1984ರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ತಂದೆ, ಅಜ್ಜನನ್ನು ಕಳೆದುಕೊಂಡವನ ಮನದಾಳ ಹೇಗಿದೆ ಗೊತ್ತಾ?
(ಅದು ಅಕ್ಟೋಬರ್ 31, 1984. ಸಿಖ್ ಅಂಗರಕ್ಷಕರಿಂದ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ದೆಹಲಿ, ಪಂಜಾಬ್ ಸೇರಿ ಹಲವೆಡೆ ಸಿಖ್ಖರ ಹತ್ಯೆಯಾಯಿತು. ಒಂದು ಲೆಕ್ಕಾಚಾರದ ಪ್ರಕಾರ 3 ಸಾವಿರಕ್ಕೂ ಅಧಿಕ ಸಿಖರನ್ನು ಹತ್ಯೆ ಮಾಡಲಾಯಿತು ಎಂದು ಹೇಳಲಾಗುತ್ತದೆ. ಹೀಗೆ ನಡೆದ ಹತ್ಯೆಯಲ್ಲಿ ತಂದೆ ಹಾಗೂ ಅಜ್ಜನನ್ನು ಕಳೆದುಕೊಂಡ ಕುಟುಂಬವೊಂದರ ಕುಡಿಯ ಪ್ರಸ್ತುತ ಪರಿಸ್ಥಿತಿ ಹೇಗಿದೆ? ಅವರ ನೆನಪುಗಳೇನು, ಹತ್ಯೆ ಪರಿಣಾಮ ಹೇಗಿತ್ತು? ಇಲ್ಲಿದೆ ಆ ಕುಟುಂಬದ ಮನದಾಳ ಹಾಗೂ ಬೇಗುದಿ)
ನಾನು ಬದುಕಿದರೆ ನಿಮ್ಮವ, ಸತ್ತರೆ ಗುರುನಾನಕರ ಪಾದದ ಸ್ವತ್ತು
ನಮಸ್ತೆ. ನನ್ನ ಹೆಸರು ರಾಜ್ ಬೀರ್ ಸಿಂಗ್. 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ಸಿಖ್ಖರನ್ನು ಸಿಕ್ಕಲ್ಲಿ ಕೊಲ್ಲಲಾಯಿತಂತೆ. ಹೌದು, ನಾನಾಗ 11 ತಿಂಗಳಿನವನಿದ್ದೆ. ಆಗ ನನಗೇನು ಗೊತ್ತಾಗುತ್ತಿತ್ತು ಹೇಳಿ? ಆದರೆ ಬೆಳೆಯುತ್ತ ಬೆಳೆಯುತ್ತ, ತಾಯಿ ಸಂಬಂಧಿಕರಿಂದ ನನ್ನ ಕುಟುಂಬದ ಬಗ್ಗೆ ತಿಳಿದುಕೊಂಡೆ, ನನ್ನ ಅಜ್ಜ, ತಂದೆಯನ್ನು ಜೀವಂತವಾಗಿ ಸುಟ್ಟರಲ್ಲ? ಆ ಕತೆಯನ್ನು ಭಯಾನಕವಾಗಿ ಕೇಳಿದಾಗ ಎದೆ ಝಲ್ ಎನ್ನುತ್ತದೆ, ಕಣ್ಣಾಲಿ ಒದ್ದೆಯಾಗುತ್ತವೆ. ಒಂದು ಕ್ಷಣ ಆಕ್ರೋಶ ಚಿಮ್ಮುತ್ತದೆ? ನನ್ನ ತಂದೆ ಏನು ತಪ್ಪು ಮಾಡಿದ್ದರು ಎಂಬ ಪ್ರಶ್ನೆ ದಿನವೂ ಮೂಡಿಬರುತ್ತದೆ. ಉತ್ತರ ಮಾತ್ರ ಸಿಗಲ್ಲ.
ದೆಹಲಿಯ ತ್ರಿಲೋಕ ಪುರಿ ರೈಲು ನಿಲ್ದಾಣದಲ್ಲಿ ನೌಕರನಾಗಿ ನನ್ನ ತಂದೆ ಮೋಧು ಸಿಂಗ್ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 31, 1984ರಂದು ಹತ್ಯೆ ಆರಂಭವಾದ ದಿನ ನನ್ನ ತಂದೆ ಇಡೀ ರಾತ್ರಿ ರೈಲು ನಿಲ್ದಾಣದಲ್ಲೇ ಕಳೆದರಂತೆ. ಬೆಳಗ್ಗೆ ಮನೆಗೆ ಬಂದಾಗ ಅಮ್ಮ ಮೊದಲು “ಈ ಕೂದಲು ಕತ್ತರಿಸಿ” ಎಂದಿದ್ದರಂತೆ. ಆದರೆ ಶೂರ ಸಿಖ್ಖನಾದ ನನ್ನ ತಂದೆ ಈ ಮೇಲಿನ ವಾಕ್ಯವನ್ನು ಹೇಳಿದರಂತೆ.
ನನ್ನ ತಾತ ಕಿರ್ಪಾಲ್ ಸಿಂಗನೂ ಶೂರ ಸಿಖ್ಖನೇ ಆಗಿದ್ದ. ಆದರೆ ಉದ್ರಿಕ್ತರ ಗುಂಪು ಮೊದಲು ನನ್ನ ತಾತನ ಮೇಲೆಯೇ ದಾಳಿ ಮಾಡಿತು. ಮನೆಯಿಂದ ಹೊರಗೆಳೆದು ಜೀವಂತವಾಗಿ ಸುಡಲಾಯಿತು. ಆಗ ನಾನೂ ಕಿರುಚುತ್ತಿದ್ದನಂತೆ. ಅಮ್ಮ ಎಷ್ಟು ಕಷ್ಟಪಟ್ಟರೋ ಏನೋ?
ಬಳಿಕ ನನ್ನ ತಂದೆಯ ಸ್ಥಿತಿಯೂ ಅದೇ ಆಯಿತು. ಮನೆಗೆ ನುಗ್ಗಿ ರಾಡಿನಿಂದ ಹಲ್ಲೆ ಮಾಡಲಾಯಿತು. ಬಳಿಕ ಬೆಂಕಿ ಹಚ್ಚಿ ಸುಡಲಾಯಿತು. ನನ್ನ ಅಮ್ಮ ನಮಗೆ ಸಂಸ್ಕಾರ ಮಾಡಲು ಶವವಾದರೂ ಕೊಡಿ ಎಂದು ಅಂಗಲಾಚಿದರಂತೆ. ಆದರೆ ತಂದೆ-ಹಾಗೂ ತಾತನ ಶವ ಟ್ರಕ್ಕಿಗೆ ತುಂಬಿ ಒಯ್ಯಲಾಯಿತಂತೆ.
ಹೀಗೆ 11 ತಿಂಗಳಿನವಾಗಿದ್ದಾಗಲೇ ಆಡಿಸುವ ತಾತನನ್ನು ಕಳೆದುಕೊಂಡೆ, ಮುದ್ದು ಮಾಡುವ ತಂದೆಯನ್ನು ಕಳೆದುಕೊಂಡೆ. ಅದೂ ಯಾರೂ ಮಾಡದ ತಪ್ಪಿಗೆ. ನಾನು ಬೆಳೆಯುತ್ತ ಬೆಳೆಯುತ್ತ, ಎಲ್ಲ ಮಕ್ಕಳ ಹಾಗೆ ಕಥೆಗಳನ್ನು ಕೇಳಿದೆ. ಆದರೆ ರಾಜ-ರಾಣಿಯರದ್ದಲ್ಲ, ನನ್ನ ತಂದೆ, ತಾತನ ಹತ್ಯೆಯದು. ಈ ಕಥೆ ಕೇಳಿದಾಗಲೆಲ್ಲ ಮನಸ್ಸಿಗೆ ನೋವಾಗುತ್ತದೆ. ಏನು ಮಾಡೋದು?
ನನ್ನ ಬಡ ಕುಟುಂಬಕ್ಕೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡ ಬಳಿಕ, ಜೀವನ ನಿರ್ವಹಣೆಗೆ ಅಮ್ಮ ತುಂಬ ಕಷ್ಟಪಟ್ಟರಂತೆ. 1986ರಲ್ಲಿ ಸರ್ಕಾರವೇನೋ ನನ್ನ ತಾಯಿಗೆ ಡಿ ದರ್ಜೆಯ ಸರ್ಕಾರಿ ನೌಕರಿಯೇನೋ ನೀಡಿತು. ನಾನೂ ಶಾಲೆಗೆ ಹೋಗಲು ಆರಂಭಿಸಿದೆ. ಆದರೆ ಕುಟುಂಬದ ಬಡತನ ಮಾತ್ರ ನೀಗಿರಲಿಲ್ಲ. ಹಾಗಾಗಿ ನಾನು ಕುಟುಂಬಕ್ಕೆ ನೆರವಾಗಲು ಹತ್ತನೇ ಕ್ಲಾಸಿಗೇ ಶಾಲೆ ಬಿಟ್ಟು, ಕೆಲಸಕ್ಕೆ ಸೇರಿದೆ. ಪ್ರಾಯಶಃ, ನನ್ನ ತಂದೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲವೇನೋ?
