ಗೋಮಟೇಶ್ವರ ಉಳಿಬೇಕಾದರೆ ನಾವೇನಾದರೂ ಮಾಡಲೇಬೇಕು!
ಗೋಮಟೇಶ್ವರ ಏಕ್ಸಪ್ರೆಸ್ ರೈಲನ್ನು ರಾತ್ರಿ ರೈಲಾಗಿ ಮಾಡಿದರೆ ಅದು ಖಂಡಿತ ಒಂದು ತಿಂಗಳೊಳಗೆ ಲಾಭದ ಮುಖ ನೋಡುತ್ತೆ, ಸಂಶಯವೇ ಇಲ್ಲ. ಬೆಸ್ಟ್ ಏನೆಂದರೆ ಗೋಮಟೇಶ್ವರ ಏಕ್ಸಪ್ರೆಸ್ ಅನ್ನು ರಾತ್ರಿ 9.30 ಕ್ಕೆ ಸರಿಯಾಗಿ ಮಂಗಳೂರು ಸೆಂಟ್ರಲ್ ನಿಂದ ಬಿಡುವುದು. ಹೆಚ್ಚು ಸ್ಟಾಪ್ ಇಲ್ಲ. ಇಲ್ಲಿ ಬಿಟ್ಟರೆ ಹಾಸನ. ಅಲ್ಲಿ ಬಿಟ್ಟರೆ ಸೀದಾ ಬೆಂಗಳೂರು ಸಿಟಿ. ಇಷ್ಟು ಮಾಡಿ ನೋಡಿ ರೈಲ್ವೆ ಸಚಿವರೇ. ನೀವು ಬರಗಾಲ ಎಂದುಕೊಂಡಿರುವ ಕಡೆಯಲ್ಲಿಯೂ ಬಂಗಾರದ ಫಸಲು ಬರಲಿದೆ. ಹೀಗೆ ಮಾಡಿದರೆ ಜನರಿಗೂ ಅನುಕೂಲವಾಗುತ್ತದೆ. ಬಸ್ಸುಗಳು ಜಾತ್ರೆ, ಹಬ್ಬ ಸಂದರ್ಭ ಏರಿಸುವ ಹೊನ್ನಶೂಲದಿಂದ ಜನರನ್ನು ನೀವು ಪಾರು ಮಾಡಿದ ಹಾಗೆ ಆಗುತ್ತೆ.
ಇಷ್ಟಾಗಿಯೂ ಗೋಮಟೇಶ್ವರ ಏಕ್ಸಪ್ರೆಸ್ ಅನ್ನು ರಾತ್ರಿ ರೈಲು ಮಾಡಲು ಸಾಧ್ಯವೇ ಇಲ್ಲ ಎಂದು ನೀವು ಅಂದುಕೊಳ್ಳುವುದಾದರೆ ಆ ರೈಲನ್ನು ದಯವಿಟ್ಟು ಬೆಳಿಗ್ಗೆ ಬೇಗ ಮಂಗಳೂರಿನಿಂದ ಬಿಡುವ ಹಾಗೆ ಮಾಡಿ. ಬೆಳಿಗ್ಗೆ 6.20 ರಿಂದ 9 ಗಂಟೆಯ ಒಳಗೆ ಮಂಗಳೂರು ಸೆಂಟ್ರಲ್ ನಲ್ಲಿ ಅಷ್ಟು ಟ್ರಾಫಿಕ್ ಇರುವುದಿಲ್ಲ. ಅದು ಪ್ರಶಸ್ತ ಸಮಯ. ಬೇಕಾದರೆ ನೀವು ನಮ್ಮ ಮೇಲೆ ಬಹುಪ್ರೀತಿಯಿಂದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕೊಟ್ಟಿರುವ ಮೂರು ರೈಲುಗಳನ್ನು ಇಲ್ಲಿ ಕ್ಯಾನ್ಸಲ್ ಮಾಡಿ ಜಂಕ್ಷನ್ ನಿಂದ ಓಡಿಸಿ. ಮಂಗಳೂರು ಸೆಂಟ್ರಲ್ ನಿಂದ ಕೊಚುವೇಲಿಗೆ ಹೋಗುವ, ಮಂಗಳೂರಿನಿಂದ ಹೈದ್ರಾಬಾದ್ ಗೆ ಹೋಗುವ, ಮಂಗಳೂರಿನಿಂದ ಪಾಂಡಿಚೇರಿಗೆ ಹೋಗುವ ಮೂರು ರೈಲುಗಳನ್ನು ಬೇಕಾದರೆ ಸೆಂಟ್ರಲ್ ನಿಂದ ಜಂಕ್ಷನ್ ಗೆ ಶಿಫ್ಟ್ ಮಾಡಿಸಿ. ಅದೇನು ಮಂಗಳೂರು ಸೆಂಟ್ರಲ್ ನಿಂದಲೇ ಓಡಬೇಕೆಂದು ಹಟ ನಮಗಿಲ್ಲ. ಅವುಗಳ ಬದಲಿಗೆ ಗೋಮಟೇಶ್ವರ ಏಕ್ಸಪ್ರೆಸ್ ಮತ್ತು ಮಂಗಳೂರು ಸಿಎಸ್ ಟಿಯನ್ನು ಸೆಂಟ್ರಲ್ ಗೆ ತನ್ನಿ.
