ಹೆಣ್ಣಿನ ವಿಷಯದಲ್ಲಿ ಇರಾಕ್ ಈ ಲೆವೆಲ್ಲಿಗೆ ಇಳಿಯಬಾರದಿತ್ತು!
ಇರಾಕ್ ಸಂಸತ್ತು ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಸ್ವಸ್ಥ ಸಮಾಜಕ್ಕೆ ಹೇಳಿ ಮಾಡಿಸಿದ್ದಲ್ಲ. ಅಲ್ಲಿ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು ನೇರವಾಗಿ ಒಂಭತ್ತು ವರ್ಷಕ್ಕೆ ಇಳಿಸುವ ನಿರ್ಧಾರಕ್ಕೆ ಜನಪ್ರತಿನಿಧಿಗಳು ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಅಲ್ಲಿನ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಒಂದು ವೇಳೆ ಆ ಮಸೂದೆಯನ್ನು ಸಂಸತ್ತು ಅಂಗೀಕರಿಸಿದರೆ 9 ವರ್ಷದ ಹೆಣ್ಣು ಮಕ್ಕಳ ವಿವಾಹವನ್ನು ಅಲ್ಲಿ ಮಾನ್ಯ ಎಂದು ಪರಿಗಣಿಸಲಾಗುತ್ತದೆ. ಇರಾಕ್ ನಲ್ಲಿ ಮಹಿಳೆಯರು ಮತ್ತು ಅನೇಕ ಮಾನವ ಹಕ್ಕುಗಳ ಸಂಘಟನೆಗಳು ಈ ಮಸೂದೆಯನ್ನು ವಿರೋಧಿಸುತ್ತಿವೆ.
ಈ ಮಸೂದೆಯಲ್ಲಿ ಹೆಣ್ಣು ಮಕ್ಕಳ ವಯಸ್ಸಿನ ಬಗ್ಗೆ ಮಾತ್ರ ಅಂಶಗಳಿಲ್ಲ. ಈ ಮಸೂದೆ ಅಂಗೀಕಾರವಾದರೆ 9 ವರ್ಷ ವಯಸ್ಸಿನ ಹುಡುಗಿಯರು ಮತ್ತು 15 ವರ್ಷ ವಯಸ್ಸಿನ ಹುಡುಗರನ್ನು ಮದುವೆಯಾಗಲು ಕಾನೂನಾತ್ಮಕವಾಗಿ ಅವಕಾಶ ನೀಡಿದಂತಾಗುತ್ತದೆ. ಇದು ಬಾಲ್ಯ ವಿವಾಹ ಮತ್ತು ಶೋಷಣೆಯನ್ನು ನಿಶ್ಚಿತವಾಗಿ ಹೆಚ್ಚಿಸುತ್ತದೆ. ಪ್ರಸ್ತುತ ಇರಾಕ್ ದೇಶದಲ್ಲಿ ವಧುವಿನ ಕನಿಷ್ಟ ವಯೋಮಿತಿ 18 ವರ್ಷಕ್ಕೆ ನಿಗದಿಯಾಗಿದೆ. ಭಾರತದಲ್ಲಿಯೂ ವಧುವಿನ ಕನಿಷ್ಟ ವಯೋಮಿತಿ 18. ವರನ ಕನಿಷ್ಟ ವಯೋಮಿತಿ 21 ವರ್ಷಕ್ಕೆ ನಿಗದಿಯಾಗಿದೆ. ಆದರೆ ಮುಸ್ಲಿಂ ಬಾಹುಳ್ಯದ ದೇಶವಾದ ಇರಾಕ್ ತನ್ನ ಕಾನೂನು ಬದಲಿಸಲು ಮುಂದಾಗಿರುವುದು ಅಲ್ಲಿನ ಪ್ರಜ್ಞಾವಂತರನ್ನು ಕೆರಳಿಸಿದೆ.
ಜೊತೆಯಲ್ಲಿಯೇ ಇರಾಕ್ ದೇಶದಲ್ಲಿ ವೈವಾಹಿಕ ಹಾಗೂ ಕೌಟುಂಬಿಕ ವಿಚಾರ ಸೇರಿದಂತೆ ವೈಯಕ್ತಿಕ ವ್ಯಾಜ್ಯಗಳನ್ನು ಪರಿಹರಿಸುವ ಅಧಿಕಾರವನ್ನು ಇಸ್ಲಾಮಿಕ್ ಧಾರ್ಮಿಕ
ಪ್ರಾಧಿಕಾರಗಳು ಅಥವಾ ಸಾಮಾನ್ಯ ನ್ಯಾಯಾಲಯ ಎರಡಕ್ಕೂ ನೀಡಲು ಅಲ್ಲಿನ ಸರಕಾರ ಮುಂದಾಗಿದೆ. ಒಂದು ವೇಳೆ ಈ ಕಾನೂನು ಜಾರಿಯಾದರೆ ಆಸ್ತಿ, ವಿಚ್ಚೇದನ, ಮಕ್ಕಳ ಹೊಣೆಗಾರಿಕೆ ವಿಚಾರದಲ್ಲಿ ಮಹಿಳೆಯರಿಗೆ ಅನ್ಯಾಯವಾಗುವ ಕೂಗು ಎದ್ದಿದೆ.
ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ, ಬಾಲ್ಯ ವಿವಾಹ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬ ಆತಂಕ ಜನರಿಂದ ವ್ಯಕ್ತವಾಗಿದೆ. ಮಹಿಳಾ ಹಕ್ಕುಗಳು ಹಾಗೂ ಲಿಂಗ ಸಮಾನತೆಗೆ ನಡೆಯುತ್ತಿರುವ ಹೋರಾಟಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂಬ ಆಕ್ರೋಶದ ಕೂಗು ಕೇಳಿ ಬಂದಿದೆ.
ಇಸ್ಲಾಮಿಕ್ ಷರಿಯಾ ಕಾನೂನಿಗೆ ಪೂರಕ ಎಂಬಂತೆ ರಚಿತವಾಗುತ್ತಿರುವ ಈ ಹೊಸ ಕಾನೂನಿನ ವಿರುದ್ಧ ಇರಾಕ್ ನ ಮಾನವ ಸಂಘಟನೆಗಳು, ಮಹಿಳಾ ಸಂಘಟನೆಗಳು ಸಿಡಿದೆದ್ದಿವೆ. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವುದರಿಂದ ಗರ್ಭಪಾತ, ಬಾಲ ಗರ್ಭಧಾರಣೆ, ಗರ್ಭಿಣಿಯರ ಸಾವು ಹಾಗೂ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಳ ಆಗುತ್ತವೆ ಎನ್ನುವುದು ನಿಶ್ಚಿತ. ಯುನಿಸೆಫ್ ನ ಪ್ರಕಾರ ಇರಾಕ್ ದೇಶದಲ್ಲಿ ಈಗಾಗಲೇ ಶೇ 28 ರಷ್ಟು ಬಾಲಕಿಯರು 18 ವರ್ಷ ತುಂಬುವ ಮುನ್ನವೇ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಒಂದು ವೇಳೆ ಈ ಕಾನೂನು ಜಾರಿಗೆ ಬಂದರೆ ಇರಾಕ್ ದೇಶದ ಪರಸ್ಥಿತಿಯೇ ಬದಲಾಗಲಿದೆ.
Leave A Reply