ವೋಟ್ ಮಾಡದಿದ್ದರೆ ಬೇಗ ಹೊರಡಿ, ಕಾಲ ಮಿಂಚುವ ಮೊದಲು ಮತ ಹಾಕಿ!!
ಇವತ್ತು ಚುನಾವಣೆಗೆ ಮತದಾನ ಮಾಡುವ ದಿನ. ಪ್ರಜಾಪ್ರಭುತ್ವದ ನಿಮ್ಮ ಪರಮ ಪವಿತ್ರ ಹಕ್ಕನ್ನು ಚಲಾಯಿಸುವ ವೇಳೆ. ಇದು ಹಕ್ಕು ಮಾತ್ರವಲ್ಲ, ಕರ್ತವ್ಯ ಕೂಡ ಹೌದು. ನೀವು ಇವತ್ತು ವೋಟ್ ಮಾಡಲು ಆಲಸ್ಯ ಮಾಡಿದರೆ ನಿಮಗೆ ಭಾರತದಂತಹ ದೇಶದಲ್ಲಿ ಮಾತ್ರ ಸಿಗುವ ಬಹಳ ದೊಡ್ಡ ಸೌಭಾಗ್ಯವನ್ನು ನೀವೆ ಕಳೆದುಕೊಂಡಂತೆ ಆಗುತ್ತದೆ. ನೀವು ಇನ್ನು ಕೂಡ ವೋಟ್ ಮಾಡದೇ ಇದ್ದರೆ ಮನೆಯಿಂದ ಆದಷ್ಟು ಬೇಗ ಹೊರಗೆ ಬನ್ನಿ. ಮೂರು ಗಂಟೆ ಆಗಲಿ, ನಾಲ್ಕು ಗಂಟೆ ಆಗಲಿ ಎಂದು ಕಾಯಬೇಡಿ.
ನಿಮ್ಮ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರಬಲವಾಗಿ ಪ್ರತಿನಿಧಿಸುವ ಒಬ್ಬ ಜನಪ್ರತಿನಿಧಿಯನ್ನು ನೀವು ಇವತ್ತು ಅರಿಸದಿದ್ದರೆ ನಂತರ ಪಶ್ಚಾತ್ತಾಪ ಪಟ್ಟರೂ ಏನು ಪ್ರಯೋಜನವಿಲ್ಲ. ಜೋರು ಮಳೆ ಬಂದರೆ ಚರಂಡಿಯ ನೀರು ಮನೆಯೊಳಗೆ ಬರುವ ಪರಿಸ್ಥಿತಿ ತಂದು ಒಡ್ಡಿರುವ ವ್ಯಕ್ತಿ ನಿಮ್ಮ ಕ್ಷೇತ್ರದಲ್ಲಿ ಗೆಲ್ಲಬಾರದು ಎಂದರೆ ನೀವು ಸೂಕ್ತ ಗೆಲ್ಲುವ ಅಭ್ಯರ್ಥಿಗೆ ಮತ ಚಲಾಯಿಸಲೇಬೇಕು. ನಿಮ್ಮ ಮತ್ತು ನಿಮ್ಮ ಅಕ್ಕಪಕ್ಕದ ವಾರ್ಡಿಗೆ ಇಡೀ ವಾರ ಇಡೀ ದಿನ ಕುಡಿಯುವ ನೀರು ಸಿಗಬೇಕಾದರೆ ನೀವು ಸಮರ್ಥ ವ್ಯಕ್ತಿಗೆ ಮತ ಹಾಕಲೇಬೇಕು. ನಿಮ್ಮ ವಾರ್ಡಿನಲ್ಲಿ ಡ್ರೈನೇಜ್ ಅವ್ಯವಸ್ಥಿತವಾಗಿ ಇದ್ದರೆ ಅದನ್ನು ಸರಿ ಮಾಡಬೇಕಾದರೆ ಯೋಗ್ಯ ವ್ಯಕ್ತಿಗೆ ನೀವು ಮತ ಹಾಕಲೇಬೇಕು.
