ಕೆಲಸವಿಲ್ಲದವ ಗುಡ್ಡಕ್ಕೆ ಮಣ್ಣು ಹೊತ್ತು ಹಾಕಿದಂತೆ, ಎನ್ನುವ ಗಾದೆಯನ್ನು ನಿಜ ಮಾಡಲು ಪಾಲಿಕೆ ಹೊರಟಿದೆ!
ಒಂದು ರಸ್ತೆ ಕಿಷ್ಕಿಂದೆಯಂತೆ ಇರುತ್ತದೆ. ಅಂದರೆ ಅಗಲ ಕಿರಿದಾಗಿ, ರಸ್ತೆಯೀಡಿ ಹೊಂಡ ಗುಂಡಿಗಳು ತುಂಬಿ, ಒಂದು ಲಾರಿ ಹೋದರೆ ಅಕ್ಕಪಕ್ಕದವರಿಗೆ ಧೂಳಿನ ಅಭಿಷೇಕವಾಗಿ, ಎದುರಿನಿಂದ ಒಂದು ವಾಹನ ಬಂದರೆ ಅಕ್ಕಪಕ್ಕದ ವಾಹನಗಳು ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೆ ಪೊಲೀಸರು ಗುಂಪು ಸೇರಿದವರನ್ನು ಲಾಠಿಚಾರ್ಜ್ ಮಾಡಿದರೆ ಎಲ್ಲರೂ ದಿಕ್ಕುಪಾಲಾಗಿ ಓಡುತ್ತಾರಲ್ಲ ಹಾಗೆ ಒಟ್ರಾಶಿ ವಾಹನಗಳು ನಿಂತರೆ ಒಂದು ರಸ್ತೆ ಹೇಗಿರುತ್ತೆ ಎನ್ನುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಅಂತಹ ರಸ್ತೆಗಳು ಮಂಗಳೂರು ಹೃದಯಭಾಗದಲ್ಲಿವೆ. ಯಾವುದು ಎಂದು ನಾನೇ ಹೇಳಬೇಕಿಲ್ಲ. ಆದರೂ ಮತ್ತೆ ಹೇಳುತ್ತೇನೆ. ಅದಕ್ಕಿಂತ ಮೊದಲು ಇನ್ನೊಂದು ಟೈಪಿನ ರಸ್ತೆಯನ್ನು ಜ್ಞಾಪಿಸಿಕೊಳ್ಳಿ. ರಸ್ತೆ ಅಗಲವಾಗಿರುತ್ತದೆ. ಕಾಂಕ್ರೀಟಿಕರಣವಾಗಿರುತ್ತದೆ. ಒಂದೇ ಒಂದು ಹೊಂಡ ಹುಡುಕಿದರೂ ಸಿಗುವ ಚಾನ್ಸ್ ಇರುವುದಿಲ್ಲ. ರಸ್ತೆ ಅಗಲವಾಗಿರುವುದರಿಂದ ರೋಡ್ ಬ್ಲಾಕ್ ಆಗುವುದಿಲ್ಲ. ಒಟ್ಟಿನಲ್ಲಿ ಆ ರಸ್ತೆಯಲ್ಲಿ ವಾಹನ ಚಲಾಯಿಸಬೇಕು ಎಂದು ನೀವು ಬಯಸುವಂತಹ ರಸ್ತೆ. ಇಂತಹ ರಸ್ತೆಗಳು ಕೂಡ ಮಂಗಳೂರಿನಲ್ಲಿವೆ. ಈಗ ಒಂದು ಸಾಮಾನ್ಯ ಪ್ರಶ್ನೆಯನ್ನು ನಾನು ನಿಮಗೆ ಕೇಳುತ್ತೇನೆ. ಇದರಲ್ಲಿ ಯಾವ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು? ಯಾವ ರಸ್ತೆಗೆ ಕಾಂಕ್ರೀಟಿಕರಣದ ಅವಶ್ಯಕತೆ ಇದೆ? ಯಾವ ರಸ್ತೆಯನ್ನು ಅಗಲ ಮಾಡಬೇಕು? ಈ ಪ್ರಶ್ನೆಯನ್ನು ಯಾವುದಾದರೂ ಕುರುಡನಿಗೆ ಈ ಎರಡು ರಸ್ತೆಗಳಲ್ಲಿ ಕರೆದುಕೊಂಡು ಹೋಗಿ ನಂತರ ಕೇಳಿ. ಆತ ನಿಸ್ಸಂದೇಹವಾಗಿ ಹೊಂಡ, ಗುಂಡಿಗಳಿರುವ ರಸ್ತೆಯಲ್ಲಿ ಕಾಲಿಡುವಾಗಲೇ ಈ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಆತ ಹೇಳಿಬಿಡುತ್ತಾನೆ. ಆದರೆ ಮಂಗಳೂರು ಮಹಾನಗರ ಪಾಲಿಕೆಗೆ ಈ ಪ್ರಶ್ನೆಯನ್ನು ಕೇಳಿ. ಅವರು ಅಗಲವಾಗಿರುವ, ಕಾಂಕ್ರೀಟಿಕರಣವಾಗಿರುವ ರಸ್ತೆಯನ್ನೇ ಮತ್ತೊಮ್ಮೆ ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತಾರೆ. ನಿಮಗೆ ಇದನ್ನು ಓದುವಾಗಲೇ ಆಶ್ಚರ್ಯವಾಗಬಹುದು. ಆದರೆ ಪಾಲಿಕೆ ಇದನ್ನು ಅಕ್ಷರಶ: ಜಾರಿಗೆ ತರಲು ಹೊರಟಿದೆ. ಈಗಾಗಲೇ ಅಭಿವೃದ್ಧಿಗೊಂಡಿರುವ ರಸ್ತೆಗಳು ಮತ್ತೊಮ್ಮೆ ಅಭಿವೃದ್ಧಿಗೊಳ್ಳಲಿವೆ. ಅದು ಹೇಗೆ?
