ಪಾಲಕ್ಕಾಡಿನಲ್ಲಿ ನಡೆಯಿತು ರೈಲ್ವೆ ಬಳಕೆದಾರರ ಸಭೆ!
ಮೂರು ರೈಲಿನ ಬಗ್ಗೆ ನನ್ನ ನಿಖರವಾದ ಅಭಿಪ್ರಾಯವನ್ನು ಪಾಲಕಾಡ್ ವಿಭಾಗ ಬಳಕೆದಾರರ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದ್ದೇನೆ. ಅದು ಆಗದಿದ್ದರೆ ಈ ಸಲ ಹೋರಾಟ ಗ್ಯಾರಂಟಿ ಎಂದು ತಿಳಿಸಲಾಗಿದೆ. ಮೂರು ರೈಲುಗಳಾದ ಮಂಗಳೂರು – ಮುಂಬೈ ಸಿಎಸ್ ಟಿ ಸೂಪರ್ ಫಾಸ್ಟ್ ಎಕ್ಸಪ್ರೆಸ್, ಮಂಗಳೂರು – ಬೆಂಗಳೂರು ಗೋಮಟೇಶ್ವರ ಎಕ್ಸಪ್ರೆಸ್ ಹಾಗೂ ವಿಜಯಪುರ – ಮಂಗಳೂರು ಎಕ್ಸಪ್ರೆಸ್ ಅನ್ನು ಮಂಗಳೂರು ಸೆಂಟ್ರಲ್ ನಿಂದ ಓಡಿಸಬೇಕು. ಯಾಕೆಂದರೆ ಜಂಕ್ಷನ್ ನಿಂದ ಓಡಿಸಿದರೆ ಅಲ್ಲಿಗೆ ಹೋಗಲು ಮತ್ತು ಅಲ್ಲಿಂದ ಬರಲು 300 ರಿಂದ 400 ರೂಪಾಯಿ ರಿಕ್ಷಾಗೆ ಬೇಕಾಗುತ್ತದೆ. ಆದ್ದರಿಂದ ಜನಸಾಮಾನ್ಯರಿಗೆ ಉಪಯೋಗವಾಗಬೇಕಾದರೆ ಸೆಂಟ್ರಲ್ ತನಕ ತರಲೇಬೇಕು. ಹಿಂದೆ ನೀವು ಫ್ಲಾಟ್ ಫಾರಂ ಕೊರತೆ ಇದೆ ಎಂದು ಸಬೂಬು ಹೇಳುತ್ತಿದ್ದೀರಿ. ಇನ್ನು ಆ ಸಮಸ್ಯೆ ನಿವಾರಣೆ ಆಗಲಿದೆ. ಹಾಗಂತ ಕೇರಳ, ತಮಿಳುನಾಡಿನ ಬೇರೆ ಬೇರೆ ಪ್ರದೇಶಗಳಿಗೆ ಸೆಂಟ್ರಲ್ ನಿಂದ ರೈಲು ಓಡಿಸುತ್ತಿದ್ದೀರಿ, ಆಗ ನಿಮಗೆ ಫ್ಲಾಟ್ ಫಾರಂ ಕೊರತೆ ಆಗಿಲ್ಲ. ನಿಮ್ಮ ಮಲತಾಯಿ ಧೋರಣೆ ಖಂಡಿಸಿ ಫ್ಲಾಟ್ ಫಾರಂ ಲೋಕಾರ್ಪಣೆ ಆದ ತಕ್ಷಣ ಈ ಮೇಲಿನ ರೈಲುಗಳನ್ನು ಸೆಂಟ್ರಲ್ ನಿಂದ ಓಡಿಸದಿದ್ದರೆ ವಂದೇ ಭಾರತ್ ಬಿಟ್ಟು ಬೇರೆ ಎಲ್ಲಾ ರೈಲುಗಳನ್ನು ಓಡದಂತೆ ಮಾಡಬೇಕಾಗುತ್ತೇವೆ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದೇನೆ.
