ಜಸ್ಟ್ ಮಿಸ್ ಆದರೆ ಬಸ್ಸು ಕೆಳಗೆ, ಜನ ಮೇಲಕ್ಕೆ!
ಆ ಬಸ್ ನೀರಿಗೆ ಬಿದ್ದಿದ್ದರೆ ಅದರಲ್ಲಿದ್ದ ಅಷ್ಟೂ ಜನರಲ್ಲಿ ಅದೃಷ್ಟ ಇದ್ದವರು ಬಿಟ್ಟು ಉಳಿದವರಿಗೆ ಅದೇ ಕೊನೆಯ ಸೂರ್ಯೋದಯವಾಗುತ್ತಿತ್ತು. ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮತ್ತದೇ ಬಸ್ಸುಗಳಿಗೆ ಸಂಬಂಧಿಸಿದ ದೂರುಗಳು, ಕಂಡಕ್ಟರ್, ಡ್ರೈವರ್ ಗಳ ವರ್ತನೆಯ ಬಗ್ಗೆ ಕ್ರಮ ತೆಗೆದುಕೊಳ್ಳಿ ಎನ್ನುವ ಮನವಿಗಳು ಇಂತಹುದೆ ವಿಷಯಗಳು. ಏನು ಮಾಡುವುದು, ಎಷ್ಟು ಫೋನ್ ಇನ್ ನಡೆದರೂ ಬಸ್ಸುಗಳ ಡ್ರೈವರ್, ನಿರ್ವಾಹಕರ ವರ್ತನೆಯ ಬಗ್ಗೆ ಪ್ರಶ್ನೆ ಕಡಿಮೆಯಾಗುವುದಿಲ್ಲ. ಮೊನ್ನೆಯ ಘಟನೆಯಂತೂ ಬಸ್ಸು ನಿರ್ವಾಹಕರ ನಿರ್ಲಕ್ಷ್ಯಕ್ಕೆ ಪರಮಾವಧಿ.
ಸುಳ್ಳಾದ ಬ್ರೇಕಿಂಗ್ ನ್ಯೂಸ್!
ಬಸ್ಸು ಕುಳೂರು ಸೇತುವೆಯ ಮೇಲೆ ನೇತಾಡುತ್ತಿತ್ತು. ಬಸ್ಸಿನಿಂದ ಪ್ರಯಾಣಿಕರು ಎಡಕೈಯಲ್ಲಿ ಜೀವ ಹಿಡಿದುಕೊಂಡು ಹಿಂದಿನ ಬಾಗಿಲಿನಿಂದ ಕೆಳಗೆ ಇಳಿದರು. ಬಸ್ಸು ಡ್ರೈವರ್ ಕೂಡ ಕೆಳಗಿಳಿದ. ಅಲ್ಲಿಗೆ ಬಂದ ಪತ್ರಿಕೆಯ ವರದಿಗಾರರೊಬ್ಬರು ಏನು ಆಯಿತು, ಇದು ಹೇಗೆ ಸಂಭವಿಸಿತು ಎಂದು ಕೇಳಿದ್ದಾರೆ. ನಾನು ಬಸ್ ಬಿಡುವಾಗ ಕ್ಲೈಚ್ ಕಟ್ ಆಗಿ ಬಸ್ ನಿಯಂತ್ರಣ ತಪ್ಪಿತು. ಆದರೂ ನಾನು ಹೇಗೋ ಸಂಭಾಳಿಸಿ ನೀರಿಗೆ ಬೀಳಲಿದ್ದ ಬಸ್ಸನ್ನು ಹೇಗೋ ಕಂಬಕ್ಕೆ ತಾಗಿಸಿ ನಿಲ್ಲಿಸಿ ಜನರನ್ನು ಹಿಂದಕ್ಕೆ ಕಳುಹಿಸಿ ಎಲ್ಲರ ಜೀವ ಉಳಿಸಿದೆ ಎಂದು ಹೇಳಿದ. ಕೆಲವು ಟಿವಿ ವಾಹಿನಿಗಳಲ್ಲಿ ಅದೇ ಬ್ರೇಕಿಂಗ್ ನ್ಯೂಸ್. ಚಾಲಕನ ಸಮಯಪಜ್ಞೆಯಿಂದ ತಪ್ಪಿದ ಅಪಘಾತ. ಪ್ರಯಾಣಿಕರ ಜೀವ ಕಾಪಾಡಿದ ಚಾಲಕ ಹೀಗೆ ನ್ಯೂಸ್ ಬರುತ್ತಾ ಇತ್ತು. ನಿಜ ವಿಷಯ ಏನೆನ್ನುವುದು ಆ ಅಪಘಾತ ನಡೆಯುವಾಗ ಆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಮಾತ್ರ ಗೊತ್ತು.
