ಒಂದು ಮೀಟಿಂಗ್ ಮಾಡಿ ಲಕ್ಷ್ಮಣ ರೇಖೆ ಎಳೆಯಬೇಕು, ವೈದ್ಯರು ದಾಟಲ್ಲ ಎಂದು ಪ್ರಮಾಣ ಮಾಡಬೇಕು!
ವೈದ್ಯರೇ ನೀವು ನನ್ನ ಮಗನ ಜೀವವನ್ನು ಉಳಿಸಿದ ದೇವರು ಎಂದು ಹಳೆ ಬ್ಲಾಕ್ ಎಂಡ್ ವೈಟ್ ಸಿನೆಮಾಗಳಲ್ಲಿ ವಯಸ್ಸಾದ ಪಾತ್ರಧಾರಿಯೊಬ್ಬರು ವೈದ್ಯನ ಪಾತ್ರವನ್ನು ಮಾಡುತ್ತಿದ್ದವನ ಕೈ ಕಾಲು ಹಿಡಿದು ಧನ್ಯವಾದ ಅರ್ಪಿಸುತ್ತಿದ್ದ ದೃಶ್ಯವನ್ನು ನೋಡಿರಬಹುದು. ಬಹುಶ: ಈಗಿನ ತಲೆಮಾರು ಅದನ್ನು ನೋಡಿರಲಿಕ್ಕಿಲ್ಲ. ಯಾಕೆಂದರೆ ಅಂತಹ ದೃಶ್ಯದ ಕಲ್ಪನೆ ಇವತ್ತಿನ ತಲೆಮಾರಿನ directorರಿಗೆ ಬರಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಈಗ ಅಂತಹ ವಾತಾವರಣವೇ ಇಲ್ಲ. ಈಗ ಎಲ್ಲಿಯಾದರೂ ಅಂತಹ ಸೀನ್ ಯಾವುದಾದರೂ ಸಿನೆಮಾದಲ್ಲಿ ಹಾಕಿದ್ರೆ ಅಂತಹ directorರಿಗೆ ತಲೆ ಸರಿ ಇಲ್ಲ ಎಂದೋ ಅಥವಾ ಹಳೆಯ ಕಾಲದ ಮನಸ್ಥಿತಿಯ directorನೆಂದೊ ಜನ ಅಂದುಕೊಂಡು ನಕ್ಕುಬಿಡುವ ಸಂಭವ ಇರುತ್ತದೆ.
ಇಪ್ಪತ್ತು ವರ್ಷಗಳ ಹಿಂದೆಗೂ ಮತ್ತು ಇವತ್ತಿನ ಕಾಲಕ್ಕೂ ಇರುವ ವ್ಯತ್ಯಾಸ ಇದೇ, ಇವತ್ತು ವೈದ್ಯ ನಾರಾಯಣೋ ಹರಿಯಾಗಿ ಉಳಿದಿಲ್ಲ. ಅದು ವೈದ್ಯರಿಗೂ ಗೊತ್ತು. ದೇವರಾಗಿ ಉಳಿಯುವ ಮನಸ್ಸು ಅವರಿಗೂ ಇಲ್ಲ. ಯಾಕೆಂದರೆ ಇವತ್ತಿನ ಒಂದೊಂದು ವೈದ್ಯಕೀಯ ಸಾಧನ, ಯಂತ್ರಗಳು ಕೂಡ ಕೆಲವು ಲಕ್ಷ, ಕೋಟಿಗಳಲ್ಲಿ ಬೆಲೆಬಾಳುತ್ತವೆ. ಅದನ್ನು ಖರೀದಿಸಿ ನಂತರ ಯಾರದಾದರೂ ಆರ್ಶೀವಾದ ಸಿಗಲಿ ಎಂದು ಕಾಯುತ್ತಾ ಕುಳಿತರೆ ನಾಳೆ ಬ್ಯಾಂಕಿನಿಂದ ಸಾಲ ಕಟ್ಟಿಲ್ಲ ಎಂದು ನೋಟಿಸ್ ಬಂದರೆ ನಾವು ಯಾವ ದೇವರ ಹತ್ತಿರ ಹೋಗುವುದು