ಆಧಾರ್ ಕಾರ್ಡ್ ಮಾಡಿಸಲು ವೃದ್ಧರ ಮನೆ ಬಾಗಿಲಿಗೆ ಹೋದರೆ ಅದರಲ್ಲಿಯೂ ರಾಜಕೀಯ ಹುಡುಕುವ ಕಾಂಗ್ರೆಸ್ಸಿಗರು!
ಆಧಾರ್ ಕಾರ್ಡ್ ಈಗ ಎಲ್ಲದಕ್ಕೂ ಕಡ್ಡಾಯವಾಗಿದೆ. ಎಲ್ಲಿಯ ತನಕ ಅಂದರೆ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಓದಿದ ಹಾಗೆ ಸ್ಮಶಾನದಲ್ಲಿ ಹೆಣ ಸುಡುವುದಕ್ಕೂ ಆ ವ್ಯಕ್ತಿಯ ಆಧಾರ್ ಕಾರ್ಡ್ ಕೇಳಲಾಗುತ್ತದೆ ಎನ್ನುವ ಮಾತಿದೆ. ಆದರೆ ವಿಷಯ ಇರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತದ ಹತ್ತಿರ ಇರುವ ಮಾಹಿತಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 85 ಸಾವಿರ ಜನರ ಬಳಿ ಆಧಾರ್ ಕಾರ್ಡ್ ಇಲ್ಲವೇ ಇಲ್ಲ. ನಾವು ಸಮಾಜ ಸೇವಾ ಸಂಘಟನೆಯಾಗಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾಗ ನಮ್ಮನ್ನು ಭೇಟಿಯಾಗುತ್ತಿದ್ದ ಹಿತೈಷಿಗಳು, ಫಲಾನುಭವಿಗಳು ಈ ಆಧಾರ್ ಕಾರ್ಡ್ ನ ಸಮಸ್ಯೆ ಬಗ್ಗೆ ಹೇಳುತ್ತಲೇ ಇದ್ದರು. ಮಂಗಳೂರಿನಲ್ಲಿ ಸರಕಾರ ನಡೆಸುವ ನಾಲ್ಕು ಆಧಾರ್ ಕಾರ್ಡ್ ಸೆಂಟರ್ ಇದ್ದರೂ ಅಲ್ಲಿ ತಲಾ ಒಂದೊಂದು ಕಡೆಯಲ್ಲಿ ಮೂವತ್ತು ಜನರ ಆಧಾರ್ ಕಾರ್ಡ್ ದಿನವೊಂದಕ್ಕೆ ಆದರೆ ಅದೇ ದೊಡ್ಡದು. ಹಾಗಿರುವಾಗ 85 ಸಾವಿರ ಜನರದ್ದು ಆಧಾರ್ ಕಾರ್ಡ್ ಯಾವಾಗ ಆಗುವುದು ಹೇಳಿ.
ಅದರೊಂದಿಗೆ ಅನೇಕರದ್ದು ತಿದ್ದುಪಡಿ ಸಮಸ್ಯೆ. ಆ ತಪ್ಪಿದೆ, ಈ ತಪ್ಪಿದೆ, ಆದ್ದರಿಂದ ಆಧಾರ್ ಕಾರ್ಡ್ ಇದ್ದೂ ಇಲ್ಲದಂತಹ ಪರಿಸ್ಥಿತಿ. ಆದ್ದರಿಂದ ಎಲ್ಲದಕ್ಕೂ ಸರಕಾರದ ವ್ಯವಸ್ಥೆಯನ್ನೇ ನಂಬಿ ಕೂತರೆ ಆಗುವುದಿಲ್ಲ ಎಂದು ನಮಗೆ ಅನಿಸಿತು. ಒಂದು ಜವಾಬ್ದಾರಿಯುತ ಸೇವಾ ಸಂಘಟನೆಯಾಗಿ ಇದರಲ್ಲಿ ನಾವು ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆವು. ಆ ಮೂಲಕ ಕಳೆದ ತಿಂಗಳು ಮಂಗಳೂರಿನ ಭಗವತಿ ರಸ್ತೆಯಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ನವೆಂಬರ್ 