ನಿಮ್ಮ ಹೃದಯಕ್ಕೆ ಅಳವಡಿಸಿದ ಸ್ಟೆಂಥ್ ಗೆ ನೀವು ಕೊಟ್ಟ ಬೆಲೆ ಎಷ್ಟು?
ಸ್ಟೆಂಥ್ ಶಬ್ದ ಕೇಳದ ಹೃದಯ ರೋಗಿಗಳು ಮತ್ತು ಮಾರದ ಆಸ್ಪತ್ರೆಗಳು ನಮ್ಮ ದೇಶದಲ್ಲಿ ವಿರಳ. ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಪ್ರತಿ ಆಸ್ಪತ್ರೆಯಲ್ಲಿ ಸ್ಟೆಂಥ್ ಅವಶ್ಯಕ. ಪ್ರತಿ ವರ್ಷ ನಮ್ಮ ದೇಶದಲ್ಲಿ ಅಂದಾಜಿಗೆ ಐದು ಲಕ್ಷ ಹೃದಯ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ ಎಂದು ಇಟ್ಟುಕೊಳ್ಳೋಣ. ಅದರಲ್ಲಿ ಮೂರು ಲಕ್ಷ ಸ್ಟೆಂಥ್ ಗಳು ಹೊರದೇಶದಿಂದ ಆಮದಾಗುತ್ತವೆ. ಪ್ರಶ್ನೆ ಇರುವುದು ಸ್ಟೆಂಥ್ ಗೆ ನಿಜವಾದ ಬೆಲೆ ಎಷ್ಟು ಮತ್ತು ಅದು ಮಾರಲ್ಪಡುತ್ತಿದ್ದ ಬೆಲೆ ಎಷ್ಟು ಎನ್ನುವುದು ಚರ್ಚೆಗೆ ಬಂದಿರುವುದು ಈ ವರ್ಷದಿಂದ. ಅಲ್ಲಿಯ ತನಕ ಸ್ಟೆಂಥ್ ಗೆ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳು ಎಷ್ಟು ಬಿಲ್ ಮಾಡಿದ್ದವೋ ಅಷ್ಟು ಹಣ ಪಾವತಿಸಬೇಕಾದ ಅನಿವಾರ್ಯತೆ ರೋಗಿಗಳಿಗೆ ಇತ್ತು.
ಒಂದು ಸ್ಟೆಂಥ್ ವಿದೇಶದಲ್ಲಿ ಭಾರತೀಯ ಕರೆನ್ಸಿ 15 ಸಾವಿರ ರೂಪಾಯಿಗಳಿಗೆ ಸಿಗುತ್ತದೆ ಎಂದು ಇಟ್ಟುಕೊಳ್ಳೋಣ. ಅದನ್ನು ಅಲ್ಲಿಂದ ಇಲ್ಲಿನ ಮಧ್ಯವರ್ತಿ ಕಂಪೆನಿಗಳಿಗೆ ಮಾರುವಾಗ ಆ ರಫ್ತುದಾರರು ಅದಕ್ಕೆ ನಲ್ವತ್ತು ಸಾವಿರ ಚಾರ್ಜ್ ಮಾಡುತ್ತಾರೆ. ಅಲ್ಲಿಂದ ಮಧ್ಯವರ್ತಿಗಳು ಅದನ್ನು ಆಸ್ಪತ್ರೆಗಳಿಗೆ ಮಾರುವಾಗ ಅದರ ಬೆಲೆ ಎಪ್ಪತ್ತೈದು ಸಾವಿರ ಆಗುತ್ತದೆ. ಬಳಿಕ ಅದೇ ಸ್ಟೆಂಥ್ ಅನ್ನು ಆಸ್ಪತ್ರೆಗಳು ರೋಗಿಗೆ ಅಳವಡಿಸಿ ಬಿಲ್ ಹಾಕುವಾಗ ಅದರ ಮೌಲ್ಯ ಒಂದೂವರೆ ಲಕ್ಷ ಆಗುತ್ತದೆ.