ಇದೆಲ್ಲ ಮನವಿ ಪತ್ರ ಬರೆದು ಫಾಲ್ಗಾಟ್ ರೈಲ್ವೆ ಡಿವಿಜನ್ ಗೆ ಕಳುಹಿಸಿಕೊಡಲಾಗಿದೆ. ಅವರು ಅಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಈಗ ಅದು ಅಲ್ಲಿಂದ ಚೆನೈ ವಿಭಾಗಕ್ಕೆ ಹೋಗಿದೆ. ಅಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ಕಂಡುಬಂದಿಲ್ಲ.
ಈಗ ನಮ್ಮ ಜನಪ್ರತಿನಿಧಿಗಳು ನಿಜವಾದ ಜವಾಬ್ದಾರಿ ತೋರಿಸಬೇಕು. ಕರ್ನಾಟಕದಿಂದ ನಮ್ಮದೇ ಊರಿನವರಾದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ನಮ್ಮ ರಾಜ್ಯವನ್ನು ಚೆನೈಯಲ್ಲಿ ರೈಲ್ವೆ ವಿಭಾಗದ ಮೀಟಿಂಗ್ ಗಳಲ್ಲಿ ಪ್ರತಿನಿಧಿಸುತ್ತಾರೆ. ಏನೂ ಚಿಕ್ಕ ಸ್ಥಾನಮಾನ ಅಲ್ಲ ಅದು. ನಮ್ಮ ರಾಜ್ಯ ಸರಕಾರದ ಪ್ರತಿನಿಧಿ. ನಮ್ಮ ಜಿಲ್ಲೆಯ ಒಂದು ರೈಲು ಇಂತಿಂತಹ ಸಮಯದಲ್ಲಿ ಓಡಿದರೆ ಜನರಿಗೂ ಉಪಯುಕ್ತ, ರೈಲ್ವೆ ಇಲಾಖೆಗೂ ಉಪಯುಕ್ತ ಎಂದು ಅವರು ಅಲ್ಲಿ ಮನವರಿಕೆ ಕೊಡಬೇಕು. ಇತ್ತ ಕಡೆಯಿಂದ ನಮ್ಮ ಮಂಗಳೂರು ನಗರ ದಕ್ಷಿಣದ ಶಾಸಕರಾದ ಜೆ ಆರ್ ಲೋಬೋ ಅವರು ಮುಖ್ಯಮಂತ್ರಿಗಳ ಮೂಲಕ ಮಂಗಳೂರು-ಬೆಂಗಳೂರು ರೈಲಿನ ಇವತ್ತಿನ ಪರಿಸ್ಥಿತಿ ಮತ್ತು ಸಮಯ ಹಾಗೂ ಸ್ಟೇಶನ್ ಬದಲಾದರೆ ಹೇಗೆ ಜನರಿಗೆ ಅನುಕೂಲಕರವಾಗಲಿದೆ ಎಂದು ರೈಲ್ವೆ ಅಧಿಕಾರಿಗಳ ಮೂಲಕ ಒತ್ತಡ ತರಬೇಕು. ಇನ್ನು ನಮ್ಮ ಜಿಲ್ಲೆಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೆ ಸಚಿವರ ಮೇಲೆ ಒತ್ತಡ ಹಾಕಬೇಕು. ಮೂರು ಕಡೆಯಿಂದ ಏನಾದರೂ ನಡೆದರೆ ಆಗ ರೈಲು ನಮಗೆ ಉಳಿಯಬಹುದು.