17, 18, 19 ರಂದು ಮೂರು ದಿನಗಳ ಬೃಹತ್ ಆಧಾರ್ ಮೇಳ ಆಯೋಜಿಸಿದೆವು. ಇನ್ನು ಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದ ಕಾರಣ ನೂಕುನುಗ್ಗಲು ಆಗುವುದನ್ನು ತಪ್ಪಿಸುವುದಕ್ಕಾಗಿ ಅಡ್ವಾನ್ ಆಗಿ ಅದರ ಹಿಂದಿನ ನಾಲ್ಕು ದಿನ ಟೋಕನ್ ಕೊಡುವ ಕೆಲಸ ಕೂಡ ಮಾಡಿದೆವು. ಆ ಮೂಲಕ ವ್ಯವಸ್ಥಿತವಾಗಿ ಮೂರು ಸಾವಿರಕ್ಕೂ ಮಿಕ್ಕಿದ ನಾಗರಿಕರಿಗೆ ಆಧಾರ್ ಕಾರ್ಡ್ ನ ಬಗ್ಗೆ ಇದ್ದ ದೊಡ್ಡ ಟೆನ್ಷನ್ ನಿವಾರಣೆ ಆದಂತಾಯಿತು. ಆ ಮೂರು ದಿನ ಆಧಾರ್ ಮೇಳಕ್ಕೆ ಬಂದ ಹಲವಾರು ನಾಗರಿಕರು ನಮ್ಮಲ್ಲಿ ಒಂದು ಕೋರಿಕೆಯೊಂದನ್ನು ಇಟ್ಟಿದ್ದರು. ಅದೇನೆಂದರೆ ” ನಾವೇನೋ ಇಲ್ಲಿ ಬಂದು ಟೋಕನ್ ತೆಗೆದುಕೊಂಡು ನಂತರ ಆಧಾರ್ ಮಾಡಿಸಿಕೊಂಡಿದ್ದೇವೆ. ಅದಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್. ಆದರೆ ನಮ್ಮ ಮನೆಯಲ್ಲಿ ನನ್ನ 80 ವಯಸ್ಸಿನ ತಾಯಿ ಇದ್ದಾರೆ. ಅವರಿಗೆ ಆಧಾರ್ ಕಾರ್ಡ್ ಮಾಡಿಸಲು ಇಲ್ಲಿ ತನಕ ಬರಲು ಸಾಧ್ಯವೇ ಇಲ್ಲ. ಅವರಿಗೆ ನಡೆಯುವುದೇ ಕಷ್ಟ. ನೀವೆ ಬಂದು ಅವರಿಗೆ ಆಧಾರ್ ಕಾರ್ಡ್ ಮಾಡಿಸಿದರೆ ಅದಕ್ಕಿಂತ ದೊಡ್ಡ ಉಪಕಾರ ಬೇರೆ ಇಲ್ಲ” ಕೆಲವರು ತಮ್ಮ ವಯೋವೃದ್ಧ ತಾಯಿಗೋಸ್ಕರ, ಕೆಲವರು ತಂದೆಗಾಗಿ ಹೀಗೆ ಅಲ್ಲಿ ಬರಲು ಸಾಧ್ಯವಾಗದಷ್ಟು ವಯಸ್ಸಿನ ಕಾರಣ ಅಥವಾ ಅನಾರೋಗ್ಯದ ತೊಂದರೆಯಿಂದ ಬರಲು ಆಗದವರು “ಒಂದು ಸಲ ನಮ್ಮ ಮನೆಗೆ ಬಂದು ಮಾಡಿಸಿದರೆ ನಮ್ಮ ತಾಯಿಗೆ ಖುಷಿಯಾಗುತ್ತೆ, ತಂದೆಗೆ ಖುಷಿಯಾಗುತ್ತೆ” ಹೀಗೆ ಹೇಳಿದಾಗ ಇಷ್ಟು ಮಾಡಿರುವ ನಮಗೆ ಅದು ಕೂಡ ಮಾಡೋಣ, ಸಮಾಜಸೇವೆಯ ಮತ್ತೊಂದು ಮಜಲನ್ನು ಈಡೇರಿಸುವುದು ಕೂಡ ಅಗತ್ಯ ಎಂದು ಅನಿಸಿತು. ನಾವು ಯಾರ ಮನೆಯಲ್ಲಿ ಅಂತಹ ಹಿರಿಯ ಜೀವಗಳು ಆಧಾರ್ ಕಾರ್ಡ್ ಆಗದೇ ಪರಿತಪಿಸುತ್ತಿವೆ ಎಂದು ನೋಡಿ ಅಂತವರ ಹೆಸರು, ಫೋನ್ ನಂಬ್ರ, ವಿಳಾಸ ಪಡೆದು ಬರೆದಿಟ್ಟುಕೊಂಡೆವು. ಅದರಂತೆ ತಾಂತ್ರಿಕ ಸಿಬ್ಬಂದಿಯೊಂದಿಗೆ ಸೇವಾಂಜಲಿಯ ಅಧ್ಯಕ್ಷರಾದ ಡಿ.