ಮೀನೂಟ, ಉಪವಾಸ, ಶೂ, ವಿಐಪಿ ಪಾಸ್ ಬಿಟ್ಟು “ಸೀವೀಡ್ ಫಾರ್ಮಿಂಗ್” ಬಗ್ಗೆ ಯೋಚಿಸೋಣ!
ಒಂದಿಷ್ಟು ಮೀನು, ಶೂ, ಚಪ್ಪಲಿ, ಊಟ, ಉಪವಾಸದಿಂದ ಬೇರೆ ಯೋಚಿಸೋಣ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿರುವುದನ್ನು ಒಂದು ಇಡೀ ದಿನ ಚರ್ಚೆ ಮಾಡಿದರೂ ಅದರಿಂದ ಜನಸಾಮಾನ್ಯರಿಗೆ ಏನೂ ಉಪಯೋಗವಿಲ್ಲ. ಹಾಗೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಉಪವಾಸ ಮಾಡಿ ದೇವಸ್ಥಾನ ಪ್ರವೇಶಿಸಿದರೋ ಅಥವಾ ಟಿಫಿನ್ ಮಾಡಿ ಪ್ರವೇಶಿಸಿದರೋ ಅದು ಕೂಡ ಚರ್ಚೆಯ ವಿಷಯವಲ್ಲ. ಇಂತಹುದು ಟಿವಿ ಅಥವಾ ಸಾಮಾಜಿಕ ತಾಣ ಎಲ್ಲಿಯಾದರೂ ಚರ್ಚೆಯಾದರೆ ಅದರಲ್ಲಿ ನಾವು ಯಾವುದೇ ರೂಪದಲ್ಲಾದರೂ ಪ್ರತಿಕ್ರಿಯಿಸುವುದು ಅಥವಾ ಭಾಗವಹಿಸುವುದು ಮಾಡಿದರೆ ಅದರಿಂದ ನಮ್ಮ ನಿಮ್ಮ ಸಮಯ ಮತ್ತು ಏನರ್ಜಿ ವೇಸ್ಟ್ ವಿನ: ದೇಶಕ್ಕೂ ನಿಮಗೂ ಆಗುವಂತಹುದು ಏನಿಲ್ಲ. ಕೆಲವು ವಿಷಯಗಳನ್ನು ಚರ್ಚೆ ಮಾಡುವುದರಿಂದ ಕೇವಲ ನಾಲಗೆಯ ತೀಟೆ ಅಥವಾ ಹೊಟ್ಟೆಯ ಊರಿಯನ್ನು ತೀರಿಸಿಕೊಳ್ಳಬಹುದೇ ವಿನ: ನಾಲ್ಕು ಜನರಿಗೆ ಉಪಯೋಗವಾಗುವುದಿಲ್ಲ. ಆದರ ಬದಲು ಆದಿತ್ಯವಾರ ಪ್ರಧಾನಿಗಳು ಮಾತನಾಡಿದ ವಿಷಯಗಳಲ್ಲಿ ಒಂದು ಶಬ್ದವನ್ನು ಅವರು ಉಲ್ಲೇಖಿಸಿ ಮಾತನಾಡಿದ್ದಾರೆ. ಅದರ ಬಗ್ಗೆ ನಾವು ಸ್ವಲ್ಪ ಯೋಚಿಸಿದರೆ ಕರಾವಳಿ ಕರ್ನಾಟಕದಲ್ಲಿ ವಾಸಿಸುವ ನಮ್ಮ ಮೊಗವೀರ ಸಮುದಾಯಕ್ಕೆ ಮತ್ತು ರೈತಾಪಿ ವರ್ಗಕ್ಕೆ ಏನಾದರೂ ಸಹಾಯ ಆಗಬಹುದು.
