ಇನ್ನೇನಿದ್ದರೂ ಬಾವಿ ಕ್ಲೀನ್ ಮಾಡುವ ಡ್ರಾಮ ಶುರುವಾಗಲಿದೆ!
ತಮ್ಮ ಮೇಯರ್ ಗಿರಿಯ ಕೊನೆಯ ಅಧ್ಯಾಯದಲ್ಲಿ ಕವಿತಾ ಸನಿಲ್ ಕುಲಶೇಖರದಲ್ಲಿ ಹಾಳಾಗಿ ನೀರು ಕುಡಿಯಲು ಅಯೋಗ್ಯವಾಗಿರುವ ಬಾವಿಗಳನ್ನು ನೋಡಿ ಬಂದಿದ್ದಾರೆ. ಹಾಳಾದ ಬಾವಿಗಳನ್ನು ಆದಷ್ಟು ಬೇಗ ಸರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ನಡೆದ ಅನೇಕ ನಾಟಕಗಳ ಕೊನೆಯ ಅಂಕವನ್ನಾಗಿ ಮಾತ್ರ ಇದನ್ನು ನೋಡಬಹುದೇ ವಿನ: ಅವರು ಕುಲಶೇಖರದ ಬಾವಿಗಳನ್ನು ಕ್ಲೀನ್ ಮಾಡುವುದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ.
ನಮ್ಮ ಮಂಗಳೂರಿನ ಬಾವಿಗಳಲ್ಲಿರುವ ನೀರು ಒಂದು ಕಾಲದಲ್ಲಿ ಕುಡಿಯಲು ಅತ್ಯಂತ ಯೋಗ್ಯವಾಗಿದ್ದವು. ಕಳೆದ ವರ್ಷ ತುಂಬೆಯಿಂದ ಮಂಗಳೂರಿಗೆ ನೀರು ಪೂರೈಸುವ ಪೈಪುಗಳು ಪಾಲಿಕೆಯ ಬೇಜವಾಬ್ದಾರಿಯಿಂದ ಒಡೆದು ಹೋಗಿದ್ದಾಗ ಮಂಗಳೂರಿಗೆ ನಾಲ್ಕೈದು ದಿನ ನೀರು ಬಂದಿಲ್ಲವಲ್ಲ, ಆಗ ಮಂಗಳೂರಿನಲ್ಲಿ ನೀರಿಗೆ ಹಾಹಾಕಾರ ಎದ್ದಿತ್ತು. ಹಾಗೆ ಹತ್ತಿಪ್ಪತ್ತು ವರ್ಷ ಹಿಂದೆ ಆಗಿದ್ದರೆ ನಿಮ್ಮ ಪೈಪಿನ ನೀರು ಯಾರಿಗೆ ಬೇಕ್ರಿ, ನಮ್ಮ ಬಾವಿ ನೀರನ್ನು ಬೇಕಾದರೆ ನಿಮ್ಮ ಪಾಲಿಕೆಗೆ ಪೂರೈಸುತ್ತೇವೆ ಎಂದು ಜನ ಹೇಳುತ್ತಿದ್ದರೇನೋ. ಅಷ್ಟು ಸಮೃದ್ಧ ಬಾವಿಗಳು ಮಂಗಳೂರಿನಲ್ಲಿತ್ತು. ಈಗ ಶುದ್ಧವಾದ ಬಾವಿ ಬೇಕಿದೆ ಎಂದು ಮಂಗಳೂರಿನ ಪ್ರಖ್ಯಾತ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೂ ಸ್ಪಂದನೆ ಸಿಗಲಿಕ್ಕಿಲ್ಲ. ಶುದ್ಧವಾದ ಕುಡಿಯುವ ನೀರಿನ ಬಾವಿ ಇರುವ ಮನೆಯಿಂದ ಒಂದು ಗ್ಲಾಸ್ ನೀರು ತೆಗೆದುಕೊಂಡು ಬಾ ಎಂದು ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎನ್ನುವ ಮಾತಿಗೆ ಪರ್ಯಾಯವಾಗಿ ಬಳಸಬಹುದೇನೋ. ಅಷ್ಟರಮಟ್ಟಿಗೆ ಮಂಗಳೂರಿನ ಬಾವಿಗಳು ಹಾಳಾಗಿವೆ. ಬಹುಶ: ಮೇಯರ್ ಕುಲಶೇಖರ್ ಕ್ಕೆ ಮಾತ್ರ ಹೋಗಿ ಬಂದಿದ್ದಾರೋ ಅಥವಾ ಅವರು ಬೇರೆ ಕಡೆ ತಮ್ಮ ಕ್ಯಾಮರಾ ಪಟಲಾಂ ಅನ್ನು ಕರೆದುಕೊಂಡು ಹೋಗಿಲ್ಲವೋ, ಗೊತ್ತಿಲ್ಲ. ಒಟ್ಟಿನಲ್ಲಿ ಕುಲಶೇಖರದಲ್ಲಿ ಮಾತ್ರ ಬಾವಿ ನೀರು ಹಾಳಾಗಿರುವುದಲ್ಲ ಎನ್ನುವುದು ಅವರಿಗೆ ಗೊತ್ತಿರಲಿ.