ವೇದವ್ಯಾಸ ಕಾಮತ್ , ಸ್ಥಳೀಯ ಸಹೃದಯಿಗಳ ಸಹಕಾರದಿಂದ ನಿರ್ಧರಿಸಿದ ದಿನಗಳಂದು ಅಂತವರ ಮನೆಗೆ ಹೋಗಿ ಆಧಾರ್ ಕಾರ್ಡ್ ಮಾಡಿಸುವ ಕೆಲಸ ಮಾಡಿದ್ದಾರೆ. ಒಂದಿಷ್ಟು ಹಿರಿಯ ಜೀವಗಳು ಖುಷಿಗೊಂಡಿವೆ.
ಆದರೆ ನಿನ್ನೆ ಕಾಂಗ್ರೆಸ್ಸಿನ ಜಿಲ್ಲಾ ವಕ್ತಾರ, ಮನಪಾ ಸದಸ್ಯರಾದ ಎಸಿ ವಿನಯರಾಜ್ ಅವರು ಸುದ್ದಿಗೋಷ್ಟಿ ಮಾಡಿ ಇದರ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ನಾನು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಏನೆಂದರೆ ಇದರಲ್ಲಿ ರಾಜಕೀಯ ಬೆರೆಸಲೇಬಾರದು. ನಾವು ಮಾಡಿದ ಆಧಾರ್ ಮೇಳದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರಾದಿಯಾಗಿ ಎಲ್ಲರೂ ಭಾಗವಹಿಸಿ ಅದರ ಸೌಲಭ್ಯ ಪಡೆದುಕೊಂಡಿದ್ದಾರೆ. ಅದರೊಂದಿಗೆ ನಮ್ಮ ಆಧಾರ್ ಮೇಳದಲ್ಲಿ ಮೂಲ್ಕಿ, ಕಿನ್ನಿಗೋಳಿ, ತಲಪಾಡಿ, ಉಳ್ಳಾಲ ಹೀಗೆ ವಿವಿಧ ಪ್ರದೇಶದ ನಾಗರಿಕರು ಭಾಗವಹಿಸಿದ್ದರು, ನಾವು ಯಾರಿಗೂ ಅವರ ಊರು, ಜಾತಿ ನೋಡಿ ಆಗುವುದಿಲ್ಲ ಎಂದಿಲ್ಲ. ಇನ್ನೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಅವರು ಇವತ್ತು ನಿನ್ನೆ ಸೇವಾಂಜಲಿಯ ಅಧ್ಯಕ್ಷರಾಗಿರುವುದಲ್ಲ. ಅವರು ಕಳೆದ 18 ವರ್ಷಗಳಿಂದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕ ಕಾರ್ಯಕ್ರಮ ಮಾಡಿ ಅಸಂಖ್ಯಾತ ಜನರಿಗೆ ವಿವಿಧ ರೂಪದಲ್ಲಿ ಸಹಾಯ ಮಾಡಿದ್ದಾರೆ. ಅವರು ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ಅಧ್ಯಕ್ಷರಾಗಿ ನೇಮಕವಾಗಿರುವುದು ಇತ್ತೀಚೆಗೆ ಒಂದೂವರೆ ವರ್ಷಗಳ ಹಿಂದೆ. ಅವರು ಬಿಜೆಪಿ ನಗರ ಅಧ್ಯಕ್ಷರಾಗಿದ್ದ ಮಾತ್ರಕ್ಕೆ ಕೇವಲ ತನ್ನ ಕ್ಷೇತ್ರದ ಜನರಿಗೆ ಮಾತ್ರ ಸಹಾಯ ಮಾಡುವುದಾದರೆ ಅಧಾರ್ ಕಾರ್ಡ್ ಮೇಳವನ್ನೇ ಮಾಡಬೇಕಾಗಿರಲಿಲ್ಲ.
