ನವಐಡಿಯಾ+ನವಬಿಜೆಪಿ=ನವಕರ್ನಾಟಕ
ನಮ್ಮ ರಾಜ್ಯ ನವಕರ್ನಾಟಕ ಆಗಬೇಕಾದರೆ ಯಾರ್ಯಾರು ಯಾವುದೆಲ್ಲ ಸಲಹೆಗಳನ್ನು ಕೊಡುತ್ತೀರಿ ಎಂದು ಭಾರತೀಯ ಜನತಾ ಪಾರ್ಟಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಜನರಿಗೆ ಕೇಳುತ್ತಿದೆ. ಅಂತಹ ಒಂದು ಪ್ರಯತ್ನ ಮಂಗಳೂರು ದಕ್ಷಿಣದಲ್ಲಿಯೂ ಮೊನ್ನೆ ಆಗಿತ್ತು. ವಿವಿಧ ಕ್ಷೇತ್ರಗಳ ಪ್ರಮುಖರು ಬಂದಿದ್ದರು. ತಮ್ಮ ತಮ್ಮ ಅನುಕೂಲತೆಗೆ ತಕ್ಕಂತೆ ರಾಜ್ಯ ಸರಕಾರ, ಕೇಂದ್ರ ಸರಕಾರ ಹೀಗಿಗೆ ಮಾಡಿದರೆ ಒಳ್ಳೆಯದು ಎಂದು ಹೇಳಿದರು. ಎಲ್ಲರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಅದನ್ನು ಬೆಂಗಳೂರಿನಲ್ಲಿನ ಬಿಜೆಪಿ ಕಚೇರಿಗೆ ಹಾಗೂ ದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ಕಳುಹಿಸಿಕೊಡುತ್ತೇವೆ ಎಂದು ಪ್ರಾರಂಭದಲ್ಲಿಯೇ ವೇದಿಕೆಯಲ್ಲಿದ್ದವರು ಒಬ್ಬರು ಹೇಳಿದ್ರು. ಬಹುಶ: ಅಲ್ಲಿ “ಭಾಷಣ” ಮಾಡಿದ ಪ್ರತಿಯೊಬ್ಬರ ಅನಿಸಿಕೆ ಹಾಕಿದ್ರೆ ನವಕರ್ನಾಟಕ ಆಗುವುದರಲ್ಲಿ ಸಂಶಯವೇ ಇಲ್ಲ. ಆದರೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಎಷ್ಟೆಷ್ಟು ಭರವಸೆ ಕೊಡಬಹುದೋ ಅಷ್ಟು ಮಾತ್ರ ಕೊಡಲು ಸಾಧ್ಯ. ಉಳಿದದ್ದನ್ನು ಇಲ್ಲಿ ಪ್ರಚಾರಕ್ಕೆ ಬರುವ ಸ್ಟಾರ್ ಪ್ರಚಾರಕರು ತಮ್ಮ ಭಾಷಣದಲ್ಲಿ ಅಥವಾ ಮಾಧ್ಯಮಗೋಷ್ಟಿಯಲ್ಲಿ ಹೇಳಬಹುದು.
ಕ್ರೆಡಾಯಿ ಅಧ್ಯಕ್ಷ ಡಿಬಿ ಮೆಹ್ತಾ ಅವರು ಮಾತನಾಡುತ್ತಾ ರೇರಾ ಅಥವಾ ಜಿಎಸ್ ಟಿಯಲ್ಲಿರುವ ನಿಯಮಗಳನ್ನು ಸಡಿಲಗೊಳಿಸಿದರೆ ಬಿಲ್ಡರ್ ಗಳಿಗೆ ಅನುಕೂಲಕರವಾಗುತ್ತದೆ ಎಂದರು. ನಂತರ ಕೆನರಾ ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ವಾಟಿಕಾ ಪೈ ಮಾತನಾಡಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಇನ್ನಷ್ಟು ಜಾಸ್ತಿ ಮಾಡಿದರೆ ಇಲ್ಲಿ ಅನೇಕ ರೀತಿಯಲ್ಲಿ ಉದ್ಯಮಗಳು ಬೆಳೆಯಲು ಅನುಕೂಲಕರವಾಗುತ್ತದೆ. ತಾವು ಈ ಬಗ್ಗೆ ತಮ್ಮ ಮನವಿಯನ್ನು ಹಲವು ಬಾರಿ ಸಂಬಂಧಪಟ್ಟವರಿಗೆ ಸಲ್ಲಿಸಿದ್ದೇವೆ ಎಂದರು. ಇದು