ನೋಟು ನಿಷೇಧದ ಬಳಿಕ ಡಿಜಿಟಲ್ ವಹಿವಾಟಿನಲ್ಲಿ ಶೇ.80ರಷ್ಟು ವೃದ್ಧಿ
ದೆಹಲಿ: ನೋಟು ನಿಷೇಧದ ಬಳಿಕ ಸರ್ಕಾರದ ಡಿಜಿಟಲ್ ವಹಿವಾಟಿನ ಕನಸಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಲಾಗಿತ್ತಾದರೂ, ಈಗ ಆ ಮಾತು ಸುಳ್ಳಾಗಿದ್ದು, ನೋಟು ನಿಷೇಧದ ಬಳಿಕ ಡಿಜಿಟಲ್ ವಹಿವಾಟಿನಲ್ಲಿ ಶೇ.80ರಷ್ಟು ಏರಿಕೆಯಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಅಕ್ಟೋಬರ್ ಅಂತ್ಯದವರೆಗೆ ಡಿಜಿಟಲ್ ವಹಿವಾಟು 1,100 ಕೋಟಿ ರುಪಾಯಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಮಾಸಿಕ ಸರಾಸರಿ 1,800 ಕೋಟಿ ರುಪಾಯಿಗೆ ತಲುಪಲಿದೆ ಎಂದೇ ನಿರೀಕ್ಷಿಸಲಾಗಿದೆ.
ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ 136-138 ಕೋಟಿ ರುಪಾಯಿ ಡಿಜಿಟಲ್ ವಹಿವಾಟು ನಡೆದಿದ್ದು, ಅಕ್ಟೊಬರ್ ತಿಂಗಳ ವಹಿವಾಟಿನ ಹೆಚ್ಚಳ 2016-17ನೇ ಸಾಲಿನಲ್ಲೇ ನಡೆದ ವಹಿವಾಟಿಗೆ ಸಮ ಎಂದು ಹೇಳಲಾಗುತ್ತಿದೆ.
ನೋಟ್ ಬ್ಯಾನ್ ಬಳಿಕ, ಯುಪಿಐ, ಭೀಮ್, ಪೇಟಿಎಂ ಸೇರಿ ಹಲವು ಇ-ವ್ಯಾಲೆಟ್ ಗಳಿಂದ ವಹಿವಾಟು ನಡೆಸುವ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು, ಇದು ಸರ್ಕಾರದ ಡಿಜಿಟಲ್ ಇಂಡಿಯಾಗೂ ಸಹಕಾರಿ ಎಂದು ವಿಶ್ಲೇಷಿಸಲಾಗಿದೆ. ಅಲ್ಲದೆ ನೋಟು ನಿಷೇಧದ ಬಳಿಕ ತೆರಿಗೆಯೇತರ ಕಂದಾಯ ಆನ್ ಲೈನ್ ವ್ಯವಸ್ಥೆಯಲ್ಲಿ ಶೇ.221ರಷ್ಟು ಏರಿಕೆಯಾಗಿದೆ. ಆಧಾರ್ ಆಧಾರಿತ ಹಣ ವರ್ಗಾವಣೆಯಿಂದ ಸರ್ಕಾರಕ್ಕೆ ವಾರ್ಷಿಕ 5 ಸಾವಿರ ಕೋಟಿ ರುಪಾಯಿಗೂ ಅಧಿಕ ಹಣ ಲಾಭವಾಗಿದೆ ಎಂದು ತಿಳಿದುಬಂದಿದೆ.
Leave A Reply