ಯೋಗ ಶಿಕ್ಷಕಿಗೆ ಫತ್ವಾ ಹೊರಡಿಸಲಾಯ್ತು, ಕಲ್ಲು ತೂರಿದರು, ಈಗ ಜೀವ ಬೆದರಿಕೆ!
ರಾಂಚಿ: ಜಾರ್ಖಂಡ್ ನ ರಾಂಚಿಯಲ್ಲಿ ಯೋಗ ಕಲಿಸುತ್ತಿದ್ದ ಶಿಕ್ಷಕಿಗೆ ದಿನೇದಿನೇ ಅಭದ್ರತೆ ಕಾಡುತ್ತಿದ್ದು, ಫತ್ವಾ ಹೊರಡಿಸಿದ ಬಳಿಕ, ಅವರ ಮನೆ ಮೇಲ್ಲೆ ಕಲ್ಲು ತೂರಿ ಉದ್ಧಟತನ ಮೆರೆದ ಬಳಿಕ, ಈಗ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ.
ಹೌದು, ರಾಫಿಯಾ ನಾಜ್ ಎಂಬ ಮುಸ್ಲಿಂ ಯೋಗ ಶಿಕ್ಷಕಿಗೆ ಕಳೆದ ನವೆಂಬರ್ ನಲ್ಲಿ ಫತ್ವಾ ಹೊರಡಿಸಿದ್ದಲ್ಲದೆ, ಅವರ ಮನೆಗೆ ಕಲ್ಲು ಎಸೆದಿದ್ದರು. ಈಗ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ರಾಫಿಯಾ ರಾಂಚಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನನ್ನು ಆರೆಸ್ಸೆಸ್ ಏಜೆಂಟ್ ಎಂಬ ರೀತಿ ನೋಡುತ್ತಿದ್ದಾರೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಾಗಾಗಿ ಜಿಲ್ಲಾಡಳಿತ ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಸಹ ರಾಫಿಯಾ ಮನವಿ ಮಾಡಿದ್ದಾರೆ.
ರಾಂಚಿಯ ದೊರಾಂಡ ಪ್ರದೇಶದಲ್ಲಿ ವಾಸವಿರುವ ರಾಫಿಯಾ ನಾಜ್ ಯೋಗ ಕಲಿಸಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ತಿಂಗಳು ಇದನ್ನು ಖಂಡಿಸಿ ಮುಸ್ಲಿಂ ಮೂಲಭೂತವಾದಿ ಧರ್ಮಗುರು ಒಬ್ಬರು ಫತ್ವಾ ಹೊರಡಿಸಿದ್ದರು. ಅವರ ಮನೆ ಮೇಲೆ ಕಲ್ಲೆಸೆಯಲಾಗಿತ್ತು.
ಆದರೂ ನಾನು ಯೋಗ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಇದರಲ್ಲಿ ಯಾವ ಧಾರ್ಮಿಕ ಅಂಶಗಳೂ ಇಲ್ಲ. ಯೋಗ ಕಲಿಯುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ರಾಫಿಯಾ ತಿಳಿಸಿದ್ದರು.
Leave A Reply