ವೈದ್ಯರು ನಮ್ಮ ಲೈಫ್ “ಸೇವ್” ಮಾಡಬೇಕು, ನಮ್ಮನೇ “ಶೇವ್” ಮಾಡಬಾರದು!
ನಾಡಿದ್ದು ಬೆಳಗಾವಿಯಲ್ಲಿ ರಾಜ್ಯದಿಂದ ಸುಮಾರು 25 ಸಾವಿರ ವೈದ್ಯರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಎಂದು ಸುದ್ದಿ ಇದೆ. ಒಳ್ಳೆಯ ವಿಚಾರ. ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳ ಮೇಲೆ ಇನ್ನಷ್ಟು ನಿಯಂತ್ರಣ ತರಬಾರದು ಎನ್ನುವುದು ಅವರ ಬೇಡಿಕೆ. ಅದೇ ರೀತಿಯಲ್ಲಿ ವೈದ್ಯರಿಂದ, ಖಾಸಗಿ ಆಸ್ಪತ್ರೆಗಳಿಂದ ತೊಂದರೆಯಾದಾಗ ನಾವು ನಾಗರಿಕರು ಎಲ್ಲಿ ಹೋಗಿ ಪ್ರತಿಭಟನೆ ಮಾಡಬೇಕು ಎನ್ನುವ ಪ್ರಶ್ನೆ ಬಂದಾಗ ಅದಕ್ಕೂ ಅಲ್ಲಿಯೇ ಉತ್ತರ ಸಿಗಬೇಕು. ಯಾಕೆಂದರೆ ನ್ಯಾಯ ಎರಡೂ ಕಡೆಯಿಂದ ಆಗಬೇಕು. ಇವತ್ತು ರಾಜ್ಯ ಸರಕಾರ ತಿದ್ದುಪಡಿ ಮಾಡಲು ಉದ್ದೇಶಿಸಿರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆಯಲ್ಲಿ ಏನಿರುತ್ತೆ ಎಂದರೆ ಒಂದು ವೇಳೆ ಯಾವುದಾದರೂ ಒಬ್ಬ ರೋಗಿಗೆ ವೈದ್ಯರಿಂದ ಅಥವಾ ಖಾಸಗಿ ಆಸ್ಪತ್ರೆಗಳಿಂದ ತೊಂದರೆ ಅಥವಾ ನಷ್ಟವಾಗಿದ್ದರೆ ಆತ ಅವನ ತಾಲೂಕಿನಲ್ಲಿ ರಚನೆಯಾಗಲಿರುವ ಕಮಿಟಿಗೆ ಆಯಾ ವೈದ್ಯ ಅಥವಾ ಆಸ್ಪತ್ರೆಗಳ ವಿರುದ್ಧ ದೂರು ಕೊಡಬಹುದು. ಇದರ ಕುರಿತು ವೈದ್ಯರಿಗೆ ಏನು ಆಕ್ಷೇಪ ಎಂದರೆ ಆ ಕಮಿಟಿಯಲ್ಲಿ ವೈದ್ಯರು ಇರುವುದಿಲ್ಲ. ಇನ್ನು ನಾವು ವಿಚಾರಣೆಗೆಂದು ಕಮಿಟಿಯ ಕಚೇರಿಗೆ ಹೋದರೆ ನಾವು ಅಪಾಯಿಂಟ್ ಮೆಂಟ್ ಕೊಟ್ಟವರಿಗೆ ತೊಂದರೆಯಾಗುತ್ತದೆ. ಹಾಗಾದರೆ ಯಾವುದೇ ರೋಗಿಗೆ ತೊಂದರೆ, ಹಾನಿ, ನಷ್ಟವಾದರೆ ಆತ ಕೇವಲ ಗ್ರಾಹಕರ ನ್ಯಾಯಾಲಯಕ್ಕೆ ಹೋಗಬೇಕಾದರೆ ಅದು ಮತ್ತೊಂದು ಧೀರ್ಘಕಾಲಿನ ಹೋರಾಟವಾಗುತ್ತದೆ. ಅದರ ಬದಲು ಕಮಿಟಿಗೆ ದೂರು ಕೊಟ್ಟರೆ ಅವರು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ತಕ್ಷಣ ಮಾಡಲು ಸಾಧ್ಯವಿದೆ. ನಿಮ್ಮ ನಿರ್ಲಕ್ಷ್ಯದಿಂದ ಈ ರೀತಿ ಈ ವ್ಯಕ್ತಿಗೆ ಹಾನಿಯಾಗಿದೆ. ಅವರಿಗೆ ಇಷ್ಟಿಷ್ಟು ಪರಿಹಾರ ಕೊಡಿ ಎಂದು ಹೇಳಿದರೆ ಒಂದು ನಾಲ್ಕು ಸಲ ಪರಿಹಾರ ಕೊಟ್ಟ ನಂತರ ಒಂದೋ ಆ ವೈದ್ಯ ಸರಿಯಾಗುತ್ತಾನೆ ಅಥವಾ ಜನ ಡಿಸೈಡ್ ಮಾಡುತ್ತಾರೆ. ಹೆಚ್ಚು ಬಾರಿ ದಂಡ ಕಟ್ಟಲ್ಪಟ್ಟ ವೈದ್ಯನ ಬಳಿ ನಾವು ಹೋಗಬೇಕಾ ಬೇಡ್ವಾ?
