ಬೇರೆ ಕಡೆ ರೇಡ್ ಮಾಡುವಷ್ಟೇ ಆಸಕ್ತಿ ಅನಧಿಕೃತ ಕಟ್ಟಡಗಳನ್ನು ಕೆಡವಲು ಯಾಕೆ ಇಲ್ಲ ಮೇಯರ್!
ಸಾಮಾನ್ಯವಾಗಿ ಒಂದು ಸಿನೆಮಾ ಮಾಡುವಾಗ ಒಂದು ಅಥವಾ ಎರಡು ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡುತ್ತಾರೆ. ಕೆಲವು ಫೈಟ್ ಸೀನ್ ಶೂಟ್ ಮಾಡುವಾಗ ಎರಡಕ್ಕಿಂತ ಹೆಚ್ಚು ಕ್ಯಾಮೆರಾ ಬಳಸುವುದುಂಟು. ಆದರೆ ಮಂಗಳೂರು ಮಹಾನಗರ ಪಾಲಿಕೆಯಿಂದ ರೇಡ್ ಗೆ ಹೋಗುವಾಗ ಅನೇಕ ಕ್ಯಾಮೆರಾಗಳು, ಮೊಬೈಲ್ ಫೋನ್ ಗಳು ಮೇಯರ್ ಹಾಗೂ ಅಧಿಕಾರಿ ಸಮೂಹವನ್ನು ಹಿಂಬಾಲಿಸುತ್ತವೆ. ಯಾವ ಶಾಟ್ ಕೂಡ ಮಿಸ್ಸಾಗದ ರೀತಿಯಲ್ಲಿ ನಾಲ್ಕು ದಿಕ್ಕಿನಿಂದಲೂ ಕ್ಯಾಮೆರಾಗಳ ಚಿತ್ರೀಕರಣ ನಡೆಯುತ್ತದೆ. ಮೇಯರ್ ಕಾರಿನಿಂದ ಇಳಿದು ಒಳಗೆ ಹೋಗುವುದು, ಅಲ್ಲಿ ವೀಕ್ಷಿಸುವುದು, ಅಂಗಡಿಯ ಮ್ಯಾನೇಜರ್ ಅವರೊಂದಿಗೆ ಮಾತಿನ ಚಕಮಕಿ ಎಲ್ಲವೂ ಚಿತ್ರೀಕರಣವಾಗುತ್ತದೆ. ಒಂದು ವೇಳೆ ನಾವು ಬಂದ್ ಮಾಡುವುದಿಲ್ಲ, ನಾವು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಮೇಲೆ ರೇಡ್ ಮಾಡುವ ಯಾವ ಅಧಿಕಾರವೂ ಪಾಲಿಕೆಗೆ ಇಲ್ಲ ಎಂದು ಮಸಾಜ್ ಪಾರ್ಲರ್ ಇದರ ಮ್ಯಾನೇಜರ್ ಹೇಳಿದ್ದು ಕೂಡ ಚಿತ್ರೀಕರಣವಾಗುತ್ತದೆ. ಹೈಕೋರ್ಟ್ ಕೊಟ್ಟ ಆದೇಶದ ಪ್ರತಿಯನ್ನು ಪಾರ್ಲರ್ ನ ಮ್ಯಾನೇಜರ್ ಮೇಯರ್ ಮತ್ತು ಮಾಧ್ಯಮದ ಮುಂದೆ ಹಿಡಿಯುತ್ತಾರೆ. ನೀವು ಏನು ಮಾಡಿದ್ರು ನಾವು ಬಂದ್ ಮಾಡುವುದಿಲ್ಲ ಎಂದು ಪಾರ್ಲರ್ ನವರು ಹಟಕ್ಕೆ ಕುಳಿತ ಮೇಲೆ ಮೇಯರ್ ಅವರಿಗೆ ಪೊಲೀಸರ ನೆನಪಾಗುತ್ತದೆ. ಮೇಯರ್ ಪೊಲೀಸರಿಗೆ ತಕ್ಷಣ ಬರಲು ಸೂಚನೆ ಕೊಡುತ್ತಾರೆ. ಆದರೆ ಪೊಲೀಸರು ತಕ್ಷಣ ಬರುವುದಿಲ್ಲ. ಎಲ್ಲ ಸಿನೆಮಾಗಳಂತೆ ಪೊಲೀಸರು ನಿಧಾನವಾಗಿ ತಮ್ಮ ಸಮಯಕ್ಕೆ ಸರಿಯಾಗಿ ಕೊನೆಗೆ ಬರುತ್ತಾರೆ. ಮೇಯರ್ ಹೇಳಿದ ಹಾಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಅಂಗಡಿಯನ್ನು ಮುಚ್ಚುತ್ತಾರೆ. ಈಗ ಉದ್ಭವಿಸುವ ಪ್ರಶ್ನೆ ಇದನ್ನು ಮೊದಲೇ ಮಾಡಬಹುದಿತ್ತಲ್ಲ.
