ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
ಭಾರತೀಯ ಜನತಾ ಪಾರ್ಟಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತಾ? ಲೋಕಸಭಾ ಚುನಾವಣೆಗೆ ಐದೂವರೆ ತಿಂಗಳು ಇರುವ ಈ ಸಮಯದಲ್ಲಿ ಇಷ್ಟು ಬೇಗ ಅದು ಹೇಳಲು ಸಾಧ್ಯವೇ ಎಂದು ನೀವು ಕೇಳಬಹುದು. ಆದರೆ ನವೆಂಬರ್ ಅಂತ್ಯದೊಳಗೆ ಕಾಂಗ್ರೆಸ್ ಪಕ್ಷದ ಮುಖಂಡರು ಈ ಬಗ್ಗೆ ಏನೂ ಹೇಳದಿದ್ದರೆ ಡಿಸೆಂಬರ್ 15 ಕ್ಕೆ ನಡೆಯುವ ಮುಸ್ಲಿಂ ಮುಖಂಡರ ಬೃಹತ್ ಸಮಾವೇಶದಲ್ಲಿ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಮಗೆ ಅವಕಾಶ ಕೊಡಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹ ಮಾಡಿರುವುದರಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಇದು ಈಗ ಬಿಸಿತುಪ್ಪವಾಗಿ ಪರಿಣಮಿಸಿದೆ. ಇಲ್ಲಿಯ ತನಕ ಮುಸ್ಲಿಂ ಮುಖಂಡರು ತಮಗೆ ಯಾವುದೇ ಚುನಾವಣೆಯಲ್ಲಿ ಟಿಕೆಟ್ ಕೇಳದೇ ಪ್ರಥಮ ಬಾರಿ ಹೀಗೆ ಕೇಳಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಇಷ್ಟು ವರ್ಷ ಏನು ಆಗುತ್ತಿತ್ತು ಎಂದರೆ ಜಿಲ್ಲಾ ಕಾಂಗ್ರೆಸ್ ಆಫೀಸಿನಲ್ಲಿಯೋ ಅಥವಾ ಯಾವುದಾದರೂ ಮುಸ್ಲಿಂ ಉನ್ನತ ನಾಯಕರ ಬಂಗಲೆಯಲ್ಲಿಯೋ ಹೀಗೆ ಹಿರಿಯರು, ಗಣ್ಯರು ಸೇರಿ ಚರ್ಚಿಸಿ ಒಂದು ಮನವಿ ಬರೆದು ಅದನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೋ ಅಥವಾ ಅವರದ್ದೇ ಪಕ್ಷದ ಉನ್ನತ ನಾಯಕರಿಗೋ ಕೊಟ್ಟು ಅದರ ಒಂದು ಫೋಟೋ ತೆಗೆದು ಪತ್ರಿಕೆಗಳಿಗೆ ಕಳುಹಿಸಿಕೊಡುತ್ತಿದ್ದರು. ನಾವು ಮನವಿ ಮಾಡಿದ್ದೇವೆ ಎನ್ನುವ ಸಾಂಕೇತಿಕ ಫೋಟೋ ಮಾತ್ರ ಅವರ ಉದ್ದೇಶವಾಗುತ್ತಿತ್ತು. ಆದರೆ ಈ ಬಾರಿ ಮೊದಲ ಸಲ ಕಾಂಗ್ರೆಸ್ ಹೊಸ ರೀತಿಯ ಒತ್ತಡವನ್ನು ಅನುಭವಿಸುತ್ತಿದೆ. ಅದೇನೆಂದರೆ ಮೊನ್ನೆ ಅಕ್ಟೋಬರ್ 24 ರಂದು ನಡೆದ ಬಹಿರಂಗ ಸಭೆ. ಆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕ ಮಸೂದ್ ಸಹಿತ ಕಾಂಗ್ರೆಸ್, ಜೆಡಿಎಸ್, ಎಸ್ ಡಿಪಿಐ ಹಿರಿಯ ಕಿರಿಯ ನಾಯಕರಿದ್ದರು. ಯಾವ ಪಕ್ಷದಲ್ಲಿಯೂ ಇಲ್ಲದ ಗಣ್ಯರೂ ಇದ್ದರು. ಬಿಜೆಪಿಯ ಒಲವುಳ್ಳ ಮುಸ್ಲಿಂ ನಾಗರಿಕರು ಇದ್ದರು. ಮಂಗಳೂರಿನ ಪುರಭವನದ ಆವರಣದಲ್ಲಿರುವ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಎಷ್ಟು ಬೇಕಾದರೂ ಚಿತ್ರೀಕರಣ ಮಾಡಿ ನ್ಯೂಸ್ ದೊಡ್ಡದು ಮಾಡಲು ಮುಕ್ತ ಅವಕಾಶವಿತ್ತು.
