ಮಂಗಳೂರಿನಲ್ಲಿ ಅನಗತ್ಯವಾಗಿ ಕಾರು ಹೊರಗೆ ತಂದರೆ ಜೇಬು ಹಗುರವಾಗಲಿದೆ!!
ಇನ್ನು ಮುಂದೆ ಒಂದು ಕೊತ್ತಂಬರಿ ಸೊಪ್ಪು ತರಲು ಕಾರನ್ನು ಮನೆಯಿಂದ ಹೊರಗೆ ತೆಗೆಯುವುದು ಕಡಿಮೆಯಾಗಲಿದೆ. ಗಂಡ ಒಂದು, ಹೆಂಡ್ತಿ ಒಂದು, ಮಗ ಅಥವಾ ಮಗಳು ಒಂದೊಂದು ಕಾರಿನಲ್ಲಿ ಒಂದೇ ಆಫೀಸಿಗೆ ಹೋಗುವುದು ಕಡಿಮೆಯಾಗಲಿದೆ. ಒಂದು ಸುತ್ತು ಸುಮ್ಮನೆ ಸುತ್ತಿ ಬರೋಣ ಅಂತ ಕಾರುಗಳು ಮಂಗಳೂರು ನಗರದೊಳಗೆ ಅಡ್ಡಾಡುವುದು ಕಡಿಮೆಯಾಗಲಿದೆ. ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಂಗಳೂರು ನಗರದೊಳಗಿನ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಲು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮುಂದಾಗಿದ್ದಾರೆ.
ಸ್ಮಾರ್ಟ್ ಸಿಟಿ ಆಗಲು ಮುಂಡಾಸ್ ಕಟ್ಟಿಕೊಂಡು ಸಿದ್ಧವಾಗುತ್ತಿರುವ ಮಂಗಳೂರಿನ ಕಿರೀಟಕ್ಕೆ ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ಸ್ಪರ್ಶ ನೀಡಲು ಜಿಲ್ಲಾಧಿಕಾರಿ ತಯಾರಾಗಿದ್ದಾರೆ. ಏಕೆಂದರೆ ಬೆಳೆಯುತ್ತಿರುವ ನಮ್ಮ ನಗರಕ್ಕೆ ದೊಡ್ಡ ಹೊಡೆತ ಎಂದರೆ ಮಿತಿಮೀರಿದ ಟ್ರಾಫಿಕ್. ನೀವು ಹಂಪನಕಟ್ಟೆ, ಬಲ್ಮಠ, ಬಂಟ್ಸ್ ಹಾಸ್ಟೆಲ್ ಸಹಿತ ಯಾವುದೇ ಜನನಿಬಿಡ ರಸ್ತೆಗಳಲ್ಲಿ ನೋಡಿ. ಖಾಸಗಿ ವಾಹನಗಳಲ್ಲಿ ಹೆಚ್ಚಿನ ಬಾರಿ ಒಬ್ಬೊಬ್ಬರೇ ಇರುತ್ತಾರೆ. ಈಗ ಏನಾಗಿದೆ ಎಂದರೆ ಕಡಿಮೆ ಅಥವಾ ಶೂನ್ಯ ಬಡ್ಡಿಗೆ ಕಾರ್ ಲೋನ್ ಸಿಗುವ ವ್ಯವಸ್ಥೆಯನ್ನು ಕೆಲವು ಕಾರಿನ ಡೀಲರ್ ಗಳು ಮಾಡಿರುತ್ತಾರೆ. ಕಾರ್ ಮೇಳಾ ಅಲ್ಲಲ್ಲಿ ಆಗಾಗಾ ಏರ್ಪಟ್ಟಿರುತ್ತದೆ. ಕಾರುಗಳು ಸುಲಭವಾಗಿ ಸಾಮಾನ್ಯರ ಕೈಗೆ ದಕ್ಕುವ ವ್ಯವಸ್ಥೆ ಇದೆ. ನೀವು ಹೊಸದಾಗಿ ಕೆಲಸ ಸೇರಿದ ಯುವಕ, ಯುವತಿಯ ಹತ್ತಿರ ಮಾತನಾಡಿದರೆ ಅವರು ಕೆಲಸಕ್ಕೆ ಸೇರಿದ ಎರಡೇ ವರ್ಷಗಳಲ್ಲಿ ತಮ್ಮ ಇಷ್ಟದ ಕಾರನ್ನು ತೆಗೆದುಕೊಳ್ಳುವುದೇ ಗುರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪ್ರತಿಯೊಬ್ಬ ಸರಕಾರಿ ಉದ್ಯೋಗಿಗೆ ಕಾರು ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ. ಅವರನ್ನು ನೋಡಿಯೇ ಕಾರು ತೆಗೆದುಕೊಂಡು ಹೋಗಿ ಎಂದು ಕಾರಿನ ಡೀಲರ್ ಗಳು ರೆಡ್ ಕಾರ್ಪೆಟ್ ಹಾಸಿಬಿಡುತ್ತಾರೆ. ಇನ್ನು ಮಂಗಳೂರಿನಲ್ಲಿ ಏಳುತ್ತಿರುವ ಮತ್ತು ಎದ್ದಿರುವ ಸಂಸ್ಥೆಗಳಲ್ಲಿ ಉದ್ಯೋಗಿಗಳು ಸ್ಪರ್ಧೆಗೆ ಒಳಪಟ್ಟವರಂತೆ ಕಾರು ತೆಗೆದುಕೊಳ್ಳುವುದು ಮಾಮೂಲಿಯಾಗಿದೆ. ವರ್ಷದಿಂದ ವರ್ಷಕ್ಕೆ ಕಾರು, ವಾಹನ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಂತ ನಮ್ಮ ಊರಿನ ರಸ್ತೆಗಳು ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ?
ಹತ್ತು ವರ್ಷಗಳ ಹಿಂದೆ ಎಂಜಿ ರೋಡ್ ಎಷ್ಟು ದೊಡ್ಡದಿತ್ತೋ ಈಗಲೂ ಅಷ್ಟೇ ದೊಡ್ಡದಿದೆ. ಹಾಗೇ ಬಲ್ಮಠ, ಬಂಟ್ಸ್ ಹಾಸ್ಟೆಲ್ ರಸ್ತೆಗಳು ಇಪ್ಪತ್ತು ವರ್ಷ ಹಿಂದೆ ಎಷ್ಟು ಅಗಲ ಇತ್ತೋ ಹೆಚ್ಚು ಕಡಿಮೆ ಅಷ್ಟೇ ಅಗಲ ಇವೆ. ಹಾಗಿರುವಾಗ ಕಳೆದ ಇಪ್ಪತ್ತು ವರ್ಷಗಳಲ್ಲಿ ಅದೇ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಆವತ್ತಿಗಿಂತ ಈಗ ನಾಲ್ಕೈದು ಪಟ್ಟು ಜಾಸ್ತಿಯಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಇದನ್ನು ಕಂಟ್ರೋಲ್ ಮಾಡುವುದು ಹೇಗೆ? ಕಾರು, ಜೀಪುಗಳನ್ನು ಖರೀದಿಸಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಹಾಗಂತ ಇದಕ್ಕೆ ಏನು ಮಾಡದೇ ಹೋದರೆ ಟ್ರಾಫಿಕ್ ಜಾಮ್ ತಡೆಯಲು ಆಗುವುದಿಲ್ಲ.
ಸುಮ್ಮಸುಮ್ಮನೆ ಕಾರು ಹೊರಗೆ ತೆಗೆಯಬೇಡಿ..
