ಅರೆಮರ್ಲೆರ್ ಎತ್ತಂಗಡಿ ತಪ್ಪಲು ಒಗ್ಗಟ್ಟು ಮೂಡಿರುವುದೇ ಕಾರಣ!
ತುಳು ಚಿತ್ರರಂಗ ಕಳೆದ ಐದು ವರ್ಷಗಳಲ್ಲಿ ಸಿಕ್ಕಾಪಟ್ಟೆ ಬೆಳೆದಿದೆ ಎನ್ನುವ ವಾಕ್ಯವನ್ನು ಬಹುತೇಕ ಎಲ್ಲ ಮಾಧ್ಯಮಗಳಲ್ಲಿ ಹೇಳಲಾಗಿದೆ ಅಥವಾ ಬರೆಯಲಾಗಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಒಗ್ಗಟ್ಟು ಬೆಳೆದಿದೆ ಎನ್ನುವ ಪ್ರಶ್ನೆಯನ್ನು ನೀವು ತುಳು ಸಿನೆಮಾರಂಗದ ಯಾರಿಗಾದರೂ ಕೇಳಿದರೆ ಎಷ್ಟು ತುಳು ಸಿನೆಮಾಗಳು ಕಳೆದ ಐದು ವರ್ಷಗಳಲ್ಲಿ ನಿರ್ಮಾಣವಾಗಿದೆಯೋ ಅಷ್ಟು ಗುಂಪುಗಳಾಗಿ ತುಳು ಸಿನೆಮಾರಂಗ ಒಡೆದಿದೆ ಎನ್ನುವುದನ್ನು ಅದರ ಒಳಗಿನವರು ಹೇಳುತ್ತಾರೆ. ನೀವು ಸರಿಯಾಗಿ ನೋಡಿದರೆ ಒಬ್ಬನೆ ನಿರ್ಮಾಪಕ ಒಂದಕ್ಕಿಂತ ಹೆಚ್ಚು ಸಿನೆಮಾ ಮಾಡಿದ್ದು ಕಡಿಮೆನೆ. ಹೆಚ್ಚೆಂದರೆ ಮೂರು ತುಳು ಸಿನೆಮಾ ಮಾಡಿದ ನಿರ್ಮಾಪಕರು ನಾಲ್ಕೈದು ಜನ ಕೂಡ ಸಿಗಲಿಕ್ಕಿಲ್ಲ. ಆದರೆ ಹೆಚ್ಚಿನವರು ತಾವು ರಾಕ್ ಲೈನ್ ವೆಂಕಟೇಶ್ ಲೆವೆಲ್ಲಿಗೆ ತುಳು ಸಿನೆಮಾದ ಬಗ್ಗೆ ಮಾತನಾಡುತ್ತಾರೆ. ತುಳು ಸಿನೆಮಾ ಮಾಡಿ ಹಣದ ಮುಖ ನೋಡಿದ ನಿರ್ಮಾಪಕರು ಕೂಡ ಮೂರ್ನಾಕು ಜನರಿಗಿಂತ ಹೆಚ್ಚಿಗೆ ಸಿಗುವುದಿಲ್ಲ. ಆದರೂ ಬಹಿರಂಗವಾಗಿ ಯಾರೂ ಕೂಡ ತಮ್ಮ ಸಿನೆಮಾ ಹಣ ಮಾಡಿಲ್ಲ ಎಂದು ಹೇಳುವುದಿಲ್ಲ. ಆದರೂ ಹೊಸ ಹೊಸ ನಿರ್ಮಾಪಕರು ತುಳು ಸಿನೆಮಾ ಮಾಡಲು ಬರುತ್ತಲೇ ಇದ್ದಾರೆ. ಹಣ ಇದ್ದವರಿಗೆ ಲಾಭದ ಆಸೆ ತೋರಿಸಿ ಕರೆದುಕೊಂಡು ಬರುತ್ತಲೇ ಇದ್ದಾರೆ. ಸಿನೆಮಾ ಪೋಸ್ಟರ್ ಮಾಡುವಾಗಲೇ ಇದು ನೂರು ದಿನದ ಸಿನೆಮಾ ಎಂದು ನಂಬಿಕೆ ಹುಟ್ಟಿಸಿ ಉದ್ದಿಮೆದಾರರಿಂದ ಹಣ ಪೀಕುತ್ತಲೆ ಇರುವ ವ್ಯಕ್ತಿಗಳು ಇದ್ದಾರೆ. ಒಟ್ಟಿನಲ್ಲಿ ಒಂದು ಒರಿಯಾದೊರಿ ಅಸಲ್, ಒಂದು ಪಿಲಿಬೈಲ್ ಯಮುನಕ್ಕ ಅನೇಕ ಅಸಲ್ ಗಳನ್ನು , ಯುಮುನಕ್ಕರನ್ನು ಗುಂಡಿಗೆ ಬೀಳಿಸುತ್ತಲೇ ಇದೆ. ಹಾಗಾದರೆ ತುಳು ಸಿನೆಮಾ ಯಾಕೆ ಲಾಭ ಮಾಡಲ್ಲ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಅದಕ್ಕೆ ಮುಖ್ಯ ಕಾರಣ ನಿರ್ಮಾಪಕರ ಒಳಗೆ ಒಗ್ಗಟ್ಟು ಇಲ್ಲದೆ ಇದ್ದದ್ದು. ಸಿನೆಮಾವನ್ನು ಕಡಿಮೆ ಬಜೆಟಿನಲ್ಲಿ, ಸ್ಥಳೀಯ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿ, ಸರಿಯಾದ ಸಿನೆಮಾ ಮಂದಿರವನ್ನು ಹಿಡಿದು, ಬೇರೆ ಭಾಷೆಯ ಸಿನೆಮಾಗಳಿಗೆ ಥಿಯೇಟರ್ ಬಿಟ್ಟುಕೊಡುವ ಕಿರಿಕಿರಿ ಇಟ್ಟುಕೊಳ್ಳದೆ, ಒಮ್ಮೆಲ್ಲೆ ಮೂರ್ನಾಕು ತುಳು ಸಿನೆಮಾಗಳು ಬಿಡುಗಡೆಯಾಗುವುದನ್ನು ತಡೆದು, ತಮ್ಮ ಚಿತ್ರ ಲಾಭ ಮಾಡಿಕೊಳ್ಳುವ ತನಕ ಹೋರಾಡುವ ಪ್ರಯತ್ನ ನಡೆದಾಗ ಮಾತ್ರ ತುಳು ಸಿನೆಮಾಗಳು ಗೆಲ್ಲಲು ಸಾಧ್ಯ.
