7 ಮೀಟರ್ ಬೇಡದಿದ್ದರೆ 80 ಕೋಟಿ ಯಾಕೆ ಖರ್ಚು ಮಾಡಿದ್ದಿರಿ!
ನೀವು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೆ ದಿನಕ್ಕೆ ಕನಿಷ್ಟ ಎಂಟು ಗಂಟೆಯಿಂದ ಹಿಡಿದು ಹತ್ತು ಗಂಟೆಯ ತನಕ ಸಮರ್ಪಕವಾಗಿ ಸಂಸ್ಥೆಯ ಏಳಿಗೆಗೆ ನಿಮ್ಮನ್ನು ದುಡಿಸಲಾಗುತ್ತದೆ. ಅದೇ ನೀವು ಸರಕಾರಿ ಉದ್ಯೋಗಿಯಾಗಿದ್ದರೆ ಕನಿಷ್ಟ ಎಂಟು ಗಂಟೆ ದುಡಿಯಲೇಬೇಕಾದರೂ ಹೆಚ್ಚಿನವರು ಸರಿಯಾಗಿ ನಾಲ್ಕೈದು ಗಂಟೆ ದುಡಿದರೆ ಅದೇ ಆಶ್ಚರ್ಯ. ಏಕೆಂದರೆ ಹೇಳುವವರಿಲ್ಲ, ಕೇಳುವವರಿಲ್ಲ. ಅದೇ ವಿಷಯವನ್ನು ಸರಕಾರ ಕಟ್ಟಿರುವ ಅಣೆಕಟ್ಟಿಗೆ ಕೂಡ ಹೋಲಿಸಬಹುದು. ಅದು ಹೇಗೆ?
ಮಂಗಳೂರಿನವರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ನೇತ್ರಾವತಿ ನದಿಗೆ ತುಂಬೆಯಲ್ಲಿ ಅಣೆಕಟ್ಟು ಕಟ್ಟಲಾಗಿತ್ತು. ಅದನ್ನು ತುಂಬೆ ಅಣೆಕಟ್ಟು ಎಂದು ಕರೆಯುತ್ತಾರೆ. ಆದರೆ ಕಾಲಕ್ರಮೇಣ ಮಂಗಳೂರಿಗೆ ಹೆಚ್ಚುವರಿ ನೀರು ಬೇಕಾಗುವ ಪರಿಸ್ಥಿತಿ ಬಂದ ಕಾರಣ ಅಲ್ಲಿ ಹೊಸ ವೆಂಟೆಂಡ್ ಡ್ಯಾಂ ನಿರ್ಮಿಸುವ ಪ್ರಸ್ತಾಪ ರಾಜ್ಯ ಸರಕಾರದ ಮುಂದೆ ಬಂತು. ಆ ಪ್ರಕಾರವಾಗಿ 2007 ರಲ್ಲಿ ಹೊಸ ವೆಂಟೆಂಡ್ ಕಟ್ಟಲು ಆಡಳಿತಾತ್ಮಕ ಅನುಮತಿ ಸಿಕ್ಕಿತು. 2008 ರಲ್ಲಿ ತಾಂತ್ರಿಕ ಅನುಮತಿ ಸಿಕ್ಕಿದ ಬಳಿಕ ಕೆಲಸ ಪ್ರಾರಂಭವಾಯಿತು. ಆಗ ಆ ಹೊಸ ವೆಂಟೆಂಡ್ ಡ್ಯಾಂಗೆ ಇದ್ದ ಬಜೆಟ್ 40 ಕೋಟಿ. ವೆಂಟೆಂಡ್ ಡ್ಯಾಂ ಸಂಪೂರ್ಣ ಕಟ್ಟಿ ಮುಗಿದಾಗ ಆದ ಒಟ್ಟು ಖರ್ಚು ಸುಮಾರು 80 ಕೋಟಿ. ಹೊಸ ವೆಂಟೆಂಡ್ ಡ್ಯಾಂನಲ್ಲಿ ಏಳು ಮೀಟರ್ ನಷ್ಟು ನೀರು ಆರಾಮವಾಗಿ ನಿಲ್ಲಿಸಬಹುದು. ಅಷ್ಟು ನೀರು ನಿಲ್ಲಿಸಿದರೆ ಮಂಗಳೂರಿನ ಜನ ಬರುವ ಬೇಸಿಗೆಯಲ್ಲಿ ಯಾವುದೇ ಟೆನ್ಷನ್ ಇಲ್ಲದೆ ಇರಬಹುದು. ಆದರೆ ಮಂಗಳೂರು ಮಹಾನಗರ ಪಾಲಿಕೆ ಅಷ್ಟು ನೀರು ನಿಲ್ಲಿಸುತ್ತಿಲ್ಲ. ಇವರು ನೀರು ನಿಲ್ಲಿಸುವುದು ಹೆಚ್ಚೆಂದರೆ ಐದು ಮೀಟರ್ ಮಾತ್ರ. ಯಾಕೆ ಗೊತ್ತಾ?
