“ಆ” ವಿಷಯ ಬರೆಯಬೇಡಿ ಎಂದು ನ್ಯಾಯಾಲಯ ತಡೆಯಾಜ್ಞೆ ಕೊಟ್ಟಿದೆ!
ಸದ್ಯಕ್ಕೆ ನಿಲ್ಲಿಸುತ್ತಿದ್ದೇನೆ. ನ್ಯಾಯಾಲಯದಿಂದ ತಡೆಯಾಜ್ಞೆ (Injunction)ಬಂದಿದೆ. ನವೆಂಬರ್ 13 ನೇ ತಾರೀಕಿನ ತನಕ ಆ ವಿಷಯದಲ್ಲಿ ಬರೆಯಬಾರದು ಎಂದು ನನ್ನ ಅಂಕಣ ಪ್ರಸಾರ ಮಾಡುತ್ತಿದ್ದ ತುಳುನಾಡು ನ್ಯೂಸ್ ಗೆ ಸೂಚನೆ ಕೊಡಲಾಗಿದೆ. ಚಿಲಿಂಬಿ ಗುಡ್ಡೆಯ ಮೇಲಿರುವ ವಸತಿ ಸಮುಚ್ಚಯದ ಬಗ್ಗೆ ನಾನು ಬರೆಯುತ್ತಿದ್ದ ಜಾಗೃತ ವರದಿಯನ್ನು ಸದ್ಯಕ್ಕೆ ನಿಲ್ಲಿಸುತ್ತಿದ್ದೇನೆ. ನ್ಯಾಯಾಲಯದ ಆದೇಶಕ್ಕೆ ತಲೆಬಾಗುವುದು ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ನನ್ನ ಕರ್ಥವ್ಯ. ನ್ಯಾಯಾಲಯ ಮುಂದೆ ಈ ವಿಷಯದಲ್ಲಿ ಹೊಸ ತೀರ್ಪು ಕೊಟ್ಟ ನಂತರ ಆ ಬಳಿಕ ನೋಡೋಣ. ದಾಖಲೆಗಳಂತೂ ಹಾಗೆ ಇದೆ.
ನಿನ್ನೆ ನಾನು ಬ್ಯಾಂಕ್ ಮ್ಯಾನೇಜರುಗಳು ಬಿಲ್ಡರ್ ಗಳೊಂದಿಗೆ ಹೇಗೆ ಬೈಟು ಕಾಫಿ ಕುಡಿದು ತಮ್ಮತನವನ್ನು ಮಾರುತ್ತಾರೆ ಎಂದು ವಿವರಿಸಿದ್ದೆ. ಗಂಡು ಹೆಣ್ಣು ಒಂದೇ ಹಾಸಿಗೆಯನ್ನು ಹಂಚಿಕೊಂಡರೆ ಏನಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಇಲ್ಲಿ ಕೂಡ ಹಾಗೆ. ನೀವು ಕಟ್ಟಿ ನಾನು ಲೋನ್ ಕೊಡುತ್ತೇನೆ ಎಂದು ಮ್ಯಾನೇಜರ್ ಗಳು, ಬಿಲ್ಡರ್ ಗಳಿಗೆ ಭರವಸೆ ಕೊಡುವುದರಿಂದ ಅಕ್ರಮ ಕಟ್ಟಡಗಳು ಹುಟ್ಟಿಕೊಳ್ಳುತ್ತವೆ. ಮ್ಯಾನೇಜರುಗಳು ಸಾಲ ಕೊಡುವುದರಲ್ಲಿ ಎರಡು ವಿಧಗಳಿವೆ. ಒಂದು ಅಂಡರ್ ಕನ್ಟ್ರಕ್ಷನ್ ಇರುವ ವಸತಿ ಅಥವಾ ಮಳಿಗೆಯನ್ನು ಗ್ರಾಹಕನೊಬ್ಬ ಬುಕ್ ಮಾಡಿದರೆ ಅದರ ನಿರ್ಮಾಣದ ಪ್ರತಿ ಹಂತದಲ್ಲಿ ಇಂತಿಂಷ್ಟು