ಹೊರಬಂದ ಕರುಳನ್ನು ಹೊಟ್ಟೆಯೊಳಗೆ ತುಂಬಿಸುತ್ತಿದ್ದರೆ ಆತ ಕೇಳಿದ್ದ; ನನ್ನ ಹೆಂಡತಿ ಮಕ್ಕಳನ್ನು ನೋಡಬಲ್ಲೆನೇ?
			      		
			      		
			      			Posted On December 5, 2017			      		
				  	
				  	
							0
						
						
										  	 
			    	    ಕಾರ್ಗಿಲ್ ವೀರ ಕ್ಯಾಪ್ಟನ್ ನವೀನ್ ನಾಗಪ್ಪ ಹೇಳಿಕೊಂಡ ಕಥೆ!
ಕಾರ್ಗಿಲ್ ಯುದ್ಧದಲ್ಲಿ ನೂರಿಪ್ಪತ್ತು ಮಂದಿಯ ನಮ್ಮ ತಂಡ  ಪಾಯಿಂಟ್ ೪೮೭೫ ಪ್ರದೇಶವನ್ನು ವಶಪಡಿಸಿಕೊಂಡು ಭಾರತದ ಧ್ವಜ ಹಾರಿಸಿದೆ ಎಂಬ ಸುದ್ದಿ ಸಿಕ್ಕಿದಾಗ ನನ್ನನ್ನು ಹೆಲಿಕಾಫ್ಟರ್‌ನಲ್ಲಿ ದೆಹಲಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ನುಡಿಸಿರಿಯಲ್ಲಿ ನನ್ನ ಕಥೆ ನಿಮ್ಮ ಜೊತೆ ಕಾರ್‍ಯಕ್ರಮದಲ್ಲಿ ಕಾರ್ಗಿಲ್ ಯುದ್ಧದ ನೆನಪುಗಳನ್ನು ಹೇಳಿಕೊಂಡವರು ಹುಬ್ಬಳ್ಳಿಯ ಕ್ಯಾಪ್ಟನ್ ನವೀನ್ ನಾಗಪ್ಪ.
ಕಾರ್ಗಿಲ್ ವಶಪಡಿಸಿಕೊಂಡಿದ್ದ ಪಾಕಿಸ್ತಾನದ ಸೈನಿಕರು ಭಾರತದ ಸೌರಭ ನೇತೃತ್ವದ ಆರು ಮಂದಿಯನ್ನು ಹಿಡಿದು ಇಪ್ಪತ್ತೊಂದು ದಿನ ಹಿಂಸಿಸಿ ಸಾಯಿಸಿದ್ದರು. ಕಿವಿಗೆ ಕಾದ ಕಬ್ಬಿಣದ ಸರಳು ತೂರಿಸಿದ್ದರು. ಕಣ್ಣು ಕಿತ್ತಿದ್ದರು ಅಂದರೆ ಯಾವ ರೀತಿಯ ಹಿಂಸೆ ನೀಡಿದ್ದರು ಎಂದು ಕಲ್ಪಿಸಿ. ಅವರಿಗೆ ಪಾಠ ಕಲಿಸುವ ಛಲದೊಂದಿಗೆ ನಮ್ಮ ಸೈನಿಕರು ಯುದ್ಧಕ್ಕೆ ಸಿದ್ದರಾಗಿದ್ದರು.

೧೯೯೯ ಜುಲೈ ೪. ದುರ್ಗಾ ಮಾತಾಕೀ ಜೈ ಎಂಬ ಜೈಕಾರದೊಂದಿಗೆ ಪಾಕಿಗಳು ವಶಪಡಿಸಿಕೊಂಡಿದ್ದ ಪಾಯಿಂಟ್ ೪೮೭೫ನ್ನು ಗೆಲ್ಲುವುದಕ್ಕಾಗಿ ಹೊರಟಿದ್ದೆವು. ವಾಪಾಸು ಬರದಿದ್ದರೆ ಮನೆಯವರಿಗೆ ಕೊನೆಯ ಪತ್ರ ಎಂದು ಬರೆದು, ಪರ್ಸುಗಳಲ್ಲಿದ್ದ ಹೆಂಡತಿ ಮಕ್ಕಳ, ಅಪ್ಪಅಮ್ಮಂದಿರ ಪೋಟೋಗಳನ್ನು ಕೊಟ್ಟು, ಭಾರತದ ಧ್ವಜ ಹಾರಿಸುವುದಷ್ಟೇ ಅಂತಿಮ ಗುರಿ ಎಂದು ಹೊರಟ ನಾವು ಎರಡೂವರೆ ದಿನಗಳ ಕಾಲ ಊಟವನ್ನೂ ಮಾಡಿರಲಿಲ್ಲ. ಐಸ್ ತಿಂದೇ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ. ನನ್ನ ಜೊತೆಗಾರ ಶ್ಯಾಂಸಿಂಗ್ ಬಡಿಯಾ ಗುಂಡು ತಾಗಿ ಸತ್ತಿದ್ದ. ಒಬ್ಬನ ಕರುಳು ಹೊರಬಂದಿತ್ತು, ಹೊಟ್ಟೆಯೊಳಗೆ ತುಂಬಿಸುತ್ತಿದ್ದರೆ, ಆತ ಕೇಳಿದ್ದ; ನಾನು ನನ್ನ ಹೆಂಡತಿ ಮಕ್ಕಳ ಮುಖವನ್ನು ನೋಡಬಲ್ಲೆನಾ? ಮತ್ತೊಬ್ಬ ತನ್ನ ಕಾಲುಗಳೆರಡನ್ನು ಕಳೆದುಕೊಂಡು, ಕ್ಷಮಿಸಿ ನಿಮ್ಮೊಂದಿಗೆ ಗುರಿಮುಟ್ಟುವ ತನಕ ಬರಲಾಗುತ್ತಿಲ್ಲವಲ್ಲ ಎಂದು ಪರಿತಪಿಸುತ್ತಿದ್ದ. ಇನ್ನೊಬ್ಬ ನನ್ನ ತೊಡೆ ಮೇಲೆ ತಲೆ ಇಟ್ಟು ಪ್ರಾಣ ಬಿಟ್ಟಿದ್ದ. ಪಾಪಿ ಪಾಕಿಸ್ತಾನದ ಸೈನಿಕರನ್ನು ಸೆದೆ ಬಡಿಯುತ್ತ ಮೂರು ಸಂಗಡ, ಒಂದು ಬಂಕರನ್ನು ವಶಪಡಿಸಿಕೊಂಡಿದ್ದೆವು. ಆ ಹಂತದಲ್ಲಿ ಹ್ಯಾಂಡ್ ಗ್ರೇನೇಡ್ ನನ್ನ ಬಂಕರಿಗೆ ಬಿತ್ತು. ಜೀವಂತ ಗ್ರೇನೈಡ್‌ನ್ನು ಎತ್ತಿ ಬಿಸಾಡಿದೆನಾದರೂ ಅದು ಒಡೆದು ನನ್ನ ಕಾಲುಗಳು ನಿಸ್ತೇಜವಾದವು. ತೆವಳುತ್ತ ಬಂದ ನಾನು ಸೇರಿದಂತೆ ನಾಲ್ಕು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಸಂಜೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಹೆಲಿಕಾಫ್ಟರ್‌ನಲ್ಲಿ ದೆಹಲಿಗೆ ಕರೆತಂದರು. ಆವಾಗ ತಮ್ಮ ತಂಡದ ಗುರಿ ತಲುಪಿ ಗೆದ್ದು ಭಾರತದ ಬಾವುಟ ಹಾರಿಸಿದ ಸುದ್ದಿ ತಲುಪಿತು. ಆದರೆ ನಮ್ಮ ಕ್ಯಾಪ್ಟನ್ ವಿಕ್ರಮ್ ವೀರಮರಣವನ್ನಪ್ಪಿದ್ದರು.

