ಅಧಿಕಾರಿಗಳು ಯಾಕೆ ಅಲ್ಲಿ ಹೋಗಲ್ಲ!
ನೂರು ಸಲ ಅದನ್ನು ಬರೆಯಲಿ!
ನಮ್ಮ ತೆರಿಗೆಯ ಹಣದಲ್ಲಿ ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತದೆ. ಅಧಿಕಾರಿಗಳು ಇರುವುದು ಜನರ ಕೆಲಸಗಳನ್ನು ಮಾಡಲಿಕ್ಕೆ. ಸರಕಾರ ಸಂಬಳ ಕೊಡುವುದು ಹೌದಾದರೂ ಸರಕಾರ ಸಂಬಳ ಕೊಡುವುದು ಜನರ ತೆರಿಗೆಯ ಹಣದಿಂದ. ಆದರೆ ಇದು ಮನಸ್ಸಿಗೆ ಹೋಗದಿದ್ದರೆ ಅಂತಹ ಸರಕಾರಿ ಅಧಿಕಾರಿಗಳಿಗೆ ನೂರು ಸಲ ” ನಮಗೆ ಸಂಬಳ ಕೊಡುವುದು ಜನರ ತೆರಿಗೆಯ ಹಣದಿಂದ ” ಎಂದು ಬರೆಯುವಂತಹ ಶಿಕ್ಷೆ ನೀಡಬೇಕು. ಚಿಕ್ಕದಿರುವಾಗ ಹೋಂವರ್ಕ್ ಮಾಡದೇ ಶಾಲೆಗೆ ಹೋದರೆ ಶಿಕ್ಷಕರು ” ನಾನು ನಾಳೆಯಿಂದ ನಿತ್ಯ ಹೋಂವರ್ಕ್ ಮಾಡಿಕೊಂಡು ಬರುತ್ತೇನೆ ” ಎಂದು ನೂರು ಸಲ ಬರೆಸುತ್ತಿದ್ದರು ಅಥವಾ ಏನಾದರೂ ಪಾಠಕ್ಕೆ ಸಂಬಂಧಿಸಿದ ವಾಕ್ಯಗಳನ್ನು ಹತ್ತು ಪುಟ ಬರೆಯುವ ಶಿಕ್ಷೆ ನೀಡುತ್ತಿದ್ದರು. ಇದು ಮಾಡಿದರೆ ಮಾತ್ರ ಅದು ಭವಿಷ್ಯದಲ್ಲಿ ಮನಸ್ಸಿನಲ್ಲಿ ಉಳಿಯುತ್ತಿತ್ತು. ಈಗ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೂ ಇಂತಹ ಒಂದು ಶಿಕ್ಷೆ ನೀಡಬೇಕು. ಯಾಕೆ ಎನ್ನುವುದೇ ಈ ಜಾಗೃತ ಅಂಕಣದ ಮುಖ್ಯ ವಿಷಯ.
ಮೂರು ಕಚೇರಿ, ನೂರು ಕತೆ!
