ಮಳೆಗಾಲದಲ್ಲಿ ರಸ್ತೆಯ ಮಧ್ಯ ಚಿಕ್ಕಚಿಕ್ಕ ಕಾರಂಜಿ ಹಾರುವುದು ನಿಲ್ಲಬೇಕು!
ಎಲ್ಲಾ ಹಿತೈಷಿಗಳಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು “ಅಧ್ಯಯನ ಪ್ರವಾಸ”ಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದದ್ದು ಯಾವಾಗ ಎನ್ನುವುದು ಅವರಿಗೆ ಗೊತ್ತು. ಆದರೆ ಅವರು ಹೋಗುವುದು ರದ್ದಾಗುವ ತನಕ ಇಲ್ಲಿನ ಸ್ವಚ್ಚತೆಯ ಬಗ್ಗೆ ಇವರು ಎಷ್ಟು ಕ್ಯಾರ್ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಇಂಚಿಂಚಾಗಿ ಬರೆಯಬೇಕಾಗಿದೆ. ಈ disliting machine, Jetsack machine, cess poll machine ಟೆಂಡರ್ ನಲ್ಲಿ ಗುತ್ತಿಗೆ ಪಡೆದುಕೊಂಡವರು ಒಪ್ಪಂದದ ನಿಯಮಗಳನ್ನು ಎಷ್ಟು ಉಲ್ಲಂಘಿಸುತ್ತಿದ್ದಾರೆ ಎನ್ನುವುದನ್ನು ಇವತ್ತು ಹೇಳುತ್ತಿದ್ದೇನೆ.
ನಮ್ಮಲ್ಲಿ ಇದು ಮಾತ್ರವಲ್ಲ, ಹೆಚ್ಚಿನ ಎಲ್ಲಾ ಟೆಂಡರ್ ಗಳನ್ನು ಪಡೆದುಕೊಂಡ ಗುತ್ತಿಗೆದಾರರು ಒಪ್ಪಂದಗಳನ್ನು ಹೇಗೆ ಸಾರಾಸಗಟಾಗಿ ಉಲ್ಲಂಘಿಸುತ್ತಾರೆ ಎನ್ನುವುದನ್ನು ಹೊಸತಾಗಿ ಹೇಳಬೇಕಿಲ್ಲ. ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನಿಂದ ಹಿಡಿದು ಈ ಮ್ಯಾನ್ ಹೋಲ್ ಕ್ಲೀನ್ ಮಾಡುವ ತನಕದ ಅಷ್ಟೂ ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಮ್ಯಾನ್ ಹೋಲ್ ಗಳನ್ನು ಸ್ವಚ್ಚ ಮಾಡಲು ಯಂತ್ರದೊಂದಿಗೆ ಇಷ್ಟೇ ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದು ನಿಯಮವಿದೆ. ಆದರೆ ಇವರು ಲೆಕ್ಕಕ್ಕಿಂತ ಕಡಿಮೆ ಜನರನ್ನು ಕೆಲಸಕ್ಕೆ ತೆಗೆದುಕೊಂಡಿರುತ್ತಾರೆ. ಅದರಿಂದ ಇವರಿಗೆ ವರ್ಷದಲ್ಲಿ ಸಾಕಷ್ಟು ಹಣ ಉಳಿಯುತ್ತದೆ. ಇನ್ನು ಇವರು ರೂಟಿನ್ ಪ್ರಕಾರ ಎಲ್ಲಾ ವಾರ್ಡುಗಳ ಮ್ಯಾನ್ ಹೋಲ್ ಗಳನ್ನು ಕ್ಲೀನ್ ಮಾಡಬೇಕು. ಮಾಡುವುದಿಲ್ಲ. ನಾನು ನಿನ್ನೆ ಹೇಳಿದ ಹಾಗೆ ಜ್ಯೂನಿಯರ್ ಇಂಜಿನಿಯರ್ ಗಳು ಅಕಸ್ಮಾತ್ ಆಗಿ ಹೇಳಿದರೆ ಮಾತ್ರ ಅಲ್ಲಿ ಹೋಗುತ್ತಾರೆ. ಇಲ್ಲದಿದ್ದರೆ ಮಿಶಿನ್ ಗಳು ಆರಾಮವಾಗಿ ಕಾಲು ಚಾಚಿ ಮಲಗಿರುತ್ತವೆ. ಇದರಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಡಿಸೀಲ್ ಉಳಿತಾಯವಾಗುತ್ತದೆ.