ಹತ್ತೊಂಬತ್ತು ವರ್ಷಗಳ ಹಿಂದೆ ಹೀಗೊಂದು ಕಾಯ್ದೆ ಮತ್ತು ಅದಕ್ಕೆ ಈಗ ಮಾಡಲಾಗುತ್ತಿರುವ ತಿದ್ದುಪಡಿ ಆವತ್ತೆ ಆಗಿದ್ದರೆ ನನಗೂ ಒಂದಿಷ್ಟು ಲಕ್ಷ ಪರಿಹಾರ ಸಿಗುತ್ತಿತ್ತು. ನಾನು ಜ್ವರ ಎಂದು ವೈದ್ಯರ ಹತ್ತಿರ ಹೋಗಿದ್ದೆ. ನನ್ನನ್ನು ನೋಡಿದವರೇ ಅವರು ಇದು ಮಲೇರಿಯಾ ಎಂದು ಬಿಟ್ಟರು. ವೈದ್ಯರೇ ಹೇಳಿದ ಮೇಲೆ ನಾವು ಅವರಿಗೆ ಕ್ರಾಸ್ ಕ್ವಚ್ಚನ್ ಕೇಳಲು ಅದೇನೂ ಕೋರ್ಟಾ? ಮೊದಲೇ ನಿಲ್ಲಲು ಆಗದೇ ನರಳುತ್ತಾ ಇರುತ್ತೇವೆ. ಅವರು ಹೇಳಿದ ಕೂಡಲೇ ಕೈ ಕಾಲು ಬಿಟ್ಟು ಅವರು ತೋರಿಸಿದ ಬೆಡ್ ಮೇಲೆ ಮಲಗಿಬಿಡುತ್ತೇವೆ. ನಾನು ಕೂಡ ಹಾಗೆ ಮಾಡಿದ್ದೆ. ಮಲೇರಿಯಾದ ಎರಡು ಇಂಜೆಕ್ಷನ್ ಮತ್ತು ಅವರು ಕೊಟ್ಟ ನಾಲ್ಕೈದು ಮಾತ್ರೆ ಸೇವಿಸಿ ಮಲಗಿಬಿಟ್ಟೆ. ಅದರ ನಂತರ ಏನಾಗಿರಬಹುದು ಎಂದು ಹೇಳಿ ನೋಡೋಣ.
ಬರೋಬ್ಬರಿ ಒಂದು ವರ್ಷ ನನ್ನ ಪರಿಸ್ಥಿತಿ ಯಾವ ಶತ್ರುವಿಗೂ ಬೇಡಾ. ನಾನು ನಾಲ್ಕು ಹೆಜ್ಜೆ ಹಾಕಬೇಕಾದರೂ ಯಾರಾದರೂ ಹೆಗಲು ಕೊಡಬೇಕಿತ್ತು. ನನ್ನ ಪತ್ನಿ ಹಾಗೂ ನನ್ನ ಅಕ್ಕಂದಿರು ಅನುಭವಿಸಿದ ಯಾತನೆಯನ್ನು ವರ್ಣಿಸುವುದು ಕಷ್ಟ. ಬಳಿಕ ಮುಂಬೈಯಿಂದ ಮಂಗಳೂರಿಗೆ ಬಂದಿದ್ದ ಮೆಡಿಕಲ್ ರೆಪ್ರೆಸೆಂಟಿಟಿವ್ ಗೆಳೆಯರೊಬ್ಬರು ಮಲ್ಲಿಕಟ್ಟೆಯಲ್ಲಿ ಡಾ|ಶಂಕರ್ ಎನ್ನುವ ವೈದ್ಯರು ಇದ್ದಾರೆ, ಅವರಿಗೆ ತೋರಿಸಿ ನೋಡಿ ಎಂದರು. ಅವರಿಗೆ ತೋರಿಸಿದೆ. ಅವರು ನಿಮ್ಮ ಸಾಮಾನ್ಯ ಜ್ವರಕ್ಕೆ ಮಲೇರಿಯಾ ಇಂಜೆಕ್ಷನ್ ಮತ್ತು ಮಾತ್ರೆ ಕೊಟ್ಟಿದ್ದಕ್ಕೆ ಆದ ರಿಯಾಕ್ಷನ್ ಎಂದರು. ನೀವು ಮೂರು ತಿಂಗಳೊಳಗೆ ಸರಿಯಾಗುತ್ತಿರಿ ಎಂದರು. ಸರಿಯಾಗಲು ಒಂದು ವರ್ಷ ಹಿಡಿಯಿತು, ಅದು ಬೇರೆ ವಿಷಯ. ಆದರೆ ಸರಿ ಆದೆ.
