ಎರಡು ವರ್ಷಗಳ ಹಿಂದೆ ತಿರುಪತಿ ಲಡ್ಡುವಿನ ಕ್ವಾಲಿಟಿ ಕಡಿಮೆಯಾದದ್ದು ಹೇಗೆ?

ದೇವರು, ಧರ್ಮ, ದೇವಸ್ಥಾನದ ವಿಷಯದಲ್ಲಿ ವ್ಯಾಪಾರ ಎನ್ನುವ ಶಬ್ದ ಸುಳಿಯಲೇಬಾರದು. ಸರಕಾರದ ಬೇರೆ ಯಾವುದೇ ಇಲಾಖೆಯ ವಿಷಯದಲ್ಲಿ ಅದರ ಅಧಿಕಾರಿಗಳು ಯಾವ ರೀತಿಯ ನಿಯಮ, ಕಟ್ಟಲೆಗಳನ್ನು ಅನುಸರಿಸುತ್ತಾರೋ, ಬಿಟ್ತಾರೋ ಅದು ಅವರಿಗೆ ಬಿಟ್ಟಿದ್ದು. ಆದರೆ ಧಾರ್ಮಿಕ ದತ್ತಿ ಇಲಾಖೆಯ ವಿಷಯ ಬಂದಾಗ ಅಲ್ಲಿ ನಿಯಮಗಳಿಗಿಂತ, ಕಾನೂನಿಗಿಂತ ಶ್ರದ್ಧೆಯ ವಿಷಯ ಬಹಳ ಮುಖ್ಯ. ಅದು ಇಲ್ಲದೇ ಇದ್ದ ಕಾರಣ ಏನಾಗುತ್ತದೆ? ಅದಕ್ಕೆ ಇನ್ನೊಂದು ಉದಾಹರಣೆ ಇವತ್ತು ನೋಡೋಣ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ನೀಡುತ್ತಾರೆ. ತಿರುಪತಿ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ನೀವು ಒಮ್ಮೆಯಾದರೂ ಹೋಗಿದ್ದರೆ ಆ ಲಡ್ಡನ್ನು ನೀವು ನೋಡಿರುತ್ತೀರಿ ಮತ್ತು ಸ್ವೀಕರಿಸುತ್ತೀರಿ. ಅದರ ರುಚಿಯನ್ನು ಸರಿಹೊಂದುವಂತಹ ಬೇರೆ ಲಡ್ಡನ್ನು ಇಲ್ಲಿಯ ತನಕ ತಿಂದಿಲ್ಲ ಎನ್ನುವ ಉದ್ಘಾರ ನಿಮ್ಮ ಬಾಯಿಂದ ಯಾವತ್ತಾದರೂ ಬಂದಿರಬಹುದು. ಒಂದು ವೇಳೆ ನೀವು ತಿರುಪತಿ ದೇವಸ್ಥಾನಕ್ಕೆ ಹೋಗಿಯೇ ಇಲ್ಲ ಎಂದೇ ಇಟ್ಟುಕೊಳ್ಳೋಣ, ಆದರೆ ನಿಮ್ಮ ಗೆಳೆಯರೋ, ನೆಂಟರೋ, ಸಂಬಂಧಿಕರೋ ಅಲ್ಲಿ ಹೋಗಿದ್ದಾಗ ಊರಿನಲ್ಲಿರುವ ತಮ್ಮವರಿಗಾಗಿ ಎಂದು ಹೆಚ್ಚುವರಿಯಾಗಿ ಲಡ್ಡನ್ನು ಖರೀದಿಸಿ ತಂದಿರುತ್ತಾರೆ. ಅದನ್ನಾದರೂ ನೀವು ಸೇವಿಸಿರಬಹುದು. ಆದ್ದರಿಂದ ಒಟ್ಟಿನಲ್ಲಿ ತಿರುಪತಿ ಲಡ್ಡು ಎನ್ನುವುದು ಎಲ್ಲಾ ಆಸ್ತಿಕ ಭಾಂದವರಿಗೆ ಗೊತ್ತೆ ಇರುತ್ತದೆ. ಅದಕ್ಕೆ ಉಪಯೋಗಿಸುವ ತುಪ್ಪ ಕರ್ನಾಟಕದಿಂದ ರಫ್ತಾಗುತ್ತದೆ ಎನ್ನುವ ಮಾಹಿತಿ ಕೂಡ ಇದೆ. ಅಂತಹ ತಿರುಪತಿ ಲಡ್ಡಿನ ವಿಷಯದಲ್ಲಿ ಎರಡು ವರ್ಷಗಳ ಹಿಂದೆ ಒಂದಿಷ್ಟು ಅಪಸ್ವರಗಳು ಕೂಡ ಕೇಳಿ ಬಂದಿತ್ತು. ಅದೇನೆಂದರೆ ಲಡ್ಡುವಿನ ಕ್ವಾಲಿಟಿ ಕಡಿಮೆಯಾಗುತ್ತಿದೆ. ಅದು ಹೇಗೆ?
