ಹಿಂದೆ ಮುಂದೆ ನೋಡದೆ ರೇಡ್ ಮಾಡಿದರೆ ನ್ಯಾಯಾಲಯದ ನೋಟಿಸ್ ಪಾಲಿಕೆಗೆ ಬರುತ್ತದೆ!
ಮೇಡಂ, ನಮ್ಮ ಏರಿಯಾದಲ್ಲಿ ಒಂದು ಮಸಾಜ್ ಪಾರ್ಲರ್ ಇದೆ. ನಮ್ಮ ಏರಿಯಾದವರಿಗೆ ಅಲ್ಲೇನೋ ಅನೈತಿಕ ವ್ಯವಹಾರ ನಡೆಯುತ್ತಿದೆ ಎನ್ನುವ ಸಂಶಯ. ನಮ್ಮ ಪಕ್ಕದ ಮನೆಯವರ ಮಗ ಅಲ್ಲಿಗೆ ಹೋಗಿ ಹಣ ಪೋಲು ಮಾಡುತ್ತಿದ್ದಾನೆ ಎಂದು ಎಲ್ಲರಿಗೂ ಬೇಸರ. ಆದ್ದರಿಂದ ಆ ಮಸಾಜ್ ಪಾರ್ಲರ್ ಕೂಡಲೇ ಬಂದ್ ಮಾಡಿಸಿ ಮೇಯರ್ ಅವರೇ ಎಂದು ಒಂದು ಫೋನ್ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಅವರಿಗೆ ಬಂತು ಎಂದು ಇಟ್ಟುಕೊಳ್ಳಿ. ಅವರು ತಕ್ಷಣ “ಆಯಿತು, ಅದನ್ನು ಆದಷ್ಟು ಬೇಗ ಬಂದ್ ಮಾಡಿಸಿ ಬಿಡ್ತೇನೆ” ಎಂದು ಭರವಸೆ ಕೊಟ್ಟು ಕೂಡಲೇ ತಮ್ಮ ಆಪ್ತ ಚಾನೆಲ್ ವೊಂದರ ಕ್ಯಾಮೆರಾ ಮೆನ್ ಗೆ ಫೋನ್ ಮಾಡಿ ನಾಳೆ ಸಂಜೆ ನಾಲ್ಕು ಗಂಟೆಗೆ ಎಲ್ಲಾ ಟಿವಿಯವರಿಗೆ, ವೆಬ್ ಸೈಟ್ ನವರಿಗೆ, ಪೇಪರ್ ನವರಿಗೆ ಹೇಳಿಬಿಡಿ, ನಾವು ಅಲ್ಲಿರುವ ಮಸಾಜ್ ಪಾರ್ಲರ್ ಮೇಲೆ ರೇಡ್ ಮಾಡೋಣ ಎಂದು ಹೇಳಿಬಿಡುತ್ತಾರೆ ಎಂದರೆ ಮೇಯರ್ ಹಿಂದೆ ಮುಂದೆ ಯೋಚಿಸದೆ ತೆಗೆದುಕೊಳ್ಳುತ್ತಿರುವ ನಿರ್ಧಾರ ಕಾನೂನಿನ ದೃಷಿಯಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದೇ ಅರ್ಥ.
