ರೋಶನ್ ಬೇಗ್ ಮಂಗಳೂರಿಗೆ ಬಂದು ಕುಡ್ಸೆಂಪು ಜಾತಕ ಬಿಚ್ಚಿದರು!
ಒಂದು ನಗರದಲ್ಲಿ ವಾಸಿಸುವ ಜನರಿಗೆ ಅತ್ಯಗತ್ಯವಾಗಿ ಬೇಕಾಗಿರುವುದು ಏನು? ಒಂದು ಕುಡಿಯುವ ನೀರು ಮತ್ತೊಂದು ಒಳಚರಂಡಿ ವ್ಯವಸ್ಥೆ. ಕುಡಿಯುವ ನೀರು ಸರಿಯಾಗಿ ಸಿಗದಿದ್ದರೆ ಜನರ ಆರೋಗ್ಯದ ಹದಗೆಡುತ್ತೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿದ್ದರೆ ನಗರದ ಆರೋಗ್ಯ ಹದಗೆಡುತ್ತೆ. ಆದ್ದರಿಂದ ನಾವು ಕುಡಿಯುವ ನೀರು ಮತ್ತು ನಮ್ಮ ದೇಹದ ತ್ಯಾಜ್ಯ ಹೋಗಲು ಎರಡಕ್ಕೂ ಸರಿಯಾದ ವ್ಯವಸ್ಥೆಯಾದರೆ ಇಡೀ ಊರು ಚೆನ್ನಾಗಿರುತ್ತದೆ. ಹಾಗಂತ ಇಡೀ ನಗರಕ್ಕೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಮಾಡಲು ಚಿಲ್ಲರೆ ಹಣ ಸಾಕಾಗುತ್ತಿದೆಯಾ? ಒಂದಿಷ್ಟು ಕೋಟಿಯಾದರೂ ಬೇಕು. ಆ ಬಗ್ಗೆ ಚಿಂತನೆಯಾದಾಗ ಕೊನೆಗೆ ಮೂನ್ನೂರ ಎಂಟು ಕೋಟಿ ಬೇಕಾಗುತ್ತದೆ ಎಂದು ರೂಪುರೇಶೆ ಸಿದ್ಧವಾಯಿತು. ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡ ಖರ್ಚಿದ್ದರೆ ನಾವು ಏನು ಮಾಡುತ್ತೇವೆ. ಯಾರಿಂದಲಾದರೂ ಸಾಲ ತೆಗೆದುಕೊಂಡು ನಂತರ ಅನುಕೂಲವಾದಾಗ ಹಿಂತಿರುಗಿಸುತ್ತೇವೆ ಎಂದು ಹೇಳುತ್ತೇವೆ. ಹಾಗೆ ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿಂದ ಹೊಂದಿಸುವುದು ಎನ್ನುವ ಪ್ರಶ್ನೆ ಮಂಗಳೂರು ಮಹಾನಗರ ಪಾಲಿಕೆಗೆ ಬಂದಾಗ ರಾಜ್ಯ ಸರಕಾರದ ಮೂಲಕ ಏಶಿಯನ್ ಡೆವೆಲಪ್ ಮೆಂಟ್ ಬ್ಯಾಂಕ್ ಮುಂದೆ ತಟ್ಟೆ ಹಿಡಿದು ನಮ್ಮ ಊರನ್ನು ಉದ್ಧಾರ ಮಾಡಲು ಹಣ ಬೇಕು. ಅನುಕೂಲವಾದಾಗ ಜನರನ್ನು ಸುಲಿದು ನಿಮಗೆ ಹಿಂತಿರುಗಿಸುತ್ತೇವೆ ಎಂದು ಭರವಸೆ ಕೊಡಲಾಯಿತು. ಏಡಿಬಿ ಯವರ ಹತ್ತಿರ ಹಣ ಜಾಸ್ತಿ ಇತ್ತೊ ಅಥವಾ ನಮ್ಮವರೊಂದಿಗೆ ಆತ್ಮೀಯ ಸಂಬಂಧ ಇತ್ತೋ, ಅವರಿಗೆ ಗೊತ್ತು. ಸರಿ, ಮೊದಲ ಹಂತವಾಗಿ ತೆಗೆದುಕೊಳ್ಳಿ 305 ಕೋಟಿ ಎಂದು ಕೊಟ್ಟುಬಿಟ್ಟರು. ಎಡಿಬಿ ಕೊಟ್ಟ ಹಣವನ್ನು ಸರಿಯಾಗಿ ಪೈಸೆಗೆ ಪೈಸೆಗೆ ಲೆಕ್ಕ ಹಾಕಿ ಖರ್ಚು ಮಾಡಿದಿದ್ದರೆ 2025 ರ ತನಕ ಮಂಗಳೂರಿಗೆ ಇಡೀ ದಿನ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ.
