ತೊಡೆ ತಟ್ಟಿಸಿಕೊಂಡ ಬಳಿಕ ರಾಜಕಾರಣಕ್ಕೆ ಬಂದು ಏನು ಮಾಡುತ್ತೀರಿ ಪ್ರಕಾಶ್ ರೈ?
ನಾನು ಜನ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಿಮ್ಮ ಮನೆಯ ಮಗನಾಗಿ, ಅಣ್ಣನಾಗಿ ಕೆಲಸ ಮಾಡುತ್ತೇನೆ ಎಂದು ರಾಜಕೀಯಕ್ಕೆ ಬಂದು ತಕ್ಕದಾದ ಸೇವೆ ಸಲ್ಲಿಸುವವರನ್ನು ನೋಡಿದ್ದೇವೆ. ಇನ್ನು ಪ್ರಧಾನಿಯಾದಾಗಿನಿಂದಲೂ ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶಕ್ಕಾಗಿ ದುಡಿಯುವ ಪ್ರಧಾನಿ ನರೇಂದ್ರ ಮೋದಿ ಅವರಂಥ ಅಪ್ರತಿಮ ಜನಸೇವಕ ಕಮ್ ರಾಜಕಾರಣಿಯನ್ನು ಕಂಡಿದ್ದೇವೆ.
ಆದರೆ ಇದೆಲ್ಲದಕ್ಕಿಂತ ಡಿಫರೆಂಟು ನಟ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ಅವರ ಶೈಲಿ…
“ನನಗೆ ಯಾರಾದರೂ ಬಲವಂತ ಮಾಡಿದರೆ, ನನ್ನ ವಿರುದ್ಧ ಯಾರಾದರೂ ತೊಡೆ ತಟ್ಟಿದರೆ ನಾನು ಯಾವಾಗಲೂ ರಾಜಕೀಯಕ್ಕೆ ಬರಲು ಸಿದ್ಧ”…
ಪ್ರೆಸ್ ಕ್ಲಬ್ ನಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಕಾಶ್ ರೈ ನೀಡಿದ ಹೇಳಿಕೆ ಇದು.
ಹೇಳಿ ಯಾರು ತಾನೆ ರಾಜಕೀಯ ಸೇರಲು ಹೀಗೆ ಮಾತನಾಡುತ್ತಾರೆ? ರಾಜಕಾರಣಿಯಾದವನ, ಆಗುವವನ ಮನದಾಳ ಏನಿರಬೇಕು? ಇಷ್ಟು ದಿನ ಸುಮ್ಮನಿದ್ದು, ಕಾವೇರಿ ವಿಷಯದಲ್ಲಿ ಮಗುಮ್ಮಾಗಿದ್ದು ಈಗ ರಾಜ್ಯದ ವಿಚಾರಗಳಲ್ಲಿ ಮೂಗು ತೂರಿಸುತ್ತಿರುವ ಪ್ರಕಾಶ್ ರೈ ಏನು ಹೇಳಲು ಹೊರಟಿದ್ದಾರೆ.
ಖಂಡಿತವಾಗಿಯೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಬೇಕಾದರೂ ರಾಜಕಾರಣಕ್ಕೆ ಬರಬಹುದು. ಅಷ್ಟಕ್ಕೂ ಟೀ ಮಾರುತ್ತಿದ್ದ ನರೇಂದ್ರ ಮೋದಿ ಅವರು ಇಂದು ಪ್ರಧಾನಿಯಾಗಿರುವುದು ದೇಶದ ಪ್ರಜಾಪ್ರಭುತ್ವದ ಗರಿಮೆಯೇ ಸರಿ. ಆದರೆ, ಪ್ರಕಾಶ್ ರೈ ಹೇಳಿರುವ ಹೇಳಿಕೆ ಹಿಂದಿನ ಸಂದೇಶವೇನು?