ಕೇವಲ ಐದು ಮೀಟರ್ ನೀರು ನಿಲ್ಲಿಸಿದರೆ ಅಕ್ಕಪಕ್ಕದ ಸುಮಾರು ಮೂವತ್ತು ಎಕರೆ ಅರ್ವತ್ತೆರಡು ಸೆಂಟ್ಸ್ ಜಾಗ ನೀರಿನಲ್ಲಿ ಮುಳುಗಡೆಯಾಗುತ್ತದೆ. ಅದರಲ್ಲಿ ಹನ್ನೆರಡು ಏಕರೆ ಜಾಗ ಮಾತ್ರ ಸರಕಾರದ ಕಂದಾಯ ಭೂಮಿ. ಉಳಿದ ಹದಿನೆಂಟು ಏಕರೆಗಿಂತಲೂ ಹೆಚ್ಚು ಜಾಗ ಖಾಸಗಿಯವರದ್ದು ಎಂದರೆ ಕೃಷಿಕರದ್ದು. ಈಗ ಏಳು ಮೀಟರ್ ನೀರು ನಿಲ್ಲಿಸಿದರೆ ಏನು ಆಗುತ್ತದೆ. ಇನ್ನು ಹೆಚ್ಚಿನ ಭೂಮಿ ನೀರಿನಲ್ಲಿ ಮುಳುಗಡೆಯಾಗುತ್ತದೆ. ಮುಳುಗಡೆಯಾಗುವ ಭೂಮಿಯನ್ನು ಕಾನೂನು ಪ್ರಕಾರ ಸರಕಾರ ಕೃಷಿಕರಿಗೆ ಹಣ ಕೊಟ್ಟು ಸ್ವಾಧೀನಪಡಿಸಿಕೊಳ್ಳಬೇಕು ಅರ್ಥಾಥ್ ಖರೀದಿಸಬೇಕು. ಆದರೆ ಮಂಗಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರಿನ ಅಗತ್ಯ ಬಿದ್ದಾಗ ಮಾತ್ರ ತುಂಬೆಯ ನೆನಪಾಗುತ್ತದೆ. ಆದ್ದರಿಂದ ತುಂಬೆಯಲ್ಲಿ ಮುಳುಗಡೆಯಾಗಿರುವ ಭೂಮಿಯ ಮಾಲೀಕರ ನೆನಪು ಇವರಿಗೆ ಆಗುತ್ತಿಲ್ಲ. ಇವರು ಮುಳುಗಡೆಯಾಗುವ ಭೂಮಿಯನ್ನು ಸ್ವಾಧೀನಪಡಿಸದೇ ಇದ್ದ ಕಾರಣ ಏಳು ಮೀಟರ್ ನೀರು ನಿಲ್ಲಿಸುತ್ತಿಲ್ಲ. ಇದರಿಂದ ಯಾವ ಉದ್ದೇಶಕ್ಕೆ ಹೊಸ ಡ್ಯಾಂ ಕಟ್ಟಲ್ಪಟ್ಟಿತ್ತೋ ಅದರ ಉದ್ದೇಶ ಈಡೇರುತ್ತಿಲ್ಲ. ಇದು ಯಾವಾಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂತೋ ಅವರು ಸೀದಾ ಪಾಲಿಕೆಯ ಕಮೀಷನರ್ ಅವರನ್ನು ಕರೆಸಿ ಲೆಫ್ಟ್, ರೈಟ್ ಮಾಡಿದ್ದಾರೆ.
ನಿಮಗೆ ಕುಡಿಯುವುದಕ್ಕೆ ಸೇರಿ ಪ್ರತಿಯೊಂದಕ್ಕೂ ತುಂಬೆಯಿಂದ ನೀರು ಬೇಕು. ಅದೇ ಅಲ್ಲಿ ಹೊಸ ವೆಂಟೆಂಡ್ ಡ್ಯಾಂ ಕಟ್ಟಿದರೆ ಮುಳುಗಡೆಯಾಗುತ್ತಿರುವ ಪ್ರದೇಶದ ಕೃಷಿಕರಿಗೆ ಪರಿಹಾರ ಕೊಡುವ ವಿಷಯ ಬಂದಾಗ ನಿಮಗೆ ತುಂಬೆ ವೆಂಟೆಂಡ್ ಡ್ಯಾಂ ಮರೆತುಹೋಗುತ್ತದೆ ಎಂದು ಝಾಡಿಸಿದ್ದಾರೆ. ಇನ್ನು ಬರುವ ದಿನಗಳಲ್ಲಿ ನೀರಿನ ಅಗತ್ಯ ಜಾಸ್ತಿ ಇರುತ್ತದೆ. ಉಷ್ಣಾಂಶ ಕೂಡ ದಿನೇದಿನೇ ಹೆಚ್ಚಾಗುತ್ತಿರುವುದರಿಂದ ನೀರು ಆವಿಯಾಗಿ ಹೋಗುವ ಪ್ರಮಾಣ ಕೂಡ ಹೆಚ್ಚಿದೆ. ಕೈಯಲ್ಲಿ ಏಳು ಮೀಟರ್ ಎತ್ತರ ನೀರು ನಿಲ್ಲಿಸುವಷ್ಟು ಸಾಮರ್ಥ್ಯ ಇರುವ ಡ್ಯಾಂ ಇದ್ದರೂ ಕೇವಲ ಐದು ಮೀಟರ್ ನಿಲ್ಲಿಸುತ್ತಿರುವ ಪಾಲಿಕೆಯ ಕ್ರಮದಿಂದಾಗಿ ಹೊಸ ವೆಂಟೆಂಡ್ ಡ್ಯಾಂ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ.