ಎಡಿಬಿಯಿಂದ ಮುನ್ನೂರು ಕೋಟಿಗಿಂತಲೂ ಹೆಚ್ಚು ಹಣ ಬಂತು. 24*7 ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಮಾಡ್ತಾ ಇದ್ದೇವೆ, ಯಾರಾದರೂ ಟೆಂಡರ್ ಹಾಕಿ ಎಂದು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಿದ ನಂತರ ಈ-ಟೆಂಡರ್ ಮೂಲಕ ಅರ್ಜಿಗಳು ಬಂದವು.
ಪಾಲಿಕೆ ಮುನ್ನೂರು ಕೋಟಿಯಷ್ಟು ಹಣವನ್ನು ಕೈಯಲ್ಲಿ ಹಿಡಿದು ಯೋಚಿಸಿತು. ಇದನ್ನು ಖರ್ಚು ಮಾಡುವುದೇನೋ ಸರಿ, ಟೆಂಡರ್ ತೆಗೆದುಕೊಂಡ ಯಾವುದೋ ಕಂಪೆನಿ ಕೆಲಸ ಮಾಡುತ್ತದೆ, ಆದರೆ ಅದನ್ನು ನೋಡಿಕೊಳ್ಳಲು, ಕಾಮಗಾರಿ ಪರಿಶೀಲಿಸಲು ಒಂದು ವ್ಯವಸ್ಥೆ ಮಾಡಬೇಕಲ್ಲ ಎಂದು ಚಿಂತಿಸಿತು. ಅದರ ಪ್ರಕಾರ ಒಂದು ಸಂಸ್ಥೆಯನ್ನು ಅದಕ್ಕಾಗಿ ನಿರ್ಮಾಣ ಮಾಡಲಾಯಿತು. ಅದು ಕುಡ್ಸೆಂಪು. ಇದೆಂತಹ ಹೆಸರು ಎಂದು ಅಂದುಕೊಳ್ಳಿ. ಇದು ಉದ್ದ ಹೆಸರೊಂದರ ಚಿಕ್ಕ ರೂಪ. ಕರ್ನಾಟಕ ಅರ್ಬನ್ ಡೆವೆಲಪ್ ಮೆಂಟ್ ಅಂಡ್ ಕೋಸ್ಟಲ್ ಮ್ಯಾನೇಜ್ ಮೆಂಟ್ ಪ್ರಾಜೆಕ್ಟ್ ಎನ್ನುವುದೇ ಕುಡ್ಸೆಂಪು.
ಒಂದು ಪ್ರಾಜೆಕ್ಟ್ ಎಂದು ಸ್ಥಾಪಿಸಿದ ಮೇಲೆ ಅದಕ್ಕೊಬ್ಬ ನಿರ್ದೇಶಕ ಬೇಕು ತಾನೆ, ಯಾರನ್ನು ಕುಡ್ಸೆಂಪು ನಿರ್ದೇಶರನ್ನಾಗಿ ಮಾಡುವುದು ಎನ್ನುವ ವಿಷಯ ಬಂದಾಗ ಅಂಗೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕೆ ಹುಡುಕುವುದು ಯಾಕೆ ಎಂದು ಅಂದುಕೊಂಡ ರಾಜ್ಯ ಸರಕಾರ ಮತ್ತು ಪಾಲಿಕೆ ಜೆ ಆರ್ ಲೋಬೋ ಅವರನ್ನು ಕುಡ್ಸೆಂಪು ನಿರ್ದೇಶಕರನ್ನಾಗಿ ಮಾಡಿ ಹೊಸ ಜವಾಬ್ದಾರಿಗೆ ಕಳುಹಿಸಲಾಯಿತು. ಜೆ ಆರ್ ಲೋಬೋ ಅವರನ್ನೇ ನಿರ್ದೇಶಕರನ್ನಾಗಿ ಮಾಡಿದ್ದು ಯಾಕೆ?
