ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಅವಧಿಗೆ ಪ್ರಧಾನ ಮಂತ್ರಿ ಆಗಲೇಬಾರದು ಎನ್ನುವ ಗುರಿ ಇಟ್ಟುಕೊಂಡು ಹುಟ್ಟಿರುವ ವಿಪಕ್ಷಗಳ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿದೆಯಾ ಎನ್ನುವ ಪ್ರಶ್ನೆಗೆ ಉತ್ತರ “ಇಲ್ಲ”. ಹೀಗೆಂದು ನಾವು ಇದನ್ನು ಹೇಳುತ್ತಿಲ್ಲ. ಇದನ್ನು ಹೇಳುತ್ತಿರುವವರು ಸ್ವತ: ರಾಹುಲ್ ಗಾಂಧಿ. ಟೈಮ್ಸ್ ನೌ ಟಿವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಕೆಲವು ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಸವಾಲುಗಳಿವೆ ಎಂದು ರಾಹುಲ್ ತಿಳಿಸಿದ್ದಾರೆ. ಈ ವಿಷಯ ನೂರಕ್ಕೆ ನೂರರಷ್ಟು ನಿಜ. ಇದಕ್ಕಿರುವ ಕಾರಣಗಳನ್ನು ಪಟ್ಟಿ ಮಾಡೋಣ.
ಆಪ್ ದೆಹಲಿ ಮತ್ತು ಪಂಜಾಬ್ ತನ್ನದು ಎಂದಿದೆ!
ಮೊದಲನೇಯದಾಗಿ ಇ.0.ಡಿ.ಯಾ ಮೈತ್ರಿಕೂಟದ ಅಂಗಪಕ್ಷ ಆಮ್ ಆದ್ಮಿ ಪಾರ್ಟಿಯ ವಿಷಯವನ್ನೇ ತೆಗೆದುಕೊಳ್ಳೋಣ. ಪಂಜಾಬ್ ಮತ್ತು ದೆಹಲಿಯಲ್ಲಿ ಬಲಿಷ್ಟವಾಗಿರುವ ಆಪ್ ಅಲ್ಲಿ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿಯೂ ಸ್ಪರ್ಧಿಸಲು ಸಿದ್ಧವಾಗಿದೆ. ಪಂಜಾಬಿನಲ್ಲಿ ಇರುವ ಒಟ್ಟು 13 ಲೋಕಸಭಾ ಕ್ಷೇತ್ರಗಳಲ್ಲಿ ಆಪ್ ಸಂಸದರು ಇರುವುದು ಒಬ್ಬರೇ. ಕಾಂಗ್ರೆಸ್ 8, ಭಾರತೀಯ ಜನತಾ ಪಾರ್ಟಿ 2, ಶೀರೋಮಣಿ ಅಕಾಲಿ ದಳ 2 ಸೀಟುಗಳನ್ನು ಗೆದ್ದಿದೆ. ಆದರೆ ಈಗ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವುದರಿಂದ ಅಲ್ಲಿ ಕಾಂಗ್ರೆಸ್ಸಿಗೆ ಹಿಂದಿನ ಬಲಾಢ್ಯ ನಾಯಕರು ಯಾರೂ ಇಲ್ಲ. ಇನ್ನು ಕಳೆದ ಲೋಕಸಭಾ ಚುನಾವಣೆಯಿಂದ ಈ ಬಾರಿ ಚುನಾವಣೆಯ ನಡುವೆ ಐದು ವರ್ಷಗಳಲ್ಲಿ ಪಂಜಾಬ್ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ರಾಜ್ಯ ರಾಜಕೀಯದ ಚಹರೆ ಬದಲಾಗಿದೆ. ಹೀಗಿರುವಾಗ ಕಾಂಗ್ರೆಸ್ಸಿಗೆ ಅಷ್ಟೇ ಶೇಕಡಾವಾರು ಮತಗಳನ್ನು ಅಲ್ಲಿ ಮತ್ತೇ ಪಡೆಯುತ್ತೇನೆ ಎಂಬ ವಿಶ್ವಾಸ ಇಲ್ಲ. ಅಲ್ಲಿ ಅದಕ್ಕೆ ಆಪ್ ಬೆಂಬಲ ಬೇಕೆ ಬೇಕು. ಆದ್ದರಿಂದ ತನ್ನ ಹಾಲಿ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಟ್ಟು ಉಳಿದ
ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸಲಿ ಎಂದು ಕಾಂಗ್ರೆಸ್ ಬಯಸುತ್ತಿದೆ. ಆದರೆ ಇದನ್ನು ಒಪ್ಪುವುದು ಸುತಾರಾಂ ಇಷ್ಟವಿಲ್ಲದ ಆಪ್ ಎನು ಮಾಡಲಿದೆ ಎನ್ನುವುದು ಈಗ ನೋಡಬೇಕಾಗಿರುವ ವಿಷಯ. ಅದೇ ರೀತಿಯಲ್ಲಿ ದೆಹಲಿಯಲ್ಲಿಯೂ ಒಂದೇ ಒಂದು ಸೀಟ್ ಬಿಟ್ಟುಕೊಡಲು ಆಪ್ ಸಿದ್ಧವಾಗಿಲ್ಲ. ದೆಹಲಿಯಲ್ಲಿ ಏಳು ಲೋಕಸಭಾ ಕ್ಷೇತ್ರಗಳಿವೆ. ಪ್ರಸ್ತುತ ಏಳರಲ್ಲಿಯೂ ಬಿಜೆಪಿ ಸಂಸದರಿದ್ದಾರೆ. ಆದರೆ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ತಾನು ಸ್ಪರ್ಧಿಸಿದರೆ ಗೆಲ್ಲಬಹುದಾ ಎನ್ನುವ ನಿರೀಕ್ಷೆ ಆಮ್ ಆದ್ಮಿ ಪಕ್ಷದಲ್ಲಿದೆ. ಅದಕ್ಕಾಗಿ ಅವರು ಕೇಜ್ರಿವಾಲ್ ಹವಾ ಬಳಸಿ ಹೆಚ್ಚು ಸ್ಥಾನ ಗೆಲ್ಲಲು ಹವಣಿಸುತ್ತಿದೆ. ಅದಕ್ಕಾಗಿ ಏಳರಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ಆದರೆ ಮೈತ್ರಿ ಎಂದ ಮೇಲೆ ಕಾಂಗ್ರೆಸ್ ತನಗೂ ಒಂದಿಷ್ಟು ಸ್ಥಾನ ನೀಡಲೇಬೇಕು ಎನ್ನುವ ಬೇಡಿಕೆ ಇಟ್ಟಿದೆ. ಕಾಂಗ್ರೆಸ್ ಅಸಮರ್ಥತೆಯ ವಿರುದ್ಧವೇ ಹೋರಾಡಿ ಗೆಲ್ಲುವ ಆಮ್ ಆದ್ಮಿಯ ಸ್ಥಳೀಯ ಘಟಕದ ನಾಯಕರು ಕಾಂಗ್ರೆಸ್ಸಿಗೆ ಸೀಟ್ ಬಿಟ್ಟುಕೊಡಲು ತಯಾರಿಲ್ಲ.
ಉಳಿದ ರಾಜ್ಯಗಳಲ್ಲಿ ಅದೇ ಕಥೆ!
ಇನ್ನು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಹಳೆ ಭದ್ರಕೋಟೆಯಲ್ಲಿ ಎಲ್ಲಾ ಸ್ಥಾನಗಳಲ್ಲಿಯೂ ಸ್ಪರ್ಧಿಸಲು ಬಯಸುತ್ತಿದೆ. ಆದರೆ ಸಮಾಜವಾದಿ ಪಾರ್ಟಿ ಸದ್ಯ ಮೂರು ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ತಯಾರಿದೆ. ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಕಾಂಗ್ರೆಸ್ಸಿಗೆ ಕೇವಲ ನಾಲ್ಕು ಸೀಟುಗಳಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶ ನೀಡಲಿದ್ದಾರೆ. ಇನ್ನು ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಒಂದೇ ಒಂದು ಸೀಟು ಕಾಂಗ್ರೆಸ್ಸಿಗಾಗಲಿ, ಕಮ್ಯೂನಿಸ್ಟರಿಗಾಗಲಿ ಬಿಟ್ಟುಕೊಡಲು ತಯಾರಿಲ್ಲ. ಇನ್ನು ಕೇರಳದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರು ಅಜೀವ ವೈರಿಗಳು. ಅಲ್ಲಿ ಮೈತ್ರಿಯ ಮಾತು ದೂರದೂರಕ್ಕೂ ಸಾಧ್ಯವಿಲ್ಲ. ಇನ್ನು ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ಅಧಿಕಾರ ಕಳೆದುಕೊಂಡ ಶಾಕ್ ನಿಂದ ಹೊರಗೆ ಬಂದಿಲ್ಲ. ಶರದ್ ಪವಾರ್ ಸದ್ಯ ವಿಪಕ್ಷಗಳ ಮೈತ್ರಿಕೂಟದ ಸಭೆಗಳಿಗೆ ಹೋಗುತ್ತಿದ್ದಾರಾದರೂ ಕೊನೆಯ ಘಳಿಗೆಯಲ್ಲಿ ಅವರನ್ನು ನಂಬಬಹುದಾ ಎನ್ನುವುದು ಕಾಂಗ್ರೆಸ್ ಪ್ರಶ್ನೆ. ಹೀಗೆ ಪ್ರತಿ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಳೀಯ ಪಕ್ಷಗಳಿಂದ ಸ್ಪರ್ಧೆ ಎದುರಿಸುತ್ತಿದೆ. ಇದನ್ನೆಲ್ಲಾ ಯೋಚಿಸಿಯೇ ರಾಹುಲ್ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ಗೊಂದಲಗಳನ್ನು ನಿವಾರಿಸಲು ಅವರು ತಯಾರಾಗಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಸಿಗಲು ಬೆರಳೆಣಿಕೆಯ ತಿಂಗಳುಗಳು ಬಾಕಿ ಇವೆ!
Leave A Reply