ಗೋರ್ಖಾ ಸೈನಿಕರ ಸೇವೆಗೆ ವರ್ಷ ಇನ್ನೂರು, ನಮ್ಮ ಸಲಾಂ ಇರಲಿ ಅವರಿಗೆ ನೂರಾರು…
“ಯಾವುದೇ ಒಬ್ಬ ವ್ಯಕ್ತಿ ನಾನು ಸಾವಿಗೆ ಅಂಜುವುದಿಲ್ಲ ಎಂದ ಅಂದಾದರೆ, ಆತ ಗೋರ್ಖಾನೇ ಇರಬೇಕು, ಗೋರ್ಖಾನೇ ಆಗಿರುತ್ತಾನೆ”
ದೇಶದ ಮೊದಲ ಫೀಲ್ಡ್ ಮಾರ್ಷಲ್ ಬಹದ್ದೂರ್ ಮಾಣೆಕ್ ಷಾ ಗೋರ್ಖಾಗಳ ಶೌರ್ಯದ ಬಗ್ಗೆ, ರಕ್ಷಣೆ ಬಗ್ಗೆ, ಕೆಚ್ಚೆದೆಯ ಬಗ್ಗೆ, ಸಾವಿಗೂ ಅಂಜದ ಅವರ ದಾರ್ಷ್ಯದ ಬಗ್ಗೆ ಒಂದೇ ಸಾಲಿನಲ್ಲಿ ಹೇಳಿದ್ದರು. ವಾಸ್ತವದಲ್ಲಿ ಮಾಣೆಕ್ ಷಾ ಮೊದಲು ಗೋರ್ಖಾ ರೈಫಲ್ಸ್ ಅಧಿಕಾರಿ ಆಗಿದ್ದರು. ಗೋರ್ಖಾಗಳ ಶೌರ್ಯ ಅವರಿಗೆ ಗೊತ್ತು.
ಅಲ್ಲಿ ಚಳಿ ಇರಲಿ, ಮಳೆ ಬೀಳಲಿ, ಬಿಸಿಲು ಕೊರೆಯಲಿ. ಅದು ಕಾಶ್ಮೀರ ಗಡಿಯೇ ಆಗಿರಲಿ, ಪಾಕಿಸ್ತಾನಿಯರೇ ನುಗ್ಗಿ ಬರಲಿ, ಚೀನಾದವರೇ ಗುಟುರು ಹಾಕಲಿ. ಭಾರತೀಯ ಸೈನ್ಯದ ಜತೆಗೆ ಗೋರ್ಖಾ ಸೈನಿಕರು ಇದ್ದಾರೆ ಎಂದರೆ ಮುಗೀತು. ಇಲ್ಲಿ, ನಾವು-ನೀವು ಬೆಚ್ಚಗೆ ಮಲಗಬಹುದು ಎಂಬ ನಿಶ್ಚಿಂತೆ ಮನೋಭಾವ ಮೂಡುವಂತೆ ಮಾಡುತ್ತಾರೆ ಅವರು. “ಜೈ ಮಹಾ ಕಾಳಿ, ಆಯೋ ಗೋರ್ಖಾಲಿ” ಎಂದು ತಮ್ಮ ಘೋಷ ಕೂಗಿದರೆಂದರೆ ಮುಗೀತು. ಶತ್ರುವಿನ ಎದೆಯಲ್ಲಿ ನಡುಕ ಹುಟ್ಟಿಸದೆ ಬಿಡುವುದಿಲ್ಲ.
ಹಾಗಂತ ಇದು ಅತಿಶಯೋಕ್ತಿ ಅಲ್ಲ…
5ನೇ ಬೆಟಾಲಿಯನ್ನಿನ ಕ್ಯಾಪ್ಟನ್ ಎಂ.ಬಿ.ರಾಯ್
ಸಾಲ್ ಬಹದ್ದೂರ್
ಎರಡನೆ ಲೆಫ್ಟಿನೆಂಟ್ ಪುನೀತ್ ನಾಥ್ ದತ್
ಇವರೆಲ್ಲರೂ ಸೈನ್ಯದ ಅಶೋಕ ಚಕ್ರ ಪ್ರಶಸ್ತಿ ಪಡೆದರೆ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಒಂದು ಹೆಜ್ಜೆ ಮುಂದೆ ಹೋಗಿ ಪರಮ ವೀರ ಚಕ್ರ ಪ್ರಶಸ್ತಿಗೆ ಪಡೆದ. ಇದುವರೆಗೆ ಗೋರ್ಖಾ ಸೈನಿಕರಿಗೆ 3 ಪರಮ ವೀರ ಚಕ್ರ, 33 ಮಹಾವೀರ ಚಕ್ರ, 84 ವೀರ ಚಕ್ರ ಪ್ರಶಸ್ತಿ ನೀಡಲಾಗಿದೆ ಎಂದರೆ ಅವರ ಶೌರ್ಯ ಹೇಗೆ ಎಂಬುದು ಗೊತ್ತಾಗುತ್ತದೆ.
ಇವರೆಲ್ಲರೂ ಗೋರ್ಖಾಗಳೇ, ಗೋರ್ಖಾ ರೆಜಿಮೆಂಟಿನಲ್ಲಿ ಇದ್ದವರೇ ಎಂಬುದನ್ನು ಅರಿತರೆ, ಪ್ರಸ್ತುತ ಕಾಶ್ಮೀರದ ಗಡಿಯಲ್ಲಿ ಉಗ್ರರ ವಿರುದ್ಧದ ಸಂಹಾರದಲ್ಲಿ ಇವರು ತೊಡಗಿರುವ ಶೈಲಿ, ತಂತ್ರ, ದಾಳಿ ನೋಡಿದರೆ ಅವರ ಶೌರ್ಯದ ಬಗ್ಗೆ ಅರ್ಥವಾಗುತ್ತದೆ.
