ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂಭತ್ತು ಸಾವಿರಕ್ಕೂ ಅಧಿಕ ನಾಡದೋಣಿಗಳಿವೆ. 30 ಸಾವಿರದಷ್ಟು ಜನರು ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಉಡುಪಿಯಲ್ಲಿ 1600 ಕ್ಕೂ ಹೆಚ್ಚಿನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಆಳಸಮುದ್ರ ಬೋಟ್ ಗಳಿವೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆ ಆಸರೆಯಾಗಿದೆ.
ಆದರೆ ಈ ಬಾರಿ ಮೀನುಗಾರಿಕೆ ಋತುವಿನಲ್ಲಿಯೇ ಮೀನುಗಾರರು ಸಂಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಮುಖ್ಯ ಕಾರಣ ಏನು ಎನ್ನುವುದನ್ನು ನೋಡಿಕೊಂಡು ಬರೋಣ.
ಮೀನುಗಾರಿಕಾ ಋತುವಿನ ಆರಂಭದಲ್ಲಿ ಭಾರೀ ಮಳೆ, ಚಂಡಮಾರುತದಿಂದಾಗಿ ಮೀನುಗಾರಿಕೆಗೆ ಅಡ್ಡಿಯಾಗಿತ್ತು. ಸದ್ಯ ಮೀನುಗಾರಿಕೆಗೆ ಪೂರಕ ವಾತಾವರಣವಿದ್ದರೂ ಮತ್ಸ್ಯಕ್ಷಾಮದಿಂದಾಗಿ ಮೀನೆ ಸಿಗದ ವಾತಾವರಣ ಸೃಷ್ಟಿಯಾಗಿದೆ.
ಹವಾಮಾನ ವೈಪರೀತ್ಯ, ಅವೈಜ್ಞಾನಿಕ ಮತ್ಸ್ಯಬೇಟೆ, ಅವ್ಯಾಹತವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ನಿಂದಾಗಿ ವರ್ಷದಿಂದ ವರ್ಷಕ್ಕೆ ಮೀನಿನ ಸಂತತಿ ನಶಿಸಿ ಮತ್ಸ್ಯಕ್ಷಾಮ ಹೆಚ್ಚುತ್ತಿದೆ. ಇದು ಕರಾವಳಿಯ ಮೀನುಗಾರಿಕಾ ವಲಯದ ಜತೆಗೆ ಆರ್ಥಿಕತೆಗೂ ಪೆಟ್ಟು ಕೊಡುತ್ತಿದೆ. ಅಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ ಮಂಗಳೂರು, ಮಲ್ಪೆ, ಗಂಗೊಳ್ಳಿ, ಮರವಂತೆ, ಭಟ್ಕಳ, ಕಾರವಾರದಲ್ಲಿ ಉತ್ತಮ ಮೀನುಗಾರಿಕೆ ನಡೆಯುತ್ತಿತ್ತು. ಆದರೆ ಈ ಬಾರಿ ಅಲ್ಪಪ್ರಮಾಣದ ಬಂಗುಡೆ ಬಿಟ್ಟರೆ ಬೂತಾಯಿ, ಅಂಜಲ್, ಪಾಂಪ್ಲೆಟ್ ತೀರಾ ವಿರಳವಾಗಿದೆ. ಬಿಳಿ ಅಂಜಲ್ ಅಪರೂಪದಲ್ಲಿ ಅಪರೂಪವಾಗಿದೆ. ಹೇರಳ ಮೀನು ಸಿಗದೇ ಇರುವುದರಿಂದ ಮೀನು ಮಾರುಕಟ್ಟೆಯಲ್ಲಿ ಮೀನಿನ ದರವೂ ಹೆಚ್ಚಳವಾಗಿದ್ದು, ಮತ್ಯ್ಥ ಪ್ರಿಯರ ಜೇಬಿಗೆ ಕನ್ನ ಹಾಕಿದೆ!
Leave A Reply