ಟಾಯ್ಲೆಟ್ ಸಮಸ್ಯೆ ಬಗ್ಗೆನೂ ಧ್ವನಿ!
ಮೊದಲು ಆಗುವುದೇ ಇಲ್ಲ ಎಂದು ಹಟ ಹಿಡಿದಿದ್ದ ಅಧಿಕಾರಿಗಳು ನಂತರ ಗೋಮಟೇಶ್ವರ ಎಕ್ಸಪ್ರೆಸ್ ಹಾಗೂ ವಿಜಯಪುರ ಎಕ್ಸಪ್ರೆಸ್ ಸೆಂಟ್ರಲ್ ತನಕ ಓಡಿಸಲು ಒಪ್ಪಿದಂತೆ ಮಾತನಾಡಿದ್ದಾರೆ. ಇನ್ನು ಮುಂಬೈ ರೈಲು ಕೊಂಕಣ ರೈಲ್ವೆ ಮಾರ್ಗದಿಂದ ಹೋಗುವುದರಿಂದ ಟೈಮ್ ಸೆಟ್ ಮಾಡಬೇಕು ಎಂದು ರೊಳ್ಳೆ ತೆಗೆದಿದ್ದಾರೆ. ನೀವು ಟೈಮ್ ಸೆಟ್ ಮಾಡಿ, ನಾವು ಕೊಂಕಣ ರೈಲ್ವೆಯೊಂದಿಗೆ ಸಂವಹನ ಮಾಡುತ್ತೇವೆ ಎಂದು ಹೇಳಿದ್ದೇವೆ.
ಇನ್ನು ಸೆಂಟ್ರಲ್ ರೈಲು ನಿಲ್ದಾಣದ 2 – 3 ಫ್ಲಾಟ್ ಫಾರಂನಲ್ಲಿ ಟಾಯ್ಲೆಟ್ ಗಳು ಇದ್ದರೂ ಅದಕ್ಕೆ ಬೀಗ ಹಾಕಿ ಇಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ವಿಶೇಷವಾಗಿ ವೃದ್ಧರಿಗೆ, ಹೆಣ್ಣುಮಕ್ಕಳಿಗೆ ತುರ್ತು ಮೂತ್ರಶಂಕೆಗೆ ಹೋಗಬೇಕಾದರೆ ಅವರು ಮೂರನೇ ಫ್ಲಾಟ್ ಫಾರಂನಿಂದ ಮೇಲ್ಸೇತುವೆ ದಾಟಿ ಮೊದಲ ಫ್ಲಾಟ್ ಫಾರಂಗೆ ಬಂದು ಮತ್ತೆ ಹಿಂತಿರುಗಿ ಹೋಗುವಷ್ಟರಲ್ಲಿ ರೈಲು ಮುಂದೆ ಸಾಗಿದರೆ ಏನು ಮಾಡುವುದು ಎಂದು ಕೇಳಿದೆ. ಅದಕ್ಕೆ ಇಲ್ಲಿಯವರೆಗೆ ಗುತ್ತಿಗೆದಾರರ ಸಮಸ್ಯೆ ಇತ್ತು. ಇನ್ನು ಮುಂದೆ ರೈಲ್ವೆ ಇಲಾಖೆಯೇ ಅದನ್ನು ನಿರ್ವಹಣೆ ಮಾಡಿ ಪ್ರಯಾಣಿಕರ ಬಳಕೆಗೆ ಅನುಕೂಲ ಮಾಡಿಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮೇಶ್ವರಂಗೆ ನೇರ ರೈಲು!