ಪಾಲಿಕೆಯ ಸದಸ್ಯರಿಗೆ, ಅಧಿಕಾರಿಗಳಿಗೆ ನಿಜಕ್ಕೂ ಮಂಗಳೂರಿನ ಸ್ವಚ್ಚತೆಯ ಬಗ್ಗೆ ಕಾಳಜಿ ಇದ್ದರೆ ಈ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ತೆಗೆಯಬಹುದು ಮತ್ತು ಮಳೆಗಾಲದಲ್ಲಿ ಮ್ಯಾನ್ ಹೋಲ್ ಗಳು ತುಂಬಿ, ಚಿಕ್ಕ ಚಿಕ್ಕ ಕಾರಂಜಿಗಳು ರಸ್ತೆಯ ಮಧ್ಯದಿಂದ ಹಾರುವುದನ್ನು ತಪ್ಪಿಸಬಹುದು.
ಆದರೆ ಪಾಲಿಕೆ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಕೂಡ ಮಾಡುವುದಿಲ್ಲ ಅದೇ ರೀತಿಯಲ್ಲಿ ಒಳ್ಳೆಯ ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರಿಗೆ ಅವಕಾಶ ಕೂಡ ಕೊಡುವುದಿಲ್ಲ. ಯಾಕೆಂದರೆ ಸರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಸದಸ್ಯರಿಗೆ, ಅಧಿಕಾರಿಗಳಿಗೆ ಕೈ ಬಿಸಿ ಮಾಡುವುದಿಲ್ಲ. ಇವರ ಕಿಸೆ ಭರ್ತಿ ಮಾಡುವವರು ಸರಿಯಾಗಿ ಕೆಲಸ ಮಾಡುವುದಿಲ್ಲ. ನಮಗೆ ನಿಮ್ಮ ಲಂಚ ಬೇಡಾ, ನಮಗೆ ಸರಕಾರ ಸಂಬಳ ಚೆನ್ನಾಗಿ ಕೊಡುತ್ತದೆ. ನೀವು ಗುತ್ತಿಗೆ ತೆಗೆದುಕೊಂಡದ್ದು ಕೆಲಸ ಮಾಡಲು, ಅದನ್ನು ಮಾಡಿ ಎಂದು ಹೇಳುವ ನೈತಿಕ ಅಧಿಕಾರಿ ಪಾಲಿಕೆಯಲ್ಲಿ ಬಂದ ದಿನ ನಮ್ಮ ಊರು ಚೆನ್ನಾಗಿ ಆಗುತ್ತದೆ. ಆದರೆ ಅಂತವರು ತುಂಬಾ ದಿನ ಉಳಿಯಲ್ಲ, ಯಾಕೆಂದರೆ ಇವರು ಉಳಿಯಲು ಬಿಡಲ್ಲ.
