ಪಾಲಿಕೆ ಬಗ್ಗೆ ವಿದೇಶಿ ಸಂಶೋಧನೆ “ಹೌ ಯು ಡೆವೆಲಪ್ ಎ ರೋಡ್ ವಿಚ್ ಈಸ್ ಆಲ್ ರೆಡಿ ಡೆವೆಲಪ್ಡ್ ?”
ಮುದುಕಿಯನ್ನು ಹುಡುಗಿ ಮಾಡುವುದು ಕಷ್ಟ. ಅದೇ ಹುಡುಗಿಯನ್ನು ಒಂದಿಷ್ಟು ಮೇಕಪ್ ಮಾಡಿ ತೋರಿಸಿದರೆ ಅವಳು ಇನ್ನಷ್ಟು ಚೆಂದ ಕಾಣುತ್ತಾಳೆ. ಇದನ್ನು ಮಂಗಳೂರು ಮಹಾನಗರ ಪಾಲಿಕೆ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಆದ್ದರಿಂದ ರಸ್ತೆ ಅಗಲ ಮಾಡಿ, ಹೊಂಡ, ಗುಂಡಿಗಳನ್ನು ಮುಚ್ಚಿ ಅಥವಾ ಕಾಂಕ್ರೀಟಿಕರಣ ಮಾಡಿ ಚೆಂದ ಮಾಡಿದರೆ ಆಗುವ ಖರ್ಚು ದೊಡ್ಡದು. ಅದರ ಬದಲು ಮೊದಲೇ ಚೆಂದ ಇರುವ ಮಣ್ಣಗುಡ್ಡೆಯಿಂದ ಕುದ್ರೋಳಿಗೆ ಹೋಗುವ ರಸ್ತೆ, ಮಣ್ಣಗುಡ್ಡೆಯಿಂದ ಬಳ್ಳಾಲ್ ಬಾಗ್ ರಸ್ತೆ, ಕದ್ರಿ ಟೆಂಪಲ್ ರೋಡ್ ಇದನ್ನೆಲ್ಲ ಮತ್ತೆ ಚೆಂದ ಮಾಡಲು ಹೊರಟಿದೆ. ಯಾಕೆಂದರೆ ಇದರಲ್ಲಿ ಖರ್ಚಿಲ್ಲ. ಆದರೆ ಲಾಭ ದೊಡ್ಡದು. ಅದೇ ಕಂಡತ್ತ ಪಳ್ಳಿ ರಸ್ತೆ ಅಭಿವೃದ್ಧಿ ಮಾಡಿದರೆ ಖರ್ಚು ಜಾಸ್ತಿ ಲಾಭ ಕಡಿಮೆ ಎಂದು ಗೊತ್ತಿರುವುದರಿಂದ ಅಂತಹ ರಸ್ತೆಗಳನ್ನು ಮುಟ್ಟುವುದು ಬೇಡಾ, ಅದರ ಬದಲು ಅಭಿವೃದ್ಧಿಗೊಂಡಿರುವ ರಸ್ತೆಗಳನ್ನೇ ಮತ್ತೆ ಅಭಿವೃದ್ಧಿ ಮಾಡಿ ಕಡಲೆ ತಿಂದು ಕೈ ತೊಳೆಯೋಣ ಎಂದು ಪಾಲಿಕೆ ನಿರ್ಧರಿಸಿದೆ. ಅಗಲವಾಗಿರುವಂತಹ, ಕಾಂಕ್ರೀಟಿಕರಣವಾಗಿರುವ ರಸ್ತೆಗಳನ್ನು ಮತ್ತೆ ಅಭಿವೃದ್ಧಿ ಮಾಡುವ ಕಾನ್ಸೆಪ್ಟು ಹೊಂದಿರುವ ಏಕೈಕ ಮಹಾನಗರ ಪಾಲಿಕೆ ಇದೆಯೇನೋ. ಮುಂದಿನ ದಿನಗಳಲ್ಲಿ ಬೇರೆ ಪಾಲಿಕೆಯವರು ಇಲ್ಲಿಗೆ ಬಂದು ಹಾಳಾಗಿರುವ ರಸ್ತೆಗಳನ್ನು ಅಭಿವೃದ್ಧಿ ಮಾಡುವುದು ನಮಗೆ ಗೊತ್ತಿದೆ. ಅದು ಎಲ್ಲಾ ಕಡೆ ಕಾಮನ್. ಆದರೆ ಸರಿಯಾಗಿರುವ ರಸ್ತೆಗಳನ್ನು ಅಭಿವೃದ್ಧಿ ಮಾಡುವ ನಿಮ್ಮ ಕಾನ್ಸೆಪ್ಟು ತುಂಬಾ ಇಷ್ಟವಾಯಿತು. ಅದಕ್ಕೆ ಸ್ಟಡಿ ಮಾಡಲು ಬಂದೆವು ಎಂದು ಬೇರೆ ಕಡೆಯಿಂದ ಜನ ಬರಬಹುದು. ವಿದೇಶಿ ಸಂಶೋಧಕರು ಇಲ್ಲಿಗೆ ಬಂದು ” ಹೌ ಯು ಡೆವೆಲಪ್ ಎ ರೋಡ್ ವಿಚ್ ಈಸ್ ಆಲ್ ರೆಡಿ ಡೆವೆಲಪ್ ?” ಎಂದು ಸಂಶೋಧನಾ ಗ್ರಂಥ ಬರೆಯಬಹುದು. ವಿಶ್ವವಿದ್ಯಾನಿಲಯಗಳಲ್ಲಿ ” ಎ ಸ್ಟೋರಿ ಬಿಹೈಂಡ್ ಡೆವೆಲಪ್ಡ್ ರೋಡ್ ವಿಚ್ ಈಸ್ ಎಗೈನ್ ಡೆವೆಲಪಿಂಗ್” ಎಂದು ಸಂಶೋಧನೆ ಮಾಡಿ ಡಾಕ್ಟರೇಟ್ ತೆಗೆದುಕೊಳ್ಳಲು ಯಾರಾದರೂ ಹೊರಡಬಹುದು. ಹೀಗೆ ಡೆವೆಲಪ್ ಆದ ಕಡೆ ಮತ್ತೆ ಡೆವೆಲಪ್ ಮೆಂಟಿಗೆ ಹೊರಟ ಮಂಗಳೂರು ಮಹಾನಗರ ಪಾಲಿಕೆ ಎಂದು ರಾಷ್ಟ್ರೀಯ ವಾಹಿನಿಗಳು ನ್ಯೂಸ್ ಮಾಡಬಹುದು. ಇದೆಲ್ಲಾ ನಡೆಯುವ ಸಾಧ್ಯತೆ ಇದೆ. ಅದಕ್ಕಾಗಿ ನಾನು ಶಾಸಕರ ಬಳಿ ಮತ್ತು ಪಾಲಿಕೆ ಬಳಿ ಕೇಳಿಕೊಳ್ಳುವುದೇನೆಂದರೆ ನೀವೊಂದು ಸುದ್ದಿಗೋಷ್ಟಿ ಬೇಗ ಕರೆಯಬೇಕು ಮತ್ತು ನಿಮ್ಮ ಸಾಧನೆಯೆಂದು ಈ ವಿಷಯ ಹೇಳಬೇಕು. ಹಾಳಾಗಿರುವ ರಸ್ತೆಗಳನ್ನು ಯಾರು ಬೇಕಾದರೂ ಸರಿ ಮಾಡಬಹುದು. ಆದರೆ ಸರಿಯಿರುವ ರಸ್ತೆಗಳನ್ನು ಮತ್ತೆ ಸರಿ ಮಾಡಲು ಗಟ್ಸ್ ಬೇಕು. ಅದು ಇರುವುದು ನಮ್ಮ ಪಾಲಿಕೆಗೆ ಮಾತ್ರ.