ಶೇಕಡಾ ಸಾಲದ ಕಂತು ಗ್ರಾಹಕನ ಹೆಸರಿನಲ್ಲಿ ಬಿಲ್ಡರ್ ಗೆ ಹೋಗುತ್ತದೆ. ಕೊನೆಯ ಕಂತು ಸಿಗಬೇಕಾದರೆ ಆ ಕಟ್ಟಡ ನಿರ್ಮಾಣವನ್ನು ಮುಗಿಸಿ ಪಾಲಿಕೆಯಿಂದ ಕಂಪ್ಲೀಷನ್ ಸರ್ಟೀಫಿಕೇಟ್ ಬಿಲ್ಡರ್ ತೆಗೆದುಕೊಂಡಿರಬೇಕು. ಹೆಚ್ಚಿನ ಬಾರಿ ಕಟ್ಟಡ ನಿರ್ಮಾಣವಾದರೂ ವಿವಿಧ ಕಾರಣಗಳಿಂದ ಕಂಪ್ಲೀಶನ್ ಸರ್ಟಿಫಿಕೇಟ್ ಸಿಕ್ಕಿರುವುದಿಲ್ಲ. ಆದರೂ ಕೋಟಿಗಟ್ಟಲೆ ಸಾಲದ ಕಂತು ಬಿಲ್ಡರ್ ಗೆ ಪಾವತಿಯಾಗುತ್ತದೆ. ಜನ ಅಲ್ಲಿ ಬಂದು ವಾಸ್ತವ್ಯ ಮಾಡಲು ಶುರು ಮಾಡುತ್ತದೆ. ಅದು ಬಹಳ ದೊಡ್ಡ ರಿಸ್ಕ್. ನಾಳೆ ಈ ಬಿಲ್ಡಿಂಗ್ ಗೆ ಕಂಪ್ಲೀಶನ್ ಸರ್ಟಿಫೀಕೆಟ್ ಕೊಡಲು ಆಗುವುದಿಲ್ಲ ಎಂದು ಪಾಲಿಕೆ ಚೋರೆ ಮಾಡಿದರೆ ಮತ್ತು ಭವಿಷ್ಯದಲ್ಲಿ ಯಾವತ್ತಾದರೂ ಒಂದು ದಿನ ಹರೀಶ್ ಕುಮಾರ್ ಅಥವಾ ಹೆಪ್ಸಿಬಾ ರಾಣಿ ಕೊರ್ಲಪಾಟಿಯಂತಹ ಅಧಿಕಾರಿಗಳು ಪಾಲಿಕೆಯ ಬಿಗ್ ಬಾಸ್ ಆಗಿ ಬಂದು ತಮ್ಮ ಚೇಂಬರ್ ನಲ್ಲಿ ಕುಳಿತು ಸೂಚನೆ ಕೊಟ್ಟರೆ ಫರ್ಚಾ. ಯಾವತ್ತೂ ಕೂಡ ಕಾಲ ಒಂದೇ ರೀತಿಯಲ್ಲಿ ಇರುವುದಿಲ್ಲ. ಸದ್ಯಕ್ಕಂತೂ ಬಿಲ್ಡರ್ ಗಳ ಮಾನಸ ಪುತ್ರರಾಗಿರುವ ಪಾಲಿಕೆಯಲ್ಲಿರುವ ಕೆಲವು ಕಾಂಪ್ರೋಮೈಸ್ ಗಿರಾಕಿಗಳಂತಿರುವ ಕಾರ್ಪೋರೇಟರ್ ಗಳು ಪಾಲಿಕೆಯ ಕಮೀಷನರ್ , ಮೇಯರ್ ಅವರನ್ನು ಅಡ್ಜಸ್ಟ್ ಮಾಡಿ ಬಿಲ್ಡರ್ ಗಳೇ ನಮ್ಮ ಮನೆ ದೇವರು ಎಂದು ಪ್ರೂವ್ ಮಾಡಿಕೊಂಡಿರುವುದರಿಂದ ಸದ್ಯ ಮಂಗಳೂರಿನಲ್ಲಿ ಫ್ಲಾಟ್, ಅಂಗಡಿ ಖರೀದಿಸುತ್ತಿರುವವರು ಚೆನ್ನಾಗಿದ್ದಾರೆ. ಇಲ್ಲದಿದ್ರೆ ಯಾವುದಾದರೂ ಖಡಕ್ ಅಧಿಕಾರಿ ಬಂದರೆ ಪಾಲಿಕೆಯ ಸದಸ್ಯರು ಬಾಲ ಮಡಚಿ ಬಿಲ್ಡರ್ ಗಳ ಬಿಲ ಸೇರಬೇಕಿತ್ತು.