ಟೆಂಡರ್ ಬೇರೆಯವರಿಗೆ ಹೋಗಬಾರದು, ನಮ್ಮವರ ಒಳಗೆನೆ ಇರಬೇಕು ಎನ್ನುವ ಕಾರಣಕ್ಕೆ ಪಾಲಿಕೆ ಏನು ಮಾಡುತ್ತದೆ ಎಂದರೆ ಟೆಂಡರ್ ಸಮಯಕ್ಕೆ ಸರಿಯಾಗಿ ಕರೆಯುವುದಿಲ್ಲ. ಒಂದು ವರ್ಷದ ಟೆಂಡರ್ ಮುಗಿಯಲು ಎರಡು ತಿಂಗಳು ಇರುವಾಗ ಇವರು ಟೆಂಡರ್ ಕರೆಯುವ ಪ್ರಕ್ರಿಯೆಗೆ ಮುಂದಾಗಬೇಕು. ಉದಾಹರಣೆಗೆ ಡಿಸೆಂಬರ್ 31 ಕ್ಕೆ ಟೆಂಡರ್ ಮುಗಿಯುವುದಾದರೆ ನವೆಂಬರ್ 1 ಕ್ಕೆ ಇವರು ಪತ್ರಿಕೆಯಲ್ಲಿ ಜಾಹೀರಾತು ಕೊಡಬೇಕು. ಒಂದು ತಿಂಗಳ ಒಳಗೆ ಅರ್ಹರು ಟೆಂಡರ್ ಸಲ್ಲಿಸಬಹುದು ಎಂದು ಹೇಳಬೇಕು. ಆಗ ಯಾರಾದರೂ ಹೊಸಬರಿಗೆ ಟೆಂಡರ್ ಹಾಕಲು ಅನುಕೂಲವಾಗುತ್ತದೆ. ಅದರ ನಂತರ ಉಳಿದ ಮೂವತ್ತು ದಿನಗಳಲ್ಲಿ ಬಾಕಿ ಪ್ರಕ್ರಿಯೆ ಮುಗಿದರೆ ಜನವರಿ ಒಂದರಿಂದ ಹೊಸ ಗುತ್ತಿಗೆದಾರ ಕೆಲಸ ಶುರು ಮಾಡುತ್ತಾರೆ. ಆದರೆ ಇವರು ಏನು ಮಾಡುತ್ತಾರೆ ಎಂದರೆ ಡಿಸೆಂಬರ್ ಮುಗಿದು ಮಾರ್ಚ್ ಎಂಡ್ ಆಗುವ ತನಕ ಇವರು ಟೆಂಡರ್ ಕರೆಯುವುದಿಲ್ಲ. ಕೊನೆಗೆ ಮಾರ್ಚ್-ಎಪ್ರಿಲ್ ನಲ್ಲಿ ಪಟ್ಟಣ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮೀಟಿಂಗ್ ನಲ್ಲಿ ಕಾಟಾಚಾರಕ್ಕೆ ಕಾರ್ಯಸೂಚಿ ಮಾಡಿ ಇದೇ ಗುತ್ತಿಗೆದಾರರನ್ನು ಆರು ತಿಂಗಳಿಗೆ ಮುಂದುವರೆಸಬೇಕು ಎಂದು ನಿರ್ಣಯ ಪಾಸು ಮಾಡಿ ಮುಂದುವರೆಸಲಾಗುತ್ತದೆ. ಇದು ನಿಜಕ್ಕೂ ಕಾನೂನು ಬಾಹಿರ. ಟೆಂಡರ್ ಅವಧಿ ಮುಗಿದು ಮೂರು ತಿಂಗಳ ನಂತರ ಸ್ಯಾಂಕ್ಷನ್ ಕೊಡುವುದು ಶುದ್ಧ ತಪ್ಪು. ಆದರೆ ಇದರಲ್ಲಿ ಎಲ್ಲರಿಗೂ ಲಾಭ ಇರುವುದರಿಂದ ಯಾರೂ ಮಾತನಾಡುವುದಿಲ್ಲ. ಮೇಯರ್, ಕಮೀಷನರ್, ಬಿಜೆಪಿ ಎಲ್ಲರಿಗೂ ಒಳಗಿನ ವ್ಯವಹಾರ ಗೊತ್ತಿದೆ. ಸ್ವಚ್ಚತೆಯ ಕೆಲಸ ಸರಿಯಾಗಿ ನಡೆಯದಿದ್ದರೆ ಅದರಿಂದ ತೊಂದರೆಯಾಗುವುದು ಜನರಿಗೆ. ಪೋಲಾಗುವುದು ಜನರ ಹಣ ಅಂದರೆ ನಮ್ಮ ತೆರಿಗೆ. ಇದನ್ನೆಲ್ಲಾ ನೋಡಬೇಕಾಗಿರುವ ನಮ್ಮ ಸದಸ್ಯರು, ಅಧಿಕಾರಿಗಳು ಟೂರಿಗೆ ಹೊರಟಿದ್ದಾರೆ, ಮತ್ತದೇ ನಮ್ಮ ತೆರಿಗೆಯ ಹಣದಲ್ಲಿ. ಒಟ್ಟಿನಲ್ಲಿ ಪಾಲಿಕೆ ಏನು ಮಾಡಿದರೂ ನಷ್ಟವಾಗುವುದು ನಮಗೆನೆ!
Leave A Reply