ನಾನು ಆಸ್ಪತ್ರೆಯಲ್ಲಿ ಇಪ್ಪತ್ತೊಂದು ತಿಂಗಳು ಇದ್ದೆ. ಅದರಲ್ಲಿ ಆರು ತಿಂಗಳು ಮಲಗಿದ್ದಲ್ಲೇ. ಎಂಟು ಮೇಜರ್ ಸರ್ಜರಿಗಳಾದವು. ಇನ್ನು ನಡೆಯಲಾಗುವುದಿಲ್ಲ. ಶಾಶ್ವತ ಅಂಗವಿಕಲನೆಂದು ಸೇವೆಯಿಂದ ನಿವೃತ್ತಿ ಕೊಟ್ಟರು. ಆದರೂ ಹಠದಿಂದ ಈಗ ನಡೆಯುವ ಮಟ್ಟಕ್ಕೆ ಬಂದಿದ್ದೇನೆ. ನಾನು ಆಸ್ಪತ್ರೆಯಲ್ಲಿದ್ದಾಗ ನನ್ನನ್ನು ನೋಡಲು ನನ್ನ ಗೆಳೆಯನ ತಾಯಿ ಬಂದಿದ್ದರು. ಅವರ ಮಗನೂ ಕಾರ್ಗಿಲ್ ಯುದ್ಧದಲ್ಲಿ ಮಡಿದಿದ್ದ. ಅವರಿಗೆ ಹೇಗೆ ಸಮಾಧಾನ ಹೇಳಲಿ ಎಂದು ಪರಿತಪಿಸುತ್ತಿದ್ದೆ. ಆದರೆ ಆ ಮಹಾತಾಯಿ, ಭಾರತದ ಬಾವುಟವನ್ನು ಸುತ್ತಿಕೊಂಡು ಬಂದ ದೇಹ ಸಾರ್ಥಕ ಎಂದು ತನ್ನ ಮಗ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಹೋದರು.

ಸೈನಿಕನಾಗಿ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೇವೆ ಮಾಡಿದ ಹೆಮ್ಮೆಯ ಕಥೆ ನನ್ನೊಬ್ಬನದ್ದೇ ಅಲ್ಲ. ಈ ಯುದ್ಧದಲ್ಲಿ ಮಡಿದ ೫೨೭ ಮಂದಿಯ, ಗಾಯಗೊಂಡ ಸಾವಿರಕ್ಕೂ ಹೆಚ್ಚು ಮಂದಿಯ ಕಥೆ ನನಗಿಂತಲೂ ಭಯಾನಕವಾಗಿರಬಹುದು.
ಸೈನಿಕರು ಯಾವುದನ್ನೂ ಬೇಡುವುದಿಲ್ಲ. ಆದರೆ ನೀವು ದೇಶದ ಗಡಿ ಕಾಯುವ ಸೈನಿಕರಿಗೆ ಒಳಿತು ಮಾಡಪ್ಪ ಎಂದು ಪ್ರಾರ್ಥಿಸಿ ಎಂದು ಮಾತು ಭಾವನಾತ್ಮಕವಾಗಿ ಮುಗಿಸಿದಾಗ ಇಡೀ ಸಭೆಯೇ ಎದ್ದು ನಿಂತು ಕರತಾಡನದ ಮೂಲಕ ಭಾರತ ಮಾತಾಕೀ ಜೈ ಘೋಷಣೆಯೊಂದಿಗೆ ಗೌರವ ಸಲ್ಲಿಸಿತು.
				
				 
		    				         
								     
								    








