ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!

ಶಾಲೆ, ಕಾಲೇಜುಗಳಲ್ಲಿ ಮೊದಲ ಬೆಂಚ್ ನಲ್ಲಿ ಕುಳಿತುಕೊಳ್ಳುವವರು ಬುದ್ಧಿವಂತರು, ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವವರು ದಡ್ಡರು, ಪೋಲಿಗಳು ಎಂಬ ಹಳೆ ಚಿಂತನೆ ಎಲ್ಲಾ ಕಡೆಗಳಲ್ಲಿಯೂ ಇದೆ. ಅದಕ್ಕೆ ಯಾವುದೇ ರಾಜ್ಯ ಹೊರತಾಗಿಲ್ಲ. ಯಾವುದೇ ವಿದ್ಯಾರ್ಥಿ ಲಾಸ್ಟ್ ಬೆಂಚಿನಲ್ಲಿ ಕುಳಿತುಕೊಂಡಿದ್ದಾನೆಂದರೆ ಅವನಿಗೆ ಕಲಿಯಲು ಆಸಕ್ತಿ ಇಲ್ಲ ಎಂದೇ ಶಿಕ್ಷಕರು ಅಂದುಕೊಳ್ಳುತ್ತಿದ್ದರು. ಕೆಲವು ಮಕ್ಕಳು ಲಾಸ್ಟ್ ಬೆಂಚಿನಲ್ಲಿ ಕುಳಿತುಕೊಂಡಿದ್ದರೂ ಬದುಕಿನಲ್ಲಿ ಉನ್ನತ ಸಾಧನೆ ಮಾಡಿ ಯಶಸ್ವಿ ಆದವರೂ ಇದ್ದಾರೆ. ಆದರೆ ಯಾವತ್ತಿಗೂ ಲಾಸ್ಟ್ ಬೆಂಚ್ ಎನ್ನುವುದು ಕಲಿಕೆಯಲ್ಲಿ ನಕರಾತ್ಮಕ ಶಬ್ದವನ್ನೇ ಹೊಂದಿದೆ. ಇದೀಗ ಕೇರಳ ರಾಜ್ಯದಲ್ಲಿ ಅಂತಹ ನೆಗೆಟಿವಿಟಿ ತೆಗೆದು ಹಾಕಲು ಸರ್ವ ರೀತಿಯ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ. ಕೇರಳದ ಹಲವು ಶಾಲೆಗಳಲ್ಲಿ ಈಗ “ಲಾಸ್ಟ್ ಬೆಂಚ್” ಎಂಬುದೇ ಇಲ್ಲ.
ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಗೊಳಿಸುವ ಸಲುವಾಗಿ ಕೇರಳದ ಹಲವು ಶಾಲೆಗಳಲ್ಲಿ ತರಗತಿಗಳಲ್ಲಿ ಬೆಂಚುಗಳ ವಿನ್ಯಾಸವನ್ನೇ ಬದಲಾಯಿಸಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ಸಾಲಿನಲ್ಲಿ ಒಂದರ ಹಿಂದೆ ಒಂದು ಇರುತ್ತಿದ್ದ ಡೆಸ್ಕ್ ಗಳನ್ನು ಶಿಕ್ಷಕರ ಸುತ್ತ ಅರ್ಧ ವೃತ್ತಾಕಾರದಲ್ಲಿ ಜೋಡಿಸಲಾಗುತ್ತಿದೆ. ಈ ಮೂಲಕ ಲಾಸ್ಟ್ ಬೆಂಚರ್ಸ್ ಎಂಬ ಟೀಕೆಗೆ ಕಡಿವಾಣ ಹಾಕಿ ಸಮಾನ ಅವಕಾಶದ ಶಿಕ್ಷಣದತ್ತ ಗಮನ ಹರಿಸಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಬಿಡುಗಡೆಯಾದ “ಸ್ಥಾನಾರ್ಥಿ ಶ್ರೀಕುಟ್ಟನ್” ಮಲಯಾಳ ಸಿನೆಮಾದಲ್ಲಿ ಈ ಮಾದರಿಯನ್ನು ತೋರಿಸಲಾಗುತ್ತಿತ್ತು. ಈಗ ಶಾಲೆಗಳು ಆ ಸಿನೆಮಾದಿಂದ ಸ್ಫೂರ್ತಿ ಪಡೆದು ಸ್ವಯಂಪ್ರೇರಿತವಾಗಿ ಇದನ್ನೇ ಅಳವಡಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
ತ್ರಿಶ್ಯೂರಿನ ವಡಕ್ಕಂಚೇರಿ ಪೂರ್ವ ಮಾಂಗಾಂಡ್ ನಲ್ಲಿರುವ ಆರ್ ಸಿಸಿ ಎಲ್ ಪಿ ಸೇರಿದಂತೆ ರಾಜ್ಯದ ಕೆಲವು ಶಾಲೆಗಳಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ಈ ವ್ಯವಸ್ಥೆಯ ಬಗ್ಗೆ ಮಾತನಾಡಿದ ಕೇರಳ ಸಾಮಾನ್ಯ ಶಿಕ್ಷಣ ನಿರ್ದೇಶಕ ಎಸ್ ಶನವಾಸ್ ” ತರಗತಿಯ ಗಾತ್ರ ಮತ್ತು ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ಅಧ್ಯಯನ ಮಾಡಿದ ಬಳಿಕ ಈ ವಿಧಾನವನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ಇದರಿಂದ ಅಗುವ ಲಾಭ ಎಂದರೆ ಈ ವ್ಯವಸ್ಥೆಯಲ್ಲಿ ಮೊದಲ ಬೆಂಚ್, ಕೊನೆಯ ಬೆಂಚ್ ಎಂಬ ತಾರತಮ್ಯ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಪಾಠದ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳ ಮೇಲೆ ಏಕಕಾಲದಲ್ಲಿ ಕಣ್ಣಿಡಲು ಹಾಗೂ ಎಲ್ಲರಿಗೂ ಸಾಮಾನ್ಯ ಆದ್ಯತೆ ಕೊಡಲು ಶಿಕ್ಷಕರಿಗೂ ಸುಲಭವಾಗುತ್ತದೆ. ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳುವ ಮಕ್ಕಳಿಗೂ ಏನೂ ಪೋಕರಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೊನೆಯದಾಗಿ ಒಂದು ವಿಷಯ ಏನೆಂದರೆ ಮಕ್ಕಳು ಕಪ್ಪು ಹಲಗೆಯನ್ನು ನೋಡಲು ಒಂದಿಷ್ಟು ಕತ್ತು ತಿರುಗಿಸಲೇಬೇಕು. ಅದು ಕಿರಿಕಿರಿ ಉಂಟಾಗಬಹುದು. ಆದರೆ ಈ ಲಾಸ್ಟ್ ಬೆಂಚಿನಿಂದ ಮುಕ್ತಿ ಸಿಗುವುದರಿಂದ ಒಟ್ಟಿನಲ್ಲಿ ಎಲ್ಲಾ ಮಕ್ಕಳ ವಿದ್ಯಾಭ್ಯಾಸ ಉತ್ತಮಗೊಳ್ಳುತ್ತದೆ.