ಗಂಡನ ಕನಸಿನ ಎತ್ತರವನ್ನು ಹಾಗೆ ಧರಾಶಾಯಿಯಾಗಲು ಬಿಡುವುದಿಲ್ಲ ಎಂದು ನಿರ್ಧರಿಸಿದಳು “ನಂದಿನಿ”
ಮಂಗಳೂರಿನ ಮೀನುಪ್ರಿಯರಿಗೆ ಗಿರಿಮಂಜಾಸ್ ಎನ್ನುವ ಹೆಸರು ಗೊತ್ತಿರದೇ ಇರಲು ಸಾಧ್ಯವೇ ಇಲ್ಲ. ಅಲ್ಲಿನ ತವಾ ಮಸಾಲ ಒಮ್ಮೆ ತಿಂದರೆ ಅದು ನೆನಪಾದಾಗಲೆಲ್ಲ ಬಾಯಲ್ಲಿ ನೀರೂರುತ್ತದೆ. ಮನೆಗೆ ನೆಂಟರು, ಗೆಳೆಯರು ಬಂದು ಮೀನಿನೂಟ ಎಲ್ಲಿ ಒಳ್ಳೆಯದು ಸಿಗುತ್ತೆ ಎಂದು ಕೇಳಿದರೆ ಅವರ ವಾಕ್ಯ ಮುಗಿಯುವ ಮೊದಲೇ ನೀವು ಗಿರಿಮಂಜಾಸ್ ಎಂದು ಹೇಳಿಯಾಗಿರುತ್ತದೆ. ಮೀನಿನ ಊಟ, ಫ್ರೈ, ಪದಾರ್ಥಕ್ಕೆ ಇನ್ನೊಂದು ಹೆಸರೇ ಗಿರಿಮಂಜ. ರಥಬೀದಿಯಿಂದ ಮುಂದೆ ಕಾಳಿಕಾಂಬ ದೇವಸ್ಥಾನದ ಹತ್ತಿರದಲ್ಲಿರುವ ಅಪ್ಪಟ ಸಾಂಪ್ರದಾಯಿಕ ಮನೆಯಲ್ಲಿ ಕುಳಿತು ಹಬೆಯಾಡುತ್ತಿರುವ ಮೀನನ್ನು ಬಾಯಲ್ಲಿ ಇಟ್ಟು ಕಣ್ಣುಮುಚ್ಚಿದರೆ ಸ್ವರ್ಗಕ್ಕೆ ಮೂರೇ ಗೇಣು. ಮಂಗಳೂರಿಗೆ ಮೀನಿನ ಖಾದ್ಯಗಳ ಅಪ್ಪಟ ರುಚಿಯನ್ನು ಈ ಹೋಟೆಲಿನ ಸಂಸ್ಥಾಪಕರಾದ ಗಿರಿಧರ್ ಪೈಯವರು ಪರಿಚಯಿಸಿ ಮೂವತ್ತೈದು ವರ್ಷಗಳೇ ಕಳೆದಿವೆ.