ಸ್ವಾಮಿ ಪ್ರಕಾಶ್ ರೈ ಅವರೇ, ನಿಮಗೆ ಅಷ್ಟು ಜನ ಬೆಂಬಲ ಇದ್ದರೆ, ಜನರ ಸೇವೆ ಮಾಡಬೇಕು ಎಂಬ ಉತ್ಕಟ ಮನೋಭಿಲಾಷೆ ಇದ್ದರೆ ಖಂಡಿತವಾಗಿಯೂ ರಾಜಕೀಯಕ್ಕೆ ಬನ್ನಿ. ಬಂದು ಜಯಿಸಿದರೆ ಜನರ ಸೇವೆ ಮಾಡಿ. ಯಾರಿಗೂ, ಯಾವುದೂ ತಕರಾರಿಲ್ಲ.
ಆದರೆ ನೀವು ಕರ್ನಾಟಕದಲ್ಲಿ ರಾಜಕೀಯ ಮಾಡಲು ಯಾರು ಒತ್ತಾಯ ಮಾಡಬೇಕು? ಯಾರು ಏಕೆ ನಿಮ್ಮ ವಿರುದ್ಧ ತೊಡೆತಟ್ಟಿ ರಾಜಕೀಯಕ್ಕೆ ಬನ್ನಿ ಎಂದು ಪಂಥಾಹ್ವಾನ ನೀಡಬೇಕು? ತೊಡೆತಟ್ಟಿದರೇ ಬರಬೇಕು ಎನ್ನಲು ರಾಜಕೀಯವೇನು ಕುಸ್ತಿ ಅಖಾಡವೇ? ಅಷ್ಟಕ್ಕೂ ನೀವು ಬರಬೇಕು ಎಂದು ಬಯಸುತ್ತಿರುವುದು ರಾಜಕೀಯಕ್ಕೋ, ಯಾರದೋ ವಿರುದ್ಧ ಹೋರಾಡಲೋ? ಅಥವಾ ಜನ ಸೇವೆ ಮಾಡಲೋ? ರಾಜಕೀಯ ಎಂದರೆ ಕಾಳಗ ಭೂಮಿ ಎಂದುಕೊಂಡಿರಾ?
ಇನ್ನು ದೇಶದಲ್ಲಿ ಹಿಟ್ಲರ್ ಅಂಥ ಆಡಳಿತ ಇದೆ ಎನ್ನುವ ನೀವು, ಸಮಾಜದಲ್ಲಿ ಆಗುವ, ಗೌರಿ ಲಂಕೇಶ್ ಹತ್ಯೆ ಖಂಡಿಸುವ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನೀವು ಬಿಜೆಪಿ ಆರೆಸ್ಸೆಸ್ ಕಾರ್ಯಕರ್ತರ ಕೊಲೆ, ಲವ್ ಜಿಹಾದ್, ಕ್ರೈಸ್ತರ ಮತಾಂತರದ ಕುರಿತು ಏಕೆ ಧ್ವನಿ ಎತ್ತುವುದಿಲ್ಲ? ಯಾವ ಅಳಕು ನಿಮ್ಮನ್ನು ಕಾಡುತ್ತದೆ ಎಂದು ಕೇಳಬಹುದೆ?
ರಾಜಕೀಯ, ರಾಜಕಾರಣಿ ಎಂಬುದಕ್ಕೆ ಪ್ರಜಾಪ್ರಭುತ್ವದಲ್ಲಿ ವಿಶಾಲ ಅರ್ಥವಿದೆ. ಸೇವೆಗೆ ಪರ್ಯಾಯವಾಗಿ ನಾವು ಭಾವಿಸಿದ್ದೇವೆ ಹಾಗೂ ಅದೇ ಭಾವನೆಯಿಂದ ಮತ ಹಾಕುತ್ತೇವೆ. ಆದರೆ ಅದನ್ನು ಕುಸ್ತಿಯ ಅಖಾಡ ಮಾಡಲು ಹೊರಟಿರುವ ನಿಮ್ಮ ಮನೋಭಾವಕ್ಕೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ.
Leave A Reply