ಮಂಗಳೂರು ಮಹಾನಗರ ಬೆಳೆದು ಅರವತ್ತು ವಾರ್ಡುಗಳು ಹುಟ್ಟಿಕೊಂಡ ನಂತರ ಇಷ್ಟು ದೊಡ್ಡ ವ್ಯಾಪ್ತಿಯನ್ನು ಸುಧಾರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಒಂದು ಉಪಾಯ ಮಾಡಲಾಯಿತು. ಹೇಗೂ ಅರವತ್ತು ವಾರ್ಡುಗಳು ಎಂದರೆ ಅದನ್ನು ಸಮನಾಗಿ ಮೂರು ವಿಂಗಡನೆ ಮಾಡಿ ಲಾಲ್ ಭಾಗಿನಲ್ಲಿರುವ ಮುಖ್ಯ ಕಚೇರಿಯ ಮೇಲಿದ್ದ ಹೊರೆಯನ್ನು ಉಳಿದ ಎರಡು ಉಪಕಚೇರಿಯ ತಲೆಯ ಮೇಲೆ ಹೊರಿಸಲಾಯಿತು. ಇದು ಅಧಿಕಾರಿಗಳ ಹೊಣೆಯನ್ನು ಇಳಿಸಿದ್ದು ಮಾತ್ರವಲ್ಲ, ಅರವತ್ತು ವಾರ್ಡುಗಳ ನಾಗರಿಕರಿಗೂ ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾವುದೋ ಮೂಲೆಯಿಂದ ಲಾಲ್ ಭಾಗ್ ತನಕ ಬರುವ ಅನಿವಾರ್ಯತೆಯನ್ನು ತಪ್ಪಿಸುವ ಉದ್ದೇಶ ಇತ್ತು. ಉದಾಹರಣೆಗೆ ಉಪಕಚೇರಿ ಆದ ಮೇಲೆ ಕಾಟಿಪಳ್ಳದ ಯಾವುದೋ ಅಡ್ಡರಸ್ತೆಯ ಹೆಣ್ಣುಮಗಳೊಬ್ಬಳು ತನ್ನ ದಾಖಲೆಯಲ್ಲಿನ ಲೋಪವನ್ನು ಸರಿ ಮಾಡಲು ಅಥವಾ ಅಧಿಕಾರಿಗಳಿಂದ ಏನಾದರೂ ದಾಖಲೆ ಮಾಡಿಸಿಕೊಳ್ಳಲು ಕಾಟಿಪಳ್ಳದಿಂದ ಲಾಲ್ ಭಾಗಿಗೆ ಇಪ್ಪತೈದು ರೂಪಾಯಿ ಹೋಗಲು, ಅಷ್ಟೇ ಹಣ ಹಿಂತಿರುಗಿ ಬರಲು ಖರ್ಚು ಮಾಡುವ ಅಗತ್ಯವಿರಲಿಲ್ಲ. ಅವಳು ಆ ಹಣದ ಅರ್ಧಕ್ಕಿಂತ ಕಡಿಮೆ ಖರ್ಚಿನಲ್ಲಿ ಸುರತ್ಕಲ್ ಉಪಕಚೇರಿಗೆ ಹೋಗಿ ಕೆಲಸ ಮಾಡಿಸಿಕೊಂಡು ಬರಬಹುದಿತ್ತು.
ಅಧಿಕಾರಿಗಳು ಯಾಕೆ ಅಲ್ಲಿ ಹೋಗಲ್ಲ!
ಜನರ ಅನುಕೂಲತೆಗಾಗಿ ಸುರತ್ಕಲ್ ಮತ್ತು ಕದ್ರಿ ಉಪಕಚೇರಿ ನಿರ್ಮಿಸಲಾಗಿದೆ. ಶಕ್ತಿನಗರದ ಓರ್ವ ಹಿರಿಯರು ತಮ್ಮ ಕೆಲಸ ಕಾರ್ಯ ಮಾಡಿಸಿಕೊಳ್ಳಲು ಲಾಲ್ ಭಾಗಿಗೆ ಬಂದು ಅಲ್ಲಿ ರಶ್ಶಿನಲ್ಲಿ ನಿಂತು ಏದುಸಿರು ಬಿಡುತ್ತಾ ಹೋಗಿಬರಬೇಕಾಗಿಲ್ಲ. ಅವರು ಕದ್ರಿಯಲ್ಲಿ ಅದನ್ನು ಮಾಡಿಸಿ ತೆರಳಬಹುದು. ಅದಕ್ಕಾಗಿ ನಮ್ಮ ತೆರಿಗೆ ಹಣದಿಂದ ಕಟ್ಟಡ ಕಟ್ಟಿ ಅಲ್ಲಿ ಅಧಿಕಾರಿಗಳನ್ನು ಸ್ಥಾಪಿಸಲಾಗಿದೆ. ಆದರೆ ಆ ಅಧಿಕಾರಿಗಳು ಅಲ್ಲಿ ಇರುತ್ತಾರಾ ಎನ್ನುವುದೇ ಪ್ರಶ್ನೆ. ಅಧಿಕಾರಿಗಳು ಅಲ್ಲಿ ಇರುತ್ತಾರೆ ಎಂದು ಕದ್ರಿ ಅಥವಾ ಸುರತ್ಕಲ್ ಕಡೆ ಆ ಭಾಗದ ನಾಗರಿಕರು ಹೋದರೆ ತಲೆಯ ಮೇಲೆ ಕೈ ಇಟ್ಟು ಬರಬೇಕಾಗುತ್ತದೆ. ಐವತ್ತು ಉಳಿಯುತ್ತಿದ್ದ ಕಡೆ ಅರವತ್ತು ರೂಪಾಯಿ ಖರ್ಚಾಗುವ ಪರಿಸ್ಥಿತಿ ಇದೆ. ಯಾಕೆಂದರೆ ಕಾಟಿಪಳ್ಳದಿಂದ ಒಂದು ಬಸ್ಸಿನಲ್ಲಿ ಸುರತ್ಕಲ್ ಬಸ್ ಸ್ಟಾಪಿಗೆ ಬಂದು ಅಲ್ಲಿಂದ ನಡೆದುಕೊಂಡು ಸುರತ್ಕಲ್ ಉಪಕಚೇರಿ ತನಕ ಹೋಗಿ ಅಲ್ಲಿ ಕಾರ್ಕ್ ಮತ್ತು ಇದ್ದರೆ ಸೂಪರಿಟೆಂಡೆಂಟ್ ಮುಖವನ್ನು ನೋಡಿ “ಎಕ್ಸಿಕ್ಯೂಟಿವ್ ಇಂಜಿನಿಯರ್, ಸಹಾಯಕ ನಗರ ಯೋಜನಾ ಅಧಿಕಾರಿ, ಹೆಲ್ತ್ ಇನ್ಸಪೆಕ್ಟರ್, ಪರಿಸರ ಅಭಿಯಂತರರು ಹೀಗೆ ಬೇರೆ ಬೇರೆ ಅಧಿಕಾರಿಗಳು ಇಲ್ಲಿ ಬಂದಿಲ್ಲ. ಅವರು ಸಿಗಬೇಕಾದರೆ ಲಾಲ್ ಭಾಗ್ ಆಫೀಸಿಗೆ ಹೋಗಬೇಕು” ಎಂದು ಕೇಳಿಸಿಕೊಂಡು ಅಲ್ಲಿಂದ ಬೇರೆ ಬಸ್ ಹಿಡಿದುಕೊಂಡು ಬರಬೇಕು. ಈ ಸಂತೋಷಕ್ಕೆ ನಾವು ಮೂರು ಮೂರು EEಗಳನ್ನು, AEEಗಳನ್ನು, ಹೀಗೆ ವಿವಿಧ ಹುದ್ದೆಗಳನ್ನು ಸೃಷ್ಟಿಸಿರುವುದಾ? ಎಲ್ಲಾ ಅಧಿಕಾರಿಗಳು ಲಾಲ್ ಭಾಗಿನಲ್ಲಿಯೇ ಟೆಂಟ್ ಹಾಕಿ ಕುಳಿತುಕೊಳ್ಳುವುದಾದರೆ ಮೂರು ಮೂರು ಹುದ್ದೆಗಳನ್ನು ಸೃಷ್ಟಿಸುವ ಅಗತ್ಯ ಇದೆಯಾ? ಅಷ್ಟು ಹೊಸ ಹುದ್ದೆಗಳಿಗೆ ಸಂಬಳ ಕೊಡುವುದು ಬೇಡವೇ? ಅದೇನು ಚಿಕ್ಕ ಸಂಬಳವೇ? ಲಕ್ಷಗಟ್ಟಲೆ ಖರ್ಚು ಮಾಡಿ ಅಧಿಕಾರಿಗಳನ್ನು ಹಿಡಿಯಲು ಹರಸಾಹಸ ಪಡುವುದಾದರೆ ಇದೆಲ್ಲಾ ಬೇಕಿತ್ತಾ? ಸದ್ಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಈ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಯಾವಾಗ ಆಗುತ್ತೆ ಎನ್ನುವುದನ್ನು ಕಾದು ನೋಡೋಣ!!
Leave A Reply