ಈ ಬಸ್ಸಿನವರು ಅಂತಲ್ಲ, ಹೆಚ್ಚಿನ ಎಲ್ಲಾ ಬಸ್ಸಿನವರು ಅಪಘಾತ ಆದಾಗ ಹೇಳುವುದು ಒಂದೇ ಮಾತು, ಕ್ಲಚ್ ಕಟ್ ಆಯಿತು, ಪ್ಲೇಟ್ ತುಂಡಾಯಿತು, ಬ್ರೇಕ್ ಫೇಲ್ ಆಯಿತು. ಇಷ್ಟೇ ಹೇಳುವುದು. ಯಾರು ಕೂಡ ನಾನು ಓವರ್ ಟೇಕ್ ಮಾಡುವ ಗಡಿಬಿಡಿಯಲ್ಲಿ ಕಂಟ್ರೋಲ್ ತಪ್ಪಿತು ಎಂದು ಹೇಳುವುದಿಲ್ಲ. ಹೇಳಿದರೆ ಒಂದು ರೂಪಾಯಿ ಕೂಡ ಇನ್ಸೂರೆನ್ಸ್ ಸಿಗುವುದಿಲ್ಲ. ಇನ್ಯೂರೆನ್ಸ್ ಸಿಗದಿದ್ದರೆ ಬಸ್ಸಿನ ಮಾಲೀಕ ಡ್ರೈವರ್ ನ ಕುತ್ತಿಗೆ ಹಿಡಿದು ಅದೇ ಸೇತುವೆಯಿಂದ ಕೆಳಗೆ ಬಿಸಾಡುತ್ತಾರೆ. ಆದ್ದರಿಂದ ಯಾವುದೇ ಅಪಘಾತ ನಡೆದರೂ ಉತ್ತರ ಕಟ್ ಆಯಿತು, ತುಂಡಾಯಿತು, ಫೇಲ್ ಆಯಿತು. ಒಂದು ವೇಳೆ ಬಸ್ಸು ನೀರಿಗೆ ಬಿದ್ದು ನಾಲ್ಕು ಜನ ಹೋದರೂ ಬಸ್ಸಿನ ಮಾಲೀಕನಿಗೆ ಇನ್ಯೂರೆನ್ಸ್ ಸಿಗಬಹುದು. ಆದರೆ ಹೋದ ಜೀವ ಹಿಂತಿರುಗಿ ಬರುವುದಿಲ್ಲ.
ಪಿವಿಎಸ್ ದಾಟಿದ ಬಳಿಕ ಪ್ರತಿ ಬಸ್ಸು ಅಶ್ವಮೇಧ ಕುದುರೆ!