ಮುಸ್ಲಿಮರ ಸಂಖ್ಯೆ ದಕದಲ್ಲಿ 25%…
ಈ ಸಭೆಯಲ್ಲಿ ಮುಸ್ಲಿಂ ಮುಖಂಡರು ಮಾತನಾಡಿದ ಮುಖ್ಯವಾದ ಎರಡು ಸಂಗತಿ ಗಮನಿಸಲೇಬೇಕು. ಅದರಲ್ಲಿ ಮೊದಲನೇಯದ್ದು ಈ ಬಾರಿ ಕಾಂಗ್ರೆಸ್ ಪಕ್ಷ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೇಟ್ ಕೊಡಬೇಕು. ಹೇಳಿ ಕೇಳಿ, ನಮ್ಮ ರಾಜ್ಯದಲ್ಲಿ ಕಲ್ಬುರ್ಗಿ ಜಿಲ್ಲೆ ಬಿಟ್ಟರೆ ಅತೀ ಹೆಚ್ಚು ಮುಸ್ಲಿಮರು ಇರುವಂತಹ ಮತ್ತೊಂದು ಜಿಲ್ಲೆ ದಕ್ಷಿಣ ಕನ್ನಡ. ಹಿಂದೂತ್ವದ ಪ್ರಬಲ ಕೋಟೆಯಲ್ಲಿ ಸುಮಾರು ಐದು ಲಕ್ಷದ ಹತ್ತು ಸಾವಿರದಷ್ಟು ಮುಸ್ಲಿಮರಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ 25%. 1989 ರಲ್ಲಿ ಕೊನೆಯದಾಗಿ ಜನಾರ್ಧನ ಪೂಜಾರಿಯವರು ಇಲ್ಲಿಂದ ಗೆದ್ದ ಬಳಿಕ ನಂತರ ಇಲ್ಲಿಯ ತನಕ ಈ ಕ್ಷೇತ್ರ ಭಾರತೀಯ ಜನತಾ ಪಾರ್ಟಿಯ ಹಿಡಿತದಲ್ಲಿಯೇ ಇದೆ. ಕಳೆದ ಐದು ಚುನಾವಣೆಯಲ್ಲಿಯೂ ಇಲ್ಲಿ ಕಾಂಗ್ರೆಸ್ಸನ್ನು ಬಿಜೆಪಿ ಸೋಲಿಸುತ್ತಾ ಬರುತ್ತಿದೆ. ಆದ್ದರಿಂದ ಹೇಗೂ ಸೋಲುವಂತಹ ಕ್ಷೇತ್ರ, ನಮಗೊಂದು ಅವಕಾಶ ಕೊಟ್ಟು ಪ್ರಯತ್ನಿಸಿ ನೋಡಿ ಎನ್ನುವುದು ಮುಸ್ಲಿಂ ಮುಖಂಡರ ಒಳಗಿರುವ ಆಶಾಭಾವ. ಹಾಗೇ ಹೇಳಲು ಅವರು ತಯಾರಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ, ನಮಗೆ ಕಾಂಗ್ರೆಸ್ ಪಕ್ಷವೇ ಟಿಕೆಟ್ ಕೊಡಬೇಕಾಗಿಲ್ಲ, ಬಿಜೆಪಿ ಕೊಟ್ಟರೂ ಆಗಬಹುದು ಎನ್ನುವುದು ಇನ್ನಿಷ್ಟು ಮುಖಂಡರ ಆಶಯ. ಆದರೆ ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಕರೆದು ಟಿಕೆಟ್ ಕೊಡುವ ಸಾಧ್ಯತೆ ಇಲ್ಲದಿರುವುದರಿಂದ ಕಾಂಗ್ರೆಸ್ ಕೊಡಲಿ ಎನ್ನುವುದನ್ನು ಅವರೆಲ್ಲರೂ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ.