ಇನ್ನು ಇವರ ಪ್ಲಾನ್ ಇರುವುದು ಸರ್ಕಲ್ ಅಭಿವೃದ್ಧಿ. ಅಭಿವೃದ್ಧಿ ಎಂದರೆ ಪಾಲಿಕೆಯಲ್ಲಿ ಪರ್ಯಾಯ ಶಬ್ದ ಹಣ ಮಾಡುವುದು. ಹಣ ಮಾಡೋಣ ಎಂದು ನೇರವಾಗಿ ಹೇಳಿದರೆ ಜನರಿಗೆ ತಪ್ಪು ಅಭಿಪ್ರಾಯ ಹೋಗಬಹುದು ಎಂದು ಅದಕ್ಕೆ ಕೋಡ್ ವರ್ಡ್ ಆಗಿ ಅಭಿವೃದ್ಧಿ ಮಾಡೋಣ ಎಂದು ಬಳಸಲಾಗುತ್ತದೆ. ಮುಂದೆ ಯಾವತ್ತಾದರೂ ನೀವು ಪಾಲಿಕೆಯ ಕಡೆಯಿಂದ ಅಭಿವೃದ್ಧಿಗೆ ಚಿಂತನೆ ಎಂದು ಶಬ್ದಗಳನ್ನು ಕೇಳಿದರೆ ಹಣ ಮಾಡುವುದಕ್ಕೆ ಚಿಂತನೆ ಎಂದು ಅರ್ಥ ಮಾಡಿಕೊಳ್ಳಬಹುದು. ಅದರ ಒಂದು ಭಾಗವಾಗಿ ಸರ್ಕಲ್ ಗಳ “ಅಭಿವೃದ್ಧಿ” ಮಾಡಲು ಪಾಲಿಕೆ ಹೊರಟಿದೆ. ಇವರು ಹಿಂದೆ ಅಭಿವೃದ್ಧಿ ಮಾಡಿದ ಕುರುಹಾಗಿ ಲೇಡಿಹಿಲ್ ಸರ್ಕಲ್ ಹೇಗಿದೆ ಎಂದು ಈಗ ನೋಡಬಹುದು. ಅದನ್ನು ನೋಡಿದ ಮೇಲೆ ಅಭಿವೃದ್ಧಿ ಎಂದರೆ ಏನು ಎನ್ನುವುದಕ್ಕೆ ಸಾಕ್ಷಿ ಕೂಡ ಸಿಗುತ್ತದೆ. ಪಾಲಿಕೆಯ ದಾಖಲೆಗಳಲ್ಲಿ ಅಭಿವೃದ್ಧಿ ಆಗಿದೆ ಎಂದು ಇಷ್ಟು ಬಿಲ್ ಆಗಿರುತ್ತದೆ. ಆದರೆ ಅಭಿವೃದ್ಧಿ ಎನ್ನುವುದು ಅಧಿಕಾರಿಗಳ, ಸದಸ್ಯರ ಮನೆಗಳಲ್ಲಿ ಆಗಿರುತ್ತದೆ. ಇದನ್ನು ಸುಮ್ಮನೆ ಹೇಳುತ್ತಿಲ್ಲ. ಲೇಡಿಹಿಲ್ ಸರ್ಕಲ್ ಬಳಿ ಇಂಟರ್ ಲಾಕ್ ಹಿಂದೆ ಹಾಕಲಾಗಿತ್ತು. ಅದು ಚೆನ್ನಾಗಿಯೇ ಇತ್ತು. ಆದರೆ ಅದನ್ನು ಇತ್ತೀಚೆಗೆ ತೆಗೆದು ಅಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಇದರ ಅಗತ್ಯ ಏನಿತ್ತು ಎನ್ನುವುದು ಪ್ರಶ್ನೆ. ಒಳ್ಳೆಯ ಇಂಟರ್ ಲಾಕ್ ಇದ್ದದ್ದನ್ನು ತೆಗೆದು ಕಾಂಕ್ರೀಟ್ ಹಾಕುವುದರಿಂದ ಕೆಲವರ “ಅಭಿವೃದ್ಧಿ” ಆಗಿದೆ.