ಯಾಕೆಂದರೆ ನಾವು ಮಾಡಿದ ಆಧಾರ್ ಮೇಳದಲ್ಲಿ ಮಂಗಳೂರು ದಕ್ಷಿಣಕ್ಕಿಂತ ಹೊರಗಿನ ಹೆಚ್ಚು ಜನರು ಇದರಲ್ಲಿ ಪ್ರಯೋಜನ ಪಡೆದಿದ್ದಾರೆ. ಆ ಪ್ರದೇಶಗಳ ಜನಪ್ರತಿನಿಧಿಗಳು ಮಾಡಬೇಕಾಗಿದ್ದ ಕೆಲಸವನ್ನು ಅವರು ಮಾಡದೇ ಇದ್ದದ್ದಕ್ಕೆ ನಾವು ಮಾಡಬೇಕಾದ ಅನಿವಾರ್ಯತೆ ಬಂತು. ಒಂದು ವೇಳೆ ಇದರಲ್ಲಿ ರಾಜಕೀಯ ಲಾಭವೇ ಪಡೆಯಬೇಕು ಎಂದು ಅವರು ಹೊರಟಿದ್ದರೆ ಬಿಜೆಪಿಯ ಬ್ಯಾನರ್ ಕೆಳಗೆ ಇದನ್ನು ಮಾಡಬಹುದಿತ್ತು. ಹಿಂದೆ ಕೂಡ ಜೆಆರ್ ಲೋಬೋ, ಐವನ್ ಡಿಸೋಜಾ, ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಬ್ಯಾನರ್ ಅಡಿಯಲ್ಲಿ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟು ದೊಡ್ಡ ಮೇಳ ಮಾಡಲು ಬೇಕಾಗುವ ಆರ್ಥಿಕ ಸಂಪನ್ಮೂಲ ಚಿಕ್ಕದಲ್ಲ. ಲಕ್ಷಗಟ್ಟಲೆ ವ್ಯಯಿಸಿ, ಜನರಿಂದ ಒಂದೇ ಒಂದು ರೂಪಾಯಿ ಸ್ವೀಕರಿಸದೆ ಜನರು ಭವಿಷ್ಯದಲ್ಲಿ ಯಾವತ್ತೂ ಅಗತ್ಯ ಎಂದು ಅಂದುಕೊಂಡಿರುವ ಕೆಲಸ ಮಾಡಬೇಕಾದರೆ ಅದಕ್ಕೆ ದೊಡ್ಡ ಮನಸ್ಸು ಬೇಕು. ಒಂದು ರಾಜ್ಯ ಸರಕಾರದ ಲೆವೆಲ್ಲಿಗೆ ಸರಿಸಮನಾಗಿ ಆಧಾರ್ ಮೇಳ ಮಾಡಿದ್ದಕ್ಕೆ ಶಹಭಾಷ್ ಎನ್ನುವ ಬದಲು ಅದರಲ್ಲಿಯೂ ರಾಜಕೀಯ ಹುಡುಕುವ ಎಸಿ ವಿನಯರಾಜ್ ಅವರಿಗೆ ಮನೆಯ ಮಂಚದಲ್ಲಿ ಮಲಗಿ ಏಳಲಾಗದೇ, ನಡೆಯಲಾಗದೆ ಯಾರಾದರೂ ತನ್ನ ಆಧಾರ್ ಕಾರ್ಡ್ ಇಲ್ಲಿಯೇ ಬಂದು ಮಾಡಿಸಲಿ ಎಂದು ಆಶಿಸುವ ವೃದ್ಧರ ಮನಸ್ಸು ಹೇಗೆ ತಾನೇ ಅರ್ಥವಾದಿತು.
Leave A Reply