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರ್ ಟಿಎ ಸಭೆಯಲ್ಲಿ ಶಶಿಕಾಂತ್ ಸೆಂಥಿಲ್ ಈ ಬಗ್ಗೆ ಹೊಸ ಕಲ್ಪನೆಯನ್ನು ಸಭೆಯ ಮುಂದಿಟ್ಟಿದ್ದಾರೆ. ಅದನ್ನು ಎಲೆಕ್ಟ್ರಾನಿಕ್ ರೋಡ್ ಪ್ರೈಸ್ ಎಂದು ಕರೆಯಲಾಗುತ್ತದೆ. ಇಂತಹ ವಿಧಾನ ಸಿಂಗಾಪುರದಂತಹ ದೇಶದಲ್ಲಿ ಇದೆ. ನಮ್ಮ ಊರಿನ ಮಟ್ಟಿಗೆ ಹೊಸತು. ಇದು ಒಂದು ವೇಳೆ ಜಾರಿಗೆ ಬಂದರೆ ಬಸ್, ಆಟೋ ರಿಕ್ಷಾ, ಬಾಡಿಗೆ ಟ್ಯಾಕ್ಸಿ ಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಿಟ್ಟು ಉಳಿದವರ ಜೇಬು ಹಗುರವಾಗಲಿದೆ. ಈ ವ್ಯವಸ್ಥೆಯನ್ನು ಇಲೆಕ್ಟ್ರಾನಿಕ್ ರಸ್ತೆದರ ಎಂದು ಕರೆಯಬಹುದು. ಯಾವುದೇ ಖಾಸಗಿ ವಾಹನ ಇಂತಿಂತಹ ರಸ್ತೆಯನ್ನು ಪ್ರವೇಶಿಸುವಾಗ ಜಿಲ್ಲಾಡಳಿತ ನಿಗದಿಪಡಿಸಿದ ದರ ವಾಹನ ಮಾಲೀಕರ ಬ್ಯಾಂಕ್ ಅಕೌಂಟಿನಿಂದ ಕಡಿತವಾಗುತ್ತದೆ. ಆದ್ದರಿಂದ ಅನಗತ್ಯವಾಗಿ ವಾಹನಗಳು ರಸ್ತೆಗೆ ಇಳಿಯುವುದು ಕಡಿಮೆಯಾಗುತ್ತದೆ. ಹತ್ತು ರೂಪಾಯಿ ಕೆಲಸಕ್ಕೆ ಐವತ್ತು ರೂಪಾಯಿ ವೇಸ್ಟ್ ಆಗುವುದು ಬೇಡಾ ಎನ್ನುವ ಧೋರಣೆ ಮನಸ್ಸಿನಲ್ಲಿ ಬಂದರೆ ಟ್ರಾಫಿಕ್ ಜಾಮ್ ತನ್ನಿಂದ ತಾನೆ ಇಳಿಮುಖವಾಗುತ್ತದೆ. ಯಾವಾಗ ಖಾಸಗಿ ವಾಹನಗಳು ರಸ್ತೆಗೆ ಇಳಿಯುವುದು ಕಡಿಮೆಯಾಗುತ್ತದೆಯೋ ಆಗ ಅನಧಿಕೃತ ಪಾರ್ಕಿಂಗ್ ಅವ್ಯವಸ್ಥೆ ಕೂಡ ಕ್ರಮೇಣ ನಿಲ್ಲುತ್ತದೆ. ವಾಹನಗಳು ಅಲ್ಲಲ್ಲಿ ಕಾಲು ಚಾಚಿ ನಿಲ್ಲದಿದ್ದರೆ ರೋಡ್ ಬ್ಲಾಕ್ ಆಗುವುದಾದರೂ ಹೇಗೆ? ಒಂದು ಒಳ್ಳೆಯ ಐಡಿಯಾ ಜಾರಿಗೆ ಬಂದರೆ ಅಷ್ಟರಮಟ್ಟಿಗೆ ಶಶಿಕಾಂತ್ ಸೆಂಥಿಲ್ ನಮ್ಮ ಜಿಲ್ಲಾಧಿಕಾರಿ ಆಗಿ ಬಂದದಕ್ಕೆ ಸಾರ್ಥಕವಾಗಲಿದೆ. ಮಂಗಳೂರು ಅವರಿಗೆ ಕೃತಜ್ಞತೆ ಸಲ್ಲಿಸಬೇಕು.