ನಿಜಕ್ಕೂ ಒಳ್ಳೆಯ ಬೇಡಿಕೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣಗಳಲ್ಲಿ ಒಂದು. ನಮ್ಮ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದೇ ಗುಡ್ಡದ ಮೇಲೆ. ಇಲ್ಲಿ ರನ್ ಮೇ ಅಂತರ ಕಡಿಮೆ. ಇದರಿಂದ ಅನೇಕ ರಾಷ್ಟ್ರಗಳ ವಿಮಾನಗಳು ಇಲ್ಲಿ ಇಳಿಯಲು ನಿರಾಕರಿಸುವ ಕಾರಣ ಇಲ್ಲಿ ವಿವಿಧ ರಾಷ್ಟ್ರಗಳ ಬಿಝಿನೆಸ್ ಹೆಡ್ ಗಳು ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಗರದಲ್ಲಿ ಉದ್ಯಮಗಳಿಗೆ ಅವಕಾಶ ಇದ್ದರೂ ಈ ಒಂದು ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ. ಏಳು ವರ್ಷಗಳ ಹಿಂದೆ ದುಬೈ ವಿಮಾನ ಅಪಘಾತವಾಗಿ ನೂರಾರು ಪ್ರಯಾಣಿಕರು ಸತ್ತ ನಂತರ ರನ್ ವೇ ಅಂತರ ಹೆಚ್ಚಿಸುವ ಕೆಲಸ ನಡೆಯಬೇಕಿತ್ತು. ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದವರು ರಾಜ್ಯ ಸರಕಾರಕ್ಕೆ ಪದೇ ಪದೇ ಒತ್ತಡ ಹಾಕಿದ್ದರೂ ರಾಜ್ಯ ಸರಕಾರ ಇಚ್ಚಾಶಕ್ತಿಯ ಕೊರತೆಯಿಂದ ಆ ಕೆಲಸಕ್ಕೆ ಮುಂದಾಗಿಲ್ಲ. ರಾಜ್ಯ ಸರಕಾರ ಅಗತ್ಯವಿದ್ದಷ್ಟು ಭೂಸ್ವಾಧೀನ ಮಾಡಿಲ್ಲದೆ ಹೋದ ಕಾರಣ ರನ್ ವೇ ಹೆಚ್ಚಿಸುವ ಕೆಲಸ ನಡೆದಿಲ್ಲ. ಬಹುಶ: ಮುಂದೆ ಒಂದೇ ಪಕ್ಷದ ಸರಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಈ ಕೆಲಸ ವೇಗ ಪಡೆದುಕೊಳ್ಳಬಹುದು. ರಾಜ್ಯ ಸರಕಾರ ವೋಟ್ ಬ್ಯಾಂಕಿನ ಮೇಲೆ ಕಣ್ಣಿಟ್ಟು ಭೂಸ್ವಾಧೀನ ಮಾಡದೇ ಇರುವ ಕಾರಣ ಈ ಅಭಿವೃದ್ಧಿ ಸ್ಥಗಿತಗೊಂಡಿದೆ.
ಇನ್ನು ಕೋಸ್ಟಲ್ ರೆಗ್ಯುಲೇಟಿಂಗ್ ಝೋನ್ ಇದರ ಕಚೇರಿ ಮಂಗಳೂರಿನಲ್ಲಿಯೇ ಇರಬೇಕು ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು. ಸಿಆರ್ ಝಡ್ ಮುಖ್ಯವಾಗಿ ಕೆಲಸ ಮಾಡಬೇಕಾಗಿರುವುದು ನಮ್ಮ ಊರಿನಲ್ಲಿಯೇ. ಅದನ್ನು ತೆಗೆದುಕೊಂಡು ಬೆಂಗಳೂರಿನಲ್ಲಿ ಹಾಕುವುದು ಎಂದರೆ ಕೈಯಲ್ಲಿ ಹೋಳಿಗೆ ಹಿಡಿದು ತುಪ್ಪಕ್ಕಾಗಿ ದನದಿಂದ ಹಾಲು ಕರೆಯಲು ಹೊರಟಂತೆ ಆಗುತ್ತದೆ. ಬಹುಶ: ಮುಂದೆ ಸರಕಾರ ಬದಲಾದರೆ ಅದು ಕೂಡ ಆಗಬಹುದು.
