ಇನ್ನು 7% ಪ್ರಯಾಣಿಕರು ಕಡಿಮೆ ಆದ್ರೆ ಮಂಗಳೂರು-ಬೆಂಗಳೂರು ಹಗಲು ರೈಲಿಗೆ ಎಳ್ಳುನೀರು ಬಿಡಬೇಕಾದೀತು!
ಕುಡ್ಲ ಏಕ್ಸಪ್ರೆಸ್ ಅಥವಾ ರೈಲ್ವೆ ಇಲಾಖೆಯ ಭಾಷೆಯಲ್ಲಿ ಕರೆಯುವುದಾದರೆ ಗೋಮಟೇಶ್ವರ ಏಕ್ಸಪ್ರೆಸ್ ನಮ್ಮ ಕೈಬಿಟ್ಟು ಹೋಗುವ ಲಕ್ಷಣಗಳು ದೂರದಿಂದ ಕಾಣುತ್ತೀವೆ. ದಿವ್ಯ ನಿರ್ಲಕ್ಷ್ಯ, ಕೇರಳಿಗರ ಲಾಬಿ, ವೇಳಾಪಟ್ಟಿಯ ದೋಷ ಮತ್ತು ಪ್ರಾರಂಭವಾಗುವ ಮತ್ತು ತಲುಪುವ ರೈಲ್ವೆ ನಿಲ್ದಾಣ ಎಲ್ಲವೂ ತಾಳ ತಪ್ಪಿದ್ದಾಗ ಆ ರೈಲು ತುಂಬಿ ತುಳುಕಿ ಓಡಬೇಕು ಎಂದು ಬಯಸಲು ಅದೇನೂ ಮ್ಯಾಜಿಕ್ ಶೋ ಅಲ್ಲ. ಮೇಲೆ ಬರೆದ ಒಂದೊಂದು ಶಬ್ದದ ಹಿಂದೆ ಕೂಡ ಅರ್ಥ ಇದೆ. ದಿವ್ಯ ನಿರ್ಲಕ್ಷ್ಯ ಎಂದರೆ ಆಗ ರೈಲ್ವೇ ಸಚಿವರಾಗಿದ್ದ ಡಿವಿ ಸದಾನಂದ ಗೌಡರದ್ದು. ಅವರು ತಮ್ಮ ರೈಲ್ವೆ ಬಜೆಟಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ರೈಲು ಓಡಲಿದೆ ಎಂದು ಹೇಳಿದರೆ ವಿನ: ಅದರ ಹಿಂದೆ ಮುಂದೆ ಏನೂ ಹೇಳದೆ ಇದ್ದದ್ದು ಮೊದಲ ದೊಡ್ಡ ಕೊರತೆ. ಅವರು ಆವತ್ತೆ ಅದು ರಾತ್ರಿ ರೈಲು ಎಂದಿದ್ದರೆ ಅರ್ಧ ಗೊಂದಲ ಪರಿಹಾರವಾಗುತ್ತಿತ್ತು. ಅದರೊಂದಿಗೆ ಮಂಗಳೂರು ಸೆಂಟ್ರಲ್ ನಿಂದ ಬೆಂಗಳೂರು ಸೆಂಟ್ರಲ್ ಎಂದು ಹೇಳಿದ್ದರೆ ಇನ್ನು ಇಪ್ಪತ್ತೈದು ಶೇಕಡಾ ಗೊಂದಲ ಮುಗಿಯುತ್ತಿತ್ತು. ಇನ್ನು ಕೊನೆಯದಾಗಿ ಕುಡ್ಲ ಏಕ್ಸಪ್ರೆಸ್ ಎಂದು ಬಾಯ್ಬಿಟ್ಟು ಹೇಳಿದ್ದರೆ ಎಲ್ಲ ಸಮಸ್ಯೆ ಮುಗಿಯುತ್ತಿತ್ತು. ಆದರೆ ಅವರು ಅದ್ಯಾವುದೂ ಹೇಳದೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಕಾರಣ ಇವತ್ತು ಇದರಲ್ಲಿ ಹುಶಾರಾಗಿರುವ ಕೇರಳಿಗರು ಆ ದೀಪವನ್ನು ತಮ್ಮೆಡೆಗೆ ತಿರುಗಿಸಿ ಮಂಗಳೂರಿನವರಿಗೆ ಕತ್ತಲೆಯಾಗುವಂತೆ ನೋಡಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯವರೊಬ್ಬರು ರೈಲ್ವೆ ಸಚಿವರಾಗಿ ತಮ್ಮ ಊರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಗ್ಯಾರಂಟಿಯಾಗಿ ಬಡಿಸುತ್ತಾರೆ ಎಂದು ಕೇರಳದವರಿಗೆ ಗೊತ್ತಿತ್ತು. ಅವರು ಬಡಿಸುವುದು ಬಡಿಸಲಿ, ಅದನ್ನು ಮಂಗಳೂರಿನವರು ಹೇಗೆ ನೆಕ್ಕುತ್ತಾರೆ ಎಂದು ನಾವು ನೋಡುತ್ತೇವೆ ಎಂದು ಆವತ್ತೆ ಕೇರಳ ರೈಲ್ವೆ ಲಾಬಿ ನಿರ್ಧರಿಸಿದಂತಿತ್ತು. ಇನ್ನು ಮಂಗಳೂರಿನವರು ಎಲೆಗೆ ಕೈ ಹಾಕುವ ಮೊದಲೇ ನಾವು ಎಲೆಯನ್ನೇ ಎಳೆದುಬಿಡುತ್ತೇವೆ ಎಂದು ಪ್ಲಾನ್ ಹಾಕಿ ಅವರು ತಯಾರಾಗಿ ನಿಂತಿದ್ದರು. ಅದಕ್ಕೆ ಉದಾಹರಣೆ ಎನ್ನುವಂತೆ ಅವರು ಮಾಡಿದ ಕಾರ್ಯ.
ನಿಮಗೆಲ್ಲ ಗೊತ್ತಿರುವಂತೆ ದಕ್ಷಿಣ ರೈಲ್ವೆ ವಿಭಾಗದ ತಲೆ ಇಲ್ಲಿದ್ದರೂ ಜುಟ್ಟು ಇರುವುದು ಫಾಲ್ಗಾಟ್ ನಲ್ಲಿ. ಅವರು ಅಲ್ಲಿಂದ ಎಳೆದರೆ ಇಲ್ಲಿ ರೈಲು ನಿಲ್ಲುತ್ತೆ. ಅಷ್ಟು ಸಾಮರ್ತ್ಯ ಅವರಿಗೆ ಇದೆ. ಅದಕ್ಕೆ ಮೊದಲ ಸಾಕ್ಷಿ ಡಿವಿ ಆವತ್ತು ಘೋಷಿಸಿದ ರೈಲನ್ನು ಮೊದಲು ಹಗಲು ರೈಲ್ಲನ್ನಾಗಿ ಇವರು ಮಾಡಿದ್ದು. ಅಲ್ಲಿಗೆ ಅವರ ಅರ್ಧ ಕೆಲಸ ಮುಗಿದ ಹಾಗೆ. ಅದರ ನಂತರ ಆ ರೈಲನ್ನು ಮಂಗಳೂರು ಜಂಕ್ಷನ್ ನಿಂದ ಪ್ರಾರಂಭಿಸಿದ್ದು. ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಡುವಿನ ವ್ಯತ್ಯಾಸದ ಬಗ್ಗೆ ಈ ಹಿಂದೆ ಬರೆದಿದ್ದೆ. ಯಾವಾಗ ಈ ರೈಲು ಜಂಕ್ಷನ್ ನಿಂದ ಹೊರಡುವುದು ಎಂದು ಆಯಿತೋ, ಉಳಿದ 25% ಫಾಲ್ಗಾಟ್ ಗೆದ್ದಿತ್ತು. ಕೊನೆಯದಾಗಿ ರೈಲನ್ನು ಬೆಳಿಗ್ಗೆ 11.30 ಕ್ಕೆ ಹೋಗಲು ಹಸಿರು ನಿಶಾನೆ ಕೊಟ್ಟಿದ್ದು. ಅಲ್ಲಿಗೆ ಈ ರೈಲು ವಿಫಲವಾಗಬೇಕು ಎಂದು ಅದು ಹುಟ್ಟುವ ಮೊದಲೇ ನಿರ್ಧಾರವಾಗಿತ್ತು.