ಹಾಗಾದರೆ ಒಗ್ಗಟ್ಟು ಮೂಡಲು ಏನು ಮಾಡಬೇಕಿತ್ತು? ನಿರ್ಮಾಪಕ ಸಂಘ ಅಸ್ತಿತ್ವಕ್ಕೆ ಬರಬೇಕಿತ್ತು. ಅದಕ್ಕೊಬ್ಬ ಅಧ್ಯಕ್ಷ ಬೇಕಿತ್ತು. ಆ ಅಧ್ಯಕ್ಷ ಎಲ್ಲರಿಗೂ ಒಪ್ಪಿಗೆಯಾಗುವಂತೆ ಇರಬೇಕಿತ್ತು. ಮಂಗಳೂರಿನವರನ್ನೇ ಯಾರಾದರೂ ಅಧ್ಯಕ್ಷ ಮಾಡಿದ್ದರೆ ಮತ್ತೊಮ್ಮೆ ಅದು ಗುಂಪುಗಾರಿಕೆಗೆ ಈಡಾಗುತ್ತಿತ್ತು. ಹಾಗಾದರೆ ಯಾರು ಅಧ್ಯಕ್ಷರಾದರೆ ಒಳ್ಳೆಯದು ಎನ್ನುವುದು ಕೂಡ ಮುಖ್ಯವಾಗಿತ್ತು. ಎಲ್ಲಾ ಗುಂಪುಗಳನ್ನು ಒಟ್ಟಿಗೆ ಕರೆದುಕೊಂಡು ಹೋಗಬಲ್ಲ ವ್ಯಕ್ತಿ ಅಧ್ಯಕ್ಷ ಆದರೆ ಮಾತ್ರ ತುಳು ಸಿನೆಮಾರಂಗದ ದಿಗ್ಗಜರು ಅವರ ಮಾತನ್ನು ಕೇಳುವ ಸಾಧ್ಯತೆ ಇತ್ತು. ಆದರೆ ಚುನಾವಣೆ ನಡೆಯದೆ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಕೂರಿಸುವಂತಿರಲಿಲ್ಲ. ಆದರೆ ಕೊನೆಗೂ ಚುನಾವಣೆ ನಡೆದಿದೆ. ರಾಜೇಶ್ ಬ್ರಹ್ಮಾವರ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇವರು ತುಳುನಾಡಿನವರಾದರೂ ಹೆಸರು, ಕೀರ್ತಿ ಗಳಿಸಿದ್ದು ಕನ್ನಡ ಚಿತ್ರರಂಗದಲ್ಲಿ. ಅಲ್ಲಿ ಇವರ ಮಾತಿಗೆ ಬೆಲೆ ಇದೆ ಮತ್ತು ಕನ್ನಡ ಇಂಡಸ್ಟ್ರಿಯ ಒಳಹೊರಗಿನ ಪರಿಚಯ ಚೆನ್ನಾಗಿದೆ.
ಪಾದರಸ ವ್ಯಕ್ತಿತ್ವದ ರಾಜೇಶ್ ಬ್ರಹ್ಮಾವರ ಗೆದ್ದ ತಕ್ಷಣ ಹೋರಾಟಕ್ಕೆ ಧುಮುಕಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಅರೆಮರ್ಲೆರ್ ಚಿತ್ರ ಪ್ರಭಾತ್ ಸಿನೆಮಾ ಮಂದಿರದಿಂದ ಎತ್ತಂಗಡಿಯಾಗುವುದು ಕೊನೆಯ ಕ್ಷಣದಲ್ಲಿ ತಪ್ಪಿದೆ. ತೆಲುಗು ಸಿನೆಮಾಕ್ಕಾಗಿ ಅರೆಮರ್ಲೆರ್ ಬಲಿಯಾಗುವುದು ತಪ್ಪಲು ಮುಖ್ಯ ಕಾರಣ ಒಂದು ಒಗ್ಗಟ್ಟು ನಿರ್ಮಾಣವಾಗಿರುವುದು ಎಂದು ಹೇಳಲಾಗುತ್ತಿದೆ. ರಾಜೇಶ್ ಬ್ರಹ್ಮಾವರ್ ಹೀಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋದರೆ ಬರುವ ದಿನಗಳಲ್ಲಿ ತುಳು ಚಿತ್ರರಂಗಕ್ಕೆ ಒಳ್ಳೆಯ ಭವಿಷ್ಯವಿದೆ ಎನ್ನುವುದು ಸುಳ್ಳಲ್ಲ.
Leave A Reply