ಮೊಗವೀರ ಜನಾಂಗ ವರ್ಷವೀಡಿ ಸಮುದ್ರವನ್ನೇ ಆಶ್ರಯಿಸಿ ಜೀವನ ಮಾಡಬೇಕಾಗಿರುತ್ತದೆ. ಆದರೆ ವರ್ಷದಿಂದ ವರ್ಷ ಫಸಲು ಅಥವಾ ಉತ್ಪತ್ತಿ ಕ್ಷೀಣಿಸುತ್ತಾ ಬರುತ್ತಿದೆ. ಅದಕ್ಕಾಗಿ ಕರಾವಳಿಯಲ್ಲಿ ಹೇರಳವಾಗಿರುವ ಜಲರಾಶಿ ಅಂದರೆ ಸಮುದ್ರವನ್ನು ಬೇರೆ ರೂಪದಲ್ಲಿ ಬಳಸಿದರೆ ಮೊಗವೀರರು ಈಗ ಗಳಿಸುತ್ತಿರುವ ಆದಾಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಗಳಿಸಬಹುದು ಎಂದು ಹೇಳಿದ ಮೋದಿ “ಸಿವೀಡ್ ಫಾರ್ಮಿಂಗ್” ಎನ್ನುವ ಶಬ್ದವನ್ನು ನಮ್ಮ ಎದುರಿಗೆ ಇಟ್ಟಿದ್ದಾರೆ. ಈ ಕುರಿತು ಎಷ್ಟು ಮಾಧ್ಯಮಗಳು ಚರ್ಚೆ ಮಾಡಿವೆ. ಎಷ್ಟು ಸಾಮಾಜಿಕ ತಾಣಗಳಲ್ಲಿ ಕಮೆಂಟ್, ರಿಪ್ಲೈ ಬರುತ್ತಿದೆ. ಹೋಗಲಿ ಎಷ್ಟು ಮಂದಿ ಈ ವಿಷಯವನ್ನು ಗಂಭೀರವಾಗಿ ಯೋಚಿಸಿ, ಬೇರೆಯವರೊಂದಿಗೆ ಮಾತನಾಡಿದ್ದಾರೆ. ಇಲ್ಲ, ಹೆಚ್ಚೆಂದರೆ ಅಲ್ಲಿ ಲಕ್ಷ ಜನರಲ್ಲಿ ಬೆರಳೆಣಿಕೆಯ ಜನ ಯೋಚಿಸಿರಬಹುದು. ಉಳಿದವರು ಅವನಿಗೆ ಪಾಸ್ ಕೊಟ್ಟಿದ್ದಾರೆ, ಇವನು ಆ ಆರೋಪಿ, ಸಿಎಂ ಮೀನು ತಿಂದ್ರು, ಇವರು ಶೂ ಹಾಕಿ ಬಾಗಿಲ ತನಕ ಹೋದ್ರು, ಇದೆ ವಿಷಯ. ಪತ್ರಕರ್ಥರು ಯಾವುದು ಸೇಲ್ ಆಗುತ್ತೋ ಅದನ್ನೇ ಬಿತ್ತರಿಸುತ್ತಾ ಕುಳಿತರೆ ಸೀವಿಡ್ ಫಾರ್ಮಿಂಗ್ ತರಹದ್ದು ಯಾರು ಮಾತನಾಡುವುದು?
ಜಪಾನ್, ಚೀನಾ, ಕೊರಿಯಾ ರಾಷ್ಟ್ರಗಳು ಇವತ್ತು ಅಭಿವೃದ್ಧಿಯ ಪಥದಲ್ಲಿ ಓಡಲು ಈ ಸಿವೀಡ್ ಕೂಡ ಕಾರಣ. ಅವರು ಸಮುದ್ರದಲ್ಲಿ ಕೇವಲ ಮೀನು ಸಿಗುತ್ತದೆ ಎಂದು ಕಾದು ಕೂತಿದ್ದರೆ ನಮ್ಮ ಹಾಗೆ ಈ ಸಲ ಮೀನು ಕಡಿಮೆ ಮಾರ್ರೆ ಎನ್ನುವ ಡೈಲಾಗ್ ಹೊಡೆದು ತಲೆ ಮೇಲೆ ಕೈ ಇಟ್ಟು ಕುಳಿತುಬಿಡುತ್ತಿದ್ದರು. ಆದರೆ ಅವರು ಒಂದು ಹೆಜ್ಜೆ ಅಲ್ಲ ಒಂದು ಕಿಲೋ ಮೀಟರ್ ದೂರ ಹೋಗಿ ಯೋಚಿಸುತ್ತಾರೆ ಎನ್ನುವುದಕ್ಕೆ ಅವರು ಸಮುದ್ರವನ್ನು ತಮಗೆ ಬೇಕಾದ ಹಾಗೆ ಬಳಸಿ ತಮ್ಮ ಮೀನುಗಾರರ ಜೀವನಮಟ್ಟ ಮೇಲೆ ತಂದಿರುವುದೇ ಸಾಕ್ಷಿ. ಮೂರು ಕಡೆ ಜಲರಾಶಿ ಇರುವ ನಾವು ಬಿಟ್ಟು ಬೇರೆ ರಾಷ್ಟ್ರಗಳು ಸೀವೀಡ್ ಫಾರ್ಮಿಂಗ್ ಮಾಡಿ ಮೇಲೆ ಬಂದಿವೆ.