ಅಷ್ಟಕ್ಕೂ ಮನಪಾ ಮಾಡಬೇಕಾಗಿರುವುದು ಏನು? ಯಾರದ್ದೆಲ್ಲ ಭೂಮಿ ಮುಳುಗಡೆಯಾಗುತ್ತಿದೆಯೋ ಅವರಿಂದ ಸೇಲ್ ಡೀಡ್ ಮಾಡಿ ಭೂಮಿಯನ್ನು ಖರೀದಿಸಬೇಕು. ಹಾಗೆ ಮಾಡಬೇಕಾದಿದ್ದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ರೈತರು, ನಾಗರಿಕರು ಸಬ್ ರಿಜಿಸ್ಟಾರ್ ಕಚೇರಿಗೆ ಹೋಗಿ ದಾಖಲೆಗಳನ್ನು ರಿಜಿಸ್ಟ್ರಡ್ ಮಾಡಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಪಾಲಿಕೆ ದಾಖಲೆಗಳನ್ನು ಸಿದ್ಧಪಡಿಸಿ ರೈತರಿಂದ, ನಾಗರಿಕರಿಂದ ಭೂಮಿಯನ್ನು ಖರೀದಿಸುವ ಕೆಲಸದ ಪ್ರಕ್ರಿಯೆಯಲ್ಲಿ ತನ್ನ ಪಾಲಿನ ದಾಖಲೆಗಳನ್ನು ತಯಾರಿಸಿ ಇಟ್ಟುಕೊಳ್ಳಬೇಕು. ಆದರೆ ಪಾಲಿಕೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮಲಗಿರುವುದರಿಂದ ಯಾವುದೇ ಕೊಡುಕೊಳ್ಳುವಿಕೆಯ ಪ್ರಕ್ರಿಯೆಗಳು ನಡೆಯುತ್ತಿಲ್ಲ.
ರೈತರಿಗೆ ಈಗಲೇ ಸೂಕ್ತ ಹಣ ಕೊಟ್ಟು ಭೂಮಿಯನ್ನು ಖರೀದಿಸಿದರೆ ಬರುವ ದಿನಗಳಲ್ಲಿ ಏಳು ಮೀಟರ್ ನೀರು ನಿಲ್ಲಿಸಬಹುದು. ಆದರೆ ಪಾಲಿಕೆ ಹಾಗೆ ಮಾಡುತ್ತಿಲ್ಲ. ಒಮ್ಮೆ ನೀರು ಹರಿದು ಹೋದರೆ ಕಮೀಷನರ್ ಆಗಲಿ, ಮೇಯರ್ ಆಗಲಿ, ಪಾಲಿಕೆಯ ಸದಸ್ಯರಾಗಲಿ ಅದನ್ನು ಬಕೇಟಿನಲ್ಲಿ ತುಂಬಿ ಮತ್ತೆ ಡ್ಯಾಂ ಒಳಗೆ ಹಾಕಲು ಆಗುವುದಿಲ್ಲ. ಹೋದದ್ದು ಮತ್ತೆ ತಿರುಗಿ ರಿವರ್ಸ್ ಆಂಗಲ್ ನಲ್ಲಿ ಹರಿಯುವುದಿಲ್ಲ. ಅಷ್ಟೇ ಅಲ್ಲದೇ ಹೊಸ ವೆಂಟೆಂಡ್ ಡ್ಯಾಂ ಬೇಕು ಎಂದು ಇವರು ಕಟ್ಟಿಸಿದ್ದು 80 ಕೋಟಿ ಖರ್ಚು ಮಾಡಿ. ಅದು ಜನರ ತೆರಿಗೆಯ ಹಣ. ಈಗ ಅದನ್ನು ಸರಿಯಾಗಿ ಉಪಯೋಗಿಸದಿದ್ದರೆ ಅದು ಕೂಡ ಲಾಸೇ. ಒಂದು ಕಡೆಯಲ್ಲಿ ರೈತರ ಕಣ್ಣಲ್ಲಿ ನೀರು ಮತ್ತೊಂದೆಡೆ ಜನರ ತೆರಿಗೆಯ ಹಣವನ್ನು ಪೋಲು ಮಾಡುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯನ್ನು ಬಡಿದೆಬ್ಬಿಸುವವರು ಯಾರು?
Leave A Reply