ಆಂಧ್ರಪ್ರದೇಶ ಸರಕಾರ ಎರಡು ವರ್ಷಗಳ ಹಿಂದೆ ತಿರುಪತಿ ಲಡ್ಡು ಮಾಡುವ ಗುತ್ತಿಗೆಯನ್ನು ಕ್ರಿಶ್ಚಿಯನ್ ವ್ಯಕ್ತಿಯೊಬ್ಬರ ಸಂಸ್ಥೆಗೆ ನೀಡಿತ್ತು. ಅದರ ನಂತರ ತಿರುಪತಿ ಲಡ್ಡನ್ನು ಆ ಗುತ್ತಿಗೆದಾರ ಸಂಸ್ಥೆ ತಯಾರಿಸುತ್ತಿತ್ತು. ಅದರ ಕೆಲವು ಸಮಯದ ಬಳಿಕ ಭಕ್ತಾದಿಗಳ ಕಡೆಯಿಂದ “ತಿರುಪತಿ ಲಡ್ಡು” ಹಿಂದಿನಂತೆ ಇಲ್ಲ ಎನ್ನುವ ದೂರುಗಳು ಟಿಟಿಡಿ ಕಚೇರಿಗೆ ಬಂದು ಮುಟ್ಟುತ್ತಿದ್ದವು. ಇಲ್ಲಿ ಕೂಡ ಆದದ್ದು ಅದೇ. ತಿರುಪತಿ ಲಡ್ಡನ್ನು ತಯಾರಿಸುವುದು ಬೇರೆ ವ್ಯಾಪಾರಗಳಂತೆ ಇಲ್ಲಿ ಪರಿಗಣಿಸಲಾಗಿತ್ತು. ಲಡ್ಡು ತಯಾರಿಸುತ್ತಿದ್ದ ಸಂಸ್ಥೆಗೆ ಅದು ಇನ್ನೊಂದು ವ್ಯಾಪಾರ ಅಷ್ಟೇ. ಅವರು ಕಾರ್ಖಾನೆಗಳಲ್ಲಿ ತಯಾರಿಸಿದಂತೆ ಸ್ಥಿತಪ್ರಜ್ಞರಾಗಿ ತಯಾರಿಸಿದರೆ ಅದರಿಂದ ಗುಣಮಟ್ಟ ಉಳಿಯಲು ಹೇಗೆ ಸಾಧ್ಯ. ಈ ಬಗ್ಗೆ ಮಾಧ್ಯಮಗಳು ಟಿಟಿಡಿ ಅಂದರೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯನ್ನು ವಿಚಾರಿಸಿದಾಗ ನಾವು ತಿರುಪತಿ ಲಡ್ಡು ತಯಾರಿಸುವ ಬಗ್ಗೆ ಟೆಂಡರ್ ಕರೆದಿದ್ದೆವು. ಅದರಲ್ಲಿ ಅತ್ಯಂತ ಕಡಿಮೆ ಬಿಡ್ ಮಾಡುವ ಸಂಸ್ಥೆಗೆ ನಿಯಮಾನುಸಾರ ಕೊಡಲೇಬೇಕು. ಆದ್ದರಿಂದ ಇವರಿಗೆ ಕೊಟ್ಟಿದ್ದೇವೆ ಎನ್ನುವ ಉತ್ತರ ಬಂತು. ಯಾವಾಗ ಒಂದು ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆ ಅಂದರೆ ಸರಕಾರದ ಅಡಿಯಲ್ಲಿ ಬರುತ್ತದೆಯೋ ಆಗ ಅದನ್ನು ನಿರ್ವಹಿಸುವ ಮನಸ್ಸುಗಳು ಬದಲಾಗುತ್ತವೆ. ಅವರಿಗೆ ಅದೊಂದು ಉದ್ಯೋಗ ಅಥವಾ ಶೋ ಕೊಡಲು ವೇದಿಕೆಯಾಗಿ ಮಾತ್ರ ದೇವಸ್ಥಾನಗಳು ಉಳಿದಿರುತ್ತದೆ. ಬೇಕಾದರೆ ದಕ್ಷಿಣ ಕನ್ನಡದಲ್ಲಿ ದಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರದ ದೇವಸ್ಥಾನಗಳಿವೆ. ಕೆಲವನ್ನು ಮನೆತನದವರು ನೋಡಿಕೊಳ್ಳುತ್ತಿದ್ದಾರೆ.