ಅಷ್ಟಕ್ಕೂ ಈ ಗೋರ್ಖಾಗಳನ್ನೇಕೆ ಈಗ ನೆನಪಿಸಿಕೊಳ್ಳಬೇಕು?
ಅದಕ್ಕೂ ಕಾರಣಗಳಿವೆ. ಗೋರ್ಖಾ ರೈಫಲ್ಸ್ ಎಂಬ ಪಡೆ ತಯಾರಾಗಿ, ಗೋರ್ಖಾಗಳು ದೇಶ ಕಾಯುವಿಕೆಯಲ್ಲಿ ತೊಡಗಿ ಪ್ರಸಕ್ತ ವರ್ಷಕ್ಕೆ ಬರೋಬ್ಬರಿ ಇನ್ನೂರು ವರ್ಷಗಳಾದವು. ಪ್ರಸ್ತುತ 9ನೇ ರೆಜಿಮೆಂಟ್ ದೇಶದ ಭದ್ರತೆಯಲ್ಲಿ ತೊಡಗಿದೆ. ಹಾಗಾಗಿಯೇ ಸೇನಾ ದಳದ ಮುಖ್ಯಸ್ಥ ಬಿಪಿನ್ ರಾವತ್ ನೇತೃತ್ವದಲ್ಲಿ ವಾರಣಾಸಿಯ ಗೋರ್ಖಾ ತರಬೇತಿ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೂಲತಃ ನೇಪಾಳಿಗರಾದ ಇವರಿಗೆ 1817ರಲ್ಲಿ ಬ್ರಿಟಿಷರು ದೇಶ ಕಾಯಲು ನೇಮಿಸಿ, ನಸೆರಿ ಬೆಟಾಲಿಯನ್ಸ್ ಎಂದು ಹೆಸರಿಟ್ಟು, ಮೊದಲನೇ ಬೆಟಾಲಿಯನ್ ನೇಮಿಸಿದ್ದರು. ಅಲ್ಲಿಂದ 1947ರ ಬಳಿಕ ಇದು ಗೋರ್ಖಾ ರೆಜಿಮೆಂಟ್ ಆಯಿತು. ಪ್ರಸ್ತುತ 11ನೇ ಗೋರ್ಖಾ ರೆಜಿಮೆಂಟ್ ದೇಶ ಸೇವೆಯಲ್ಲಿ ತೊಡಗಿದೆ.
ಈ ಗೋರ್ಖಾ ಪಡೆ ಸೈನಿಕರು ಇದುವರೆಗೆ ಚೀನಾ, ಪಾಕಿಸ್ತಾನದ ನಡುವೆ ನಡೆದ ಎಲ್ಲ ಯುದ್ಧಗಳಲ್ಲಿ ಹೋರಾಡಿದ್ದಾರೆ, ಚಳಿ, ಮಳೆ ಎನ್ನದೇ ಗಡಿಯಲ್ಲಿ ನಮಗಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ನಿದ್ದೆಯ ಪಾಲನ್ನೂ ನಮಗೆ ನೀಡಿ ದೇಶ ಸೇವೆಗೆ ಬದ್ಧರಾಗಿದ್ದಾರೆ. ಅದಕ್ಕಾಗಿಯೇ ಭಾರತದ ಸೇನೆಯಲ್ಲಿ 12 ಲಕ್ಷ ಗೋರ್ಖಾಗಳಿದ್ದಾರೆ. 20 ಸಾವಿರ ಗೋರ್ಖಾಗಳು ದೇಶದ ಅಸ್ಸಾಂ ರೈಫಲ್ಸ್ ನಂತ ಅರೆ ಮಿಲಿಟರಿ ಪಡೆಯಲಿದ್ದಾರೆ. ಈ ಗೋರ್ಖಾ ಸೈನಿಕರಿಗೆ ಸರ್ಕಾರ ವಾರ್ಷಿಕ 1,200 ಕೋಟಿ ರುಪಾಯಿ ಸಂಬಳವಾಗಿ ನೀಡುತ್ತದೆ.
ಇನ್ನೂ ಒಂದು ಅಚ್ಚರಿ ಎಂದರೆ, ಪ್ರಸ್ತುತ ಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಸಹ ಗೋರ್ಖಾ ರೈಫಲ್ಸ್ ನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಿಂದಿನ ಅವಧಿಯ ದಲ್ಬೀರ್ ಸಿಂಗ್ ಸಹ ಗೋರ್ಖಾ ರೈಫಲ್ಸ್ ನಲ್ಲಿ ಕೆಲಸ ಮಾಡಿದವರೇ!
ಅಷ್ಟಕ್ಕೂ ಗೋರ್ಖಾಗಳ ಧ್ಯೇಯವೇ, “ಹೇಡಿಯಾಗಿ ಬದುಕುವುದಕ್ಕಿಂತ ಹೋರಾಡಿ ಸಾಯುವುದೇ ಮೇಲು”
ಇಂಥ ಶೂರ, ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡುವ ಗೋರ್ಖಾ ಸೇವೆಗೆ 200 ವರ್ಷಗಳಾಗಿರುವ ಈ ಶುಭ ಗಳಿಗೆಯಲ್ಲಿ ನಾವು ಸಲಾಮ್ ಹೇಳದಿದ್ದರೆ ಹೇಗೆ ಹೇಳಿ? ಸಲಾಂ ಗೋರ್ಖಾ.
Leave A Reply