ಪಾಲಿಕೆ ಕಡೆಯಿಂದ ಒಂದು ಪತ್ರ ಬರೆದು ನಮಗೆ ಇಂತಿಂತಹ ಕಡೆಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ದೂರು ಬಂದಿದೆ. ಆದ್ದರಿಂದ ನೀವು ಅಲ್ಲಿ ರೇಡ್ ಮಾಡಿ ವಾಸ್ತವಾಂಶ ತಿಳಿಯುವ ಕೆಲಸ ಮಾಡಬೇಕು ಎಂದು ಪೊಲೀಸ್ ಕಮೀಷನರ್ ಅವರಿಗೆ ಪತ್ರ ಬರೆದಿದ್ದರೆ ಮುಗಿಯುತ್ತಿತ್ತು. ನಂತರ ಅದು ಪೊಲೀಸ್ ಇಲಾಖೆಯ ಕರ್ತವ್ಯವಾಗುತ್ತಿತ್ತು. ಆದರೆ ಮೊದಲೇ ಪೊಲೀಸರಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ಹೇಳಿದ್ದರೆ ತಾವು ಮಿಂಚೊಂದು ಯಾವಾಗ ಎಂದು ಮೇಯರ್ ಅವರಿಗೆ ಅನಿಸಿರಬಹುದು. ಯಾಕೆಂದರೆ ಪೊಲೀಸರು ಅವರ ಪಾಡಿಗೆ ಕೆಲಸ ಮಾಡಿ ಹೋಗುತ್ತಾರೆ. ಒಂದು ವೇಳೆ ಸ್ಕೀಲ್ ಗೇಮ್ ರೇಡ್ ಮಾಡಿದರೆ ಅದು ಮುಚ್ಚುತ್ತದೆ. ಆದರೆ ಎಲ್ಲಿ ಕೂಡ ಅದು ಪ್ರಚಾರವಾಗುವುದಿಲ್ಲ. ಹಾಗಂತ ಮೊದಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಪೊಲೀಸರು ಮಿಂಚಿ ತಾವು ಡಲ್ ಆಗುವ ಚಾನ್ಸ್ ಇದೆ ಎಂದು ಮೇಯರ್ ಅವರಿಗೆ ಅನಿಸಿರುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸರು ಮಾಡುವ ಕೆಲಸವನ್ನು ಮೇಯರ್ ತಮ್ಮ ಮೇಲೆ ಎಳೆದುಕೊಂಡು ರೇಡ್ ಮಾಡಿದರು. ಅದರಿಂದ ಮಂಗಳೂರಿಗೆ ಒಳ್ಳೆಯದಾಯಿತಾ?
ಮಂಗಳೂರಿಗೆ ಒಳ್ಳೆಯದಾಗುವುದು ಮುಖ್ಯವೋ ಅಥವಾ ತಮಗೆ ಪ್ರಚಾರ ಸಿಗುವುದು ಪ್ರಾಮುಖ್ಯವೋ ಎಂದು ಪಾಲಿಕೆ ಅಂದುಕೊಂಡ ಕಾರಣ ಹೈಕೋರ್ಟ್ ಪಾಲಿಕೆಯ ಕಮೀಷನರ್, ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಸೇರಿಸಿಕೊಂಡು ಮೇಯರ್ ವಿರುದ್ಧ ಸಮನ್ಸ್ ಜಾರಿ ಮಾಡಿದೆ. ಅಲ್ಲಿಗೆ ಆ ಪಾರ್ಲರ್ ನ ಮ್ಯಾನೇಜರ್ ತಮ್ಮ ಬಳಿ ಹೈಕೋರ್ಟಿನ ಆದೇಶ ಇದೆ ಎಂದು ಹೇಳಿದ್ದು ನಿಜವಾಗಿದೆ.
ನಾನು ಮೊನ್ನೆ ಮಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಾಮೂರ್ತಿ ಎಚ್ ವಿಶ್ವನಾಥ ಶೆಟ್ಟಿಯವರಿಗೆ ದೂರು ಕೊಡಲು ಮನವಿ ಬರೆಯುವಾಗ ಈ ಮೇಲಿನ ವಿಷಯ ನನ್ನ ಮನಸ್ಸಿನ ಪುಟದಲ್ಲಿ ಹೊರಳಿ ಹೋಯಿತು. ನಮ್ಮ ಮೇಯರ್ ಮತ್ತು ಪಾಲಿಕೆ ಯಾವೆಲ್ಲ ವಿಷಯಕ್ಕೆ ರೇಡ್ ಮಾಡುತ್ತಾರೆ, ತಾವು ರೇಡ್ ಮಾಡುವ ಮಳಿಗೆಯವರಿಗೆ ನ್ಯಾಯಾಲಯ ಅನುಮತಿ ಕೊಟ್ಟಿದ್ದರೂ ರೇಡ್ ಮಾಡುತ್ತಾರೆ. ಅದೇ ನ್ಯಾಯಾಲಯ ಕೆಲವು ಅನಧಿಕೃತ ಕಟ್ಟಡಗಳನ್ನು ಕೆಡವಿ ಅಂದರೆ ಡೆಮೊಲಿಶ್ ಮಾಡಿ ಎಂದು ಸೂಚನೆ ಕೊಟ್ಟರೂ ಯಾಕೆ ಮಾಡಲ್ಲ ಎಂದು ಅನಿಸಿತ್ತು. ಅದನ್ನೇ ನಾನು ಲೋಕಾಯುಕ್ತರ ಮುಂದೆ ಇಟ್ಟೆ. ಬೆಳೆಯುತ್ತಿರುವ ಮಂಗಳೂರಿಗೆ ಎರಡು ವಿಷಯಗಳು ಕಂಟಕವಾಗಿವೆ. ಒಂದು ಎಲ್ಲೆಂದರಲ್ಲಿ ಪಾರ್ಕಿಂಗ್ ಮತ್ತೊಂದು ರೋಡ್ ಜಾಮ್. ಇದಕ್ಕೆ ಎರಡಕ್ಕೂ ಕಾರಣ ಕಟ್ಟಡಗಳ ನಿರ್ಮಾಣಕಾರರು ನಿಯಮ ಮೀರಿ ಅನಧಿಕೃತವಾಗಿ ತಮ್ಮ ಕಟ್ಟಡಗಳಿಗೆ ರೆಕ್ಕೆಪುಕ್ಕ ಕಟ್ಟಿ ಅಲ್ಲಿ ಕೂಡ ಅಂಗಡಿಗಳನ್ನು ತೆರೆದಿರುವುದು. ಮಂಗಳೂರಿನ ಹೃದಯ ಭಾಗದಲ್ಲಿರುವ ಕುನೀಲ್ ಕಾಂಪ್ಲೆಕ್ಸ್, ಅಕ್ಬರ್ ಕಾಂಪ್ಲೆಕ್ಸ್, ಹೈಸ್ಟ್ರೀಟ್ ಬಿಲ್ಡಿಂಗ್ ಎಲ್ಲಾ ಇರುವುದು ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ. ಇದು ಯಾಕೆ ಮೇಯರ್ ಅವರ ಗಮನಕ್ಕೆ ಬಂದಿಲ್ಲ. ಇತ್ತೀಚಿನ ತನಕ ಇಲ್ಲಿಯೇ ಕಾಂಗ್ರೆಸ್ ಕಚೇರಿ ಇತ್ತು. ಮೇಯರ್ ಅಲ್ಲಿ ಬಂದು ಹೋಗುತ್ತಿದ್ದರು. ಹಾಗಾದರೆ ಇದು ಅವರ ಗಮನಕ್ಕೆ ಬಂದಿಲ್ವಾ? ಆ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಅದರೊಂದಿಗೆ ಇನ್ನೊಂದು ವಿಷಯ ಕುರಿತಾಗಿಯೂ ನನ್ನ ಕಳಕಳಿಯನ್ನು ವ್ಯಕ್ತಪಡಿಸಿದ್ದೇನೆ. ಅದಕ್ಕೆ ಲೋಕಾಯುಕ್ತರು ಏನು ಹೇಳಿದ್ರು? ಅವರು ಪಾಲಿಕೆಗೆ ಕೊಟ್ಟ ಸೂಚನೆ ಏನು? ಈ ಕುರಿತಾಗಿ ನಾಳೆ ಹೇಳುತ್ತೇನೆ!
Leave A Reply