ಬ್ಯಾಂಕುಗಳಲ್ಲಿ ಇನ್ನೊಂದು ಟೈಪಿನ ಸಾಲವನ್ನು ಕೊಡಲಾಗುತ್ತದೆ. ಅದೇಗೆ ಎಂದರೆ ಕಟ್ಟಡ ಕಟ್ಟಿ ಮುಗಿದ ಮೇಲೆ ಬ್ಯಾಂಕುಗಳು ಗ್ರಾಹಕರಿಗೆ ಸಾಲ ಕೊಡುವುದು. ಉದಾಹರಣೆಗೆ ಮೂವತ್ತು ಲಕ್ಷ ಮೌಲ್ಯದ ಫ್ಲಾಟ್ ಅಥವಾ ಅಂಗಡಿಗೆ 25 ಲಕ್ಷ ರೂಪಾಯಿ ಸಾಲ ಸಿಗುತ್ತದೆ ಎಂದು ಅಂದುಕೊಳ್ಳೋಣ. ಆದರೆ ಅಷ್ಟು ಸಾಲ ಕೊಡುವ ಮೊದಲು ಬ್ಯಾಂಕಿನ ಮ್ಯಾನೇಜರುಗಳು ಕಂಪ್ಲೀಶನ್ ಸರ್ಟಿಫಿಕೇಟ್ ಇದೆಯಾ ಎಂದು ಕೇಳಬೇಕು. ಇಲ್ಲ ಎಂದರೆ ಸಿಕ್ಕಿದ ಮೇಲೆ ಬನ್ನಿ ಎನ್ನಬೇಕು. ಆದರೆ ಇಲ್ಲಿ ಬಿಲ್ಡರ್ ಗಳು ಮ್ಯಾನೇಜರ್ ಗಳೊಂದಿಗೆ “ಚೆನ್ನಾಗಿ” ಇರುವುದರಿಂದ “ಆ” ಅಪಾರ್ಟಮೆಂಟಿನಲ್ಲಿ ಮನೆಯ ಖರೀದಿಸುತ್ತೀರಾ, ಛೇ, ಅದಕ್ಕೆ ಯಾಕೆ ಕಂಪ್ಲೀಶನ್ ರಿಪೋರ್ಟ್ ಎಂದು ತಮ್ಮ ಮನೆಯ ತಿಜೋರಿಯಿಂದ ಹಣ ಕೊಡುವಂತೆ ತಕ್ಷಣ ಲೋನ್ ಪಾಸ್ ಮಾಡುತ್ತಾರೆ. ಅದು ತಪ್ಪು. ಕೇಳಿದ್ರೆ ನಾವು ಲೋನ್ ಕೊಟ್ಟ ಮನೆಗೆ ಡೋರ್ ನಂಬ್ರ ಇದೆಯಲ್ಲ ಎನ್ನುತ್ತಾರೆ. ಒಂದು ಮನೆ ಅಥವಾ ಅಂಗಡಿಗೆ ಡೋರ್ ನಂಬ್ರ ಇರುವುದು ಸಾಲ ಕೊಡುವುದಕ್ಕೆ ಮಾನದಂಡವಲ್ಲ. ಮಾನದಂಡ ಕಂಪ್ಲೀಶನ್ ಸರ್ಟಿಪೀಕೇಟ್. ಡೋರ್ ನಂಬ್ರ ಹೇಗೆ ಬೇಕಾದರೂ ಪಡೆಯಬಹುದು. ಒಂದು ಮಗುವಿಗೆ ಹೆಸರು ಏನು ಬೇಕಾದರೂ ಇಡಬಹುದು. ಆದರೆ ಮಗು ಅಕ್ರಮನಾ ಅಥವಾ ಸಕ್ರಮನಾ ಎಂದು ಗೊತ್ತಾಗುವುದು ಬೇಡಾವೇ. ಮಗುವಿಗೆ ಗಣೇಶ್ ಎಂದು ಹೆಸರಿಟ್ಟಿದ್ದೇವೆ ಎಂದು ಶಾಲೆಗೆ ಸೇರಿಸಲು ಹೋದರೆ ಹೆಸರು ಏನು ಬೇಕಾದರೂ ಇಡಿ, ಆದರೆ ತಂದೆ, ತಾಯಿ ನೀವೆನಾ ಎಂದು ಕೇಳಲ್ವಾ? ಕಂಪ್ಲೀಶನ್ ಸರ್ಟಿಪೀಕೇಟ್ ಇಲ್ಲದೆ ಇರುವ ಎಷ್ಟೋ ಬಿಲ್ಡಿಂಗ್ ಗೆ ಪಾಲಿಕೆಯ ನಿಯಮದಡಿಯಲ್ಲಿ ಡಬ್ಬಲ್ ಟ್ಯಾಕ್ಸ್ ಹಾಕಿ ಡೋರ್ ನಂಬ್ರ ಸಿಗಬಹುದು. ನಿಯಮಗಳು ಬ್ಯಾಂಕ್ ಮ್ಯಾನೇಜರ್ ಗಳಿಗೆ ಗೊತ್ತಿರುವುದಿಲ್ಲ ಎಂದಲ್ಲ. ಆದರೆ ವಿಷಯ ಇರುವುದು ಬಿಲ್ಡರ್ ಕಮೀಷನ್ ಎದುರಿಗೆ ಇಟ್ಟಾಗ ಇವರಿಗೆ ತಲೆ ಓಡುವುದಿಲ್ಲ, ಜೊಲ್ಲು ಮಾತ್ರ ಇಳಿಯುತ್ತದೆ!
Leave A Reply