ಇನ್ನು ಮಂಗಳೂರು ಜಂಕ್ಷನ್ ನಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ನಗರಕ್ಕೆ ಬರಲು ಸಿಟಿ ಬಸ್ಸುಗಳ ವ್ಯವಸ್ಥೆ ಮಾಡಿದ್ದರೂ ವಿವಿಧ ಕಾರಣಗಳಿಂದ ಅದು ಸಮರ್ಪಕವಾಗಿ ಜಾರಿಯಾಗಿಲ್ಲ. ಮುಖ್ಯವಾಗಿ ಬಸ್ ನಿಲುಗಡೆಗೆ ಜಾಗವನ್ನೇ ಐಡೆಂಟಿಫೈ ಮಾಡಿಲ್ಲ. ರಿಕ್ಷಾದವರ ಉಪದ್ರವದಿಂದಾಗಿ ಬಸ್ಸುಗಳು ಎಲ್ಲೆಲ್ಲಿಯೋ ನಿಂತು ಪ್ರಯಾಣಿಕರನ್ನು ಹತ್ತಿಸಿ, ಇಳಿಸುವ ಪರಿಸ್ಥಿತಿ ಇದೆ ಎಂದೆ. ಇದರಿಂದ ಜನರು ತಾವು ಸಾಮಾನು ಸರಂಜಾಮ್ ಎತ್ತಿಕೊಂಡು ಬಸ್ಸಿನ ಬಳಿ ನಡೆದುಕೊಂಡು ಹೋಗಬೇಕು. ಬಸ್ ಜಂಕ್ಷನ್ ದ್ವಾರದ ಸನಿಹವೇ ನಿಲ್ಲಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದೇನೆ. ಅದಕ್ಕೆ ಅಧಿಕಾರಿಗಳು ಜಂಕ್ಷನ್ ರೈಲು ನಿಲ್ದಾಣ ಹತ್ತೂವರೆ ಕೋಟಿ ರೂಪಾಯಿಯಲ್ಲಿ ಮೇಲ್ದರ್ಜೆಗೊಳ್ಳುತ್ತಿದೆ. ಅದರ ಪರಿಶೀಲನೆಗೆ ಬರುವ ದಿನ ಜಾಗದ ಐಡೆಂಟಿಫಿಕೇಶನ್ ಮಾಡಲಾಗುವುದು ಎಂದಿದ್ದಾರೆ. ಇನ್ನು ಇಲ್ಲಿಯತನಕ ಮಂಗಳೂರಿನಿಂದ ರಾಮೇಶ್ವರಂ ಹೋಗಲು ನೇರ ರೈಲು ಸಂಪರ್ಕ ಇರಲಿಲ್ಲ. ಮಧುರೈ ಅಥವಾ ಕೊಯಮುತ್ತೂರಿಗೆ ಹೋಗಿಯೇ ಹೋಗಬೇಕಿತ್ತು. ಈಗ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದಿಂದ ನೇರ ರೈಲು ಸಂಪರ್ಕ ಆಗಿದೆ. ಅವರಿಗೆ ಜನರ ಪರವಾಗಿ ಅಭಿನಂದನೆಗಳು. ಕೊನೆಯದಾಗಿ ನಮ್ಮ ಕರಾವಳಿಯ ನಾಗರಿಕರು ಹೆಚ್ಚೆಚ್ಚು ರೈಲು ಸೇವೆಯನ್ನು ಬಳಸಬೇಕು. ಆಗ ನಮ್ಮ ಆಗ್ರಹಕ್ಕೂ ಅಧಿಕಾರಿಗಳು ಬಗ್ಗುತ್ತಾರೆ. ಸದ್ಯ ನಾನು ಆರಂಭದಲ್ಲಿ ಹೇಳಿದ ಮೂರು ರೈಲುಗಳನ್ನು ಸೆಂಟ್ರಲ್ ನಿಂದ ಓಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದೇನೆ. ಇದಕ್ಕೆ ನಮ್ಮ ಕರಾವಳಿಯ ರೈಲು ಪ್ರಯಾಣಿಕರು ಪಕ್ಷಾತೀತವಾಗಿ ಕೈಜೋಡಿಸುವಿರೆಂದು ನಂಬಿದ್ದೇನೆ!
Leave A Reply