ಖಾಸಗಿ ಬಸ್ಸಿನವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಸಿದ್ಧ…
ಅದರೊಂದಿಗೆ ನಾನು ಒಂದು ಪ್ರಶ್ನೆ ಕೇಳಿದ್ದೆ. ಈ ನರ್ಮ್ ಬಸ್ಸುಗಳು ಮಂಗಳೂರಿನಲ್ಲಿ ಹೆಚ್ಚಾಗಬಾರದು ಎಂದು ಖಾಸಗಿ ಬಸ್ಸಿನವರು ನ್ಯಾಯಾಲಯಕ್ಕೆ ಹೋದರೆ ಸರಕಾರದ ಪರವಾಗಿ ಅಲ್ಲಿ ವಾದಿಸಿ, ಗೆದ್ದು ಬರುವಂತಹ ಆಸಕ್ತಿ ನಮ್ಮವರಿಗೆ ಇರುವುದಿಲ್ಲ. ಅದಕ್ಕೆ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಏನು ಹೇಳಿದ್ದಾರೆ ಎಂದರೆ ನಾವು ಸಾರ್ವಜನಿಕರ ಪರವಾಗಿ ಇರುವವರು. ಜನರಿಗೆ ಅನುಕೂಲವಾಗುತ್ತದೆ ಎಂದರೆ ಯಾವ ರೀತಿಯಲ್ಲಿ ಬೇಕಾದರೂ ನ್ಯಾಯಾಲಯದಲ್ಲಿ ಹೋರಾಡಲು ಸಿದ್ಧ. ಯಾವುದೇ ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಅಪರೂಪದ ಸಮರ್ಥ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂಥಿಲ್ ಕಾಣುತ್ತಿದ್ದಾರೆ. ಅವರು ಮಂಗಳೂರಿನ ಸಮಗ್ರ ಚಿತ್ರಣ ಬದಲಾಯಿಸಬೇಕಾದರೆ ಹಲವರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಅದರಲ್ಲಿ ರಾಜಕೀಯ ಲಾಬಿ ಮತ್ತು ಬಸ್ ಲಾಬಿ ಪ್ರಮುಖವಾದದು. ಒಂದು ರಸ್ತೆ ಒನ್ ವೇ ಮಾಡಿದರೆ ಮೇಲಿನಿಂದ ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ಕ್ಯಾನ್ಸಲ್ ಮಾಡಿಸುವ ಊರು ನಮ್ಮದು. ಹಾಗಿರುವಾಗ ಸೆಂಥಿಲ್ ಅವರು ಎಷ್ಟು ಕಠಿಣವಾಗುತ್ತಾರೋ ಅಷ್ಟು ಬೇಗ ಈ ಜಿಲ್ಲೆಯಿಂದ ಕಳಿಸುವ ವ್ಯವಸ್ಥೆ ಮಾಡಲು ನಮ್ಮ ರಾಜಕಾರಣಿಗಳು ಮುಂದಾಗುತ್ತಾರೆ. ಈಗಾಗಲೇ ಸುಧೀರ್ ಕುಮಾರ್ ರೆಡ್ಡಿ ಹಾಗೂ ಶ್ರೀಕಾಂತ್ ರಾವ್ ನಮ್ಮ ಮುಂದೆ ಉದಾಹರಣೆಯಾಗಿ ನಿಂತಿದ್ದಾರೆ. ಶ್ರೀಕಾಂತ್ ರಾವ್ ಮತ್ತೆ ಬಂದಿದ್ದಾರೆ. ಆದರೆ ಸೆಂಥಿಲ್ ಹೆಚ್ಚು ಸ್ಟ್ರಾಂಗ್ ಆದರೆ ಅವರನ್ನು ವೀಕ್ ಮಾಡಲು ನಮ್ಮ ರಾಜಕಾರಣಿಗಳು ತಯಾರಾಗುತ್ತಾರೆ. ಆದ್ದರಿಂದ ಈಗಿನ ಜಿಲ್ಲಾಧಿಕಾರಿಯವರನ್ನು ಹೇಗಾದರೂ ಮಾಡಿ ಕನಿಷ್ಟ ಎರಡು ವರ್ಷ ಇಲ್ಲಿಯೇ ಉಳಿಸಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುವುದು ಒಳ್ಳೆಯದು!!
Leave A Reply