ಕಾಂಗ್ರೆಸ್ ನ ಒಳಗಿರುವ ತಂತ್ರವೇ…
ಹಾಗಂತ ಕಾಂಗ್ರೆಸ್ ನಾಯಕರ ಬಳಿ ಕೇಳಿದರೆ “ಕೊಡುವುದು ದೊಡ್ಡ ವಿಷಯವಲ್ಲ, ಆದರೆ ಕೊಟ್ಟರೆ ಗೆಲ್ಲುತ್ತಾರಾ ಎನ್ನುವುದನ್ನು ನೋಡಬೇಕಲ್ಲ” ಎನ್ನುವ ಮಾತನ್ನು ಹೇಳುತ್ತಾರೆ. ಆದರೆ ಮುಸ್ಲಿಂ ನಾಯಕರು “ಒಂದು ವೇಳೆ ಇವರು ಹಿಂದೂ ಅಭ್ಯರ್ಥಿಗೆನೆ ಕೊಟ್ಟರೆ ಗೆಲ್ಲುವ ಗ್ಯಾರಂಟಿ ಇದೆಯಾ?” ಎಂದು ಮರುಪ್ರಶ್ನೆ ಹಾಕುತ್ತಾರೆ. ಅದಕ್ಕೆ ಕಾಂಗ್ರೆಸ್ ನಾಯಕರ ಬಳಿ ಉತ್ತರ ಇಲ್ಲ. ಏಕೆಂದರೆ ಹಿಂದಿಗಿಂತ ಈ ಬಾರಿ ಬಿಜೆಪಿ ಕರಾವಳಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಹಿಂದೂತ್ವದ ಅಲೆ ಸುನಾಮಿಯ ರೂಪ ಪಡೆದಿದೆ. ಹೀಗಿರುವಾಗ ಏನೇ ಆದರೂ ಬಿಜೆಪಿಯನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ಮೊನ್ನೆ ವಿಧಾನಸಭಾ ಚುನಾವಣೆಗೆ ಮತ ಹಾಕಿದ ಮತದಾರ ತಯಾರಾಗುತ್ತಾನಾ ಎನ್ನುವುದು ಪ್ರಶ್ನೆ. ವಿಧಾನಸಭೆಗೆ ಯಾರಿಗೆ ಬೇಕಾದರೂ ಹಾಕುತ್ತೇವೆ, ಲೋಕಸಭೆಯಲ್ಲಿ ಮೋದಿಗೆ ಮಾತ್ರ ಎಂದು ಮತದಾರ ಹೇಳುತ್ತಾ ಬಂದಿರುವುದು ಮೊನ್ನೆ ವಿಧಾನಸಭಾ ಚುನಾವಣೆಯಲ್ಲಿ ರಿಂಗುಣಿಸಿದೆ. ಮೊನ್ನೆಯೇ ಬಿಜೆಪಿಗೆ ಮತ ಹಾಕಿದ ಮತದಾರ ಈಗ ಬದಲಾಯಿಸುವ ಪ್ರಶ್ನೆ ಉದ್ಭವವಾಗುವುದು ಕಷ್ಟ. ಈ ನಡುವೆ ಮುಸ್ಲಿಂ ಮುಖಂಡರು ಹೀಗೆ ಮಾತನಾಡಿ ಕಾಂಗ್ರೆಸ್ ಪರಿಸ್ಥಿತಿಯನ್ನು ಶೋಚನೀಯ ಸ್ಥಿತಿಗೆ ತಂದಿದ್ದಾರೆ.
ಮುಸ್ಲಿಂ ಮುಖಂಡರು ಹೀಗೆ ಸಭೆ ನಡೆಸಿದ ಮರುದಿನವೇ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರು ಕೂಡ ಕಾಂಗ್ರೆಸ್ ಈ ಬಾರಿ ತಮಗೆ ಕೊಡದಿದ್ದರೆ ಮುಸ್ಲಿಂ ಅಭ್ಯರ್ಥಿಗೆ ಕೊಡಲಿ ಎಂದು ಹೇಳಿದ್ದಾರೆ. ಸದ್ಯ ಕಾಂಗ್ರೆಸ್ ಟಿಕೆಟಿಗೆ ರೇಸ್ ನಲ್ಲಿ ಇರುವ ಪ್ರಮುಖರು ಎಐಸಿಸಿ ಮುಖಂಡ ಹರಿಪ್ರಸಾದ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ರಮಾನಾಥ್ ರೈ. ಯುವ ನಾಯಕ ಮಿಥುನ್ ರೈ ಹೆಸರು ಕೂಡ ಕೇಳಿಬರುತ್ತಿದೆ. ಈ ನಡುವೆ ರೈ, ಸೊರಕೆ ಮೇಲೆ ಮುನಿಸಿರುವ ಯಾರೋ ಮುಸ್ಲಿಂ ಮುಖಂಡರಿಂದ ಹೀಗೆ ಸಭೆ ನಡೆಸಿ ರಾಜ್ಯ ನಾಯಕರಿಗೆ ಸಂದೇಶ ಕಳುಹಿಸಿದ್ದಾರೆ ಎಂದೇ ಹೇಳಲಾಗುತ್ತದೆ. ಒಂದು ವೇಳೆ ಮುಸ್ಲಿಂ ಮುಖಂಡರಿಗೆ ಟಿಕೆಟ್ ಕೊಡುವುದಿದ್ದರೂ ಯಾರಿಗೆ ಕೊಡುವುದು ಎನ್ನುವುದರ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಒಮ್ಮತದ ಅಭಿಪ್ರಾಯ ಇಲ್ಲ. ಸಜ್ಜನರು ರಾಜಕೀಯದಿಂದ ದೂರ ಇದ್ದಾರೆ. ಇದ್ದವರು ಗೆಲ್ಲುವ ಸಾಧ್ಯತೆ ಕ್ಷೀಣವಾಗಿದೆ!
Leave A Reply