ಇದರೊಂದಿಗೆ ಅವರು ಮಾಡುತ್ತಾರೆ ಸಾಕು, ನಾವು ಏನು ಮಾಡಲು ಆಗುತ್ತೆ ಜನಸಾಮಾನ್ಯರಾಗಿ ಎಂದು ಅಂದುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ರೈಲ್ವೆ ಇಲಾಖೆಯ ವೆಬ್ ಸೈಟ್ ಗಳಿವೆ. ಅಲ್ಲಿ ದೂರು ದಾಖಲಿಸಬಹುದು. ನಿಮ್ಮ ಅಭಿಪ್ರಾಯ ಬರೆದು ಹಾಕಬಹುದು. ಪೋಸ್ಟ್ ಕಾರ್ಡ್ ಚಳುವಳಿಯನ್ನು ಪ್ರಾರಂಭಿಸಬೇಕು. ಮಂಗಳೂರು ಸೆಂಟ್ರಲ್ ನಿಂದ ಬೆಂಗಳೂರು ಸಿಟಿ ತನಕ ರಾತ್ರಿ ಗೋಮಟೇಶ್ವರ ಏಕ್ಸಪ್ರೆಸ್ ಓಡಿಸಿ ಎಂದು ಎಲ್ಲರೂ ಬರೆದು ಹಾಕೋಣ. ಸಾಧ್ಯವಾದರೆ ಒಂದಿಷ್ಟು ಸಂಘಟನೆಗಳು ಸೇರಿ ರೈಲು ರೋಕೋ ಮಾಡಬೇಕಾದಿತು. ಹತ್ತು ನಿಮಿಷ ರೈಲು ರೋಕೋ ಮಾಡಿದರೆ ಅದು ಸೀದಾ ದೆಹಲಿಯ ರೈಲ್ವೆ ಭವನಕ್ಕೆ ಇಂಜೆಕ್ಷನ್ ಕೊಟ್ಟ ಹಾಗೆ. ಅವರಿಗೆ ಅದು ಮುಟ್ಟುತ್ತದೆ.
ಇದೆಲ್ಲ ಆದಷ್ಟು ಬೇಗ ಆದ್ರೆ ಒಳ್ಳೆಯದು. ಯಾಕೆಂದರೆ ಮುಂದಿನ ವರ್ಷದ ಆರಂಭದ ನಂತರ ಎಪ್ರಿಲ್ ವರೆಗೆ ನಮ್ಮ ಜನರು ಪ್ರವಾಸಕ್ಕೆ ಹೋಗುವುದು ಕಡಿಮೆ. ಪರೀಕ್ಷೆ ಅದು ಇದು ಎಂದು ಮನೆಯಲ್ಲಿಯೇ ಇರುತ್ತಾರೆ. ಈಗಲೇ ಸರಾಸರಿ 37% ನಾಗರಿಕರು ಮಾತ್ರ ಗೋಮಟೇಶ್ವರ ಏಕ್ಸಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಇನ್ನೂ ಕೆಳಗೆ ಹೋಗಿ 30% ಕ್ಕೆ ಹೋಗಿ ನಿಂತರೆ ನಂತರ ಈ ರೈಲು ಸೆಂಟ್ರಲ್ ಕೂಡ ಇಲ್ಲ. ಜಂಕ್ಷನ್ ಕೂಡ ಇಲ್ಲದ ಹಾಗೆ ಆಗುತ್ತದೆ. ಕೇರಳದವರಿಗೆ ಈ ರೈಲು ಲಾಭದಲ್ಲಿ ಓಡಬೇಕಾಗಿಲ್ಲ. ಏಕೆಂದರೆ ಒಮ್ಮೆ ಲಾಸ್ ಎಂದು ಪ್ರೂವ್ ಆದರೆ ಅವರು ತಕ್ಷಣ ಇದೇ ರೈಲನ್ನು ತಮ್ಮ ರಾಜ್ಯದಿಂದ ಓಡಿಸಲು ಹೊರಡುತ್ತಾರೆ. ಮತ್ತೆ ನಾವು ತಪಸ್ಸು ಮಾಡಿದರೂ ಸಿಗುವುದಿಲ್ಲ. ಅದರೊಂದಿಗೆ ಕೊನೆಯದಾಗಿ ಈ ಅಂಕಣವನ್ನು ಮುಗಿಸುವ ಮೊದಲು ಒಂದು ಮಾತು ಹೇಳುತ್ತೇನೆ. ನಾವು ರೈಲ್ಲನ್ನು ಹೆಚ್ಚೆಚ್ಚು ಬಳಸದೇ ಹೋದರೆ ನಷ್ಟ ನಮಗೆ. ಇಲ್ಲಿಂದ ಭಟ್ಕಳಕ್ಕೆ ರೈಲಿನಲ್ಲಿ ಹೋಗಿ, ಎಷ್ಟಾಗುತ್ತೆ. ಅದೇ ಬಸ್ಸಿನಲ್ಲಿ ಹೋಗಿ ಎಷ್ಟಾಗುತ್ತೆ. ಅದರೊಂದಿಗೆ ರೈಲಿನಲ್ಲಿ ಹೋದರೆ ಮೈಕೈ ನೋವೆ ಇಲ್ಲ. ಕಾಲು ಚಾಚಿ ಕುಳಿತುಕೊಳ್ಳಬಹುದು. ಬೋರಾದರೆ ಒಂದತ್ತು ನಿಮಿಷ ಆಚೀಚೆ ಹೋಗಬಹುದು. ಮೂತ್ರ ಕಟ್ಟಿ ಹೆಣಗಬೇಕಿಲ್ಲ. ಇದೆಲ್ಲ ಬಸ್ಸಿನಲ್ಲಿ ಆಗುತ್ತಾ
Leave A Reply