ನನ್ನ ಜಾಗೃತ ಅಂಕಣ ಓದುವವರಿಗೆ ಎಫ್ ಎ ಆರ್ ಎನ್ನುವ ಶಬ್ದ ಗೊತ್ತಿರಬಹುದು. ಬಿಲ್ಡರ್ ಗಳಿಗಂತೂ ಇದು ಬರಿ ಶಬ್ದ ಅಲ್ಲ, ಮಂತ್ರ. ಫ್ಲೋರ್ ಏರಿಯಾ ರೇಶ್ಯೂ ಎನ್ನುವ ಶಬ್ದ ಪಾಲಿಕೆಯ ನಗರ ಯೋಜನಾ ಅಧಿಕಾರಿಗಳಿಗೆ ಊಟ, ತಿಂಡಿಯಷ್ಟೇ ಮತ್ತೊಂದು ಪ್ರಮುಖ ಶಬ್ದ. 2011 ರ ಸಿಟಿ ಡೆವಲಪ್ ಮೆಂಟ್ ಪ್ಲಾನ್ ಪ್ರಕಾರ ಕಟ್ಟಡ ನಿರ್ಮಾಣ ಮಾಡುವಾಗ ಬಿಲ್ಡರ್ ಗಳು ಹೆಚ್ಚುವರಿ ಎಫ್ ಎ ಆರ್ ಬೇಕಾದರೆ ಅವರು ಪ್ರೀಮಿಯಮ್ ಎಫ್ ಎ ಆರ್ ಎಂದು ಇಂತಿಷ್ಟು ಹಣ ಕಟ್ಟಬೇಕು. ಅವರು ಕಟ್ಟಿದ ಆ ಹಣವನ್ನು ಅದೇ ರಸ್ತೆಯ ಅಭಿವೃದ್ಧಿಗೆ ಬಳಸಬೇಕು ಎನ್ನುವುದು ನಿಯಮ. ಆದರೆ ಪಾಲಿಕೆ ಹಾಗೆ ಪ್ರೀಮಿಯಮ್ ಎಫ್ ಎ ಆರ್ ಹಣವನ್ನು ಉಪಯೋಗಿಸದೇ ಹಾಗೆ ಇದ್ದ ಕಾರಣ ಪಾಲಿಕೆಯ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹವಾಗುತ್ತಾ ಹೋಯಿತು.
ನಮ್ಮ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ ಆರ್ ಲೋಬೋ ಅವರಿಗೆ ಹೀಗೆ ಸಂಗ್ರಹವಾಗಿರುವ ಕೋಟ್ಯಾಂತರ ರೂಪಾಯಿ ಹಣದ ಮೇಲೆ ಕಣ್ಣು ಬಿತ್ತು. ಇದಕ್ಕೊಂದು ದಾರಿ ತೋರಿಸಬೇಕಲ್ಲ ಎಂದು ಅನಿಸಿತು. ಹೇಗೂ ತನ್ನ ಆಪ್ತ ಕಾರ್ಪೋರೇಟರ್ ಗಳಿಗೆ, ಗುತ್ತಿಗೆದಾರರಿಗೆ ಏನಾದರೂ ಕೆಲಸ ನೀಡಿದರೆ ಮಾತ್ರ ತನಗೆ ಅವರು ನೆರವಾಗುವುದು, ಇಲ್ಲದಿದ್ದರೆ ತಾನು ಅವರಿಗೆ ಏನೂ ಮಾಡದಿದ್ದರೆ ಅವರು ಮುಂದಿನ ಚುನಾವಣೆಯಲ್ಲಿ ತನಗೋಸ್ಕರ ಏನೂ ಮಾಡುವುದಿಲ್ಲ ಎಂದು ನಿಶ್ಚಯಿಸಿದ ಲೋಬೋ ಅವರು ಸೀದಾ ಬೆಂಗಳೂರಿಗೆ ಹೋಗಿ ಈಗ ಸಂಗ್ರಹವಾಗಿರುವ ಪ್ರೀಮಿಯಮ್ ಎಫ್ ಎ ಆರ್ ಹಣವನ್ನು ತಮಗೆ ಬೇಕಾದ ರಸ್ತೆಗೆ ಉಪಯೋಗಿಸುವ ಅವಕಾಶವನ್ನು ನೀಡುವ ಆದೇಶವನ್ನು ತೆಗೆದುಕೊಂಡು