ಪ್ರಾರಂಭದಲ್ಲಿ ಮಣ್ಣಗುಡ್ಡೆಯ ಬಾಲಭವನದ ಮುಂದೆ ಪುಟ್ಟ ಮನೆಯಂತಿದ್ದ ಹೋಟೇಲಿನಲ್ಲಿ ಗಿರಿಧರ್ ಪೈಗಳು ಗ್ರಾಹಕರ ಮನ ತಣಿಯುವಂತಿದ್ದ ವೈವಿಧ್ಯಮಯ ಮೀನಿನ ಖಾದ್ಯಗಳನ್ನು ತಯಾರಿಸಿ ಬಡಿಸುತ್ತಿದ್ದರು. ಆಗ ಅವರ ಮಗ ಮಂಜುನಾಥ್ ಪೈ ಅವರಿಗೆ ತುಂಬಾ ಚಿಕ್ಕ ವಯಸ್ಸು. ಮಣ್ಣಗುಡ್ಡೆಯ ಆ ಪುಟ್ಟ ಹೋಟೆಲ್ ಕೆಲಸಮಯದಲ್ಲಿಯೇ ಕಾಳಿಕಾಂಬಾ ದೇವಸ್ಥಾನದ ಹತ್ತಿರದ ಅಂತಹುದೇ ಸಾಂಪ್ರದಾಯಿಕ ಶೈಲಿಯ ಮನೆಯಂತಹ ಜಾಗಕ್ಕೆ ಶಿಫ್ಟ್ ಆಯಿತು. ಆಗ ಗಿರಿಧರ್ ಪೈ ತಮ್ಮ ಮಗನನ್ನು ಕೂಡ ಹೋಟೇಲಿಗೆ ಕರೆದುಕೊಂಡು ಬರುತ್ತಿದ್ದರು. ತಂದೆಯ ನಿಧನದ ಬಳಿಕ ಮಂಜುನಾಥ್ ಪೈ ಎನ್ನುವ ಗೆಳೆಯರ ಪಾಲಿನ ಮಂಜನ ಹೆಗಲ ಮೇಲೆ ಆ ಹೋಟೇಲನ್ನು ಸ್ವತಂತ್ರವಾಗಿ ನಡೆಸುವ ಅನಿವಾರ್ಯತೆ ಬಂತು. ಮಂಜು ಆ ಸವಾಲನ್ನು ಸಮರ್ಥವಾಗಿ ಸ್ವೀಕರಿಸಿದರು. ಯಾವುದೇ ಕಾರಣಕ್ಕೂ ರುಚಿ, ಶುಚಿಯಲ್ಲಿ ಕಾಂಪ್ರೋಮೈಸ್ ಮಾಡದೆ ಅದರೊಂದಿಗೆ ಹೊಸ ಹೊಸ ಖಾದ್ಯಗಳನ್ನು ಅವಿಷ್ಕರಿಸುವ ಕೆಲಸ ಮಾಡುತ್ತಲೇ ಬಂದರು. ಅವರು ತಮ್ಮ ಗ್ರಾಹಕರ ಖುಷಿಗಾಗಿ ಯಾವ ರೀತಿಯಲ್ಲಿ ಪದಾರ್ಥಗಳ ರುಚಿಗೆ ಹೊಸ ಭಾಷ್ಯ ಬರೆಯುವ ಕೆಲಸಕ್ಕೆ ಶ್ರಮ ಹಾಕುತ್ತಿದ್ದರೆ ಅತ್ತ ಗಿರಿಮಂಜಾಸ್ ಹೆಸರು ಕಡಲತಡಿಯ ಮಂಗಳೂರನ್ನು ದಾಟಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಲು ಶುರುವಾಯಿತು. ಮಂಗಳೂರಿಗೆ ಹೋದರೆ ಗಿರಿಮಂಜಾಸ್ ಗೆ ಹೋಗಲೇಬೇಕು ಎಂದು ಮತ್ಸ್ಯ ಪ್ರಿಯರು ತಮ್ಮ ಪ್ರವಾಸದ ಪಟ್ಟಿಯಲ್ಲಿ ದಾಖಲಿಸುವಂತಾಯಿತು. ಮಂಗಳೂರಿಗೆ ಯಾವುದೇ ಕೆಲಸಕ್ಕೆ ಬರಲಿ ಗಿರಿಮಂಜಾಸ್ ನಲ್ಲಿ ಮಧ್ಯಾಹ್ನದ ಊಟ ಆಗಲೇಬೇಕು ಎಂದು ಹೊರ ಊರಿನವರು ನಿರ್ಧರಿಸಿಬಿಟ್ಟಿದ್ದರು. ಆಹಾರಕ್ಕೆ ಯಾವುದೆಲ್ಲ ಪ್ರಶಸ್ತಿ ಇದೆಯೋ ಅದೆಲ್ಲ ಗಿರಿಮಂಜಾಸ್ ಅನ್ನು ಹುಡುಕಿಕೊಂಡು ಬರತೊಡಗಿದವು. ಹಾಗೇ ಖ್ಯಾತಿ ನಾಲ್ಕು ದಿಕ್ಕಿಗೆ ಹರಡುತ್ತಿದ್ದಂತೆ 2015 ರ ಒಂದು ರಾತ್ರಿ ಇನ್ನೂ ನಲ್ವತ್ತರ ಆಸುಪಾಸಿನಲ್ಲಿದ್ದ ಮಂಜ ಈ ಲೋಕಕ್ಕೆ ವಿದಾಯ ಹೇಳಿಬಿಟ್ಟಿದ್ರು.