ಮರುದಿನ ಆ ಮಸಾಜ್ ಪಾರ್ಲರ್ ಮೇಲೆ ರೇಡ್ ಆಗುತ್ತದೆ. ಹೇಗೂ ಮೇಯರ್ ಅವರು ಎಲ್ಲಾ ಟಿವಿಯವರನ್ನು ಕರೆದುಕೊಂಡು ಹೋಗಿರುವುದರಿಂದ ಅದು ಮರುದಿನ ಎಲ್ಲಾ ಟಿವಿಗಳಲ್ಲಿ ಬರುತ್ತದೆ. ವೆಬ್ ಸೈಟ್ ಗಳಲ್ಲಿಯೂ ಬರುತ್ತದೆ. ಅದರ ಕ್ಲಿಂಪಿಂಗ್ ಎಲ್ಲ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತದೆ. ನೋಡಿದವರೆಲ್ಲ ಛೇ, ಮಸಾಜ್ ಪಾರ್ಲರ್ ಹೆಸರಲ್ಲಿ ಹೀಗಾ ಮಾಡುವುದು ಎಂದು ಮಸಾಜ್ ಪಾರ್ಲಲ್ ಮಾಲೀಕರ ಬಗ್ಗೆ ತಮ್ಮ ಅಸಹ್ಯವನ್ನು ವ್ಯಕ್ತಪಡಿಸುತ್ತಾರೆ. ಹಾಗೆ ನಮ್ಮ ಮೇಯರ್ ಆಗಬಹುದು. ಎಷ್ಟು ಧೈರ್ಯದಲ್ಲಿ ಅಲ್ಲಿ ರೇಡ್ ಮಾಡಿದ್ರು ನೋಡಿ ಎಂದು ಶಹಭಾಷ್ ಗಿರಿ ಕೊಡುತ್ತಾರೆ. ಆ ಎಪಿಸೋಡ್ ಅಲ್ಲಿಗೆ ಮುಗಿಯುತ್ತದೆ.
ಅದರ ನಂತರ ಏನಾಯಿತು ಎನ್ನುವುದನ್ನು ನಾಳೆ ಹೇಳುತ್ತೇನೆ. ಆದರೆ ವಿಷಯ ಇರುವುದು ಒಂದು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವವರು, ಮೇಯರ್ ಆಗಿರಲಿ, ಕಮೀಷನರ್ ಆಗಿರಲಿ ನಿಯಮಗಳನ್ನು ಪಾಲಿಸದೇ ಕೇವಲ ಪ್ರಚಾರಗೋಸ್ಕರ್ ರೇಡ್ ಅಥವಾ ದಾಳಿ ತರಹದ್ದು ಮಾಡಿದರೆ ಅದರಿಂದ ಆಗುವ ಪ್ರಯೋಜನ ಏನು? ಮೊದಲು ಈ ಕಾನೂನು ಪ್ರಕ್ರಿಯೆಗಳನ್ನು ನೋಡೋಣ. ಮಂಗಳೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ಯಾವುದೇ ಒಂದು ವ್ಯವಹಾರ, ಅಂಗಡಿ, ಮಳಿಗೆ ತೆರೆದು ಅದರ ಮಾಲೀಕರು ವ್ಯಾಪಾರ ಮಾಡಬೇಕಾದರೆ ಒಂದು ಉದ್ದಿಮೆ ಪರವಾನಿಗೆ ಪಡೆದುಕೊಳ್ಳಬೇಕು. ಅದು ಕಡ್ಡಾಯ. ಒಂದು ವೇಳೆ ಉದ್ದಿಮೆ ಪರವಾನಿಗೆ ಇಲ್ಲದೆ ಯಾರಾದರೂ ಅಂಗಡಿ ತೆರೆದು ಕುಳಿತು ವ್ಯಾಪಾರ ಮಾಡುತ್ತಿದ್ದರೆ ಆಗ ಆ ಅಂಗಡಿಯ ಮಾಲೀಕನಿಗೆ ಮೊದಲು ಒಂದು ನೋಟಿಸ್ ನೀಡಬೇಕು. ಅದರ ನಂತರ ಇನ್ನೊಂದು ನೋಟಿಸ್ ನೀಡಬೇಕು. ಆ ಎರಡು ಎಚ್ಚರಿಕೆಯ ನೋಟಿಸ್ ನೀಡಿದ ನಂತರ ಒಂದಿಷ್ಟು ಸಮಯಾವಕಾಶ ಕೊಡಬೇಕು. ಅದರ ನಂತರವೂ ಅಂಗಡಿಯ ಮಾಲೀಕರು ಉದ್ದಿಮೆ ಪರವಾನಿಗೆ ಪಡೆಯದಿದ್ದರೆ ಪಾಲಿಕೆಯಲ್ಲಿ ಅದಕ್ಕೆ ಸಂಬಂಧಪಟ್ಟ ವಿಭಾಗಗಳಿವೆ. ಅವರು ಹೋಗಿ ಅದನ್ನು ಬಂದ್ ಮಾಡಿಸಬಹುದು.