ಒಂದು ವೇಳೆ ಮೇಯರ್ ಕವಿತಾ ಸನಿಲ್ ಅವರಿಗೆ ಮಂಗಳೂರಿನ ಬಾವಿಗಳ ಬಗ್ಗೆ ಅಷ್ಟು ಕಾಳಜಿ ಇದ್ದಲ್ಲಿ ಅವರು ಒಂದು ಕೆಲಸ ಮಾಡಬೇಕು. ಅದೇನೆಂದರೆ ಹಿಂದೆ ಎರಡು ಬಾರಿ ಪೈಪು ಒಡೆದು ಹೋದಾಗ ಪಾಲಿಕೆಯ ವತಿಯಿಂದ ಕೋಟ್ಯಾಂತರ ರೂಪಾಯಿ ವ್ಯಯಿಸಿ ಮಂಗಳೂರಿನಾದ್ಯಂತ ಅಲ್ಲಲ್ಲಿ ತೊಂಭತ್ತು ಕೊಳವೆ ಬಾವಿಗಳನ್ನು ಕೊರೆದಿದ್ದರಲ್ಲ, ಅದರ ಅವಸ್ಥೆ ಹೇಗಿರಬಹುದು ಎಂದು ಮೇಯರ್ ಕವಿತಾ ಸನಿಲ್ ಒಮ್ಮೆ ಹೋಗಿ ನೋಡಲಿ. ಹಾಗೆ ಮಂಗಳೂರಿನಲ್ಲಿರುವ ಅಸಂಖ್ಯಾತ ಬಾವಿಗಳನ್ನು ಕೆರೆದು ಸ್ವಚ್ಚ ಮಾಡಿದ್ದರಲ್ಲ, ಅವುಗಳ ಕಥೆಯನ್ನು ಮೇಯರ್ ನೋಡಿಬರಬೇಕು. ಎಷ್ಟು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಇದೆ, ಎಷ್ಟು ಸ್ವಚ್ಚ ಮಾಡಿದ ಬಾವಿಗಳ ನೀರು ಕುಡಿಯಬಹುದು ಎಂದು ಕವಿತಾ ಸನಿಲ್ ತಮ್ಮೊಂದಿಗೆ ಬರುವ ಟಿವಿ, ಪತ್ರಿಕಾ ವರದಿಗಾರರಿಗೆ ಕೂಡ ಹೇಳಲಿ. ನಾನು ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಒಂದು ಕಡೆ ನಮ್ಮ ತೆರಿಗೆ ಹಣದಿಂದ ಕೊಳವೆ ಬಾವಿ ಕೊರೆಯುವುದು, ಬಾವಿಗಳನ್ನು ಸ್ವಚ್ಚ ಮಾಡುವುದು ನಂತರ ನೀರಿನ ಸಮಸ್ಯೆ ಮುಗಿದ ಬಳಿಕ ಆ ಬಗ್ಗೆ ಯಾರಿಗೂ ಗೊಡವೆ ಇಲ್ಲ. ಎಲ್ಲರೂ ತಮ್ಮ ತಮ್ಮ ಪಾಲಿನ ಊಟವನ್ನು ಬಫೆ ಸಿಸ್ಟಮ್ ನಲ್ಲಿ ಪ್ಲೇಟ್ ನಲ್ಲಿ ಹಾಕಿಸಿಕೊಂಡು ಪಕ್ಕದ ರಸ್ತೆಯಿಂದ ಇಳಿದುಹೋಗುವುದು. ಎಲ್ಲರೂ ಸೇಫ್. ಹೋದದ್ದು ಮಾತ್ರ ನಮ್ಮ ಹಣ.