ಸಾಮಾನ್ಯವಾಗಿ ಪ್ರಖ್ಯಾತಿಯ ತುತ್ತತುದಿಯಲ್ಲಿದ್ದ ಯಾವುದೇ ಉದ್ಯಮದಲ್ಲಿ ಮಾಲೀಕ ಅಕಸ್ಮಾತ್ ಆಗಿ ತೀರಿಕೊಂಡರೆ ಆ ಉದ್ಯಮ ಚೇತರಿಸಿಕೊಳ್ಳುವುದೇ ಕಷ್ಟ. ಯಾಕೆಂದರೆ ಉದ್ಯಮದ ಒಳಹೊರ ಆಳ ಎಲ್ಲ ಒಬ್ಬನಿಗೆ ಮಾತ್ರ ಗೊತ್ತಿರುವ ಸಾಧ್ಯತೆ ಇರುವ ಕಾರಣ ಬೇರೆಯವರು ಅದನ್ನು ಅಷ್ಟು ಸುಲಭವಾಗಿ ಕ್ಯಾರಿಒವರ್ ಮಾಡುವುದು ಸುಲಭವಲ್ಲ. ಗಿರಿಮಂಜಾಸ್ ಕೂಡ ಹಾಗೆ ಆಗುವ ಎಲ್ಲಾ ಚಾನ್ಸ್ ಇತ್ತು. ಆದರೆ ಆ ಹೆಣ್ಣುಮಗಳು ಧೈರ್ಯ ತೆಗೆದುಕೊಂಡಳು. ಗಂಡನ ಕನಸಿನ ಎತ್ತರವನ್ನು ಹಾಗೆ ಧರಾಶಾಯಿಯಾಗಲು ಬಿಡುವುದಿಲ್ಲ ಎಂದು ನಿರ್ಧರಿಸಿದಳು. ಅಲ್ಲಿಯ ತನಕ ಗಂಡನ ಹೋಟೇಲ್ ಗೆ ಕಾಲಿಡದೇ ಇದ್ದವಳು 2015ರ ಸೆಪ್ಟೆಂಬರ್ ನಲ್ಲಿ ಹೋಟೇಲಿನ ಒಳಗೆ ಕಾಲಿಟ್ಟಳು. ಆಕೆಯ ಹೆಸರು ನಂದಿನಿ ಮಂಜುನಾಥ್ ಪೈ.
ನಂದಿನಿಯವರು ಗಿರಿಮಂಜಾಸ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಮಡಿಲಿಗೆ ಹಾಕಿಕೊಂಡು ಈಗ ಬರೋಬ್ಬರಿ ಎರಡು ವರ್ಷ ಕಳೆದಿವೆ. ಗಿರಿಮಂಜಾಸ್ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿದೆ ಎನ್ನುವುದಕ್ಕೆ ದ್ಯೋತಕವಾಗಿ ಬಿಬಿಸಿ ವಾಹಿನಿಯ ಪ್ರಶಸ್ತಿ ಅವರು ಕುಳಿತುಕೊಳ್ಳುವ ಗಲ್ಲಾಪೆಟ್ಟಿಗೆಯ ಹಿಂದೆ ರಾರಾಜಿಸುತ್ತಿದೆ. ಒಂದು ಕಡೆ ಮಂಜು ಇಲ್ಲದ ನೋವು ಮತ್ತೊಂದೆಡೆ ಗಿರಿಮಂಜಾಸ್ ಹೆಸರನ್ನು ಉಳಿಸಿ ಬೆಳೆಸಿದ ಯಶಸ್ಸಿನ ನಡುವೆ ನಂದಿನಿ ತುಳುನಾಡು ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ. ಅವರ ಸಂದಶ್ಯನದ ಆಯ್ದಭಾಗ ಇಲ್ಲಿದೆ.
