ಮಂಗಳೂರಿನ ಮಹಿಳಾ ಎಸ್ ಐಗೆ ಇಲಾಖೆಯ ವಾಹನ ಕೊಡದೆ ಇದ್ದರೆ ಹೇಗೆ ?
ಮಂಗಳೂರಿನ ಕೆಲವು ರಸ್ತೆಗಳಲ್ಲಿ ಒಂದು ನಿಯಮ ಇದೆ. ಅದೇನೆಂದರೆ ತಿಂಗಳ ಸಮ ಸಂಖ್ಯೆಗಳಂದು ಅಂದರೆ 2,4,6,8….. ರಸ್ತೆಯ ಎಡಭಾಗಗಳಲ್ಲಿಯೂ ಅದೇ ರೀತಿಯಲ್ಲಿ ಬೆಸ ಸಂಖ್ಯೆಗಳಂದು 1,3,5,7… ಹೀಗೆ ಈ ದಿನಾಂಕಗಳಂದು ರಸ್ತೆಯ ಬಲಭಾಗಗಳಲ್ಲಿ ನಿಲ್ಲಿಸಬೇಕು ಎಂದು ಇದೆ. ಇವತ್ತು 9 ತಾರೀಕು ಆದರೆ ರಸ್ತೆಯ ಬಲಭಾಗದಲ್ಲಿಯೇ ಕಡ್ಡಾಯವಾಗಿ ನಿಲ್ಲಿಸಬೇಕು. ಇಂತಹ ಒಂದು ನಿಯಮ ಈ ರಸ್ತೆಗೆ ಅನ್ವಯವಾಗುತ್ತದೆ ಎಂದು ಆ ರಸ್ತೆಯನ್ನು ಅಗಲ ಮಾಡಿ ಸಾರ್ವಜನಿಕರಿಗೆ ಬಿಟ್ಟು ಕೊಡುವಾಗ ಅಲ್ಲೊಂದು ಬೋರ್ಡ್ ಹಾಕಿರುತ್ತಾರೆ. ಆ ಬೋರ್ಡ್ ಅನ್ನು ನೋಡಿ ಗಾಡಿ ಸರಿಯಾದ ದಿಕ್ಕಿನಲ್ಲಿ ರಸ್ತೆ ಉದ್ಘಾಟನೆಗೊಂಡ ನಾಲ್ಕು ದಿನ ಎಲ್ಲರೂ ನಿಲ್ಲಿಸುತ್ತಾರೆ. ಅದರ ನಂತರ ಆ ಬೋರ್ಡಿನ ಮೇಲೆ ಯಾರೋ ಸ್ಟಿಕರ್ ಹಚ್ಚಿ ಹೋಗುತ್ತಾರೆ. ಬೆಸ, ಸಮ ಯಾವುದು ಎಂದು ಗೊತ್ತಾಗುವುದಿಲ್ಲ. ಒಂದಷ್ಟು ದಿನಗಳ ಬಳಿಕ ಆ ಬೋರ್ಡ್ ಬಿದ್ದು ಹೋಗುತ್ತದೆ. ಅದರ ನಂತರ ಆ ರಸ್ತೆಯಲ್ಲಿ ಯಾವ ಸೈಡಿಗೆ ವಾಹನ ನಿಲ್ಲಿಸಬೇಕು ಎಂದು ಯಾರಿಗೂ ನೆನಪಿರುವುದಿಲ್ಲ. ಅದರ ನಂತರ ಒಟ್ರಾಶಿ ದುನಿಯಾ. ಮಂಗಳೂರಿನ ರಥಬೀದಿ ರಸ್ತೆ ಆಗಿನ ಜಿಲ್ಲಾಧಿಕಾರಿ ವಿ ಪೊನ್ನುರಾಜ್ ಉಮೇದಿನಲ್ಲಿ ಅಗಲವಾಗಿತ್ತು. ಈಗ ರಸ್ತೆ ಅಗಲ ಇದೆ. ಆದರೆ ವಾಹನಗಳು ಯಾವ ಸೈಡಿಗೆ ಯಾವ ದಿನಗಳಂದು ನಿಲ್ಲಿಸಲು ಸೂಚನೆ ಕೊಟ್ಟಿದ್ದು ಎಂದು ಜಿಲ್ಲಾಡಳಿತಕ್ಕೂ ಮರೆತು ಹೋಗಿದೆ. ಪೊಲೀಸ್ ಕಮೀಷನರೇಟ್ ಗೂ ಗೊತ್ತಿರಲಿಕ್ಕಿಲ್ಲ. ಆದ್ದರಿಂದ ವಾಹನಗಳು ಎಲ್ಲಿ ಮನಸ್ಸಾಗುತ್ತದೆಯೋ ಅಲ್ಲಿ ಕಾಲು ಆಚೀಚೆ ಮಾಡಿ ನಿಂತು ಬಿಡುತ್ತದೆ.
ಹಿಂದೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದ್ದಾಗಲೂ ಇಂತಹ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ನಿಂತಿರುತ್ತಿದ್ದರು. ಆದರೆ ಈಗ ಮಂಗಳೂರು ಪೊಲೀಸ್ ಕಮೀಷನರೇಟ್ ನಲ್ಲಿ ಹೊಸ ಸಿಬ್ಬಂದಿಗಳ ನೇಮಕವಾದ ನಂತರ ಇಲ್ಲೆಲ್ಲಾ ಪೊಲೀಸರು ಕಾಣಸಿಗುತ್ತಿಲ್ಲ. ಇದನ್ನೆಲ್ಲ ಪೊಲೀಸ್ ಕಮೀಷನರ್ ಅವರಿಗೆ ಅವರ ಕೆಳಗಿನ ಅಧಿಕಾರಿಗಳು ಮನವರಿಕೆ ಮಾಡಿಕೊಡಬೇಕು. ಅದರ ಬಳಿಕ ಈ ಟ್ರಾಫಿಕ್ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂದು ಎನ್ ಜಿ ಒ ಗಳನ್ನು ಕರೆದು ಪೊಲೀಸ್ ಕಮೀಷನರ್ ಅವರು ಸಭೆ ಮಾಡಬೇಕು. ಮೂರು ತಿಂಗಳಿಗೊಮ್ಮೆ ನಮ್ಮನ್ನು ಕರೆದು ಅಭಿಪ್ರಾಯ ಕೇಳುತ್ತಿದ್ದರೆ ನಾವು ಒಪನ್ ಆಗಿ ಹೇಳಲು ಯಾವುದೇ ರೀತಿಯಲ್ಲಿ ಅಂಜುವ ಪ್ರಶ್ನೆನೆ ಇಲ್ಲ. ಆದರೆ ಅದಕ್ಕಿಂತಲೂ ಮೊದಲು ಪೊಲೀಸ್ ಕಮೀಷನರ್ ಸುರೇಶ್ ಅವರು ತಮ್ಮ ಇಲಾಖೆಯ ಒಳಗಿರುವ ಕೆಲವು ಸಮಸ್ಯೆಗಳನ್ನು ಸರಿ ಮಾಡಲು ಅಗತ್ಯ ಇದೆ.
ಅದೇನೆಂದರೆ ಮಹಿಳಾ ಪೊಲೀಸ್ ಸಬ್ ಇನ್ಸಪೆಕ್ಟರ್ ಗಳಿಗೆ ದಯವಿಟ್ಟು ಇಲಾಖೆಯ ವಾಹನವನ್ನು ಒದಗಿಸಬೇಕು. ನಾನು ಕಳೆದ ಬಾರಿ ಒಮ್ಮೆ ಬರೆದ ನೆನಪು. ಮಹಿಳಾ ಪೊಲೀಸ್ ಎಸ್ ಐ ವಸಂತಿ ಶೇಟ್ ಅವರಿಗೆ ತಮ್ಮ ಡ್ಯೂಟಿ ನಿರ್ವಹಿಸಲು ಇಲಾಖೆ ವಾಹನವನ್ನೇ ಕೊಟ್ಟಿಲ್ಲ ಎಂದು ಬರೆದಿದ್ದೆ. ಆ ಮಹಿಳಾ ಅಧಿಕಾರಿ ಎಂಟು ತಿಂಗಳ ತನಕ ತನ್ನ ಸ್ವಂತ ವಾಹನದಲ್ಲಿಯೇ ಕರ್ಥವ್ಯ ನಿರ್ವಹಿಸುತ್ತಿದ್ದರು. ಅದು ಅವರಿಗೆ ಅನಿವಾರ್ಯ ಆಗಿತ್ತು. ಬೇರೆ ಏನು ಮಾಡಲು ಆಗುತ್ತೆ? ಯಾರಾದರೂ ಮಹಿಳೆ ಬಂದು ಸ್ಟೇಶನ್ ನಲ್ಲಿ ದೂರು ಕೊಟ್ಟರೆ ” ನಿನ್ನ ಮನೆ ಎಲ್ಲಿ ಬರುತ್ತದೆ? ಬಿಜೈಯಾ? ಹಾಗಾದರೆ ನಾನು ಸ್ಟೇಟ್ ಬ್ಯಾಂಕಿಗೆ ಹೋಗಿ ಅಲ್ಲಿಂದ 