“ಪೊಲೀಸ್ ದಾದಾ ಮಾಲ್ತೊಂದುಲ್ಲೆರ್ ಮಾರ್ರೆ” ಎನ್ನುವ ವಾಕ್ಯ ನಿಮ್ಮ ಬಾಯಿಂದ ಬಂದಿದೆಯಾ!
ಈ ರಸ್ತೆ ಇಷ್ಟು ಬ್ಲಾಕ್ ಆಗುತ್ತಿರಲಿಲ್ಲ. ಟ್ರಾಫಿಕ್ ಪೊಲೀಸ್ ಕಾನ್ಸ್ ಸ್ಟೇಬಲ್ ಇದ್ದ ಕಾರಣವೇ ಇಲ್ಲಿ ಇಷ್ಟು ಬ್ಲಾಕ್ ಆಗುತ್ತಿದೆ ಎಂದು ವಾಹನ ಸವಾರರು ಹೇಳಿದ ಮಾತನ್ನು ನೀವು ಕೇಳಿರುತ್ತೀರಿ. ಆರ್ ಪೊಲೀಸ್ ದಾದಾ ಮಾಲ್ಪುನಿ ಮಾರ್ರೆ, ಪೊಕ್ಕಡೆ ಉಂತುನಿ, ಛೇ, ಏತ್ ಲೇಟ್ ಆತುಂಡು ಎಂದು ಬಸ್ಸಿನ ಡ್ರೈವರ್ ಗಳು ಹೇಳಿದ್ದನ್ನು ಕೂಡ ನೀವು ಗಮನಿಸಿರಬಹುದು. ಇದು ನಿಜಾನಾ, ಪೊಲೀಸ್ ಕಾನ್ ಸ್ಟೇಬಲ್ ಇದ್ದ ಕಾರಣ ರೋಡ್ ಜಾಮ್ ಆಯಿತಾ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಟ್ರಾಫಿಕ್ ಪೊಲೀಸರು ಇರುವುದೇ ಟ್ರಾಫಿಕ್ ಜಾಮ್ ಸರಿ ಮಾಡಲು. ಹಾಗಿರುವಾಗ ಅವರಿದ್ದ ಕೂಡಲೇ ಹೇಗೆ ಬ್ಲಾಕ್ ಹೆಚ್ಚಾಗುತ್ತದೆ ಎಂದು ನಿಮಗೆ ಅನಿಸಬಹುದು. ಇದನ್ನು ಪೊಲೀಸ್ ಫೋಬಿಯಾ ಎಂದು ಕರೆದರೂ ತಪ್ಪಿಲ್ಲ. ಪೊಲೀಸರು ದೂರದಲ್ಲಿ ನಿಂತರೆ ವಾಹನ ಚಲಾಯಿಸುವ ವ್ಯಕ್ತಿಗೆ ತನ್ನಿಂದ ತಾನೆ ಏನೋ ಆತಂಕ ತಟ್ಟನೆ ಅವನ ಮನಸ್ಸಿನ ಪಟಲದಿಂದ ಹಾದು ಹೋಗುತ್ತದೆ. ನಮ್ಮ ದೇಶದಲ್ಲಿ ಪೊಲೀಸರು ನಮ್ಮ ರಕ್ಷಣೆಗೆ ಇರುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ಹೆದರಿಸಲು ಇರುವವರು ಎನ್ನುವ ಭಾವನೆ ಯಾರ ಮನಸ್ಸಿನಲ್ಲಿ ಇದೆಯೊ ಅವರಿಂದ ರಸ್ತೆ ಬ್ಲಾಕ್ ಗೆ ದೊಡ್ಡ ಕೊಡುಗೆ ಇದೆ. ಅದನ್ನು ಬಿಟ್ಟು ಪೊಲೀಸರು ಇರಲಿ ಅಥವಾ ಬಿಡಲಿ ನಾವು ಸರಿಯಿದ್ದರೆ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾ ಇದ್ದರೆ ಯಾರಿಗೂ ಹೆದರದೇ ವಾಹನಗಳನ್ನು ಚಲಾಯಿಸಬಹುದು. ಆಗ ಯಾವ ಟ್ರಾಫಿಕ್ ಜಾಮ್ ಆಗುವುದಿಲ್ಲ.
ಆದರೆ ನಾಲ್ಕು ವಿದ್ಯಾರ್ಥಿಗಳೋ, ವಯಸ್ಸಾದವರೋ ರಸ್ತೆ ದಾಟಲು ನಿಂತ ಕೂಡಲೇ ಟ್ರಾಫಿಕ್ ಪೊಲೀಸ್ ದೂರದಿಂದ ಬರುತ್ತಿದ್ದ ವಾಹನಕ್ಕೆ ಕೈ ಅಡ್ಡ ಹಾಕುತ್ತಾರೆ. ಬಂದ ವಾಹನ ಸೀದಾ ರಸ್ತೆಯ ಮಧ್ಯೆದಲ್ಲಿಯೇ ನಿಲ್ಲುತ್ತದೆ. ಇವರು ನಿಲ್ಲಿಸಿದ ಕೂಡಲೇ ಎದುರಿನಿಂದ ಬರುತ್ತಿದ್ದ ವಾಹನ ಕೂಡಲೇ ನಿಲ್ಲುತ್ತದೆ. ಪಕ್ಕದ ಬೀದಿಯಿಂದ ಮುಖ್ಯ ರಸ್ತೆಗೆ ಬಂದ ಲಾರಿ ಕೂಡ ಅರ್ಧ ಬಾಡಿ ಹೊರಗೆ ಹಾಕಿ ನಿಲ್ಲುತ್ತದೆ. ಯಾವಾಗ ದಾಟಬೇಕಾದವರು ದಾಟಿ ಆಯಿತೋ ಮೂರು ಕಡೆಯವರಿಗೂ ಅರ್ಜೆಂಟು. ಮೊದಲು ನಾವು ಹೋಗಬೇಕು ಅಂತ. ಅದರೊಂದಿಗೆ ಪೊಲೀಸ ಕಾನ್ಸ್ ಸ್ಟೇಬಲಿನ ಬಲ ಭಾಗದಲ್ಲಿರುವ ವಾಹನಕ್ಕೆ ಎಡ ರಸ್ತೆಯಲ್ಲಿ ಹೋಗಬೇಕಾಗಿರುತ್ತದೆ. ಆದರೆ ಅದು ಒನ್ ವೇ. ಪೊಲೀಸ್ ಎದುರಿಗಿರುವ ಕಾರಣ ಅವನಿಗೆ ಹೋಗಲು ಅಂಜಿಕೆ. ಎಲ್ಲಿಯಾದರೂ ಫೈನ್ ಹಾಕಿದ್ರೆ ಎನ್ನುವ ಭಯ. ಅದಕ್ಕಾಗಿ ಕಾರಿನವ ಯೋಚಿಸಲು ಹತ್ತೈದು ಸೆಕೆಂಡ್ ತೆಗೆದುಕೊಳ್ಳುತ್ತಾನೆ. ಇವನು ಯೋಚಿಸಲು ಶುರು ಮಾಡುತ್ತಿದ್ದಂತೆ ಪೊಲೀಸಿನವನ ಎಡಭಾಗದಲ್ಲಿದ್ದ ವಾಹನ ಚಾಲಕ ಪೊಲೀಸಿನವರು ಇದ್ದರೂ ಕ್ಯಾರ್ ಮಾಡದೇ ಒನ್ ವೇಗೆ ನುಗ್ಗಿಸಿ ಆಗಿರುತ್ತದೆ. ಅಷ್ಟರಲ್ಲಿ ಆ ರಸ್ತೆ ಒನ್ ವೇ ಎಂದು ಗೊತ್ತಿದ್ದ ವಾಹನದವರು ಎದುರಿನಿಂದ ಯಾವ ವಾಹನ ಕೂಡ ಬರುವುದಿಲ್ಲ ಎಂದು ಅಡ್ಡಾದಿಡ್ಡಿ ನಿಲ್ಲಿಸಿರುತ್ತಾರೆ. ಸಡನ್ನಾಗಿ ಎದುರಿಗೆ ಬರುತ್ತಿದ್ದ ಕಾರನ್ನು ನೋಡಿ ಒನ್ ವೇ ರಸ್ತೆಯ ವಾಹನಗಳೆಲ್ಲ ಕಕ್ಕಾಬಿಕ್ಕಿ. ಅವು ಸೈಡ್ ಕೊಡಲು ತಮ್ಮ ವಾಹನವನ್ನು ಆಚೀಚೆ ಸರಿಸುವಾಗ ಮೊದಲು ಅದೇ ರಸ್ತೆಯಲ್ಲಿ ಹೋಗಬೇಕು ಆದರೆ ಪೊಲೀಸು ಇದ್ದಾರೆ ಎನ್ನುವ ಕಾರಣಕ್ಕೆ ಹಿಂಜರಿದಿದ್ದ ವಾಹನದ ಚಾಲಕನಿಗೆ ಧೈರ್ಯ ಬರುತ್ತದೆ. ಆತ ಕೂಡ ಹದಿನೈದು ಸೆಕೆಂಡ್ ಯೋಚಿಸಿದ್ದು ವೇಸ್ಟ್ ಆಯಿತು ಎಂದು ಅಂದುಕೊಂಡು ತನ್ನ ವಾಹನವನ್ನು ಒನ್ ವೇ ಗೆ ತಿರುಗಿಸುತ್ತಾನೆ. ಒಟ್ಟಿನಲ್ಲಿ ಆ ರಸ್ತೆ ಫುಲ್ ಬ್ಲಾಕ್. ಅಲ್ಲಿ ಬ್ಲಾಕ್ ಆದ್ದದ್ದು ಸರಿಯಾಗುವಾಗಲೇ ಇನ್ನಷ್ಟು ಹಿರಿಯರು ರಸ್ತೆ ದಾಟಲು ಬರುತ್ತಾರೆ. ಅವರಿಗೆ ರಸ್ತೆ ದಾಟಿಸಲು ವಾಹನ ನಿಲ್ಲಿಸುವುದಾ ಅಥವಾ ಒನ್ ವೇ ರಸ್ತೆಯಲ್ಲಿ ಆದ ಬ್ಲಾಕ್ ತೆಗೆಸಲು ಹೋಗುವುದಾ ಎಂದು ಹೊಸ ಉತ್ತರ ಕರ್ನಾಟಕದ ಪೊಲೀಸ್ ಕಾನ್ಸಸ್ಟೇಬಲ್ ಗಲಿಬಿಲಿಗೆ ಒಳಗಾಗುತ್ತಾನೆ.
ಇವನು ಗಲಿಬಿಲಿಯಾಗುತ್ತಿದ್ದಂತೆ ಹಿರಿಯರು ಯಾರಿಗೆ ಕಾಯುವುದು ಬೇಡಾ ಎಂದು ರಸ್ತೆ ದಾಟಲು ಇಳಿಯುತ್ತಾರೆ. ಆಗ ಸಡನ್ನಾಗಿ ಬಂದ ಬೈಕಿನವ ಅತ್ತ ಪೊಲೀಸಿನವನಿಗೆ ಹೆದರಿ ಇತ್ತ ರಸ್ತೆ ದಾಟುತ್ತಿದ್ದ ಹಿರಿಯರಿಗೆ ಹೋಗಲು ಅವಕಾಶ ಮಾಡಲು ಸಡನ್ ಬ್ರೇಕ್ ಹಾಕುತ್ತಾನೆ. ಬೈಕಿನವನ ಹಿಂದೆ ಕುಳಿತ ಯುವತಿ ಹೆಲ್ಮೆಟ್ ಹಾಕಿರದ್ದು ನೋಡಿ ಈ ಹೊಸ ಯೂನಿಫಾರ್ಮಂ ಹಾಕಿದ ಪೊಲೀಸಿಗೆ ಸಿಕ್ಕಾಪಟ್ಟೆ ಉತ್ಸಾಹ ಬಂದಂತೆ ಆಗಿ ಅವರಿಗೆ ಫೈನ್ ಹಾಕಲೇಬೇಕು ಎಂದು ನಿರ್ಧರಿಸಿ ಬಿಗಿಲ್ ಊದುತ್ತಾರೆ. ಯಾಕೆಂದರೆ ತಿಂಗಳಿಗೆ ಇಷ್ಟು ದಂಡ ವಸೂಲಿ ಆಗಲೇಬೇಕು ಎಂದು ಪ್ರತಿ ಠಾಣೆಯ ಎಸ್ ಐ ಗೆ ಸೂಚನೆ ಹೋಗಿರುತ್ತೆ. ಬ್ಲಾಕ್ ಆಗುವ ಹಿಸ್ಟರಿ ರಿಪೀಟ್ ಆಗುತ್ತದೆ.
ಹೀಗೆ ಪೊಲೀಸ್ ಇದ್ದ ಕಾರಣ ಅಲ್ಲಿ ಆದ ಜಾಮ್ ಕಂಡು ಜನರ ಬಾಯಿಂದ ಉದ್ಘಾರ ಬಂದಿರುತ್ತೆ. “ಪೊಲೀಸ್ ದಾದಾ ಮಾಲ್ತೊಂದುಲ್ಲೆರ್ ಮಾರ್ರೆ” ಹಿಂದೆ ಪೊಲೀಸರು ಕಡಿಮೆ ಇದ್ದರು. ಈಗ ಹೊಸ ಪೋಸ್ಟಿಂಗ್ ಗಳು ತುಂಬಾ ಆಗ್ತಾ ಇದೆ. ಸಮಸ್ಯೆ ಹಾಗೆ ಇದೆ!
Leave A Reply