ಎಂದು ಅಂದುಕೊಂಡ ವೈದ್ಯರು ಕಾಲಕ್ರಮೇಣ ಹೃದಯವನ್ನು ಕಲ್ಲು ಮಾಡುತ್ತಾ ಹೋದರು. ಮನಸ್ಸು, ಹೃದಯ ಒಂದಷ್ಟರ ಮಟ್ಟಿಗೆ ಕಲ್ಲಾದರೆ ಪರವಾಗಿಲ್ಲ. ಅದನ್ನು ಕರಗಿಸಬಹುದು. ಆದರೆ ಕೆಲವರದ್ದು ಕಲ್ಲೇ ಹೃದಯವಾಯಿತು. ಆ ಸ್ಥಿತಿಗೆ ಬಂದಾಗ ಒಂದು ನಿಯಂತ್ರಣ ಬೇಕು ಎಂದು ಯಾರಿಗಾದರೂ ಅನಿಸದ್ದೇ ಇರುವುದಿಲ್ಲ. ಹೇಗೆ ರಾಜಕೀಯದಲ್ಲಿ ಚುನಾವಣೆ ಸಂದರ್ಭದಲ್ಲಿ ಹಣ ಹಾಕಿ ನಂತರ ಗೆದ್ದು ಬಂದು ಹಾಕಿದ ಹಣದ ನಾಲ್ಕು ಪಟ್ಟು ಮಾಡುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿ ಕೊನೆಗೆ ರಾಜಕಾರಣವೇ ವ್ಯಾಪಾರವಾಯಿತೋ ಹಾಗೆ ಬರಬರುತ್ತಾ ವೈದ್ಯಲೋಕ ಕೂಡ ಹಾಕಿದ ಹಣ ಹಿಂದಕ್ಕೆ ಪಡೆಯಬೇಕಾದರೆ ನಾವು ಕೂಡ ಖಡಕ್ ಆಗಿರಬೇಕು ಎಂದು ನಿರ್ಧಾರಕ್ಕೆ ಬಂತು. ಆದರೆ ಖಡಕ್ ಎನ್ನುವ ಶಬ್ದಕ್ಕೆ ಲಕ್ಷ್ಮಣ ರೇಖೆ ಯಾವುದು ಎನ್ನುವುದು ಯಾರಿಗೂ ಗೊತ್ತಿಲ್ಲ. ಅದರ ಪರಿಣಾಮವಾಗಿ ಕೆಲವರು ಲಕ್ಷ್ಮಣ ರೇಖೆಯ ಒಳಗೆ ಬಂದರು. ಕೆಲವರು ಲಕ್ಷ್ಮಣ ರೇಖೆಯ ಮೇಲೆ ನಿಂತರು. ಕೆಲವರು ರೇಖೆ ದಾಟಿ ಹೋದರು. ಲಕ್ಷ್ಮಣ ರೇಖೆ ದಾಟಿ ಹೋದ ಯಾವ ವೈದ್ಯನಿಗೂ ಅಥವಾ ಆಸ್ಪತ್ರೆಗೂ ತೊಂದರೆಯಾಗಲಿಲ್ಲ. ಅದನ್ನು ನೋಡಿದ ಬೇರೆ ವೈದ್ಯ ಅಥವಾ ಆಸ್ಪತ್ರೆಯವರಿಗೆ ರೇಖೆ ದಾಟಲು ಧೈರ್ಯ ಬಂತು. ನೂರಕ್ಕೆ ಎಪ್ಪತೈದು ವೈದ್ಯರು ಲಕ್ಷ್ಮಣ ರೇಖೆ ದಾಟಿದರು. ಹಲವರು ರೇಖೆ ದಾಟಿದ ಆಸ್ಪತ್ರೆಗಳ ಸೆರಗಿನ ಹಿಂದೆ ಕುಳಿತರು. ಕೆಲವರನ್ನು ಅಂತಹ ಆಸ್ಪತ್ರೆಗಳು ಕಂಕುಳಲ್ಲಿ ಕುಳ್ಳಿರಿಸಿಕೊಂಡವು. ಕೆಲವು ಆಸ್ಪತ್ರೆಗಳು ತಲೆಯ ಮೇಲೆ ಹೊತ್ತು