ್ ಮತ್ತು ಆಯುಕ್ತರು ಮನಸ್ಸು ಮಾಡಿದ್ರೆ ಎಷ್ಟು ಹೊತ್ತಿನ ಕೆಲಸ? ಈಗಲೂ ಪಾಲಿಕೆಯಲ್ಲಿ ಫ್ಲೆಕ್ಸ್ ವಿಷಯದಲ್ಲಿ ಹಳೆ ಸಂಪ್ರದಾಯವೇ ಮುಂದುವರೆದಿದೆ. ಕಂದಾಯ ವಿಭಾಗಕ್ಕೆ ಫ್ಲೆಕ್ಸ್ ಹಾಕಿಸುವವರು ತಾವು ಇಂತಿಂತಹ ಕಡೆ ಇಷ್ಟು ಫ್ಲೆಕ್ಸ್ ಹಾಕಿಸಲು ಅನುಮತಿ ಕೊಡಿ ಎಂದು ಲಿಖಿತ ಅರ್ಜಿ ನೀಡಿ ಆ ಫ್ಲೆಕ್ಸ್ ಹಾಕಿಸಲು ಕಂದಾಯ ಇಲಾಖೆ ಯಾವುದೋ ದಶಕದಲ್ಲಿ ನಿಗದಿಗೊಳಿಸಿದ ಚಿಲ್ಲರೆಯನ್ನು ಕಟ್ಟಿ ಅನುಮತಿ ಪಡೆಯಲಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅರ್ಜಿಯಲ್ಲಿ ಐದು ಫ್ಲೆಕ್ಸ್ ಅನುಮತಿ ಕೇಳಿದ್ದರೆ ವಾಸ್ತವದಲ್ಲಿ ನೀವು ಮಂಗಳೂರಿನಲ್ಲಿ ಒಂದು ಸುತ್ತು ಹಾಕಿ ಬಂದರೆ ಐದು ಅನುಮತಿ ಪಡೆದುಕೊಂಡವರ ಇಪ್ಪತ್ತು ಫ್ಲೆಕ್ಸ್ ಇರುತ್ತದೆ. ಹಾಗಾದರೆ 15 ಫ್ಲೆಕ್ಸ್ ಪಕ್ಕಾ ಅನಧಿಕೃತ. ಹಾಗಂತ ಫ್ಲೆಕ್ಸ್ ಹಾಕಿಸುವವರು ಆ ವ್ಯಕ್ತಿ, ಸಂಘಟನೆಯಿಂದ ಹಣ ತೆಗೆದುಕೊಂಡಿರುತ್ತಾರೆ. ಈಗ ಒಂದು ವೇಳೆ ಕಂದಾಯ ವಿಭಾಗದವರು ಹೋಗಿ ಆ ಫ್ಲೆಕ್ಸ್ ಗಳಲ್ಲಿ ಒಂದೆರಡು ಇಳಿಸಿದ ಕೂಡಲೇ ಆ ಸಂಬಂಧಪಟ್ಟ ಸಂಘಟನೆ, ವ್ಯಕ್ತಿ ಬಂದು ಯಾಕೆ ತೆಗೆಸಿದ್ದೀರಿ ಎಂದು ಕೇಳಿದಾಗ ನೀವು ಅನುಮತಿ ಕೇಳಿದ್ದು ಐದಕ್ಕೆ ಎನ್ನಬಹುದಲ್ಲ? ಆಗ ಅವರು ನೇರವಾಗಿ ಫ್ಲೆಕ್ಸ್ ಹಾಕಿಸುವ ಗುತ್ತಿಗೆ ಪಡೆದುಕೊಂಡವರ ವಿರುದ್ಧ ತಿರುಗಿ ಬೀಳುತ್ತಾರೆ. ಸತ್ಯ ಹೊರಗೆ ಬರುತ್ತದೆ. ಇದ್ಯಾವುದೂ ಮಾಡದ ಪಾಲಿಕೆ ಕಣ್ಣು, ಕಿವಿ, ಬಾಯಿ ಮುಚ್ಚಿದ ಮೂರು ಮಂಗಗಳ ಗೆಟಪಿನಲ್ಲಿ ಕುಳಿತುಕೊಂಡಿದೆ. ಈ ವಿಷಯದಲ್ಲಿ ರಾಜ್ಯ ಸರಕಾರ ಪಾಲಿಕೆಗೆ ಬಿಸಿ ಮುಟ್ಟಿಸಬೇಕು!
Leave A Reply