ನಾನೊಂದು ಗ್ಯಾರೇಜಿನಲ್ಲಿ ಕೆಲಸ ಹಿಡಿದು, ಕಲಿತು ತಾಯಿಗೆ ನೆರವಾಗತೊಡಗಿದೆ. ನನಗೊಂದಿಷ್ಟು ಗೆಳೆಯರೂ ಸಿಕ್ಕರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಮಾದಕ ವಸ್ತು (ಡ್ರಗ್ಸ್) ಸೇವನೆ ಮಾಡುವ ಯುವಕರ ಪಟ್ಟಿಗೆ ನನ್ನ ಹೆಸರೂ ಸೇರಿಸಲಾಯಿತು. ಗೆಳೆಯರು ಬಿಟ್ಟು ಹೋದರು. ಕೆಲವರು ಮಾದಕ ವಸ್ತು ಸೇವಿಸಿ ಸತ್ತೂ ಹೋದರು. ಇದೆಲ್ಲದಕ್ಕೂ ಗಲಭೆಯೇ ಕಾರಣವಾಗಿತ್ತು. ಹತ್ಯೆಯಿಂದ ಮನನೊಂದು ಕೆಲವರು ಡ್ರಗ್ಸ್ ಸೇವನೆಗೆ ಜೋತು ಬಿದ್ದಿದ್ದೂ ನಿಜ.
ಬಳಿಕ ನಮ್ಮ ಪರಿಸ್ಥಿತಿಯೂ ಸುಧಾರಿಸಿತು. ನಾನೂ ದುಡಿದು ತಾಯಿಗೆ ಹಣ ನೀಡಲಾರಂಭಿಸಿದೆ. ನಿರ್ಹವಣೆ ಸರಾಗವಾಯಿತು. ನಾನೊಂದು ಸ್ವಂತ ಅಂಗಡಿಯನ್ನೂ ತೆರೆದೆ. ಎಲ್ಲ ದುಃಖ ಮರೆತು 2005ರಲ್ಲಿ ಮದುವೆಯಾದೆ. ಮನೆಗೆ ಮಗಳು, ಮಗ ಬಂದ. ನಿಮಗೆ ಗೊತ್ತಾ, ನನ್ನ ಮಗಳಿಗೀಗ ಹತ್ತು ವರ್ಷ. ಮಗನಿಗೆ ಮೂರು. ಆತ ತೊದಲು ಮಾತನಾಡಿದಾಗ ಖುಷಿಯಾಗುತ್ತದೆ. ಚಿಪ್ಸ್ ಗಾಗಿ ರಚ್ಚೆ ಹಿಡಿಯುತ್ತಾನೆ. ಕೊಡಿಸುತ್ತೇನೆ. ಆದರೆ ಆತನಿಗೆ, ತನ್ನ ತಾತ, ಮುತ್ತಾತನನ್ನು ಜೀವಂತವಾಗಿ ಸುಡಲಾಯಿತು ಎಂದು ತಿಳಿದರೆ, ಆತನ ಪ್ರತಿಕ್ರಿಯೆ ಹೇಗಿರುತ್ತದೆ? ನೆನೆದರೆ ನೋವಾಗುತ್ತದೆ.
ಆದರೆ ನನ್ನ ತಂದೆ, ತಾತನನ್ನು ಕೊಂದವರಿಗೆ ಏನು ಮಾಡಲಾಯಿತು? ಯಾವ ಶಿಕ್ಷೆ ವಿಧಿಸಲಾಯಿತು? ಸುಮ್ಮನೆ ತನಿಖೆ ಹೆಸರಲ್ಲಿ ಆರೋಪಿಗಳನ್ನು ಜೈಲಿನಲ್ಲಿಟ್ಟು ಸಾಕಲಾಯಿತು. ಇನ್ನೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಹೌದು, ಖಂಡಿತವಾಗಿಯೂ ನಾನು ಇಂದಿರಾ ಗಾಂಧಿ ಹತ್ಯೆಯನ್ನು ಖಂಡಿಸುತ್ತೇನೆ. ಆದರೆ ಸಿಖ್ಖರು ಹತ್ಯೆ ಮಾಡಿದರು ಎಂಬ ಕಾರಣಕ್ಕೆ ನಮ್ಮ ಕುಟುಂಬಸ್ಥರನ್ನೇಕೆ ಹತ್ಯೆ ಮಾಡಬೇಕು? ನಿಮಗೆ ಗೊತ್ತಾ, ನಾವಿದ್ದ ಪ್ರದೇಶವೊಂದರಲ್ಲೇ 400 ಸಿಖ್ಖರನ್ನು ಕೊಲ್ಲಲಾಯಿತಂತೆ. ಇದರ ಹೊಣೆಯನ್ನು ಕಾಂಗ್ರೆಸ್ ನಾಯಕರು ಹೊರುತ್ತಾರಾ? ನನ್ನ ಮಗನಿಗೆ ರಾಜ-ರಾಣಿ ಕಥೆ ಹೇಳಲೋ, ನಿನ್ನ ತಾತ, ಮುತ್ತಾತರನ್ನು ತಪ್ಪಿಲ್ಲದೇ ಕೊಂದರು ಅಂತ ಹೇಳಲೋ?
