ಅಪ್ಪನ ಕಳೆದುಕೊಂಡ ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾದ ದಿಟ್ಟ ಕತೆಯಿದು…
ಹಾಗೆ ಸುಮ್ಮನೆ ಯೋಚಿಸಿ ನೋಡಿ. 8ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಮಕ್ಕಳ ಮನಸ್ಥಿತಿಗೆ ಹೇಗಿರುತ್ತದೆ? ಅಪ್ಪನ ಕುರಿತು ಅವರಿಗೆ ಯಾವ ಕಲ್ಪನೆ ಇರುತ್ತದೆ? ಅಪ್ಪನೇ ಇಲ್ಲದ ಅವರು ಹೇಗೆ ಬದುಕುತ್ತಾರೆ? ಅವರ ಭವಿಷ್ಯ ಹೇಗಿರುತ್ತದೆ? ಒಂದೋ ಅವರು ಸಮಾಜದ ಕರುಣೆ, ಸಿಂಪತಿ ಮೇಲೆ ಬದುಕುತ್ತಾರೆ. ಇಲ್ಲ ಹೆಣಗುತ್ತಲೇ ಜೀವನ ಸಾಗಿಸುತ್ತಾರೆ.
ಅದರಲ್ಲೂ, ಒಬ್ಬ ಬಾಲಕ ಅಥವಾ ಬಾಲಕಿಯ ತಂದೆ ಸೈನ್ಯದಲ್ಲಿದ್ದು, ಆತ ದೇಶಕ್ಕಾಗಿ ಮೃತಪಟ್ಟರೆ ಇದಕ್ಕಿಂತಲೂ ವಿಷಯ ಪರಿಸ್ಥಿತಿ ಎದುರಾಗುತ್ತದೆ. ಒಂದೆಡೆ ದೇಶಕ್ಕಾಗಿ ತಂದೆ ಪ್ರಾಣ ಕೊಟ್ಟನಲ್ಲ ಎಂಬ ಹೆಮ್ಮೆ, ಇನ್ನೊಂದೆಡೆ ಆತನೇ ಹೋದ ಮೇಲೆ ಇನ್ನೇನು ಎಂಬ ಜುಗುಪ್ಸೆ.
ಸಿಕ್ಕಿಂನ ಅಪರಜಿತಾ ರೈ ಎಂಬಾಕೆಗೆ ಆಗಿದ್ದೂ ಇದೆ. ಆದರೆ, ಆಕೆ ಅಪ್ಪ ಹೋದನಲ್ಲ ಎಂದು ಹಣೆ ಮೇಲೆ ಕೈ ಹೊತ್ತು ಕೂರಲಿಲ್ಲ. ಮನೆಯಲ್ಲಿ ಅಮ್ಮನಿಗೆ ಭಾರವಾಗಲಿಲ್ಲ. ಬದಲಿಗೆ ಚೆನ್ನಾಗಿ ಓದಿ ಪ್ರತಿ ಹಂತದಲ್ಲೂ ಮುನ್ನಡೆ ಸಾಧಿಸಿದಳು. ಕೊನೆಗೆ ಅಪ್ಪನಂತೆಯೇ ಆಕೆ ಅಧಿಕಾರಿಯೂ ಆದಳು. ಬರೀ ಅಧಿಕಾರಿ ಅಲ್ಲ, ಐಪಿಎಸ್ ಆಫಿಸರ್. ಅಷ್ಟೇ ಅಲ್ಲ, ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
ಹೌದು, ಅಪರಿಜಿತಾ ರೈಗೆ ಆಗ ಬರೀ ಎಂಟು ವರ್ಷ. ಡಿವಿಷನಲ್ ಪ್ರಾದೇಶಿಕ ಅರಣ್ಯ ಅಧಿಕಾರಿಯಾಗಿದ್ದ ಅಪ್ಪ ನಿಧನರಾದರು. ಅಂದಿನಿಂದ ಅಮ್ಮ ರೋಮಾ ರೈ ಅವಳೇ ತಂದೆಯೂ ಆದಳು. ಟೀಚರ್ ಆಗಿದ್ದ ಆಕೆಗೆ ಮಗಳನ್ನೂ ಗಂಡನಂತೆ ಅಧಿಕಾರಿ ಮಾಡುವ ಆಸೆ.
ಅದರಂತೆ ಅಪರಿಜಿತಾ ರೈ ಚೆನ್ನಾಗಿ ಓದಿದಳು. ಪಶ್ಚಿಮ ಬಂಗಾಳದ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್ಎಲ್ ಬಿ ಪದವಿ ಪಡೆದಳು. 2010ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದ ಆಕೆ ಮೊದಲ ಯತ್ನದಲ್ಲಿ ವಿಫಲವಾದಳು. ಆದರೇನಂತೆ, ಸಾಧಿಸುವ ಛಲ ಇತ್ತಲ್ಲ, ಮತ್ತೆ ಪರೀಕ್ಷೆ ಬರೆದಳು, ಅದರಲ್ಲಿ ಯಶಸ್ವಿಯೂ ಆಗಿ ಈಗ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಆಫೀಸರ್ ಆಗಿದ್ದಾಳೆ. ಛಲ, ಸಾಧನೆ, ಹಠ ಎಂದರೆ ಇದೇ ಅಲ್ಲವೇ?
Leave A Reply