ಅಷ್ಟಕ್ಕೂ ಸೀವೀಡ್ ಫಾರ್ಮಿಂಗ್ ಮಾಡಲು ಸಮುದ್ರವೇ ಬೇಕಿಲ್ಲ. ನಮ್ಮಲ್ಲಿ ನೀರಿನ ಪ್ರಾಕಾರ ಬೇರೆ ಬೇರೆ ರೀತಿಯಲ್ಲಿದೆ. 1670 ರಲ್ಲಿ ಜಪಾನ್ ಸೀವೀಡ್ ಮಾಡಿ ಮೀನುಗಾರರಿಗೆ ಮೊದಲ ಬಾರಿಗೆ ಇದರ ರುಚಿ ತೋರಿಸಿತು. 1940 ರಲ್ಲಿ ಅತ್ಯಾಧುನಿಕ ಶೈಲಿಗೆ ಮಾರ್ಪಾಡಾದ ಜಪಾನ್ ಸೀವಿಡ್ ಶೈಲಿ ಈಗ ಕೋಟ್ಯಾಂತರ ರೂಪಾಯಿ ವ್ಯವಹಾರ.
ಆದರೆ ನಮ್ಮ ಏಶ್ಯಾ ಖಂಡದಲ್ಲಿ ಈ ಬಗ್ಗೆ ಅಷ್ಟು ಚಿಂತನೆಯಾಗಿಲ್ಲ. ನಮ್ಮಲ್ಲಿ ಆಧುನಿಕ ಯಂತ್ರಗಳನ್ನು ಬಳಸಿ ಈ ಕುರಿತು ಹೊಸ ವ್ಯವಸ್ಥೆ ಮಾಡುವ ಪ್ರಕ್ರಿಯೆ ಶುರುವಾಗದೇ ಇದ್ದ ಕಾರಣ, ದೊಡ್ಡ ಸಂಖ್ಯೆಯಲ್ಲಿ ಸೀವೀಡ್ ಫಾರ್ಮಿಂಗ್ ಮಾಡಲು ಕಾರ್ಮಿಕರು ಬೇಕು ಎನ್ನಲಾಗುತ್ತದೆ. ಅಲ್ಲದೆ ವ್ಯವಹಾರಿಕವಾಗಿ, ಲಾಭದಾಯಕವಾಗಿ ಇದನ್ನು ಬಳಸಲು ಇನ್ನೂ ಯೋಜನೆ ಹಾಕಿಕೊಳ್ಳಲಾಗಿಲ್ಲ. ಅದನ್ನೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದು. ಮುಂದಿನ ಒಂದು ವರ್ಷದಲ್ಲಿ ಈ ಬಗ್ಗೆ ಕೇಂದ್ರ ಸರಕಾರ ಯೋಜನೆ ತರಲಿದೆ ಅಂತ. ಅವರು ಯೋಜನೆ ತರುವ ಸಂದರ್ಭದಲ್ಲಿ ನಮ್ಮ ಕರಾವಳಿಯ ಜನ ಈ ಬಗ್ಗೆ ಅರ್ಥ ಮಾಡಿಕೊಂಡರೆ ಅದು ಸುಲಭವಾಗಿ ನಮ್ಮನ್ನು ತಲುಪುತ್ತದೆ. ನಾವು ಬೇಗ ಕಾರ್ಯತತ್ಪರರಾಗಬಹುದು.
ಹೇಗೂ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಸ್ವಸಹಾಯ ಸಂಘಗಳ ಮೂಲಕ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಅವರು ಮೋದಿಯವರು ಹೇಳಿದ ಸೀವೀಡ್ ಕುರಿತು ಮೊಗವೀರರಲ್ಲಿ, ರೈತರಲ್ಲಿ ಜಾಗೃತಿ ತಂದರೆ ಅದಕ್ಕಿಂತ ದೊಡ್ಡ ಮತ್ತೊಂದು ಸುಧಾರಣೆ ಕರಾವಳಿಗರಲ್ಲಿ ಬೇರೆ ಇಲ್ಲ!
Leave A Reply