ಮೊನ್ನೆ ಸೋಮವಾರ ಕೂಡ ಹಾಗೆ ಆಗಿದೆ. ಬೇಗ ಪೋಯಿ, ಫಾಸ್ಟ್ ಪೋಯಿ ಎಂದು ಕಂಡಕ್ಟರ್ ದಡಬಡಾಯಿಸುತ್ತಿದ್ದ. ಅವನು ಹಾಗೆ ಏಳು ತಿಂಗಳಿಗೆ ಹುಟ್ಟಿದವನಂತೆ ಮಾಡುವಾಗ ಡ್ರೈವರ್ ಕೂಡ ಫಾಸ್ಟ್ ಆಗಿ ಹೋಗಲೇಬೇಕಾಗುತ್ತದೆ. ಯಾಕೆಂದರೆ ದಿನದ ಕೊನೆಯಲ್ಲಿ ಅದೇ ಕಂಡಕ್ಟರ್ ಡ್ರೈವರ್ ಗೆ ಊಟ ತಿಂಡಿ ಕೊಟ್ಟು 1050 ರೂಪಾಯಿ ಕೊಡಬೇಕು. ಡ್ರೈವರ್ ನಿಧಾನವಾಗಿ ಹೋದರೆ ಕಂಡಕ್ಟರ್ ಪಿರಿಪಿರಿ ಮಾಡುತ್ತಾನೆ. ಸ್ಪೀಡ್ ಆಗಿ ಹೋದರೆ ಅಪಘಾತ, ನಿಧಾನವಾಗಿ ಹೋದರೆ ಅಪಮಾನ. ಇದೇ ಕಂಡಕ್ಟರ್ ಸ್ಟೇಟ್ ಬ್ಯಾಂಕಿನಿಂದ ಕೆಎಸ್ ರಾವ್ ರೋಡ್ ಆಗಿ ಪಿವಿಎಸ್ ಬಿಲ್ಡಿಂಗ್ ದಾಟುವ ತನಕ ಡ್ರೈವರ್ ಕೈಗೆ ಹಗ್ಗ ಕಟ್ಟಿಬಿಟ್ಟಿರುತ್ತಾನೆ. ಅದೇ ಪಿವಿಎಸ್ ದಾಟಿದ ನಂತರ ಬಸ್ಸುಗಳು ಅಶ್ವಮೇಧಕ್ಕೆ ಬಿಟ್ಟು ಕುದುರೆಗಳಂತೆ ಆಗುತ್ತವೆ.
ಕೇಳಿದ್ರೆ “ಇಲ್ಲಪ್ಪಾ, ನಮಗೆ ಅಲ್ಲಲ್ಲಿ ಟೈಮ್ ಕೀಪರ್ ಇದ್ದಾರೆ, ಅವರು ನೋಡಿಕೊಳ್ಳುತ್ತಾರೆ, ನಮಗೆ ಆಗಾಗ ತರಬೇತಿ ಕೂಡ ಕೊಡುತ್ತಾರೆ. ನಾವು ಪ್ರೀತಿಯಿಂದ ಪ್ರಯಾಣಿಕರನ್ನು ನಡೆಸುತ್ತಾ ಇದ್ದೇವೆ” ಎನ್ನುತ್ತಾರೆ. ನೀವು ಪ್ರಯಾಣಿಕರ ಮೇಲೆ ಪ್ರೀತಿ ತೋರಿಸುವುದು ಜಾಸ್ತಿಯಾದ ಕಾರಣ ಸೇತುವೆಯಿಂದ ಕೆಳಗೆ ಹಾಕಲು ಹೋಗಿದ್ದೀರಿ” ಎನ್ನಬೇಕು ಎಂದನಿಸುತ್ತದೆ. ಕೆಲವು ಕಿಲಾಡಿ ಡ್ರೈವರ್, ಕಂಡಕ್ಟರ್ ಗಳಿಂದ ನಿಜಕ್ಕೂ ಈ ಅಪಘಾತ ಸಂಭವಿಸುತ್ತದೆ ಎಂದರೆ ತಪ್ಪಾಗುವುದಿಲ್ಲ. ಕೆಲವು ಬಸ್ಸುಗಳು ಒಂದೇ ಸ್ಟಾಪಿನಲ್ಲಿ ಅವಧಿಗಿಂತ ಹೆಚ್ಚು ಹೊತ್ತು ನಿಲ್ಲಿಸಿ ಹಿಂದಿನ ಬಸ್ಸು ಹತ್ತಿರ ಬರುತ್ತಿದ್ದಂತೆ ತಾವು ಮುಂದಕ್ಕೆ ಹೋಗುತ್ತವೆ. ಆಗ ಹಿಂದಿನ ಬಸ್ಸಿನವನಿಗೆ ಆ ಸ್ಟಾಪಿನ ಒಬ್ಬ ಪ್ರಯಾಣಿಕ ಕೂಡ ಸಿಗುವುದಿಲ್ಲ. ಅವನು ಏನು ಮಾಡುತ್ತಾನೆ ಎಂದರೆ ಎದುರಿನ ಬಸ್ಸಿನವನನ್ನು ಬಿಡಬಾರದು ಎಂದು ಒವರ್ ಟೇಕ್ ಮಾಡುತ್ತಾನೆ, ಎಲ್ಲೋ ಎರಡು ಮೂರು ಸ್ಟಾಪ್ ಆಗುವಾಗ ಒವರ್ ಟೇಕ್ ಮಾಡುವಂತಹ ಅವಕಾಶ ಸಿಗುತ್ತದೆ. ಅದರ ನಡುವೆ ನಮ್ಮ ರಸ್ತೆಗಳು ಗೊತ್ತಿದೆಯಲ್ಲ, ಅವು ವಯಸ್ಸಿಗೆ ಬರುವಾಗ ಹೆಣ್ಣುಮಕ್ಕಳಿಗೆ ಮುಖದ ಮೇಲೆ ಮೂಡುವ ಮೊಡವೆಗಳಂತೆ ಇರುವುದರಿಂದ ಅವುಗಳನ್ನು ತಪ್ಪಿಸಲು ಡ್ರೈವರ್ ಕೈ ಕಾಲು ಎಲ್ಲ ಒತ್ತುತ್ತಾನೆ. ಬೆಳಿಗ್ಗೆ ಸ್ನಾನ ಮಾಡದೆ ಬಂದಿದ್ದರೆ ಬಸ್ಸು ಗ್ಯಾರೇಜಿಗೆ, ನಾವು ಆಸ್ಪತ್ರೆಗೆ. ಇದನ್ನು ತಪ್ಪಿಸುವುದು ಹೇಗೆ?
ನೂರು ರೂಪಾಯಿ ಕಡಿಮೆ ಕೊಡಿ, ಏಕ್ಸಿಡೆಂಟ್ ಮಾಡಬೇಡಿ!
ಪ್ರತಿ ಬಸ್ಸಿನ ಮಾಲೀಕ ಕಂಡಕ್ಟರ್ ಗೆ, ಡ್ರೈವರ್ ಗೆ ಕುಳ್ಳಿರಿಸಿ ಸುರಕ್ಷತೆಯ ಅ,ಆ,ಇ,ಈ ಕಲಿಸಬೇಕು. ನೂರು ರೂಪಾಯಿ ಕಡಿಮೆ ಕೊಟ್ಟರೂ ಪರವಾಗಿಲ್ಲ. ಯಾವ ಪ್ರಯಾಣಿಕನ ಜೀವವನ್ನು ಪಣಕ್ಕೆ ಒಡ್ಡಬೇಡಿ ಎನ್ನಬೇಕು. ಇನ್ನು ಕಮೀಷನರ್ ಅವರು ಫೋನ್ ಇನ್ ನಲ್ಲಿ ಜನರ ದೂರು ಕೇಳಿ ಅಲ್ಲಿಯೇ ಸಮಾಧಾನ ಮಾಡಿ ಮುಂದಿನ ಫೋನಿಗೆ ಹೋಗುವುದು ನಿಲ್ಲಿಸಿ ಪ್ರತಿ ಫೋನಿಗೆ ಆಕ್ಷನ್ ತೆಗೆದುಕೊಳ್ಳಬೇಕು. ಇನ್ನು ಆರ್ ಟಿಒ ಅವರು ಸಿಬ್ಬಂದಿ ಕೊರತೆ ಎನ್ನುವ ನೆಪ ಒಡ್ಡಿ ಬಸ್ಸಿನವರ ತಪ್ಪುಗಳನ್ನು ಉದಾರವಾಗಿ ಮಾಡುವ ತಪ್ಪುಗಳನ್ನು ಕ್ಷಮಿಸಬಾರದು.
Leave A Reply