ಒಂದು ವೇಳೆ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದಾದರೂ ಕಾನೂನುಬಾಹಿರ ದಂಧೆ ನಡೆಸುತ್ತಿರುವ ಉದ್ಯಮ ನಡೆಯುತ್ತಿದ್ದರೆ ಅಥವಾ ಅನೈತಿಕ ವ್ಯವಹಾರ ಮಾಡುತ್ತಿರುವ ಅಂಗಡಿ ಕಾರ್ಯಾಚರಿಸುತ್ತಿದ್ದರೆ ಅದನ್ನು ಯಾರಾದರೂ ಮೇಯರ್ ಅಥವಾ ಪಾಲಿಕೆಯ ಕಮೀಷನರ್ ಅವರ ಗಮನಕ್ಕೆ ತಂದ ಕೂಡಲೇ ಅಥವಾ ಯಾರಾದರೂ ಪತ್ರಿಕೆ ಅಥವಾ ಟಿವಿಯ ವರದಿಗಾರರು ಹೇಳಿದ ಕೂಡಲೇ ಮರುದಿನ ರೇಡ್ ಮಾಡೋಣ ಎಂದು ಹೇಳಲು ಆಗುವುದಿಲ್ಲ. ಅಂತಹ ವಿಷಯಗಳನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಇಡಬೇಕಾಗುತ್ತದೆ. ಅಲ್ಲಿ ಪಾಲಿಕೆಯ ಸದಸ್ಯರು ಚರ್ಚೆ ಮಾಡಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ರೇಡ್ ಮಾಡುವ ಮೊದಲು ಆ ಉದ್ದಿಮೆಯ ಮಾಲೀಕರು ಕಾನೂನಿನ ಮೂಲಕ ಏನಾದರೂ ರಿವರ್ಸ್ ಹಾಕಬಹುದಾ ಎಂದು ಕೂಡ ನೋಡಬೇಕಾಗುತ್ತದೆ. ಹಾಗೆ ನೋಡದೆ ರೇಡ್ ಮಾಡಿದ್ದಲ್ಲಿ ಪಾಲಿಕೆಯ ಮೇಯರ್, ಕಮೀಷನರ್ ಮತ್ತು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ನ್ಯಾಯಾಲಯದಿಂದ ಬರುವ ನೋಟಿಸ್ ಗೆ ಉತ್ತರಿಸಬೇಕಾಗುತ್ತದೆ. ಅಂತಹ ಒಂದು ಪರಿಸ್ಥಿತಿ ಮಂಗಳೂರು ಮಹಾನಗರ ಪಾಲಿಕೆಗೆ ಒದಗಿದೆ.
ಮಂಗಳೂರಿನಲ್ಲಿ ಅನೇಕ ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆಗಳು ನಡೆಯುತ್ತಿವೆ, ಅವು ಪಾಲಿಕೆಯ ಸದಸ್ಯರುಗಳಿಗೆ, ಅಧಿಕಾರಿಗಳಿಗೆ ಗೊತ್ತಿಲ್ಲ ಎಂದಲ್ಲ. ಪತ್ರಿಕೆಯ, ಟಿವಿಯ ವರದಿಗಾರರಿಗೆ ತಿಳಿದೇ ಇಲ್ಲ ಎಂದಲ್ಲ. ಆದರೆ ಅಂತಹ ಎಷ್ಟು ಕಡೆ ರೇಡ್ ಆಗಿದೆ. ಶಾಲಾ ಕಾಲೇಜುಗಳ ನೂರು ಮೀಟರ್ ಅಂತರದಲ್ಲಿ ಬೀಡಿ, ಸಿಗರೇಟ್, ಗಾಂಜಾ ಮಾರಬಾರದು ಎಂದು ಕಾನೂನು ಇದೆ. ಆದರೆ ಅದು ಇಲ್ಲಿಯ ತನಕ ನಿಂತಿದೆಯಾ? ಇನ್ನು ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ನಡೆಯುತ್ತಿದೆ ಎಂದರೆ ಮೊದಲು ಅಲ್ಲಿ ಪೊಲೀಸರು ರೇಡ್ ಮಾಡಬೇಕು, ನಂತರ ಪಾಲಿಕೆ.
Leave A Reply