ಆಲದ ಮರ ಉರುಳಿದಾಗ ಭೂಮಿ ನಲಗುವುದು ಸಹಜ ಎಂದಿದ್ದರು ರಾಜೀವ್!
ಇಂದಿರಾ ಗಾಂಧಿ ಹತ್ಯೆ ಬಳಿಕ ಸಾವಿರಾರು ಸಿಖ್ಖರ ಹತ್ಯೆಯಾದಾಗ ಕಾಂಗ್ರೆಸ್ ಕ್ಷಮೆಯಾಚಿಸುವುದು ಬಿಡಿ, ಕನಿಷ್ಠ ಸಮಾಧಾನವಾದರೂ ಹೇಳಲಿಲ್ಲ. ಬದಲಾಗಿ ಇಂದಿರಾ ಪುತ್ರ ರಾಜೀವ್ ಗಾಂಧಿ ಹೇಳಿದ್ದೇನು ಗೊತ್ತೆ? “ಒಂದು ದೊಡ್ಡ ಆಲದ ಮರ ಉರುಳಿದಾಗ ಭೂಮಿ ನಲಗುವುದು ಸಹಜ” ಎಂದು ಹತ್ಯೆ ಸಮರ್ಥಿಸಿಕೊಂಡಿದ್ದರು.
ಚುನಾವಣೆ ಬಂದಾಗಲೆಲ್ಲ, ಕಾಂಗ್ರೆಸ್ ನಾವು ಅಲ್ಪಸಂಖ್ಯಾತರ ಪರ, ದೀನ ದಲಿತರು, ಬಡವರ ಪರ ಎಂದು ಹೇಳುತ್ತದೆ. ಆದರೆ ತಪ್ಪೇ ಮಾಡದೆ ಸಾವಿರಾರು ಸಿಖ್ಖರನ್ನು ಹತ್ಯೆ ಮಾಡಲಾದ ಕುರಿತು ಯಾರೊಬ್ಬರೂ ಹೇಳುವುದಿಲ್ಲ. ಹತ್ಯೆ ವೇಳೆ, ತಾತ, ತಂದೆಯನ್ನು ಅಷ್ಟೂ ಕುಟುಂಬದ ಸದಸ್ಯರ ಪರಿಸ್ಥಿತಿ ಹೇಗಿರಬೇಡ? ರಾಜ್ ಬೀರ್ ಸಿಂಗ್ ರಂತೆ ಅವರೆಷ್ಟು ಕಷ್ಟ ಅನುಭವಿಸಿರಬೇಡ?
ನಮ್ಮ ಇತಿಹಾಸ ಶೌರ್ಯ, ಸಾಹಸ ಹೇಳುವ ಜತೆಗೆ, ಕ್ಷುಲ್ಲಕ ಹತ್ಯೆ, ಕುತ್ಸಿತ ಮನಸ್ಸುಗಳ ಬಗ್ಗೆಯೂ ಹೇಳುತ್ತದೆ. ಅದರ ಹಿಂದೆಯೂ ವ್ಯವಸ್ಥೆಯನ್ನು ಅಣಕಿಸುವ ಕ್ರೂರ ಅಧ್ಯಾಯ ಇದೆ ಎಂದು ತಿಳಿಸುತ್ತದೆ. ರಾಜ್ ಬೀರ್ ಸಿಂಗ್ ಬಗ್ಗೆ ಮರುಕ ಹುಟ್ಟಿ ಬರುತ್ತದೆ.
ಸ್ನೇಹ ಸೇತು-ಹಿಂದುಸ್ತಾನ್ ಟೈಮ್ಸ್
ಅನುವಾದ-ನವೀನ್ ಶೆಟ್ಟಿ
Leave A Reply