ಆದರೆ ಆವತ್ತಿನ ನೋವಿನ ಸೈಡ್ ಇಫೆಕ್ಟ್ ಇವತ್ತಿಗೂ ಆಗಾಗ ಕಾಣಿಸಿಕೊಳ್ಳುತ್ತದೆ. ಆಗ ಆವತ್ತಿನ ದಿನಗಳು ನೆನಪಾಗುತ್ತವೆ. ಇದನ್ನು ಹಿಂದೆ ಒಮ್ಮೆ ಬರೆದಿದ್ದೆ. ಆದರೆ ಈಗ ಖಾಸಗಿ ವೈದ್ಯರು ಪ್ರತಿಭಟನೆಗೆ ಹೊರಡುತ್ತಿದ್ದಾರೆ ಎಂದು ಕೇಳಿದಾಗ ಮತ್ತೆ ಹೇಳಬೇಕೆನಿತು. ನಾನು ವೈದ್ಯರ ಹೋರಾಟಕ್ಕೆ ವಿರೋಧಿಯಲ್ಲ. ನನಗೆ ಒಂದು ವರ್ಷ ನರಕ ಎಂದರೆ ಏನು ಎಂದು ತೋರಿಸಿದವರು ಒಬ್ಬ ವೈದ್ಯ. ಅದೇ ಇವತ್ತು ನಾನು ಸರಿಯಾಗಿದ್ದೇನೆ ಎಂದರೆ ಅದು ಕೂಡ ಮತ್ತೊಬ್ಬ ವೈದ್ಯರಿಂದಲೇ. ಇತ್ತೀಚೆಗೆ ಗಂಟಲು ಶಸ್ತ್ರಚಿಕಿತ್ಸೆಗೆ ಒಳಪಟ್ಟಾಗ ನನಗೆ ಚಿಕಿತ್ಸೆ ಕೊಟ್ಟವರು ವೈದ್ಯರೇ. ಅದೇ ರೀತಿಯಲ್ಲಿ ಇನ್ಯೂರೆನ್ಸ್ ಕಂಪೆನಿಯವರು ತಕ್ಷಣ ಹಣ ಪಾವತಿಸಲು ನಿರಾಕರಿಸಿದಾಗ ಆ ಆಸ್ಪತ್ರೆಯ ಬಿಲ್ ನೋಡಿ ಶಾಕ್ ಆದದ್ದು ಕೂಡ ನನಗೆನೆ.
ಹೀಗೆ ವೈದ್ಯರಲ್ಲಿ ಒಂದಿಷ್ಟು ಮಂದಿ “ಹರಿ”ಗಳಿದ್ದಾರೆ. ಉಳಿದವರು “ಹರಿ”ಯುವ ಕೆಲಸಕ್ಕೆ ಶಿಫ್ಟ್ ಆಗಿದ್ದಾರೆ. ಒಂದು ಪ್ರೊಫೆಶನ್ ನಲ್ಲಿ ನೂರಕ್ಕೆ ನೂರರಷ್ಟು ಜನ ಸರಿಯಿರಲು ಸಾಧ್ಯವೇ ಇಲ್ಲ. ವಕೀಲರಿಂದ ಹಿಡಿದು ಪತ್ರಕತೃರ ತನಕ ಪ್ರಾಮಾಣಿಕರು, ಹಣದಾಹಿಗಳು ಇಬ್ಬರೂ ಇದ್ದಾರೆ. ಆದರೆ ವೈದ್ಯರಲ್ಲಿ ಸೇವೆಗಿಂತ ಶೇವ್ ಜಾಸ್ತಿಯಾದರೆ ನಾವು ಮಂಚದ ಮೇಲೆ ಮಲಗಿದವರು ಚಟ್ಟಕ್ಕೆ ಟ್ರಾನ್ ಫರ್ ಆಗಬೇಕಾಗುತ್ತದೆ. ನಿನ್ನೆ ಬೆಳಿಗ್ಗೆ ಸಿಕ್ಕಿದವರೊಬ್ಬರು ಹೇಳುತ್ತಿದ್ದರು ” ಆಸ್ಪತ್ರೆಯವರು ಮದ್ದು ಕೆಳಗೆ ಮೆಡಿಕಲ್ ಶಾಪ್ ನಿಂದ ಮೇಲೆ ತಂದದ್ದಕ್ಕೆ ಪ್ಲಾಸ್ಟಿಕ್ ತೊಟ್ಟೆಯ ಬೆಲೆ ಒಂದಕ್ಕೆ 16 ರೂಪಾಯಿ ಹಾಕಿದ್ದಾರೆ. ನಿಜವಾಗಿ ಆ ತೊಟ್ಟೆಗೆ ಎರಡು ರೂಪಾಯಿ, ಹದಿನಾರು ದಿನ ನಿತ್ಯ ಮೆಡಿಸಿನ್ ತಂದ ಕಾರಣ ತೊಟ್ಟೆಯ ರೇಟೆ ಇಷ್ಟಾಗಿದೆ” ಎನ್ನುತ್ತಿದ್ದರು. ಒಟ್ಟಿನಲ್ಲಿ ರೋಗಿಗೂ, ವೈದ್ಯರಿಗೂ ಒಳ್ಳೆಯಾಗಲಿ!
Leave A Reply