ಜಾರ್ಜ್‌ಗೆ ಮುಳುವಾದೀತೆ ಗಣಪತಿ ಪ್ರಕರಣ?

ಡಿವೈಎಸ್ಪಿ ಬಿ. ಗಣಪತಿ ಅವರ ಆತ್ಮಹತ್ಯೆ ಪ್ರಕರಣ ರಾಜ್ಯ ಸರಕಾರಕ್ಕೆ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯ ಸರಕಾರ ಸಂಪೂರ್ಣ ಪ್ರಕರಣವನ್ನು ಮುಚ್ಚಿಹಾಕಲು ಏನೆಲ್ಲ ಸಾಧ್ಯವೊ ಅದೆಲ್ಲವನ್ನೂ ಮಾಡಿತ್ತು. ಆದರೆ ಈಗ ಸುಪ್ರೀಂಕೋರ್ಟ್ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ.
ಸಾಮಾನ್ಯವಾಗಿ ಯಾರೇ ಆಗಲಿ ಆತ್ಮಹತ್ಯೆಗೂ ಮೊದಲು ಹೇಳಿಕೆ ನೀಡಿದ್ದಲ್ಲಿ, ಮೊಬೈಲ್‌ನಲ್ಲಿ ದಾಖಲಿಸಿದ್ದಲ್ಲಿ, ಪತ್ರ ಬರೆದಿಟ್ಟಿದ್ದಲ್ಲಿ ಅದನ್ನು ಸಾಕ್ಷ್ಯ ಎಂದು ಪರಿಗಣಿಸಲಾಗುತ್ತದೆ. ನ್ಯಾಯಾಲಯ ಕೂಡ ಅದನ್ನು ಸಾಕ್ಷ್ಯ ಎಂದು ಪರಿಗಣಿಸುತ್ತದೆ. ಡಿವೈಎಸ್ಪಿ ಎಂಕೆ. ಗಣಪತಿ ಅವರು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ತಾವೇ ಮಾಧ್ಯಮದವರ ಬಳಿ ಹೋಗಿ, ವಿವರವಾಗಿ ವೀಡಿಯೊ ಸಂದರ್ಶನ ನೀಡಿದ್ದಾರೆ. ಪ್ರಶ್ನೆ ಕೇಳಿ ಉತ್ತರಿಸುವ ಬದಲು, ಅವರೇ ದೀರ್ಘವಾಗಿ ಮಾತನಾಡಿದ್ದಾರೆ.
ಅದರಲ್ಲಿ ಅವರು ಪೊಲೀಸ್ ಅಧಿಕಾರಿಗಳಾದ ಮೊಹಾಂತಿ, ಎ.ಎಂ ಪ್ರಸಾದ್ ಹಾಗೂ ಆಗ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಮೇಲೆ ನೇರವಾಗಿ ಆರೋಪ ಮಾಡಿದ್ದರು. ಅವರೇ ನನಗೆ ಕಿರುಕುಳ ಕೊಟ್ಟಿದ್ದು ಎಂದು ಆರೋಪಿಸಿದ್ದರು. ಹೀಗಿರುವಾಗ ಅವರೆಲ್ಲರ ಮೇಲೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪ ಹೊರಿಸಲಿಲ್ಲ. ಸಾಮಾನ್ಯ ಜನರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ, ಪ್ರೇರಣೆ ನೀಡಿದ ಆರೋಪ ಬಂದರೆ ತಕ್ಷಣ ಬಂಧಿಸಲಾಗುತ್ತದೆ. ಆದರೆ ರಾಜ್ಯ ಸರಕಾರ ಗಣಪತಿ ಆತ್ಮಹತ್ಯೆಯನ್ನು ಸಿಐಡಿಗೆ ತನಿಖೆ ವಹಿಸಿ, ಕೆ.ಜೆ. ಜಾರ್ಜ್ ಅವರನ್ನು ನಿರ್ದೋಷಿ ಎಂದು ವರದಿ ತಯಾರಿಸಿ, ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿತ್ತು.
ಎಂ.ಕೆ. ಗಣಪತಿ ಅವರ ಮಾತಿಗೆ ಪುಷ್ಠಿ ನೀಡುವಂತೆ ಅವರು, ಮೊಹಾಂತಿ, ಎ.ಎಂ. ಪ್ರಸಾದ್ ಅವರ ಕೆಳಗೆ ಕೆಲಸ ಮಾಡಿದ್ದರು. ಎ.ಎಂ.ಪ್ರಸಾದ್ ಅವರು ಪಶ್ಚಿಮ ವಲಯ ಐಜಿಯಾಗಿದ್ದಾಗ ಗಣಪತಿ ಅವರು ಇನ್‌ಸ್ಪೆಕ್ಟರ್ ಆಗಿದ್ದರು. ಹಾಗೆಯೇ ಎ.ಎಂ. ಪ್ರಸಾದ್ ಅವರು ಗುಪ್ತವಾರ್ತಾ ದಳದ ಮುಖ್ಯಸ್ಥರಾಗಿದ್ದರಿಂದ ಗಣಪತಿ ಅವರಿಗೆ ಕಿರುಕುಳ ನೀಡುವ ಸ್ಥಾನದಲ್ಲಿದ್ದರು.
ಮಂಗಳೂರಿನಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಎಂ.ಕೆ. ಗಣಪತಿ ಅವರು ಕರ್ತವ್ಯದಲ್ಲಿದ್ದರು. ಆಗಿನ ಅವರ ವರ್ತನೆಗೆ ಸಂಬಂಧಿಸಿದಂತೆ ಗೃಹ ಸಚಿವ ಕೆ.ಜೆ. ಜಾರ್ಜ್‌ಗೆ ಕೆಲವರು ದೂರಿದ್ದರು. ಆ ಹಿನ್ನೆಲೆಯಲ್ಲಿ ಅವರು ಅಧಿಕಾರಿಗಳ ಮೂಲಕ ಗಣಪತಿಗೆ ಕಿರುಕುಳ ನೀಡುತ್ತಿದ್ದರು ಎಂಬುದು ನಂಬಲರ್ಹ ಸಂಗತಿ. ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಸರಕಾರದ ವರ್ತನೆಯೇ ಅನುಮಾನಾಸ್ಪದವಾಗಿತ್ತು. ಆತ್ಮಹತ್ಯೆ ಸುದ್ದಿ ಹೊರಬರುತ್ತಿದ್ದಂತೆ ವರ ವ್ಯಕ್ತಿತ್ವ ಹರಣಕ್ಕೆ ಸರಕಾರ ಮುಂದಾಗಿತ್ತು. ಗಣಪತಿ ಅವರ ಕುಟುಂಬದಲ್ಲಿ ಸಾಮರಸ್ಯ ಇರಲಿಲ್ಲ. ಅದೇ ಆತ್ಮಹತ್ಯೆಗೆ ಕಾರಣ ಎಂದು ಸುದ್ದಿ ಹಬ್ಬಿಸಲಾಯಿತು. ಅದಾದ ನಂತರ ಗಣಪತಿ ಅವರಿಗೆ ಮಾನಸಿಕ ಖಿನ್ನತೆ ಇತ್ತು. ಅದಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರಕಾರವೇ ಅಧಿಕೃತ ಹೇಳಿಕೆ ನೀಡಿತು. ಆದರೆ ಒಬ್ಬ ಪೊಲೀಸ್ ಅಧಿಕಾರಿಗೆ ಮಾನಸಿಕ ಖಿನ್ನತೆ ಯಾಕೆ ಬಂತು, ಹಾಗೆ ಖಿನ್ನತೆಗೆ ಒಳಗಾಗಲು ಕಾರಣವೇನು ಎಂಬ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳಲಿಲ್ಲ.
ಗಣಪತಿ ಆತ್ಮಹತ್ಯೆಯಲ್ಲಿ ಸರಕಾರದ ಪಾತ್ರವಿಲ್ಲ ಎಂಬುದನ್ನು ಬಿಂಬಿಸಿಕೊಳ್ಳುವುದಕ್ಕೆ ಸರಕಾರ ಹೆಣಗುತ್ತಿತ್ತು. ನಿಜವಾಗಿಯೂ ಅಂತಹ ಕಾರಣಗಳೇ ಇಲ್ಲ ಎಂದಾಗಿದ್ದರೆ ಸರಕಾರ ಹಾಗೆ ಪ್ರಯತ್ನಿಸುವ ಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರ ಗಣಪತಿ ಅವರ ವ್ಯಕ್ತಿತ್ವವೇ ಸರಿ ಇರಲಿಲ್ಲ ಎಂದು ಬಿಂಬಿಸಿ, ಆರೋಪದಿಂದ ತಪ್ಪಿಸಿಕೊಳ್ಳುವ ಹೀನಾಯ ಕೃತ್ಯಕ್ಕೆ ಇಳಿಯಿತು.
ಆದರೆ ಸಿಬಿಐ ವಿಚರಣೆಯಿಂದ ಸತ್ಯ ಹೊರಬರಬಹುದು. ಗಣಪತಿ ಅವರಿಗೆ ಇಲಾಖೆಯಲ್ಲಿ ಯಾವ ರೀತಿ ಕಿರುಕುಳ ನೀಡಲಾಗಿತ್ತು? ಅವರನ್ನು ಎಷ್ಟು ಬಾರಿ ವಗಾಯಿಸಲಾಗಿತ್ತು? ಅಮಾನತು ಮಾಡಲಾಗಿತ್ತು? ಯಾರ ಸೂಚನೆ ಅಥವಾ ಆದೇಶಗಳ ಹಿನ್ನೆಲೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು ಎಂಬುದನ್ನೆಲ್ಲ ಸಿಬಿಐ ವಿಚಾರಣೆ ಮಾಡಿದರೆ ಸತ್ಯ ಹೊರಬರುವುದರಲ್ಲಿ ಅನುಮಾನವಿಲ್ಲ. ಆಗ ಸಚಿವ ಕೆ.ಜೆ.ಜಾರ್ಜ್ ಬಂಧನವಾದರೂ ಅಚ್ಚರಿಯಿಲ್ಲ. ಅಗಲಾದರೂ ಗಣಪತಿ ಆತ್ಮಕ್ಕೆ ನ್ಯಾಯ ಸಿಗಬಹುದೇನೊ.
?
Leave A Reply