ಬೆಳಿಗ್ಗೆ 11.30 ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಡುವ ರೈಲು ಯಶವಂತಪುರ ರೈಲು ನಿಲ್ದಾಣ ತಲುಪುವಾಗ ರಾತ್ರಿ 8 ರಿಂದ 9 ಗಂಟೆಯಾಗುತ್ತದೆ. ಹೆಂಗಸರಿಗೆ, ಮಕ್ಕಳಿಗೆ, ವೃದ್ಧರಿಗೆ ಅಲ್ಲಿಂದ ತಮ್ಮ ಮನೆಗೆ ಅಥವಾ ಊರಿಗೆ ಹೋಗಲು ಆ ಸಮಯದಲ್ಲಿ ಕಷ್ಟ. ರೈಲ್ವೆ ಇಲಾಖೆಯ ನಿಯಮದ ಪ್ರಕಾರ ಒಂದು ರೈಲಿನಲ್ಲಿ 30% ಕ್ಕಿಂತ ಕಡಿಮೆ ಪ್ರಯಾಣಿಕರು ನಿತ್ಯ ಪ್ರಯಾಣಿಸುತ್ತಿದ್ದರೆ ಆ ರೈಲನ್ನು ಯಾವುದೇ ಪೂರ್ವ ಸೂಚನೆ ಕೊಡದೇ ಅನಿರ್ಧಿಷ್ಟಾವಧಿಗೆ ರೈಲ್ವೆ ಇಲಾಖೆ ಕ್ಯಾನ್ಸಲ್ ಮಾಡಬಹುದು. ಈಗ ಗೋಮಟೇಶ್ವರ ಏಕ್ಸಪ್ರೆಸ್ ನಲ್ಲಿ ಪ್ರಯಾಣಿಸುವ ನಾಗರಿಕರ ಒಟ್ಟು ಸರಾಸರಿ ಪ್ರಮಾಣ 37%. ಅಂದರೆ ನಾವು ಅಪಾಯದ ಅಂಚಿನಲ್ಲಿದ್ದೇವೆ. ಇನ್ನೊಂದು ಏಳೆಂಟು ಶೇಕಡಾ ಪ್ರಯಾಣಿಕರು ಕಡಿಮೆಯಾದರೆ ಗೋಮಟೇಶ್ವರ ಏಕ್ಸಪ್ರೆಸ್ ರೈಲನ್ನು ನಾವು ಪೀನಮಸೂರ ಹಿಡಿದು ಕೇರಳದಲ್ಲಿ ಎಲ್ಲಾದರೂ ಹುಡುಕಬೇಕಾದಿತು. ಅವರು ಅವಕಾಶ ಸಿಕ್ಕಿದರೆ ಭಾರತದಲ್ಲಿ ಓಡುವ ಎಲ್ಲಾ ರೈಲುಗಳನ್ನು ಕೇರಳದ ಯಾವುದಾದರೂ ರೈಲ್ವೆ ಸ್ಟೇಶನ್ ನಿಂದಲೇ ಓಡಿಸಲು ಸಾಧ್ಯಾನಾ ಎಂದು ನೋಡುವವರು. ಹಾಗಿರುವಾಗ ಅವರು ಈ 37% ಯಾವಾಗ 30% ಆಗುತ್ತೆ ಎಂದು ಕಾಯುತ್ತಿರುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ನಿರಂತರ ಹೋರಾಟ, ಪ್ರತಿಭಟನೆ, ಚಳುವಳಿಗಳ ಬಳಿಕ ನಮಗೆ ದಕ್ಕಿದ್ದು ಮಂಗಳೂರು-ಬೆಂಗಳೂರು ರೈಲುಗಳು. ಅದರಲ್ಲಿ ಒಂದು ಈಗ ಬಾಯಿಗೆ ಬಂದಿದೆ ಆದರೆ ಗಂಟಲಿನಿಂದ ಕೆಳಗೆ ಇಳಿಯುತ್ತಿಲ್ಲ ಎಂದು ಅಂದುಕೊಳ್ಳುವಾಗ ಬೇಸರವಾಗುವುದು ಸಹಜ. ಹಾಗೆ ಆಗಬಾರದು ಎಂದಾದರೆ ನಾವು ಏನಾದರೂ ಮಾಡಬೇಕು. ನಾನು ಡಿಆರ್ ಸಿಗೆ ಮೂರು ಸಲಹೆಗಳನ್ನು ಕೊಟ್ಟೆ. ಅದನ್ನು ಅವರು ಅನುಷ್ಟಾನಕ್ಕೆ ತಂದರೆ ಗೋಮಟೇಶ್ವರ ಏಕ್ಸಪ್ರೆಸ್ ರೈಲು ಲಾಭಕ್ಕೆ ಹೊರಳಬಹುದು. ಒಮ್ಮೆ ಲಾಭದ ಮುಖ ನೋಡಿದರೆ ಮತ್ತೆ ಅದನ್ನು ನಮ್ಮ ಹಳಿಗಳಿಂದ ಕೀಳುವುದು ಕಷ್ಟ. ನಾನು ಕೊಟ್ಟ ಸಲಹೆಗಳನ್ನು ನಾಳೆ ವಿವರವಾಗಿ ನಿಮ್ಮ ಮುಂದೆ ಇಡುತ್ತೇನೆ.
ಒಂದಂತೂ ನಿಜ, ತಮ್ಮ ರಾಜ್ಯಕ್ಕೆ ಯಾವುದಾದರೂ ಯೋಜನೆಗಳು ಬರಲು ಹಿಂದೇಟು ಹಾಕುತ್ತಿವೆ ಎಂದು ತಿಳಿದರೆ ಕೇರಳದ ಅಷ್ಟೂ ಸಂಸದರು ಪಕ್ಷಭೇದ ಮರೆತು, ಲುಂಗಿ ಮೇಲೆ ಕಟ್ಟಿ, ಶರ್ಟಿನ ತೊಳು ಮೇಲೆ ಮಾಡಿ, ಮೀಸೆ ತಿರುವಿ, ಲೆದರ್ ಚಪ್ಪಲಿ ಮೆಟ್ಟಿ ಅಖಾಡಕ್ಕೆ ಇಳಿಯುತ್ತಾರೆ. ಅದೇ ನಮ್ಮ ರಾಜ್ಯದಲ್ಲಿ ಯಾವುದಾದರೂ ಯೋಜನೆ ಬಾಗಿಲು ಬಡಿಯುತ್ತಿದ್ದರೂ ನಮ್ಮ ಸಂಸದರು ಆ ಯೋಜನೆ ಬಂದರೆ ಯಾರಿಗೆ ಲಾಭ, ಕಾಂಗ್ರೆಸ್ಸಿಗೋ, ಬಿಜೆಪಿಗೋ, ಜೆಡಿಎಸ್ಸಿಗೋ ಎಂದು ಯೋಚಿಸುತ್ತಾ ಕಂಬಳಿ ಹೊದ್ದು ಮಲಗಿಬಿಡುತ್ತಾರೆ
Leave A Reply