ಮಂಗಳೂರಿನ ಕಥೆ ಏನಾಗಿತ್ತು?
ಗೋಡೌನ್ ನಿಂದ ಅಕ್ಕಿ ಕದಿಯುವ ಕಳ್ಳರಿಗೆ ಯಾಕೆ ಶಿಕ್ಷೆ ಆಗಲ್ಲ!
ಚನ್ನಪಟ್ಟಣದಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಸಂಘದ ಗೋದಾಮಿನಿಂದ 55 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಅಕ್ಕಿ ಮತ್ತು ರಾಗಿ ನಾಪತ್ತೆಯಾಗಿದೆ. ನಾಪತ್ತೆ ಎಂದರೆ ಅದು ಮ್ಯಾಜಿಕ್ ತರಹ ಮಾಯಾವಾಗುವುದಿಲ್ಲ, ಅದು ಕಳ್ಳತನವಾಗಿದೆ. ಸದ್ಯ ಗೋದಾಮಿನ ವ್ಯವಸ್ಥಾಪಕನನ್ನು ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕಿಯವರು ಕೊಟ್ಟ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ನಂತರ ಈಗ ಆ ಗೋಡೌನಿನ ಲೈಸೆನ್ಸ್ ರದ್ದು ಮಾಡುವ ಪ್ರಕ್ರಿಯೆ ಜಿಲ್ಲಾಡಳಿತದಿಂದ ಆರಂಭವಾಗಿದೆ. ಈ ಕೇಸು ಇನ್ನೊಂದು ಕೆಲವು ದಿನಗಳ ಒಳಗೆ ಧೂಳು ಹಿಡಿಯುತ್ತದೆ. ನಂತರ ಎಲ್ಲರಿಗೂ ಮರೆತುಹೋಗುತ್ತದೆ. ಬಂಧಿತನಾದವರು ಬಿಡುಗಡೆ ಹೊಂದಿರುತ್ತಾರೆ. ಹೊಸ ಜಾಗದಲ್ಲಿ ನೇಮಕವಾಗಿರುತ್ತಾರೆ. ಅವರೇ ಮತ್ತೇ ಕಳ್ಳತನದಲ್ಲಿ ತೊಡಗಲುಬಹುದು. ಯಾಕೆಂದರೆ ಒಮ್ಮೆ ಕಳ್ಳತನದ ರುಚಿ ಹತ್ತಿದರೆ ಅದು ಸುಲಭದಲ್ಲಿ ಹೋಗುವುದಿಲ್ಲ.
ಮಂಗಳೂರಿನ ಕಥೆ ಏನಾಗಿತ್ತು?
ಇದಕ್ಕೆ ನನ್ನ ಬಳಿ ಪ್ರಕರಣವೊಂದು ಇದೆ. ಮೂರು ವರ್ಷಗಳ ಹಿಂದೆ ಮಂಗಳೂರಿನ ಅಕ್ಕಿಯ ಗೋಡೌನ್ ನಿಂದ ರೇಶನ್ ಅಂಗಡಿಗೆ ಹೋಗುವ ಅಕ್ಕಿಯ ಮೂಟೆಗಳು ಖಾಸಗಿ ಮಿಲ್ಲಿಗೆ ಹೋಗುತ್ತಿತ್ತು. ಅದನ್ನು ಮಾಜಿ ಮೇಯರ್ ದಿವಾಕರ್ ಅವರು ಪತ್ತೆಹಚ್ಚಿ ಮಾಧ್ಯಮಗಳ ಮೂಲಕ ಬೆಳಕಿಗೆ ತಂದಿದ್ದರು. ಆಗ ಆ ಪ್ರಕರಣದಲ್ಲಿ ರಾಜನ್ ನಾಯರ್ ಎಂಬ ಅಧಿಕಾರಿ ಸಸ್ಪೆಂಡ್ ಆಗಿದ್ದರು. ಆ ಕೇಸು ನ್ಯಾಯಾಲಯದಲ್ಲಿ ಇಲ್ಲಿಯ ತನಕ ಒಮ್ಮೆಯೂ ವಿಚಾರಣೆಗೆ (ಹೀಯರಿಂಗ್) ಬಂದಿಲ್ಲ. ಆ ರಾಜನ್ ನಾಯರ್ ಆ ಪ್ರಕರಣದ ಬಳಿಕ ಬೇರೆ ಬೇರೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಸಸ್ಪೆಂಡ್ ಆಗಿ ಮತ್ತೆ ಕೆಲಸಕ್ಕೆ ಸೇರಿ ಅದರಲ್ಲಿ ಮುಂದುವರೆಯುತ್ತಿದ್ದಾರೆ. ಹಾಗಾದರೆ ಕಳ್ಳತನವಾಗುತ್ತಿದ್ದ ಅಕ್ಕಿಯ ಕಥೆ?
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೆ ಬಿಪಿಎಲ್ ನವರಿಗೆ 15 ರೂಪಾಯಿಗೆ ಒಂದು ಕೆಜಿಯಂತೆ ಹತ್ತು ಕೆಜಿ ಸಿಗುತ್ತಿದ್ದ ಅಕ್ಕಿ ಈಗ ಸಿಗುತ್ತಿಲ್ಲ. ಉದಾಹರಣೆಗೆ ನವೆಂಬರ್ ತಿಂಗಳಲ್ಲಿ ಒಂದು ರೇಶನ್ ಅಂಗಡಿಗೆ 140 ಕೆಜಿ ಅಕ್ಕಿ ಬೇಕು ಎಂದಾದರೆ ಅಲ್ಲಿ 70 ಕೆಜಿ ಮಾತ್ರ ಸೇರುತ್ತಿದೆ. ಆಗ ಮೊದಲು ಬಂದವರಿಗೆ ಎಂದು ಕೊಟ್ಟು ಬಿಟ್ಟರೆ ಅದು ಖಾಲಿಯಾದ ತಕ್ಷಣ ನಂತರ ಬಂದವರಿಗೆ ಏನು ಮಾಡುವುದು. ಕೆಲವರು ರೇಶನ್ ಅಂಗಡಿಗೆ ಅಕ್ಕಿಗೆ ಬರುವುದಿಲ್ಲ ಎಂದುಕೊಂಡರೂ 20- 40 ಕೆಜಿ ಉಳಿಯಬಹುದು. ಹಾಗಂತ ಅದು ಸಾಕಾಗುವುದಿಲ್ಲ. ಇದರಿಂದ ಅಂಗಡಿ ಮಾಲೀಕರ ಮತ್ತು ಗ್ರಾಹಕರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ.
ತಪ್ಪು ಎಲ್ಲಿ ನಡೆಯುತ್ತಿದೆ!
ಈಗ ಹಿಂದಿನಂತೆ ಅಂಗಡಿಗಳಲ್ಲಿ ಅಕ್ಕಿ ಸಹಿತ ರೇಶನ್ ವಿಷಯದಲ್ಲಿ ಗೋಲ್ಮಾಲ್ ಮಾಡಲು ಆಗುವುದಿಲ್ಲ. ಯಾಕೆಂದರೆ ನೀವು ರೇಶನ್ ಅಂಗಡಿಯಲ್ಲಿ ಕಾರ್ಡ್ ಕೊಟ್ಟಾಗ ನಿಮ್ಮ ಮೊಬೈಲಿಗೆ ಬರುವ ಓಟಿಪಿ ಸಂಖ್ಯೆಯನ್ನು ಹೇಳಿದ ನಂತರವೇ ಅಲ್ಲಿ ಬಿಲ್ ಜನರೇಟ್ ಆಗುವುದು. ಆದ್ದರಿಂದ ಇಂತಿಂತಹ ಅಂಗಡಿಯಿಂದ ಇಂತಿಷ್ಟು ವಸ್ತು ಬಿಕರಿಯಾಗಿದೆ ಎನ್ನುವ ಲೆಕ್ಕ ಆಹಾರ ಇಲಾಖೆಯ ಸಿಸ್ಟಮ್ ನಲ್ಲಿ ಇರುತ್ತದೆ. ಅದನ್ನು ನೋಡಿ ಅವರು ಮುಂದಿನ ತಿಂಗಳು ಯಾವುದು ಎಷ್ಟು ಬೇಕು ಎನ್ನುವುದನ್ನು ಪೂರೈಕೆ ಮಾಡುತ್ತಾರೆ. ಆದರೆ ಮಾಲ್ ಕಡಿಮೆ ಬಂದರೆ ರೇಶನ್ ಅಂಗಡಿಯವರು ತಾನೇ ಎನು ಮಾಡಿಯಾರು? ಹೀಗೆ ಸರಕಾರಗಳ ಅಕ್ಕಿಯನ್ನು ಕೂಡ ಖದೀಯುವವರಿಗೆ ಒಳ್ಳೆಯದಾಗುತ್ತಾ ಅಥವಾ ಅವರ ಬದುಕು ಮುಂದೆ ಅಕ್ಕಿ ತಿನ್ನಲಾಗದ ಪರಿಸ್ಥಿತಿಗೆ ಬಂದು ತಲುಪುತ್ತಾ, ದೇವರೇ ನೋಡಬೇಕು!
Leave A Reply