ಮಂಗಳೂರಿನಲ್ಲಿ “ಹಿಜಾಬ್” ವಿವಾದ ಅಂತ್ಯ ಕಾಣುತ್ತಾ?
ಕೆಲವು ಸಂಘಟನೆಗಳಿಗೆ ತಮ್ಮ ಅಸ್ತಿತ್ವ ತೋರಿಸಲು ವಿಷಯ ಬೇಕಾಗಿರುತ್ತದೆ. ಅದಕ್ಕೆ ಯಾವುದಾದರೂ ಒಂದು ವಿಷಯ ತೆಗೆದುಕೊಂಡು ಪ್ರತಿಭಟನೆ ಇಳಿಯುತ್ತಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸದ್ಯ ಮಾಡುತ್ತಿರುವುದು ಅದನ್ನೇ. ಸೆಂಟ್ ಆಗ್ನೇಸ್ ಕಾಲೇಜಿನಲ್ಲಿ ತರಗತಿಯ ಒಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತಲೆಗೆ ಹಿಜಾಬ್ (ಶಿರವಸ್ತ್ರ) ಹಾಕಲು ಕಾಲೇಜಿನ ಆಡಳಿತ ಮಂಡಳಿಯವರು ನಿರಾಕರಿಸಿರುವುದರ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಮಂಗಳೂರಿನಲ್ಲಿ ಎಲ್ಲವೂ ಚೆನ್ನಾಗಿ ಇರುವಾಗ ಇಂತಹ ಪ್ರತಿಭಟನೆ ಅಥವಾ ವಿವಾದಗಳನ್ನು ಎಬ್ಬಿಸುವ ಅಗತ್ಯವೇ ಇಲ್ಲ. ಇಲ್ಲಿ ಮುಖ್ಯವಾಗಿ ನಾವು ನೋಡಬೇಕಾಗಿರುವುದು ನಿಜಕ್ಕೂ ಆ ವಿಷಯದಿಂದ ಮಕ್ಕಳಿಗೆ ಅಥವಾ ಆ ವಿದ್ಯಾರ್ಥಿನಿಯರ ಕಲಿಕೆಗೆ ಲಾಭ ಇದೆಯಾ ಎನ್ನುವುದು. ನಾನು ಇಲ್ಲಿ ಯಾವುದೇ ಕಾಲೇಜಿನ ಪರವಾಗಿ ಅಥವಾ ಯಾವುದಾದರೂ ಸಂಘಟನೆಯ ವಿರುದ್ಧವಾಗಿ ಮಾತನಾಡುತ್ತಿದ್ದೇನೆ ಎಂದಲ್ಲ. ಈ ವಿಷಯವನ್ನು ನೀವೊಂದು ಸಮಚಿತ್ತದಿಂದ ನೋಡಿ ಅರ್ಥ ಮಾಡಿಕೊಳ್ಳಿ.
ನೀತಿ ನಿಯಮಾವಳಿ ಗೊತ್ತಿದ್ದೆ ದಾಖಲಾತಿ….
ಮೊದಲನೇಯದಾಗಿ ನೀವು ಯಾವುದೇ ಕಾಲೇಜಿಗೆ ಸೇರುವಾಗ ಅಲ್ಲಿ ದಾಖಲಾತಿಯ ಮೊದಲು ಅವರೊಂದು ಕಿರುಪುಸ್ತಕ ಕೊಡುತ್ತಾರೆ. ಅದರಲ್ಲಿ ಆ ಕಾಲೇಜಿನ ನೀತಿ ನಿಯಮಾವಳಿಗಳ ಬಗ್ಗೆ ವಿವರಿಸಲಾಗಿರುತ್ತದೆ. ನೀವು ಅದನ್ನು ಓದಿಯೇ ಆ ಕಾಲೇಜಿಗೆ ಸೇರಿರುತ್ತೀರಿ. ಅಂದರೆ ನಿಮಗೆ ಮೊದಲೇ ಇಂತಹ ಕಾಲೇಜಿನಲ್ಲಿ ಇಂತಹುದಕ್ಕೆ ಅವಕಾಶ ಇದೆಯೋ ಇಲ್ಲವೋ ಎಂದು ಗೊತ್ತಿರುತ್ತದೆ. ಅಷ್ಟಾಗಿಯೂ ನೀವು ಅಲ್ಲಿ ಸೇರುತ್ತಿರಿ ಅಂದರೆ ನಿಮಗೆ ಆ ಕಾಲೇಜಿನ ರೀತಿ ರಿವಾಜುಗಳು ಒಪ್ಪಿಗೆ ಆಗಿವೆ ಎಂದೇ ಅರ್ಧ. ಅದರ ನಂತರ ಒಂದಿಷ್ಟು ದಿನಗಳ ಬಳಿಕ ನೀವು ಇಂತಹ ಸಂಪ್ರದಾಯಕ್ಕೆ ಅವಕಾಶ ಕೊಡಲೇಬೇಕು ಎಂದು ಹಟ ಹಿಡಿದರೆ ಅದರ ಹಿಂದಿನ ಉದ್ದೇಶ ಏನು? ಈಗ ಆಗ್ನೇಸ್ ಕಾಲೇಜಿನಲ್ಲಿಯೂ ಆಗಿರುವುದು ಅದೇ. ಕಾಲೇಜಿನವರು ಕಾಲೇಜಿನ ಆವರಣ ಪ್ರವೇಶಿಸುವಾಗಲೇ ಹಿಜಾಬ್ ಹೊರಗಿಟ್ಟು ಬನ್ನಿ ಎಂದು ಸೂಚನೆ ಕೊಟ್ಟಿಲ್ಲ. ಹಾಗೆ ಕಾಲೇಜಿನ ಆವರಣದಲ್ಲಿ ಹಾಕಬಾರದು ಎಂದು ಕೂಡ ಹೇಳಿಲ್ಲ. ಅವರು ಹೇಳಿರುವುದು ಕ್ಲಾಸ್ ನಡೆಯುವಾಗ ಅದನ್ನು ಧರಿಸಬೇಡಿ ಎನ್ನುವುದು ಮಾತ್ರ. ಇದನ್ನು ವಿರೋಧಿಸಿ ಪ್ರತಿಭಟಿಸುವುದು ಏನಿದೆ?
ಮೊದಲೇ ಮಂಗಳೂರು ಇಂತಹ ವಿಷಯದಲ್ಲಿ ಸೂಕ್ಷ್ಮ….
ಒಂದು ವೇಳೆ ಕಾಲೇಜಿನ ಆಡಳಿತ ಮಂಡಳಿ ಕಾಲೇಜು ಸೇರುವಾಗ ಹೇಳದೆ ನಂತರ ಮಧ್ಯೆದಲ್ಲಿ ಹೇಳಿದ್ದರೆ ಆಗ ಮಾತು ಬೇರೆ. ಒಂದು ವೇಳೆ ಹಾಗಿದ್ದರೆ ನಾನು ಕೂಡ ಕಾಲೇಜಿನ ನಿಲುವನ್ನು ವಿರೋಧಿಸುತ್ತಿದ್ದೆ. ಯಾಕೆಂದರೆ ಅದು ಮಕ್ಕಳಿಗೆ ಗೊತ್ತಿರಲಿಲ್ಲ ಎನ್ನುವುದು. ಆದರೆ ಈಗ ಹಾಗಲ್ಲ. ಇನ್ನು ಕೆಲವು ಮತೀಯ ಸಂಘಟನೆಗಳು ಏನು ಹೇಳುತ್ತಿವೆ ಎಂದರೆ ಹಿಂದೂ ಹೆಣ್ಣುಮಕ್ಕಳಿಗೆ ಕುಂಕುಮ ಹಾಕದೇ ಬರಬೇಕು ಎಂದರೆ ನೀವು ಕೇಳುತ್ತೀರಾ ಎನ್ನುತ್ತಿವೆ. ನಾನು ಹೇಳುವುದು ಇದು ಶುದ್ಧ ಅಸಂಬದ್ಧ ವಿಷಯ. ಇಲ್ಲಿ ಹಿಂದೂ ಮಕ್ಕಳನ್ನು ಮಧ್ಯಕ್ಕೆ ತರುವ ಅಗತ್ಯವೇ ಇರುವುದಿಲ್ಲ. ಇದು ಕೆಲವು ವಿದ್ಯಾರ್ಥಿನಿಯರ ಮತ್ತು ಕಾಲೇಜಿನ ಆಡಳಿತ ಮಂಡಳಿಯ ನಡುವಿನ ವಿಷಯ ಬಿಟ್ಟರೆ ಇದಕ್ಕೆ ಜಿಲ್ಲಾ ಮಟ್ಟದಲ್ಲಿ, ರಾಜ್ಯದ ಲೆವೆಲ್ಲಿನಲ್ಲಿ ಹೈಪ್ ಮಾಡುವ ಅಗತ್ಯ ಇಲ್ಲ. ಒಂದು ಸಂಸ್ಥೆ ನಿಮಗೆ ಅಲ್ಲಿ ಸೇರುವ ಮೊದಲು ಇಂತಿಂತಹ ನಿಯಮ ಅನುಸರಿಸಿದರೆ ಮಾತ್ರ ಅವಕಾಶ ಎಂದು ಹೇಳಿದ ಮೇಲೆ ನೀವು ಅಲ್ಲಿ ಸೇರಿ ನಂತರ ವಿರೋಧಿಸಿದರೆ ಅದು ಹಿಂದೂ, ಮುಸ್ಲಿಂ ಯಾಕೆ ಮಾಡಬೇಕು. ಇನ್ನು ಮಂಗಳೂರು ಮೊದಲೇ ಕೋಮು ಸೂಕ್ಷ್ಮ ಪ್ರದೇಶ. ಇಲ್ಲಿ ಮಕ್ಕಳನ್ನು ಧರ್ಮದ ಸಂಗತಿಗಳಲ್ಲಿ ತರಲೇಬಾರದು. ಅವರಿಗೆ ಶಿರವಸ್ತ್ರ ಕ್ಲಾಸಿನಲ್ಲಿ ಮಾತ್ರ ಹಾಕಬೇಡಿ ಎಂದದ್ದು ಬಿಟ್ಟರೆ ಬೇರೆ ಏನಿದೆ. ಅಷ್ಟಕ್ಕೂ ಒಬ್ಬ ಹುಡುಗ ಅಥವಾ ಹುಡುಗಿ ಕಾಲೇಜಿಗೆ ಬರುವುದು ವಿದ್ಯಾಭ್ಯಾಸಕ್ಕಾಗಿ ಮಾತ್ರ. ಧರ್ಮವನ್ನು ತರಗತಿಯ ಹೊರಗೆನೆ ಇಡಬೇಕು. ಒಂದು ವೇಳೆ ಮನೆಯಲ್ಲಿ ಇಟ್ಟು ಬಂದರೆ ಇನ್ನೂ ಉತ್ತಮ. ಒಂದು ವೇಳೆ ವಿದ್ಯಾರ್ಥಿನಿಯರ ಪ್ರತಿಭಟನೆ, ಸಂಘಟನೆಯ ಒತ್ತಡಕ್ಕೆ ಮಣಿದು ಕಾಲೇಜಿನ ಆಡಳಿತ ಮಂಡಳಿ ನಿಯಮವನ್ನು ಸಡಿಲಿಸಿತು ಎಂದೇ ಇಟ್ಟುಕೊಳ್ಳೋಣ, ನಾಳೆ ಏನಾಗಬಹುದು. ಇನ್ನೊಂದು ಧರ್ಮದವರು ತಮ್ಮ ಸಂಪ್ರದಾಯದ ವಸ್ತ್ರವನ್ನು ಧರಿಸುತ್ತೇವೆ ಎಂದು ಹಟ ಹಿಡಿದರೆ ಏನು ಮಾಡುವುದು. ನಾವು ಧರ್ಮವನ್ನು ಹೃದಯದಲ್ಲಿ ಇಟ್ಟರೆ ಸಾಕಾಗುತ್ತದೆ. ಅದನ್ನು ಎಲ್ಲಾ ಕಡೆ ತಲೆ ಮೇಲೆ ಹೊತ್ತುಕೊಂಡು ತಿರುಗುತ್ತೇವೆ ಎಂದು ಹೊರಟರೆ ಅನಗತ್ಯ ಕಿರಿಕಿರಿ, ಗೊಂದಲ ಉಂಟಾಗುತ್ತದೆ. ಅಷ್ಟಕ್ಕೂ ಒಬ್ಬ ವಿದ್ಯಾರ್ಥಿನಿ ತಾನು ಗಳಿಸುವ ಅಂಕ, ಜ್ಞಾನ ಮತ್ತು ಪಠ್ಯೇತರ ಚಟುವಟಿಕೆಗಳಿಂದ ತನಗೂ, ತನ್ನ ಪೋಷಕರಿಗೂ, ಕಾಲೇಜಿಗೂ ಹೆಸರು ತರಬೇಕೆ ವಿನ: ಇಂತಹ ವಿಷಯಗಳಿಂದ ಅಲ್ಲ!
Leave A Reply