ಬೆಂಗ್ಳೂರು – ಮಂಗ್ಳೂರು ರೈಲ್ವೇ ಹಳಿ 50 ಕಡೆ ಗುಡ್ಡ ಕುಸಿತ – 1 ತಿಂಗ್ಳು ಸಂಚಾರ ಅನುಮಾನ
ಹಾಸನ: ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯಾದ್ಯಂತ ಜನರು ತತ್ತರಿಸಿಹೋಗಿದ್ದು, ಈಗ ಮಳೆಯ ರಭಸಕ್ಕೆ ರೈಲ್ವೇ ಸೇತುವೆಯೇ ಕೊಚ್ಚಿ ಹೋಗಿದೆ.
ಜಿಲ್ಲಯಲ್ಲಿ ಶುಕ್ರವಾರ ರಾತ್ರಿ ಜೋರಾದ ಮಳೆಯಾಗಿದ್ದು, ಪರಿಣಾಮ ಸಕಲೇಶಪುರ ತಾಲೂಕು ಎಡಕುಮೇರಿ ರೈಲು ಹಳಿಯ ಮೇಲೆ ಗುಡ್ಡ ಕುಸಿದಿದೆ. ಅಷ್ಟೇ ಅಲ್ಲದೇ ಬೆಂಗಳೂರು ಮಂಗಳೂರು ರೈಲ್ವೇ ಸಂಪರ್ಕದಲ್ಲಿ 50 ಕಡೆ ಗುಡ್ಡ ಕುಸಿತ ಉಂಟಾಗಿದೆ. ಇದರಿಂದ ಇನ್ನು ಒಂದು ತಿಂಗಳು ರೈಲು ಸಂಚಾರ ಅನುಮಾನವಾಗಿದೆ.
ಸದ್ಯಕ್ಕೆ ಸಕಲೇಶಪುರ ತಾಲೂಕು ಎಡಕುಮೇರಿ ಸುತ್ತಲು ರೈಲ್ವೇ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಕಾರ್ಮಿಕರ ಕೊರತೆಯಿಂದ ಕಾರ್ಯ ವಿಳಂಬವಾಗುತ್ತಿದೆ. ಮಳೆಯಿಂದ ರೈಲ್ವೇ ಇಲಾಖೆಗೆ ಅಪಾರ ನಷ್ಟವಾಗಿದೆ. ಈಗಾಗಲೇ ಭಾರೀ ಮಳೆಯಿಂದ ಶಿರಾಡಿಘಾಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಕಾವೇರಿ ನದಿ ನೀರು ಅಪಾಯದ ಮಟ್ಟವನ್ನು ತಲುಪಿದೆ. ಪರಿಣಾಮ ಜಿಲ್ಲೆಯ ರಾಮನಾಥಪುರ ಪಟ್ಟಣದಲ್ಲಿ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳು ಕುಸಿದು ಬಿದ್ದಿವೆ. ಪಟ್ಟಣದಿಂದ ಮೈಸೂರು ಮತ್ತು ಮಡಿಕೇರಿಗಳಿಗೆ ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ. ಪ್ರಸನ್ನ ಸುಬ್ರಮಣ್ಯ ದೇವಾಲಯದ ಬಳಿಯೂ ನೀರು ನುಗ್ಗಿದ್ದು, ಸದಾ ಭಕ್ತರಿಂದ ಇದ್ದ ಆಂಜನೇಯ ದೇವಾಲಯಗಳು ಮತ್ತು ರಾಮನಾಥಪುರ ದೇವಸ್ಥಾನಗಳು ಜಲಾವೃತಗೊಂಡಿವೆ.
Leave A Reply