ಮಂಜು ಇದ್ದಿದ್ರೆ ನಾಡಿದ್ದು ಡಿಸೆಂಬರ್ 23 ಕ್ಕೆ ಮದುವೆಯಾಗಿ ಭರ್ತಿ 16 ವರ್ಷಗಳಾಗುತ್ತಿದ್ದವು ಎಂದು ಹೇಳುತ್ತಲೇ ಮಾತು ಪ್ರಾರಂಭಿಸಿದ ನಂದಿನಿಯವರಿಗೆ ಮೊದಲು ಉದ್ಭವಿಸಿದ ಸವಾಲು ಎಂದರೆ ಅದೇ ರುಚಿಯನ್ನು ಕಾಪಾಡಿಕೊಳ್ಳುವುದು. ಅದಕ್ಕೆ ಮುಖ್ಯವಾಗಿ ಸಹಕಾರ ಬೇಕಾಗಿದ್ದದ್ದು ಬಾಣಸಿಗರದ್ದು. ಒಂದು ಹೋಟೇಲಿನ ಜೀವಾಳ ಅವರು. ಅದರ ಬಳಿಕ ಗ್ರಾಹಕರ ಬೆಂಬಲ. ಎರಡರಲ್ಲಿಯೂ ನಮಗೆ ತೊಂದರೆಯಾಗಲಿಲ್ಲ ಎಂದು ನಂದಿನಿಯವರು ಹೇಳುವಾಗ ಅರ್ಧ ಯುದ್ಧ ಜಯಿಸಿದ ಖುಷಿ ಅವರಲ್ಲಿತ್ತು. ಉಳಿದ ಸಂಗತಿಗಳನ್ನು ಅವರ ಮಾತುಗಳಲ್ಲೇ ಕೇಳಿ.
“ನಾನು ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಕ್ಲಾರ್ಕ್ ಆಗಿ ಕೆಲಸದಲ್ಲಿದ್ದೆ. ಮಂಜು ಸಂಪೂರ್ಣವಾಗಿ ಹೋಟೇಲಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ಇದ್ದಷ್ಟು ದಿನ ನಾನು ಹೋಟೇಲಿಗೆ ಬಂದೆ ಇಲ್ಲ ಎಂದರೆ ತಪ್ಪಾಗಲಾರದು. ವ್ಯಾಪಾರ ದಿನದಿಂದ ಹೆಚ್ಚಾಗುತ್ತಿತ್ತು. ಹೊಸ ಹೊಸ ಪ್ರಶಸ್ತಿಗಳು ಬಂದಾಗ ಮನೆಯಲ್ಲಿ ಮಂಜು ನನ್ನೊಡನೆ ಖುಷಿ ಹಂಚಿಕೊಳ್ಳುತ್ತಿದ್ದರು. ಹೋಟೇಲಿನ ಒಳಗೆ ಜಾಗವಿಲ್ಲದೆ ಗ್ರಾಹಕರು ಹೊರಗೆ ಬಿಸಿಲಿಗೆ ನಿಲ್ಲಬೇಕಾಗಿ ಬಂದಾಗ ಮಂಜುಗೆ ಬೇಸರವಾಗುತ್ತಿತ್ತು. ಜನರನ್ನು ಕಾಯಿಸಬಾರದು ಎನ್ನುವ ಕಾರಣಕ್ಕೆ ಹೋಟೇಲಿನ ಎದುರಿಗೆ 40 ಜನರು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಮತ್ತೊಂದು ಹೋಟೇಲನ್ನು ತೆರೆದರು. ಅವರಿಗೆ ವ್ಯಾಪಾರದ ಒತ್ತಡ ಹೆಚ್ಚಾಗುತ್ತಿದೆ ಎಂದು ನನಗೆ ಅನಿಸಿದಾಗ ನಾನು ಈಗಿರುವ ಕೆಲಸ ಬಿಟ್ಟು ಅಲ್ಲಿ ಹೊಸ ಹೋಟೇಲಿನ ಕ್ಯಾಶ್ ಬಾಕ್ಸ್ ನಲ್ಲಿ ಕುಳಿತುಕೊಳ್ಳಬೇಕಾ ಎಂದು ಕೇಳಿದೆ. ನೀನು ಬೇಕಾದರೆ ಕಾಲೇಜಿನ ಕೆಲಸ ಬಿಟ್ಟು ಮನೆಯಲ್ಲಿ ಕುಳಿತುಕೊ. ಆದರೆ ಹೋಟೇಲಿಗೆ ಬರುವುದು ಬೇಡಾ ಎನ್ನುವುದು ಮಂಜುವಿನ ಧೃಡ ನಿಲುವಾಗಿತ್ತು. ಆದ್ದರಿಂದ ನನಗೆ ಹೋಟೇಲಿನ ವಿಷಯಗಳು, ಇಲ್ಲಿನ ಸವಾಲು, ಮಧ್ಯಾಹ್ನದ ರಶ್, ಜನರ ಬೇಡಿಕೆ ಯಾವುದರ ಒತ್ತಡಗಳೂ ಕೂಡ ಗೊತ್ತಾಗುತ್ತಿರಲಿಲ್ಲ. ಅದೇ ರೀತಿಯಲ್ಲಿ ತೃಪ್ತ ದಾಂಪತ್ಯ ಜೀವನ ನಮ್ಮದು. ಹದಿಮೂರು ವರ್ಷದ ದಾಂಪತ್ಯದಲ್ಲಿ ಮಂಜು ಹೊಟೇಲಿನ ಯಾವ ಒತ್ತಡದ ಬಗ್ಗೆಯೂ ಬೇಸರಪಟ್ಟವರಲ್ಲ. ಅವರು ಅಚಾನಕ್ ಆಗಿ ನಮ್ಮನ್ನು ಬಿಟ್ಟು ಹೋದಾಗ ನಾನು ಅನಿವಾರ್ಯವಾಗಿ ಹೊಸ ಜವಾಬ್ದಾರಿಯನ್ನು ಸ್ವೀಕರಿಸಬೇಕಾಯಿತು. ಒಂದು ಕಡೆ ಗಂಡನಿಲ್ಲದ ನೋವು, ಮತ್ತೊಂದೆಡೆ ಗಿರಿಮಂಜಾಸ್ ಹೆಸರಿನ ಜವಾಬ್ದಾರಿ, ಎರಡನ್ನೂ ಸ್ವೀಕರಿಸಿದೆ. ಈಗ ಎರಡು ವರ್ಷಗಳ ಬಳಿಕ ನಿಭಾಯಿಸಬಲ್ಲೆ ಎನ್ನುವ ಧೈರ್ಯ ಬರಲು ಕಾರಣ ನಮ್ಮದೇ ಪರಿವಾರದಂತಿರುವ ಕೆಲಸದವರ ಸಹಕಾರ.