17 ಅಥವಾ 33 ನಂಬ್ರ ಬಸ್ಸಿನಲ್ಲಿ ಹತ್ತಿ ಬಾಳಿಗಾ ಸ್ಟೋರ್ ಬಳಿ ಇಳಿದು ಅಲ್ಲಿ ಎದುರಿನ ರಸ್ತೆಯಲ್ಲಿ ನಡೆದು ಬರಬೇಕಾಗುತ್ತದೆ ಅಲ್ವಾ?” ಎಂದು ಕೇಳಲು ಆಗುತ್ತದೆಯಾ? ಹಾಗೆ ಯೂನಿಫಾರ್ಮಂ ಹಾಕಿ ಬಸ್ ಸ್ಟಾಪಿನಲ್ಲಿ ಬಸ್ಸಿಗೆ ಕಾದು ಸ್ಟಾಪ್ ಬಂದಾಗ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗಲು ಆಗುತ್ತಾ?. ಹಾಗೆ ಬಂಟ್ಸ್ ಹಾಸ್ಟೆಲ್ ನಲ್ಲಿ ಅಪಘಾತ ಆಯಿತು ಎಂದು ವೈರ್ ಲೆಸ್ ನಲ್ಲಿ ಮೇಸೆಜ್ ಬಂದರೆ ಈ ಮಹಿಳಾ ಅಧಿಕಾರಿ ರಿಕ್ಷಾ ಮಾಡಿ ಅಲ್ಲಿಗೆ ಹೋಗಲು ಆಗುತ್ತಾ? ಅದಕ್ಕಾಗಿ ವಸಂತಿ ಶೇಟ್ ತಮ್ಮ ಖಾಸಗಿ ವಾಹನದಲ್ಲಿ ಹೋಗಿ ಕರ್ಥವ್ಯ ನಿರ್ವಹಿಸುತ್ತಿದ್ದರು. ಇದು ಒಮ್ಮೆ ನನ್ನ ಗಮನಕ್ಕೆ ಬಂತು.
ನಾನು ನನ್ನ ಫೇಸ್ ಬುಕ್ ನಲ್ಲಿ ಬರೆದು ಹಾಕಿದೆ. ಸಹಜವಾಗಿ ಅದು ಎಲ್ಲಿಗೆ ಮುಟ್ಟಬೇಕೋ ಅಲ್ಲಿಗೆ ತಲುಪಿತು. ವಸಂತಿ ಶೇಟ್ ನನಗೆ ಹೇಳಿ ಬರೆಯಿಸಿದ್ದು ಎಂದು ಕಮೀಷನರ್ ಅವರಿಗೆ ಯಾರೋ ಕಿವಿ ಊದಿದರು. ಅದರಿಂದ ಆ ಮಹಿಳಾ ಅಧಿಕಾರಿಗೆ ಮುಂದೆ ಬರಬೇಕಾದ ಇಲಾಖೆಯ ವಾಹನ ಕೂಡ ಬರದಂತೆ ಕೆಲವು ಅಧಿಕಾರಿಗಳು ನೋಡಿಕೊಂಡರು. ಬಳಿಕ ನೀವು ಖಾಸಗಿ ವಾಹನದಲ್ಲಿ ಡ್ಯೂಟಿ ಮಾಡುವಂತಿಲ್ಲ ಎಂದು ಅವರಿಗೆ ಸೂಚನೆ ಕೊಡಲಾಯಿತು. ವಸಂತಿ ಶೇಟ್ ಬೇರೆ ಪೊಲೀಸ್ ಸಿಬ್ಬಂದಿಯ ಹಿಂದೆ ಬೈಕಿನಲ್ಲಿ ಕುಳಿತು ಹೋಗುವ ಪರಿಸ್ಥಿತಿ ಸೃಷ್ಟಿಯಾಯಿತು. ಇಲಾಖೆಯ ವಾಹನ ಕೊಡಲ್ಲ, ಸ್ವಂತ ವಾಹನ ಬಳಸಬಾರದು ಮತ್ತು ಹೇಗೆ ಕರ್ಥವ್ಯ ಮಾಡುವುದು? ಇದು ಸದ್ಯದ ಪರಿಸ್ಥಿತಿ.
ಇಲ್ಲಿಂದ ವ್ಯವಸ್ಥೆ ಸರಿಯಾಗಬೇಕು. ಅದು ಬಿಟ್ಟು ಬರೀ ಟಾರ್ಗೆಟ್ ಕೊಡುತ್ತಿದ್ದರೆ ಪೊಲೀಸರು ರಸ್ತೆಯ ತಿರುವಿನಲ್ಲಿ ನಿಂತು ಹೆಲ್ಮೆಟ್ ಹಾಕದವರನ್ನು ಹಿಡಿಯಲು ಸೀಮಿತರಾಗುತ್ತಾರೆ!
Leave A Reply