ಬಂದರು. ಇದು ಪಾಲಿಕೆಯ ಎಲ್ಲರಿಗೂ ಜಾಕ್ ಪಾಟ್ ಹೊಡೆದಂತೆ ಆಯಿತು. ಮನೆಯ ಯಜಮಾನ ಮಗಳ ಮದುವೆಗೆ ಎಂದು ಕೂಡಿಟ್ಟ ಹಣವನ್ನು ಅದೇ ಕೆಲಸಕ್ಕೆ ಉಪಯೋಗಿಸಿದರೆ ಅವನಿಗೂ ನೆಮ್ಮದಿ ಮತ್ತು ಕೂಡಿಟ್ಟದ್ದಕ್ಕೂ ಸಾರ್ಥಕ. ಆದರೆ ಒಂದು ದಿನ ಅವನ ಹೆಂಡತಿ ಆ ಹಣವನ್ನು ಸುಮ್ಮನೆ ಯಾಕೆ ಕೂಡಿಡುವುದು, ಮಗಳ ಮದುವೆ ಹೇಗೋ ಆಗುತ್ತೆ ಬಿಡ್ರಿ ಎಂದು ಅವನ ಮನವೊಲಿಸಿ ಯಾವುದೋ ಪಂಗನಾಮ ಹಾಕುವ ಸಂಸ್ಥೆಯಲ್ಲಿ ಇನ್ವೆಸ್ಟ್ ಮಾಡಿದರೆ ಅದರಿಂದ ಏನಾಗುತ್ತೆ. ಇನ್ವೆಸ್ಟ್ ಮಾಡಿದ್ದಾಳೆ ಸರಿ ಆದರೆ ಆ ಹಣ ಗೋವಿಂದ.
ಪಾಲಿಕೆಯ ವ್ಯಾಪ್ತಿಯಲ್ಲಿ ಆಗಿರುವುದು ಅದೇ. ಒಂದು ರಸ್ತೆಯಲ್ಲಿ ಎರಡು ಮೂರು ಬಹುಮಹಡಿ ಕಟ್ಟಡಗಳು ಏಳುವಾಗ ಆ ರಸ್ತೆಯ ಪ್ರೀಮಿಯಂ ಎಫ್ ಎ ಆರ್ ಹಣವನ್ನು ಆ ರಸ್ತೆಗೆ ಉಪಯೋಗಿಸುವ ಮೂಲಕ ಆ ರಸ್ತೆಯ ಋಣವನ್ನು ತೀರಿಸುವ ಜವಾಬ್ದಾರಿ ಪಾಲಿಕೆಯ ಮೇಲೆ ಇರುತ್ತದೆ. ಒಂದು ವೇಳೆ ಆ ರಸ್ತೆ ಸಾಕಷ್ಟು ಅಭಿವೃದ್ಧಿ ಆಗಿಯೂ ಹಣ ಉಳಿದರೆ ಶ್ರೀನಿವಾಸ್ ಥಿಯೇಟರ್ ನಿಂದ ಕಾಳೀಕಾಂಬಾ ದೇವಸ್ಥಾನದ ಮುಂದೆ ಇರುವ ಕಂಡತ್ತ್ ಪಳ್ಳಿ ರಸ್ತೆ ಎಂದು ಕರೆಯುವ ರಸ್ತೆ ಇದೆ. ಅದನ್ನು ಅಭಿವೃದ್ಧಿ ಪಡಿಸಬಹುದು. ಅಂತಹ ಬರಗಾಲ ಪೀಡಿತ ರಸ್ತೆಯ ಅಭಿವೃದ್ಧಿಗೆ ಬಳಸಬಹುದು. ಆ ರಸ್ತೆಯ ಪರಿಸ್ಥಿತಿ ಹೇಗಿದೆ ಎಂದರೆ ಒಂದು ತುತ್ತು ಅನ್ನ ಕೊಡಿ, ಇಲ್ಲದಿದ್ರೆ ಸಾಯುತ್ತೆನೆ ಎನ್ನುವ ಹಾಗಿದೆ. ಆದರೆ ಪಾಲಿಕೆಯ ಅಧಿಕಾರಿಗಳು ಎಸ್ಟಿಮೇಶನ್ ಹಾಕಿಕೊಂಡು ಅಭಿವೃದ್ಧಿ ಮಾಡುತ್ತೇವೆ ಎಂದು ಹೊರಟಿರುವುದು ಯಾವ ರಸ್ತೆ ಗೊತ್ತಾ? ಬಳ್ಳಾಲ್ ಭಾಗ್-ಮಣ್ಣಗುಡ್ಡೆ ರಸ್ತೆ. ಯಾಕೆ ಅದನ್ನು ಮತ್ತೆ ಅಭಿವೃದ್ಧಿ ಮಾಡಬೇಕು, ನಾಳೆ ಹೇಳ್ತೆನೆ.
Leave A Reply