ಬಿಬಿಸಿ ವಾಹಿನಿಯಿಂದ ಪ್ರಶಸ್ತಿ ಬಂದ ದಿವಸ ಮಂಜುವಿನ ಹುಟ್ಟಿದ ದಿನ. ಅವರು ಇದ್ದಿದ್ರೆ ಎಷ್ಟು ಖುಷಿ ಪಡುತ್ತಿದ್ದರೋ ಏನೋ. ರೆಡ್ ಎಫ್ ಎಂ ನಿಂದ ಪ್ರತಿ ವರ್ಷ ಪ್ರಶಸ್ತಿ ನಮ್ಮನ್ನು ಅರಸಿ ಬರುತ್ತದೆ. ರಾಜ್ಯ, ರಾಷ್ಟ್ರಮಟ್ಟದ ಪತ್ರಿಕೆಗಳು ಗಿರಿಮಂಜಾಸ್ ಬಗ್ಗೆ ಹೊಗಳಿ ಅಂಕಣ ಬರೆದಿವೆ. ಇದೆಲ್ಲ ಕ್ರೆಡಿಟ್ ಮಂಜುವಿಗೆ ಹೋಗಬೇಕು. ನಾನು ಅವರು ಉಳಿಸಿ ಹೋದ ಹೆಸರನ್ನು ಬೆಳೆಸುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ. ನನ್ನ ಮುಂದಿರುವ ಗುರಿ ಎಂದರೆ ಹೋಟೇಲಿಗೆ ಬರುವ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವುದು. ಈಗ ಇರುವ ಹೋಟೇಲಿಗೆ ಬರುವ ಅಸಂಖ್ಯಾತ ಗ್ರಾಹಕರು ವಾಹನ ಪಾರ್ಕ್ ಮಾಡಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅದರೊಂದಿಗೆ ಈ ಜಾಗದ ಮಾಲೀಕರು ಕಟ್ಟಡವನ್ನು ನಮಗೆ ಮಾರಿದರೆ ಇಲ್ಲಿಯೇ ವಿಶಾಲವಾದ ವ್ಯವಸ್ಥೆ ಮಾಡುವುದು. ಆ ಕನಸು ಮಂಜುವಿಗೂ ಇತ್ತು. ಅವರು ಬಿಟ್ಟು ಹೋದ ಗುರಿಯನ್ನು ಈಡೇರಿಸುವುದು ನನ್ನ ಕೆಲಸ” ಹೀಗೆ ನಂದಿನಿಯವರು ಹೇಳುತ್ತಿದ್ದ ಹಾಗೆ ಅವರಲ್ಲಿ ಒರ್ವ ಪರಿಪಕ್ವ ಉದ್ಯಮಿಯ ಛಾಯೆ ಇಣುಕುತ್ತಿತ್ತು. ಬೇರೆ ಮಹಿಳೆಯರಿಗೆ ಏನಾದರೂ ಸಲಹೆ ಕೊಡುತ್ತಿರಾ ಎಂದು ಕೇಳಿದ್ದಕ್ಕೆ ” ಅನಿವಾರ್ಯತೆ ಎದುರಾದಾಗ ಯಾವ ಮಹಿಳೆಯಾದರೂ ಹಿಂದಡಿ ಇಡದೆ ಅದನ್ನು ಸ್ವೀಕರಿಸಬೇಕು. ಅಷ್ಟೇ ಹೇಳಲು ಸಾಧ್ಯ” ಎಂದರು. ಅವರು ಮಾತನಾಡುತ್ತಿರುವಾಗಲೇ ಅನೇಕ ಫೋನ್ ಕರೆಗಳು ಅವರಿಗೆ ಬರುತ್ತಿದ್ದವು. ಪ್ರತಿಯೊಂದನ್ನು ಸಾವಾಕಾಶವಾಗಿ ಸ್ವೀಕರಿಸಿ ಆವತ್ತಿನ ಗಿರಿಮಂಜಾಸ್ ಸ್ಪೆಶಲ್ ಖಾದ್ಯಗಳನ್ನು ಹೇಳಿ ಆರ್ಡರ್ ಬರೆದುಕೊಳ್ಳುತ್ತಿದ್ದ ನಂದಿನಿಯವರಿಗೆ ಶುಭ ಹಾರೈಸಿ ಹೊರಡುತ್ತಿದ್ದಂತೆ ಊಟ ಮಾಡದೇ ಹೋಗಲೇಬಾರದು ಎನ್ನುವ ಒತ್ತಾಯ. ಒಂದು ಮಹಿಳೆ ಯಶಸ್ವಿ ಉದ್ಯಮಿಯಾಗಿ ಬೆಳೆದ ಕಥೆಯನ್ನು ಬರೆಯಲಿಕ್ಕಿದೆ, ಇನ್ನೊಮ್ಮೆ ಬರುತ್ತೇನೆ ಎಂದು ಹೊರಬಿದ್ದೆ.
Leave A Reply