ಸರಿಯಾಗಬೇಕಾದ ಕೆಲಸದ ಪಟ್ಟಿ ದೊಡ್ಡದಿದೆ…
ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಆಗಾಗ ಕಟ್ ಮಾಡಿ ನಮ್ಮ ತೆರಿಗೆಯ ಹಣ ಮತ್ತು ರಸ್ತೆಯನ್ನು ಹಾಳು ಮಾಡುವವರ ವಿರುದ್ಧ ನೀವು ಮತ ಹಾಕಬೇಕು. ಯಾರದ್ದೋ ಸಾಧನೆಯನ್ನು ತಮ್ಮದು ಎಂದು ಹೇಳಿಕೊಳ್ಳುವ ವ್ಯಕ್ತಿಗೆ ಮತ ಹಾಕಿದರೆ ಅದರಿಂದ ಕ್ಷೇತ್ರ ಎಷ್ಟು ಉದ್ಧಾರವಾಗಿದೆ ಎಂದು ನಿಮಗೆ ಗೊತ್ತೆ ಇರುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗೆ ಬಂದ ಮೊದಲ ಹಂತದ ಅನುದಾನವನ್ನೇ ಸಮರ್ಪಕವಾಗಿ ಬಳಸಲು ಆಗದವರಿಗೆ ವೋಟ್ ಹಾಕಿದರೆ ಏನು ಪ್ರಯೋಜನವಾಗುತ್ತದೆ ಎಂದು ಪ್ರಜ್ಞಾವಂತರಿಗೆ ಹೇಳುವ ಅವಶ್ಯಕತೆನೆ ಇಲ್ಲ. ಕಳೆದ ಐದು ವರ್ಷಗಳಲ್ಲಿ ಆದ ಕಾಮಗಾರಿಗಳಲ್ಲಿ ಹಿಂದಿನ ಮುಖ್ಯಮಂತ್ರಿಗಳು ಕೊಟ್ಟ ಇನ್ನೂರು ಕೋಟಿ ರೂಪಾಯಿಗಳಲ್ಲಿ ಆದ ಕಾಮಗಾರಿಗಳೇ ನೂರಕ್ಕೆ ತೊಂಭತ್ತು ಶೇಕಡಾ ಇವೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಘನತ್ಯಾಜ್ಯ ನಿರ್ವಹಣೆಗೆ ಕೋಟಿ ಕೋಟಿ ಸುರಿಯುತ್ತಿರುವವರಿಗೆ ಅವರಿಂದ ಸರಿಯಾಗಿ ಕೆಲಸ ಮಾಡಿಸಲು ಆಗುವುದಿಲ್ಲ ಎಂದ ಮೇಲೆ ನಮ್ಮ ತೆರಿಗೆಯ ಹಣಕ್ಕೆ ಬೆಲೆಯೇ ಇಲ್ಲವೇ. ಕಾನೂನಾತ್ಮಕವಾಗಿ ಒಂದು ರಸ್ತೆಗೆ ಹೆಸರು ಇಟ್ಟದ್ದಕ್ಕೆ ತಡೆಯಾಜ್ಞೆ ತಂದು ಗಣ್ಯ ವ್ಯಕ್ತಿಯ ಅಭಿಮಾನಿಗಳಿಗೆ ಬೇಸರ ತಂದವರು ಇನ್ನೆಷ್ಟು ಜಾತ್ಯಾತೀತತೆ ಮೆರೆಯಬಹುದು ಎನ್ನುವುದು ನಾಗರಿಕರು ಅರ್ಥ ಮಾಡಿಕೊಂಡಿದ್ದಾರೆ. ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ಹಿಂದೇಟು ಹಾಕುವವರು ಮಂಗಳೂರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದು ಗೊತ್ತಾಗಿದೆ.
ಹೊಸ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ಇದೆ….