ಕೆಲವನ್ನು ಸಮಾಜದ ಹತ್ತು ಸಮಸ್ತರು ನೋಡಿಕೊಳ್ಳುತ್ತಿದ್ದಾರೆ. ಅಂತಹ ಕಡೆಯಲ್ಲಿ ದೇವರ ಉತ್ಸವದಿಂದ ಹಿಡಿದು ಸಮಾರಾಧನೆಯ ತನಕ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತದೆ. ಅದರೊಂದಿಗೆ ನೋಡಿಕೊಳ್ಳುತ್ತಿರುವವರಿಗೆ ಇದು ನಮ್ಮದು ಎನ್ನುವ ಪ್ರೀತಿ ಇರುತ್ತದೆ. ಅದು ಇಲ್ಲದೇ ಹೋದರೆ ದೇವಸ್ಥಾನಗಳು ಯಾಂತ್ರಿಕೃತವಾಗಿ ಹೋಗುತ್ತವೆ, ಉಳಿದ ಫ್ಯಾಕ್ಟರಿಗಳಂತೆ. ಹಾಗಾದರೆ ಕ್ರೈಸ್ತರಿಗೆ ಲಡ್ಡು ತಯಾರಿಸಲು ಗುತ್ತಿಗೆ ಕೊಡುವುದು ತಪ್ಪೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಸುಳಿಯಬಹುದು. ಇಲ್ಲಿ ಭಾವನಾತ್ಮಕ ಸಂಬಂಧ ಎನ್ನುವುದು ಬಹಳ ಮುಖ್ಯ. ಒಬ್ಬ ಆಸ್ತಿಕ ಹಿಂದೂವಿಗೆ ದೇವರ ವಿಷಯದಲ್ಲಿ, ಪೂಜೆ ಪುನಸ್ಕಾರದ ವಿಷಯ ಬಂದಾಗ ತನ್ನಿಂದ ಏನಾದರೂ ಅಪಚಾರವಾಗದಿರಲಿ ಎನ್ನುವ ಕಾರಣಕ್ಕೆ ಅವನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಅಂತವರಿಗೆ ಜವಾಬ್ದಾರಿ ಕೊಟ್ಟರೆ ಯಾವತ್ತೂ ಒಳ್ಳೆಯದು. ಅದು ಬಿಟ್ಟು ಈ ವಿಷಯದಲ್ಲಿ ಟೆಂಡರ್ ಅದು ಇದು ಎಂದು ಹೋದರೆ ಕ್ವಾಲಿಟಿ ಕೂಡ ಕಡಿಮೆಯಾಗುತ್ತದೆ, ಮನಸ್ಸುಗಳು ಕೂಡ ಬೇಸರಿಸಿಕೊಳ್ಳಬಹುದು.
ಆದ್ದರಿಂದ ದೇವಸ್ಥಾನಗಳನ್ನು ನೋಡಿಕೊಳ್ಳುವ ಧಾರ್ಮಿಕ ದತ್ತಿ ಇಲಾಖೆ ಎಲ್ಲಕ್ಕಿಂತಲೂ ಹೆಚ್ಚು ಕ್ಯಾರ್ ಫುಲ್ ಆಗಿರಬೇಕು. ಒಂದು ವೇಳೆ ತಮ್ಮ ಅಡಿಯಲ್ಲಿ ಬರುವ ದೇವಸ್ಥಾನಗಳಿಂದ ಯಾವುದಾದರೂ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಊಟ ಸಹಿತ ಏನಾದರೂ ಸೌಲಭ್ಯ ಹೋಗುತ್ತಿದ್ದರೆ ಅದನ್ನು ರಾಜಕೀಯ ಕಾರಣಗಳಿಂದ ಯಾವುದಾದರೂ ಸಚಿವರು ನಿಲ್ಲಿಸುವ ಸಾಧ್ಯತೆ ಇರುವುದರಿಂದ ಆ ಬಗ್ಗೆ ಮೊದಲೇ ಕಾನೂನು ರೂಪಿಸುವುದು ಕೂಡ ಒಳ್ಳೆಯದು. ಒಂದಂತೂ ನೀವು ಗಮನಿಸಿರಬಹುದು. ಮುಜುರಾಯಿ ಇಲಾಖೆಯ ಸಚಿವರಾಗಿದ್ದವರು ಮುಂದಿನ ಬಾರಿ ಗೆದ್ದಂತಹ ಉದಾಹರಣೆ ವಿರಳಾತೀ ವಿರಳ. ಏಕೆಂದರೆ ಮತ್ತೆ ಅದೇ ಸಂಗತಿ ಶ್ರದ್ಧೆ.
Leave A Reply