ಆವತ್ತು ಪಾಲಿಕೆ ಸ್ವಚ್ಚ ಮಾಡಿದ ಬಾವಿಗಳ ನೀರನ್ನು ಈಗ ಕುಡಿಯಲು ಸಾಧ್ಯವಿಲ್ಲದ ವಾತಾವರಣ ಇರುವಾಗ ಕುಡ್ಸೆಂಪ್ ಕಳಪೆ ಕಾಮಗಾರಿಯಿಂದ ಹಾಳಾಗಿರುವ ಹಿಂದಿನ ಬಾವಿಗಳನ್ನು ಹೋಗಿ ನೋಡಿ ಬಂದರೆ ಏನು ಪ್ರಯೋಜನ? ಇನ್ನು ಕುಡ್ಸೆಂಪ್ ಯೋಜನೆಯ ವೈಫಲ್ಯದಿಂದ ಒಳಚರಂಡಿ ಯೋಜನೆ ಅಂತೂ ಕೆಟ್ಟು ಹೋಗಿ ನಮ್ಮ ಬಾವಿಗಳು ಕಂಗಾಲಾಗಿ ಬಾಯಿ ಬಿಡುತ್ತಿದ್ದರೆ ಆ ಯೋಜನೆಯ ನಿರ್ದೇಶಕರಾಗಿದ್ದ ಈಗಿನ ಶಾಸಕ ಜೆಆರ್ ಲೋಬೋ ಕೊಡಬೇಕಿದ್ದ 24*7 ನೀರು ಕೂಡ ಕೊಡಲು ಸಾಧ್ಯವಾಗದೇ ಜನ ಅತ್ತ ಬಾವಿನೂ ಇಲ್ಲ, ಇತ್ತ ಪೈಪಿನಲ್ಲಿ ಬೇಕಾದಾಗ ನೀರು ಬರದೇ ಅತಂತ್ರ ಸ್ಥಿತಿಗೆ ಬಂದು ತಲುಪಿದ್ದಾರೆ. ಆದ್ದರಿಂದ ಎರಡೂ ವೈಫಲ್ಯಗಳನ್ನು ಮುಚ್ಚಿಟ್ಟು ಎಷ್ಟು ಬಾವಿಗಳನ್ನು ಟಿವಿ ಕ್ಯಾಮೆರಾಗಳೊಂದಿಗೆ ಹೋಗಿ ನೋಡಿಬಂದರೂ ಅವು ಆ ಕ್ಷಣದ ಪಬ್ಲಿಸಿಟಿ ವಿನ: ಮೇಯರ್ ಕವಿತಾ ಸನಿಲ್ 24*7 ಕುಡಿಯುವ ನೀರಿನ ಯೋಜನೆ ಮತ್ತು ಸ್ವಚ್ಚ ಬಾವಿ ಕಲ್ಪನೆಯನ್ನು ಜಾರಿಗೊಳಿಸಲು ಸಾಧ್ಯವಿದೆಯಾ? ಚುನಾವಣೆ ಹತ್ತಿರ ಇರುವುದರಿಂದ ಪಾಲಿಕೆಯವರು ಬಾವಿಗಳನ್ನು ಬೇಕಾದರೆ ಸ್ವಚ್ಚ ಮಾಡುತ್ತಾರೆ ಇಲ್ಲದಿದ್ದರೆ ಚರಂಡಿಗಳನ್ನು ಕ್ಲೀನ್ ಮಾಡಲು ಬೇಕಾದರೆ ಮನಸ್ಸು ಮಾಡುತ್ತಾರೆ. ಆದರೆ ಒಮ್ಮೆ ಈ ಬಾರಿಯ ಚುನಾವಣೆ ಮುಗಿದ ಬಳಿಕ ಬೇಸಿಗೆ ಉತ್ತುಂಗದಲ್ಲಿ ಇರುವಾಗ ಪಾಲಿಕೆಯ ಸದಸ್ಯರಿಗೆ, ಅಧಿಕಾರಿಗಳಿಗೆ ಮೃಷ್ಟಾನ್ನ ಭೋಜನದ ಪರ್ವ ಕಾಲ. ಎತ್ತರದ ಪ್ರದೇಶಗಳಿಗೆ ನೀರು ಹೋಗಲ್ಲ, ಟ್ಯಾಂಕರ್ ಬೇಕು.
Leave A Reply