ಹೊಸದಾಗಿ ನಿರ್ಮಾಣವಾಗಿರುವ ಒಂದು ಮಾರುಕಟ್ಟೆಯನ್ನು ಯಾವ ಅನುದಾನದಿಂದ ಕಟ್ಟಿದ್ದು ಮತ್ತು ಯಾರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ತಿಳಿದಿದೆ. ಮೈದಾನದ ವಿಷಯದಲ್ಲಿ ರಾಜಕೀಯ ಮಾಡುವವರಿಗೆ ಮತ ಹಾಕಬೇಕಾ ಎನ್ನುವುದು ಕ್ರೀಡಾಪ್ರೇಮಿಗಳ ಪ್ರಶ್ನೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುತ್ತೇನೆ ಎಂದು ಹೇಳಿಕೊಂಡು ಬಂದವರು ಕಳೆದ ಐದು ವರ್ಷಗಳಲ್ಲಿ ಎಷ್ಟು ಯೂನಿಟ್ ವಿದ್ಯುತ್ ಉತ್ಪಾದಿಸಿದ್ದಾರೆ ಎನ್ನುವುದಕ್ಕೆ ಲೆಕ್ಕ ಕೊಡಬಹುದಾ? ಒಂದೇ ಒಂದು ಯೂನಿಟ್ ಉತ್ಪಾದನೆ ಮಾಡಲಾಗದವರಿಂದ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯ. ಪಿಲಿಕುಳ ತೋರಿಸಿ ವೋಟ್ ಕೇಳುವವರು ಅದು ಯಾರ ಅವಧಿಯಲ್ಲಿ ಪ್ರಾರಂಭವಾಯಿತು ಎನ್ನಬಹುದಾ? ಕದ್ರಿ ಪಾರ್ಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಮಕ್ಕಳ ರೈಲು ಓಡಿಸಲಾಗದವರು ಇನ್ನು ಐದು ವರ್ಷ ರೈಲು ಬಿಡಲು ಅವಕಾಶ ಈ ಬಾರಿ ಮತದಾರ ಕೊಡುತ್ತಾನಾ? ಕೆರೆಗಳನ್ನು ಅಭಿವೃದ್ಧಿ ಪಡಿಸುವ ಭರವಸೆಗಳು ಕಳೆದ ಐದು ವರ್ಷಗಳಲ್ಲಿ ಎಲ್ಲಿ ಈಡೇರಿದೆ. ಸರಕಾರಿ ಕಚೇರಿಗಳಲ್ಲಿ ಕೆಲಸಗಳು ಎಲ್ಲಿ ವೇಗ ಪಡೆದಿವೆ. ಕಾಂಕ್ರೀಟ್ ರಸ್ತೆಗಳಿಗೆ ಫುಟ್ ಪಾತ್ ಎಲ್ಲಿ ಎಂದು ಕೇಳುತ್ತಿದ್ದವರು ಎಷ್ಟು ಫುಟ್ ಪಾತ್ ನಿರ್ಮಿಸಿದ್ದಾರೆ? ವಾರ್ಡ್ ಕಮಿಟಿ ಮಾಡುತ್ತೇನೆ ಎಂದು ಭರವಸೆ ಕೊಟ್ಟವರು ಎಷ್ಟು ವಾರ್ಡ್ ಸಮಿತಿ ಮಾಡಿದ್ದಾರೆ.
ಕ್ಲಾಕ್ ಟವರಿಗೆ ಇಟ್ಟಿರುವ ಬಜೆಟ್ ವೈಜ್ಞಾನಿಕವಾಗಿದೆಯಾ? ಮಂಗಳೂರಿಗೆ ಒಂದು ಬಸ್ ನಿಲ್ದಾಣ ನಿರ್ಮಿಸಲು ಸಾಧ್ಯವಾಗಿದೆಯಾ? ಪ್ರವಾಸೋದ್ಯಮಕ್ಕೆ ಕೊಟ್ಟ ಕೊಡುಗೆ ಏನು? ಬರೆಯಲು ಹೋದರೆ ಮಂಗಳೂರು ನಗರ ದಕ್ಷಿಣ ಕಳೆದ ಐದು ವರ್ಷಗಳಲ್ಲಿ ಏನನ್ನು ಕಂಡಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ? ಸಾಧನೆಯ ಹಾದಿಯಲ್ಲಿ ಕನಸುಗಳೆ ತೊಂಭತ್ತು ಶೇಕಡಾ ತುಂಬಿವೆ ಎಂದು ಮಂಗಳೂರಿನ ತಜ್ಞ ಇಂಜಿನಿಯರ್, ಮಂಗಳೂರು ಮಹಾನಗರ ಪಾಲಿಕೆಯ ತಾಂತ್ರಿಕ ಸಲಹೆಗಾರ ಧರ್ಮರಾಜ್ ಅವರು ಹೇಳುತ್ತಾರೆ ಎಂದರೆ ಇದಕ್ಕಿಂತ ದಿದೊಡ್ಡ ಪ್ರಮಾಣ ಪತ್ರ ಬೇಕಾ?
Leave A Reply