ಲೋಬೋ ಅವರಲ್ಲಿ ಒಂದು ವಿಶೇಷತೆ ಇದೆ. ಅವರು ತಮ್ಮ ಸೇವಾವಧಿಯ 35 ವರ್ಷಗಳಲ್ಲಿ 30 ವರ್ಷಗಳನ್ನು ನಮ್ಮ ಜಿಲ್ಲೆಯಲ್ಲಿಯೇ ಮುಗಿಸಿದ್ದಾರೆ. ಇಂತಹ ಇನ್ನೊಬ್ಬ ಅಧಿಕಾರಿ ನಿಮಗೆ ಸಿಗುವುದಿಲ್ಲ ಮತ್ತು ಸಿಗಲೂಬಾರದು. ಅಂದರೆ ಲೋಬೋ ಅವರು ಸರಕಾರದೊಂದಿಗೆ ಅದ್ಯಾವ ಮ್ಯಾಜಿಕ್ ಮಾಡುತ್ತಿದ್ದರೋ ದೇವರಿಗೆ ಗೊತ್ತು. ಅವರು ಇಲ್ಲಿಯೇ ಒಂದಲ್ಲ ಒಂದು ಹುದ್ದೆಯಲ್ಲಿ ಇರುತ್ತಿದ್ದರೆ ವಿನ: ಇಲ್ಲಿಂದ ಅಲುಗಾಡಿರಲಿಲ್ಲ. ಒಬ್ಬ ಕೆಎಎಸ್ ಅಧಿಕಾರಿ ಒಂದೇ ಕಡೆ ಮೂರು ದಶಕಗಳ ತನಕ ಗೂಟ ಹೊಡೆದು ಕುಳಿತುಕೊಳ್ಳುತ್ತಾರೆ ಎಂದರೆ ಬೇರೆ ಕೆಎಎಸ್ ಅಧಿಕಾರಿಗಳು ಇವರಿಂದ ತರಬೇತಿ ಪಡೆಯುವುದು ಒಳ್ಳೆಯದು. ಯಾಕೆಂದರೆ ಟ್ರಾನ್ಸಫರ್ ಆಗುವ ಟೆನ್ಷನ್ ಉಳಿಯುತ್ತದೆ. ಕುಡ್ಸೆಂಪು ಆಗುವಾಗ ಲೋಬೋ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದರು. ಸರಿ, ನೀವೆ ಅದರ ನಿರ್ದೇಶಕರಾಗಿ ಎನ್ನುವ ಆದೇಶ ಇವರಿಗೆ ಸಿಕ್ಕಿತು. ಇವರನ್ನೇ ಯಾಕೆ ಮಾಡಿದ್ದು ಎಂದರೆ ಮೂವತ್ತು ವರ್ಷ ಒಂದೇ ಕಡೆ ಇದ್ದವರಿಗೆ ಆ ಊರಿನ ಸಮಸ್ತ ಒಳಹೊರ ಗೊತ್ತಿರುತ್ತದೆ. ಭೌಗೋಳಿಕ ಪರಿಕಲ್ಪನೆ ಚೆನ್ನಾಗಿರುತ್ತದೆ. ಇಲ್ಲಿನ ಮಣ್ಣಿನ ಸಾಂದ್ರತೆ, ನೆಲದ ಗುಣ ಸಮರ್ಪಕವಾಗಿ ಅಂದಾಜು ಇರುವುದರಿಂದ ಎಲ್ಲವೂ ಕೈ ಮೇಲಿನ ಗೆರೆಯಷ್ಟು ಸ್ಪಷ್ಟವಾಗಿರುವುದರಿಂದ ಬೇರೆ ಯಾರನ್ನೋ ಕರೆದು ಮುನ್ನೂರು ಕೋಟಿಯನ್ನು ಕೊಟ್ಟು ಕುಲಗೆಡಿಸುವುದಕ್ಕಿಂತ ಇವರನ್ನೇ ನಿರ್ದೇಶಕರನ್ನಾಗಿ ಮಾಡಿದರೆ ಟೆನ್ಷನ್ ಇಲ್ಲದೆ ಕೆಲಸ ಮುಗಿಯುತ್ತದೆ ಎಂದು ಆಗಿನ ನಗರಾಭಿವೃದ್ಧಿ ಸಚಿವರು ಮತ್ತು ಇಲಾಖೆ ಅಂದುಕೊಂಡಿತ್ತು.
ಸರಿ, ಲೋಬೋ ಕಮೀಷನರ್ ಕುರ್ಚಿಯಿಂದ ಕುಡ್ಸೆಂಪು ಕುರ್ಚಿಗೆ ಶಿಫ್ಟ್ ಆದರು. ಕಾಮಗಾರಿ ಶುರುವಾಯಿತು. ಲೋಬೋ ಅವರೇ ನಿಂತು ಮಾಡಿಸಿದ ಕಾರಣ ಅವರಿಗೆ ಇಲ್ಲಿನ ವಸ್ತುಸ್ಥಿತಿ ಗೊತ್ತಿದ್ದ ಕಾರಣ ಎಲ್ಲರಿಗೂ ಕೆಲಸ ಒಳ್ಳೆಯದಾಗಬಹುದು ಎನ್ನುವ ನಂಬಿಕೆ ಇತ್ತು. ಆ ನಂಬಿಕೆ ಉಳಿಯಿತಾ? ನಾನು ಬರೆದ್ರೆ ನೀವು ಏನು ಅಂದುಕೊಳ್ಳುತ್ತೀರೋ. ಆದರೆ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರು ಸ್ವತ: ಮಂಗಳೂರಿಗೆ ಬಂದು ಸುರತ್ಕಲ್ ಗೆ ಹೋಗಿ ಅಲ್ಲಿನ ಕುಡ್ಸೆಂಪು ಕಾಮಗಾರಿ ನೋಡಿ ನುಡಿದ ನುಡಿಮುತ್ತುಗಳು ಇವೆಯಲ್ಲ, ಅದನ್ನು ನೀವು ಕೇಳಬೇಕು. ಕುಡ್ಸೆಂಪು ಕಾಮಗಾರಿಯ ಜಾತಕ ಬಿಚ್ಚಿಕೊಳ್ಳುತ್ತದೆ.
Leave A Reply