ಕೆಲವು ಶ್ರೀಮಂತರು ಆಗಾಗ ತಮ್ಮ ಬಂಗ್ಲೆಯನ್ನು ನವೀಕರಣ ಮಾಡುವುದನ್ನು ಕೇಳಿದ್ದೇವೆ. ಯಾಕೆ ಮಾಡುತ್ತಾರೆ ಎಂದರೆ ಹಣ ಜಾಸ್ತಿ ಇರುತ್ತದೆ. ಅವರು ನವೀಕರಣ ಮಾಡುವ ಹಣದಲ್ಲಿ ಇನ್ನೊಂದು ಮನೆ ಕಟ್ಟಬಹುದು. ಆದರೆ ಕಟ್ಟುವುದಿಲ್ಲ. ಇಲ್ಲಿ ಕೂಡ ಹಾಗೆನೆ. ಮೊದಲು ಇಂಟರ್ ಲಾಕ್ ಹಾಕುವುದು, ಅದರಲ್ಲಿ ಕಮೀಷನ್ ಹೊಡೆಯುವುದು, ಬಳಿಕ ಅದನ್ನು ತೆಗೆದು ಅಲ್ಲಿ ಕಾಂಕ್ರೀಟ್ ಹಾಕುವುದು. ಚೆನ್ನಾಗಿದ್ದ ಇಂಟರ್ ಲಾಕ್ ತೆಗೆದದ್ದು ಯಾಕೆ ಎಂದು ಯಾರಾದರೂ ಕೇಳಿದರೆ ಎನ್ನುವ ಹೆದರಿಕೆ ಇವರಿಗೆ ಇಲ್ಲ. ಯಾಕೆಂದರೆ ನಮ್ಮಲ್ಲಿ ಕೇಳುವ ಸಂಪ್ರದಾಯ ಇಲ್ಲವೇ ಇಲ್ಲ. ಲೇಡಿಹಿಲ್ ನಿಂದ ಉರ್ವಾ ಸ್ಟೋರ್ ಕಡೆ ಹೋಗುವ ರಸ್ತೆಯ ಬದಿಗಳಲ್ಲಿ ಇದ್ದ ಇಂಟರ್ ಲಾಕ್ ತೆಗೆದು ಅಲ್ಲಿ ಕಾಂಕ್ರೀಟಿಕರಣ ಮಾಡಲಾಗಿದೆ. ಲೇಡಿಹಿಲ್ ಸರ್ಕಲ್ ಹತ್ತಿರ ಇರುವ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರದ ಎದುರು ಕೂಡ ಅದೇ ಕಥೆ. ಇಂಟರ್ ಲಾಕ್ ಹಾಕಿದ್ದು ಚೆನ್ನಾಗಿಯೇ ಇತ್ತು. ಹಾಗಂತ ಅದನ್ನು ಹಾಗೆ ಬಿಡೋಕೆ ಆಗುತ್ತಾ ಎಂದು ಅದನ್ನು ಕಿತ್ತು ಕಾಂಕ್ರೀಟ್ ಹಾಕಲಾಗಿದೆ.
ಹಾಗಂತ ಇವರಿಗೆ ನಿಜವಾಗಿಯೂ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇದೆಯಾ ಎಂದು ನೋಡಿದರೆ ಪಂಪ್ ವೆಲ್ ನಿಂದ ಪಡೀಲ್ ಗೆ ಹೋಗುವ ರಸ್ತೆಯನ್ನು ನೋಡಿದರೆ ಗೊತ್ತಾಗುತ್ತದೆ. ಹತ್ತು ಶೇಕಡಾ ಕೆಲಸ ಮಾಡಿ ಅಲ್ಲಿಗೆ ನಿಲ್ಲಿಸಲಾಗಿದೆ. ಆ ಬಗ್ಗೆ ನಾಳೆ ಹೇಳ್ತೇನೆ!
Leave A Reply