ಇನ್ನು ಬೇರೆ ಬೇರೆ ಉದ್ಯಮಗಳ ಪ್ರಮುಖರು ಮಾತನಾಡಿದ ಹಾಗೆ ಮಂಗಳೂರಿನಲ್ಲಿ ಸ್ಕಿಲ್ ಡೆವೆಲಪ್ ಮೆಂಟ್ ಪ್ರಾಜೆಕ್ಟ್ ಹೆಚ್ಚೆಚ್ಚು ಆಗಬೇಕು. ಇದು ಆಗಲೇ ಬೇಕಾಗಿರುವುದು. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆ ಸ್ಕಿಲ್ ಡೆವೆಲಪ್ ಮೆಂಟ್. ಒಂದೊಂದು ಕ್ಷೇತ್ರದಲ್ಲಿ ಇಂತಹ ತರಬೇತಿ ಕೇಂದ್ರಗಳು ಇದ್ದರೆ ಆ ಊರಿನಲ್ಲಿರುವ ಉದ್ದಿಮೆಗಳಿಗೆ ಅಗತ್ಯಕ್ಕೆ ಬೇಕಾದಾಗ ಸಮರ್ಪಕ ಉದ್ಯೋಗಾರ್ಥಿಗಳು ಸಿಗುತ್ತಾರೆ, ಇಲ್ಲದಿದ್ದರೆ ನಾವೇ ಟ್ರೇನಿಂಗ್ ಕೊಡುವುದರಿಂದ ನಮ್ಮ ಹಣ, ಶ್ರಮ ಮತ್ತು ಸಮಯ ವ್ಯಯ ಎನ್ನುವ ಅಭಿಪ್ರಾಯ ಉದ್ದಿಮೆದಾರರಿಂದ ಕೇಳಿಬಂತು. ಬಹುಶ: ಈ ಬಗ್ಗೆ ಬರುವ ಸರಕಾರ ಯೋಚಿಸಬಹುದು.
ಇನ್ನು ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು ರೈಲಿನಲ್ಲಿ ತಗಲುವ ಸಮಯದ ಬಗ್ಗೆ ಪ್ರಸ್ತಾಪವಾಯಿತು. ನಾವು ತಂತ್ರಜ್ಞಾನದಲ್ಲಿ ಇಷ್ಟು ಮುಂದುವರೆದಿದ್ದರೂ ಬಂದರು ನಗರಿಯಿಂದ ರಾಜ್ಯ ರಾಜಧಾನಿಗೆ ಹೋಗಲು ತಗಲುವ ಸಮಯವನ್ನು ಎಂಟು ಗಂಟೆಗೆ ಸೀಮಿತಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು. ರಾತ್ರಿ ಇಷ್ಟು ಬಸ್ ಗಳು ಇದ್ದರೂ ಇನ್ನೂ ಕೂಡ ಸಾರಿಗೆಯ ಅಗತ್ಯ ಇರುವುದರಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಈ ಬಗ್ಗೆ ಶೀಘ್ರದಲ್ಲಿ ಗಮನಹರಿಸಬೇಕು ಎಂದು ಹೇಳಲಾಯಿತು.
ಇನ್ನು ಮುಜುರಾಯಿ ಇಲಾಖೆಯನ್ನೇ ಕ್ಯಾನ್ಸಲ್ ಮಾಡಬೇಕು. ದೇವಸ್ಥಾನಗಳ ಹಣವನ್ನು ದೇವಸ್ಥಾನಗಳಿಗೆ ಖರ್ಚು ಮಾಡಬೇಕು. ದೇವಸ್ಥಾನಗಳ ಗೋಶಾಲೆಗಳಿಗೆ ಹೆಚ್ಚಿನ ಅನುದಾನ ಕೊಡಬೇಕು, ಗೋಉತ್ಪನ್ನಗಳಿಗೆ ಪ್ರೋತ್ಸಾಹ ಕೊಡಬೇಕು, ಗೋಮಾಳದ ಜಮೀನನ್ನು ಅತಿಕ್ರಮಣ ಮಾಡಿದವರಿಂದ ಹಿಂದಕ್ಕೆ ಪಡೆದು ಗೋಪಾಲಕರಿಗೆ ಮರಳಿಸಬೇಕು, ಹೆಚ್ಚೆಚ್ಚು ಗೋಶಾಲೆಗಳನ್ನು ತೆರೆಯಬೇಕು ಎನ್ನುವ ಅಭಿಪ್ರಾಯ ಬಂತು. ಬಹುಶ: ಬಿಜೆಪಿ ಸರಕಾರ ಮುಂದೆ ಬಂದರೆ ಗೋವಿನ ಉಳಿವಿಗೆ ಏನಾದರೂ ಆಗಲೂಬಹುದು. ಹೀಗೆ ಹಲವು ಜನರು ಮಾತನಾಡುತ್ತಲೇ ಹೋದರು. ಹತ್ತೂವರೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನನ್ನ ಸರದಿ ಬಂತು. ಅದರ ಮೊದಲು ಮಾತನಾಡಿದ ಅನೇಕರು ಭ್ರಷ್ಟಾಚಾರ ನಿಲ್ಲಬೇಕು ಎಂದು ಒತ್ತಿ ಒತ್ತಿ ಹೇಳಿ ಚಪ್ಪಾಳೆ ಗಿಟ್ಟಿಸಿದ್ದರು. ನಾನು ಮಾತನಾಡಲು ವೇದಿಕೆ ಹತ್ತಿದೆ. ಸಭಾಂಗಣದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರ ಕಿವಿ ನೆಟ್ಟಗಾದಂತೆ ಕಂಡು ಬಂತು!
Leave A Reply