ಅತುಲ್ ಸುಭಾಷ್ ಹಾಗೂ ಸ್ರಿಷ್ಟಿ ತುಲಿ ಆತ್ಮಹತ್ಯೆ; ನ್ಯಾಯಾಂಗ ವ್ಯವಸ್ಥೆ ವ್ಯತ್ಯಾಸ…!?
ಇತ್ತೀಚೆಗೆ ಎರಡು ಆತ್ಮಹತ್ಯೆ ಪ್ರಕರಣಗಳು ಇಡೀ ದೇಶದ ಗಮನ ಸೆಳೆದಿವೆ. ಒಂದು ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ. ಇನ್ನೊಂದು ಏರ್ ಇಂಡಿಯಾ ಪೈಲೆಟ್ ಸ್ರಿಷ್ಟಿ ತುಲಿ ಆತ್ಮಹತ್ಯೆ ಪ್ರಕರಣ. ಈ ಎರಡು ಪ್ರಕರಣಗಳಲ್ಲಿ ಆರೋಪಗಳು ನೇರವಾಗಿ ಅವರ ಸಂಗಾತಿಯ ಮೇಲೆಯೇ ಇದ್ದವು. ಆದರೆ ಎರಡಕ್ಕೂ ಸಾಕಷ್ಟು ವ್ಯತ್ಯಾಸ ಇತ್ತು. ಮೊದಲನೇಯದಾಗಿ ಅತುಲ್ ಸುಭಾಷ್ ಪ್ರಕರಣದಲ್ಲಿ ಮೃತ ಸುಭಾಷ್ ಸಾಯುವ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. ಅದರೊಂದಿಗೆ ಒಂದೂವರೆ ಗಂಟೆಯ ವಿಡಿಯೋ ಕೂಡ ಮಾಡಿದ್ದರು. ಅದರಲ್ಲಿ ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಮನೆಯವರು ಹೇಗೆ ಕಾರಣ ಎಂದು ಇಂಚಿಂಚಾಗಿ ವಿವರಿಸಿದ್ದರು. ತನ್ನ ಮೇಲೆ ಸುಳ್ಳು ವರದಕ್ಷಿಣೆ ಪೀಡನಾ ಪ್ರಕರಣ, ಮೂರು ಕೋಟಿ ರೂಪಾಯಿ ಜೀವನಾಂಶ ಬೇಕೆಂದು ಹಟ, ಮಗನನ್ನು ನೋಡಲು ಬಿಡದೇ ಇರುವುದು, ಅದಕ್ಕೂ ಹಣ ಕೇಳುವುದು. ಹೀಗೆ ಅತುಲ್ ಘೋರ ಆರೋಪಗಳನ್ನು ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ದಾಖಲಾದದ್ದು ಒಂದು ದಿನದ ನಂತರ. ಆರೋಪಿಗಳಾದ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಆಕೆಯ ಮನೆಯವರನ್ನು ಬಂಧಿಸಿದ್ದು ಒಂದು ವಾರದ ನಂತರ. ಅವರು ಜೈಲಿನಲ್ಲಿ ಇದ್ದದ್ದು 20 ದಿನ.
ಇನ್ನೊಂದು ಪ್ರಕರಣದಲ್ಲಿ ಏರ್ ಇಂಡಿಯಾ ಪೈಲೆಟ್ ಸ್ರಿಷ್ಟಿ ತುಲಿ ಆತ್ಮಹತ್ಯೆ ಪ್ರಕರಣದಲ್ಲಿ ಆಕೆ ಆತ್ಮಹತ್ಯೆ ಮಾಡುವ ಮೊದಲು ಯಾವುದೇ ಡೆತ್ ನೋಟ್ ಬರೆದಿರಲಿಲ್ಲ. ತನ್ನ ಸಾವಿಗೆ ತನ್ನ ಗೆಳೆಯ ಕಾರಣ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೂ ಮಹಿಳಾ ಪೈಲೆಟ್ ಆತ್ಮಹತ್ಯೆಯಾಗಿರುವುದಕ್ಕೆ ಅವಳ ತಂದೆ ಕೊಟ್ಟ ದೂರಿನಲ್ಲಿ ಅವಳ ಬಾಯ್ ಫ್ರೆಂಡ್ ಆದಿತ್ಯ ಪಂಡಿತ್ ಆಕೆಗೆ ಮಾಂಸಹಾರ ಸೇವಿಸದಂತೆ ಒತ್ತಡ ಹಾಕಿದ್ದ. ಅದಕ್ಕೆ ಅವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದರು. ಇದರಿಂದ ತಕ್ಷಣ ಆದಿತ್ಯ ಪಂಡಿತ್ ಮೇಲೆ ಪ್ರಕರಣ ದಾಖಲಾಗಿ ಅದೇ ದಿನ ಆತನನ್ನು ಬಂಧಿಸಲಾಗಿತ್ತು. 31 ದಿನಗಳ ಕಾಲ ಕಾರಾಗೃಹದಲ್ಲಿಡಲಾಗಿತ್ತು. ಕೊನೆಗೆ ಏನೂ ಸಾಕ್ಷ್ಯಾಧಾರಗಳು ಇಲ್ಲ ಎನ್ನುವ ಕಾರಣ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಈ ಎರಡೂ ಪ್ರಕರಣಗಳನ್ನು ಗಮನಿಸಿದಾಗ ಮೊದಲ ಪ್ರಕರಣದಲ್ಲಿ ಅತುಲ್ ತನ್ನ ಆತ್ಮಹತ್ಯೆಗೆ ಸ್ಪಷ್ಟ ಕಾರಣ ನೀಡಿದ ಬಳಿಕವೂ ನಿಖಿತಾ ಸಿಂಘಾನಿಯಾ ಅವರಿಗೆ ಜಾಮೀನು ಸಿಕ್ಕಿದ್ದು ಮತ್ತು ಆದಿತ್ಯ ಪಂಡಿತ್ ಅವರಿಗೆ ಜಾಮೀನು ಸಿಗಲು ತಡವಾಗಿರುವುದು ಎಲ್ಲವನ್ನು ಸಮಚಿತ್ತದಿಂದ ನೋಡಿದಾಗ ಎರಡು ಪ್ರಕರಣಗಳಲ್ಲಿ ಸ್ವಾಮ್ಯತೆ ಇದ್ದರೂ ಆರೋಪಿಗಳ ವಿಷಯದಲ್ಲಿ ಕಾನೂನು ಪ್ರಕ್ರಿಯೆಗಳು ಒಂದೇ ರೀತಿ ಆಗಿದ್ದರೂ ಪರಿಣಾಮ ಹೇಗೆ ಭಿನ್ನವಾಗಿತ್ತು ಎನ್ನುವುದು ತಿಳಿಯುತ್ತದೆ. ಈ ಎರಡು ಪ್ರಕರಣಗಳನ್ನು ಮುಂದಿಟ್ಟು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ನೆಟ್ಟಿಗರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.
Leave A Reply