ಮೇ 2015 ರಲ್ಲಿ ಬೀರೇಂದರ್ ಸಂಗ್ವಾನ್ ಎನ್ನುವ ವ್ಯಕ್ತಿ ಈ ಸ್ಟೆಂಥ್ ಗಳಿಗೆ ಇಷ್ಟು ಬೆಲೆ ಇರುವುದನ್ನು ನೋಡಿ ಆಶ್ಚರ್ಯಗೊಂಡರು. ಅದರ ಪ್ಯಾಕೇಜ್ ಮೇಲೆ ಗರಿಷ್ಟ ಮಾರಾಟ ಬೆಲೆ ಎಷ್ಟಿದೆ ಎಂದು ಪರೀಕ್ಷಿಸುವಾಗ ಯಾವುದೇ ರೀತಿಯ ಬೆಲೆ ನಮೂದಿಸದೇ ಇದ್ದದ್ದು ನೋಡಿ ಆ ವ್ಯಕ್ತಿಗೆ ಮತ್ತಷ್ಟು ಕುತೂಹಲ ಹೆಚ್ಚಾಯಿತು. ಈ ವಿಷಯದ ಮೇಲೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಿದ ಬೀರೇಂದರ್ ಸಗ್ವಾನ್ ಈ ಕುರಿತು ನ್ಯಾಯಾಲಯ ಮಧ್ಯ ಪ್ರವೇಶಿಸಬೇಕೆಂದು ವಿನಂತಿಸಿಕೊಂಡರು. ಆ ವ್ಯಕ್ತಿಯ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ” ಆಸ್ಪತ್ರೆಗಳು ತಮ್ಮ ಖುಷಿ ಬಂದ ಹಾಗೆ ಬೆಲೆ ಹಾಕುವುದನ್ನು ತಡೆಯಲು ಕೇಂದ್ರ ಸರಕಾರ ಏನಾದರೂ ಕ್ರಮ ಕೈಗೊಳ್ಳಬೇಕೆಂದು ‘ ಆದೇಶಿಸಿತು.
ಕೇಂದ್ರ ಸರಕಾರದ ಸೂಚನೆಯಂತೆ ರಂಗಕ್ಕೆ ಇಳಿದ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಸಂಸ್ಥೆ (ಎನ್ ಪಿ ಸಿಪಿಎ) ಬೇರ್ ಮೆಟಲ್ ನಿರ್ಮಿತ ಸ್ಟೆಂಥ್ ಅನ್ನು 7,260 ರೂಪಾಯಿಗಳಿಗೆ ಮತ್ತು ಡ್ರಗ್ ಇಲೈಟಿಂಗ್ ಸ್ಟೆಂಥ್ ಅನ್ನು 29,600 ರೂಪಾಯಿಗಳಿಗೆ ಮೀರದಂತೆ ಮಾರಬೇಕು ಎಂದು ಸೂಚನೆ ನೀಡಿದೆ. ಇನ್ನು ಈ ವಿಷಯದಲ್ಲಿ ಆಸ್ಪತ್ರೆಗಳು ಬೇಜವಾಬ್ದಾರಿಯಂತೆ ವರ್ತಿಸಿ ಸ್ಟೆಂಥ್ ಗಳನ್ನು ಅಗತ್ಯ ಇದ್ದಷ್ಟು ಸಂಗ್ರಹ ಇಟ್ಟುಕೊಳ್ಳದೇ ರೋಗಿಗಳಿಗೆ ಕಿರಿಕಿರಿ ಉಂಟು ಮಾಡಿದರೆ 1800111255 ಟೋಲ್ ಫ್ರೀ ಸಂಖ್ಯೆಗಳಿಗೆ ಕರೆ ಮಾಡಿ ದೂರು ಕೊಡಲು ವಿನಂತಿಸಿದೆ.
ಈ ಮೂಲಕ ಒಂದೂವರೆ ಲಕ್ಷಕ್ಕೆ ಸಿಗುತ್ತಿದ್ದ ಸ್ಟೆಂಥ್ ಗಳ ಬೆಲೆ ಪಾತಾಳಕ್ಕೆ ಇಳಿದಿದೆ. ಇದರ ನಂತರ ಎಲ್ಲ ಔಷಧಗಳ ಬೆಲೆ ಕೂಡ ಹೀಗೆ ಇಳಿಸಲು ಸಾಧ್ಯವಿದೆ ಎಂದು ಜನರಿಗೆ ಅನಿಸುತ್ತಿದೆ. ಕೇಂದ್ರ ಸರಕಾರ ಕೂಡ ಮಂಡಿ ಶಸ್ತ್ರಚಿಕಿತ್ಸೆ ಗೆ ಬೇಕಾದ ಉಪಕರಣದ ಬೆಲೆಯನ್ನು ಇಳಿಸಲು ಕ್ರಮ ಕೈಗೊಂಡಿದೆ. ಅದರಿಂದ ಜನರಿಗೆ ಆಗಿರುವ ಉಪಕಾರ ಚಿಕ್ಕದಲ್ಲ.
ಈಗ ರಾಜ್ಯ ಸರಕಾರ ಅದನ್ನೇ ಅನುಸರಿಸಿ ಖಾಸಗಿ ಆಸ್ಪತ್ರೆಗಳು ವಿಧಿಸುವ ದರಗಳನ್ನು ನಿಯಂತ್ರಣಕ್ಕೆ ತರಲು ಮುಂದಾಗಿದೆ. ಯಶಸ್ವಿಯಾಗುತ್ತಾ ಕಾದು ನೋಡಬೇಕು
Leave A Reply