ನಲಿದವು. ಒಟ್ಟಿನಲ್ಲಿ ಲಕ್ಷ್ಮಣ ರೇಖೆ ದಾಟುವುದೆಂದರೆ ಅದೊಂದು ಸೀಮೋಲ್ಲಂಘನದಂತೆ ಎಲ್ಲರೂ ಅಂದುಕೊಂಡರು. ರೋಗಿಯ ದೇಹವನ್ನು ಸ್ಕ್ಯಾನ್ ಮಾಡುವ ಮೊದಲೇ ಹಲವು ಆಸ್ಪತ್ರೆಗಳು ಆತನ ಪರ್ಸ್ ಅನ್ನು ಸ್ಕ್ಯಾನ್ ಮಾಡಿಕೊಂಡವು. ರೋಗಿಯ ಕಣ್ಣುಗಳಲ್ಲಿದ್ದ ಜೀವದ ಭಯ ಆತ ಹೊರಗೆ ಹೋಗುವಾಗ ಬಿಲ್ ಗಳಲ್ಲಿ ಪ್ರತಿಬಿಂಬವಾಯಿತು. ವೈದ್ಯರು ಬಿಳಿ ವರ್ಣದ ಬಟ್ಟೆಯನ್ನು ಧರಿಸಿ ಅದರ ಹಿಂದೆ ನಿಂತ ವ್ಯಾಪಾರಿಯಂತೆ ರೋಗಿಗೆ ಅನಿಸಿತು. ಯಾವಾಗ ಹಣ ಕಟ್ಟದೆ ಹೆಣ ಕೂಡ ಕೊಡುವುದಿಲ್ಲ ಎಂದು ಆಸ್ಪತ್ರೆಗಳ ಆಡಳಿತ ಮಂಡಳಿಯವರು ಬೆತ್ತ ಹಿಡಿದು ನಿಂತರೋ ಮೊದಲ ಬಾರಿಗೆ ರೋಗಿ ಅರಚಿಕೊಂಡ. ಇವರೇನೋ ವೈದ್ಯರೋ ಅಥವಾ ಯಮನ ಕಿಂಕರರೋ ಎಂದು ಬೊಬ್ಬೆ ಹಾಕಲು ಶುರು ಮಾಡಿದ. ಇವರನ್ನು ಹದ್ದು ಬಸ್ತಿನಲ್ಲಿಡಲು ಆಗದೇ ಇದ್ದರೆ ನೀವೆಂತಹ ಆಡಳಿತ ಮಾಡುತ್ತೀರಿ ಎಂದು ತಾನು ಆರಿಸಿ ಕಳುಹಿಸಿದ ನಾಯಕರನ್ನು ಪ್ರಶ್ನೆ ಮಾಡಿದ. ನೀನು ಅಲ್ಯಾಕೆ ಹೋಗ್ತೀಯಾ, ಸರಕಾರಿ ಆಸ್ಪತ್ರೆಗೆ ಹೋಗು ಎಂದು ಹೇಳುವಷ್ಟು ನೈತಿಕತೆಯನ್ನು ರಾಜ್ಯ ಸರಕಾರಗಳು ಇನ್ನೂ ಉಳಿಸಿಕೊಂಡಿಲ್ಲದೇ ಇರುವುದರಿಂದ ಅವರು ಕಂಗಾಲಾಗಿ ಬಿಟ್ಟರು. ಸರಕಾರಿ ಆಸ್ಪತ್ರೆಗೆ ಹೋದರೆ ನನ್ನ ಜೀವನದ ಗ್ಯಾರಂಟಿ ಕಾರ್ಡ್ ನೀವು ಕೊಡುತ್ತೀರಾ ಎಂದು ಇವನು ಕೇಳಿದರೆ ಉತ್ತರ ಇಲ್ಲ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಹಗ್ಗದಿಂದ ಬಿಟ್ಟ ಬೆಲೂನಂತೆ ಆಗಿವೆ. ಸರಕಾರ ಯೋಚನೆ ಮಾಡಿತು. ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಲೆವೆಲ್ಲಿಗೆ ತರಲು ನಮ್ಮ ಕೈಯಲ್ಲಿ ಆಗುವುದಿಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆಗಳನ್ನು ನಮ್ಮ ನಿಯಂತ್ರಣದಲ್ಲಿ ತಂದರೆ ಜನ ಕೂಡ ಖುಷಿಯಾಗುತ್ತಾರೆ. ನಾವು ಕೂಡ ಸರಕಾರಿ ಆಸ್ಪತ್ರೆಗಳನ್ನು ಇಂಪ್ರೂವ್ ಮಾಡುವ ರಿಸ್ಕಿನಿಂದ ತಪ್ಪಿಸಿಕೊಳ್ಳಬಹುದು ಎಂದು ಅನಿಸಿದ ಕೂಡಲೇ ಬಂದ ನೀತಿಯೇ ಕರ್ನಾಟಕ ರಾಜ್ಯ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆಗೆ ತಿದ್ದುಪಡಿ.
ಮೊದಲಿನಿಂದಲೂ ಈ ಕಾಯ್ದೆ ಇತ್ತು. ಆದರೆ ಈಗ ಮಾಡುತ್ತಿರುವ ತಿದ್ದುಪಡಿಯಿಂದ ವೈದ್ಯರು ಆಸ್ಪತ್ರೆಗಳಲ್ಲಿ ಕಡಿಮೆ, ಸರಕಾರಿ ಕಚೇರಿಗಳ ಹೊರಗೆ ಹೆಚ್ಚು ಕಾಯಬೇಕಾಗುತ್ತದೆ. ಅದರೊಂದಿಗೆ ವೈದ್ಯರು ಹೆಚ್ಚು ಸಂಪಾದಿಸಬೇಕು ಎಂದು ಅಂದುಕೊಂಡು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಕ್ಯೂನಲ್ಲಿ ನಿಂತ ಭಕ್ತ ಗರ್ಭಗುಡಿಯ ಎದುರು ಬಂದಾಗ ಬೇಗ ಬೇಗ ಎಂದು ಹೇಳಿ ಹೆಚ್ಚು ನೋಡಲು ಬಿಡದೆ ಓಡಿಸುತ್ತಾರಲ್ಲ, ಹಾಗೆ ಗಡಿಬಿಡಿಯಲ್ಲಿ ನೋಡಿ ಕಳುಹಿಸಿ, ಆ ರೋಗಿಯ ಕಾಯಿಲೆ ಪರಿಹಾರವಾಗಿದಿದ್ದರೆ ಎನು ಮಾಡುವುದು. ಹತ್ತೊಂಬತ್ತು ವರ್ಷದ ಹಿಂದೆ ನನಗೆ ಚಿಕ್ಕ ಜ್ವರ ಬಂದಾಗ ಮಲೇರಿಯಾದ ಔಷಧ ಕೊಟ್ಟು ನಾನು ನರಳಿದ್ದೇನೆಲ್ಲ ಒಂದು ವರ್ಷ ಹಾಗೆ ಆದರೆ. ಆದ್ದರಿಂದ ಸರಕಾರ ಏನೋ ಒಂದು ಮಾಡಲು ಹೋಗುತ್ತಿದೆ. ಅವರದ್ದು ಸರಿ, ಇವರದ್ದು ಸರಿ ಎಂದು ಅಲ್ಲ, ಒಂದು ಮೀಟಿಂಗ್ ಮಾಡಿ ಲಕ್ಷ್ಮಣ ರೇಖೆ ಎಳೆಯಬೇಕು. ವೈದ್ಯರು ದಾಟಲ್ಲ ಎಂದು ಪ್ರಮಾಣ ಮಾಡಬೇಕು. ಒಂದು ವೇಳೆ ದಾಟಿದರೆ!
Leave A Reply