ಸಹಕಾರಿ ಭೂಷಣ ಅಲ್ಲ, ಇದು ಉಪದ್ರವ ಭೂಷಣ.!
ಮಂಗಳೂರಿನಲ್ಲಿ ಶನಿವಾರ ಒಂದು ವೈಯಕ್ತಿಕ ಕಾರ್ಯಕ್ರಮ ನಡೆಯಿತು. ಅದರಿಂದ ಮಂಗಳೂರು ನಗರದ ಅರ್ಧದಷ್ಟು ಜನರಿಗೆ ತೊಂದರೆಯಾಯಿತು. ಒಂದು ವೇಳೆ ಆ ಕಾರ್ಯಕ್ರಮದ ಯಾವುದೇ ಜಾಹೀರಾತು ಇರದೇ ಹೋಗಿದಿದ್ರೆ ಮಂಗಳೂರಿನಲ್ಲಿ ಜನರಿಗೆ ಆ ಕಾರ್ಯಕ್ರಮದಿಂದ ಆದ ಕಿರಿಕಿರಿಯ ಬಗ್ಗೆನೆ ಒಂದು ಪುಟಕ್ಕೆ ಆಗುವಷ್ಟು ಸುದ್ದಿಯನ್ನು ಆಯಾ ಪತ್ರಿಕೆಗಳ ವರದಿಗಾರರು ಬರೆದು ಸಾಮಾಜಿಕ ಬದ್ಧತೆ ಮೆರೆದು ಹೆಮ್ಮೆ ಪಡುತ್ತಿದ್ದರು. ಆದರೆ ಈಗ ಹಾಗೆ ಮಾಡುವ ಹಾಗಿಲ್ಲ. ಯಾಕೆಂದರೆ ಪ್ರತಿ ಪತ್ರಿಕೆ, ಟಿವಿಯವರಿಗೆ ಅವರವರ ಯೋಗ್ಯತೆಗಿಂತ ಹೆಚ್ಚು ಹಣವನ್ನು ನೀಡಿ ಜಾಹೀರಾತು ಹಾಕಿರುವುದರಿಂದ ಸ್ವತ: ತಮಗೆನೆ ತೊಂದರೆ ಆದ್ರೂ ಯಾವ ವರದಿಗಾರರೂ ಬಾಯಿ ತೆರೆಯುವಂತಿಲ್ಲ. ಮಂಗಳೂರಿನ ಯಾವ ಅಂಕಣಕಾರರೂ ಈ ಬಗ್ಗೆ ತಮ್ಮ ಪತ್ರಿಕೆಯಲ್ಲಿ ವಿಶ್ವಕ್ಕೆ ಗೊತ್ತಾಗುವಂತೆ ಬರೆದಿಲ್ಲ. ಯಾರ ವಾಣಿಯೂ ಈ ವಿಷಯದ ಬಗ್ಗೆ ಮೊರೆದಿಲ್ಲ. ಯಾರು ಈ ತೊಂದರೆಯ ಬಗ್ಗೆ ಯಾರ ಜ್ಞಾನವೂ ಉದಯಿಸಿಲ್ಲ. ಯಾಕೆಂದರೆ ಎಲ್ಲರೂ ಆ ಕಾರ್ಯಕ್ರಮದ ವೈಭವವನ್ನು ಬರೆಯುವುದರಲ್ಲಿ ಬಿಝಿಯಾಗಿದ್ದರು. ಜನರಿಗೆ ಆದ ತೊಂದರೆ ಬಗ್ಗೆ ಬರೆದರೆ ಬರೆದ ಪತ್ರಕರ್ತ ಮುಂದಿನ ಬಾರಿ ಯಾವ ಮುಖ ಇಟ್ಟುಕೊಂಡು ಹೋಗಿ ಜಾಹೀರಾತು, ಅದು ಇದು ಕೇಳುವುದು. ಒಂದು ವೇಳೆ ಜಾಹೀರಾತು ನೀಡದ ವ್ಯಕ್ತಿಯಾಗಿದ್ದರೆ ಇದೇ ಪತ್ರಕರ್ತರು ತಮ್ಮ ಪತ್ರಿಕೆಯಲ್ಲಿ ಇವರು ಸಹಕಾರಿ ಭೂಷಣ ಅಲ್ಲ, ಉಪದ್ರವಿ ಭೂಷಣ ಎಂದೇ ಬರೆಯುತ್ತಿದ್ದರು. ಸದ್ಯ ಇಂತವರಿಂದ ಮಾಧ್ಯಮದ ಕೆಲವರು “ಚೆನ್ನಾಗಿ” ಇರುವುದರಿಂದ ಅವರ ಲೇಖನಿಯಿಂದ ಶೂರ, ವೀರ ಎನ್ನುವುದೇ ಬರುತ್ತದೆ ವಿನ: ಅಂತವರ ನೆಗೆಟಿವ್ ಅಂಶಗಳು ಇದ್ರೂ ಬರಲ್ಲ.
ಟ್ರಾಫಿಕ್ ಜಾಮ್ ತೊಂದರೆಯ ನಡುವೆ..
ನಾನು ಹೇಳುತ್ತಿರುವುದು ಎಂ ಎನ್ ರಾಜೇಂದ್ರ ಕುಮಾರ್ ಅವರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕೀಯ ಪದವಿಯ ಸನ್ಮಾನ್ಯ ಕಾರ್ಯಕ್ರಮದ ಬಗ್ಗೆ. ತಾವೇ ಸ್ವತ: ಎಂಟು ಕೋಟಿ ರೂಪಾಯಿ ಖರ್ಚು ಮಾಡಿ ತಮಗೆನೆ ಕೆಲವರು ಹೊಗಳುವ ವ್ಯವಸ್ಥೆ ಮಾಡಿ, ತಮ್ಮ ಬಗ್ಗೆ ತಾವೇ ಪುಸ್ತಕ ಬರೆಸಿ, ತಾವೇ ವೇದಿಕೆಯಲ್ಲಿ ಹಾರ, ತುರಾಯಿ ಹಾಕಿಸಿಕೊಳ್ಳುವುದರಿಂದ ಸಾಧಿಸಿದ್ದಾದರೂ ಏನು? ಒಂದು ವೇಳೆ ಹೀಗೆ ಮಾಡುವುದಾದರೆ ನಗರ ಪ್ರದೇಶದಿಂದ ಹೊರಗೆ ಮಾಡಬಹುದಿತ್ತಲ್ಲ. ಒಂದು ವೇಳೆ ನೀವು ಪ್ರಭಾವಿಗಳಲ್ಲದೇ ಹೋಗಿದ್ದಲ್ಲಿ ನೀವು ಮೂವತ್ತು-ನಾಲ್ವತ್ತು ಬೈಕ್ ಗಳ ರ್ಯಾಲಿ ಮಾಡುವುದಾದರೂ ನಗರ ಪ್ರದೇಶದ ಒಳಗೆ ನಿಮಗೆ ಅನುಮತಿ ಕೊಡಲು ಪೊಲೀಸ್ ಅಧಿಕಾರಿಗಳು ಒಪ್ಪುವುದಿಲ್ಲ. ನಿಮ್ಮ ಬೈಕ್ ರ್ಯಾಲಿಯಿಂದ ಟ್ರಾಫಿಕ್ ಜಾಮ್ ಆಗುತ್ತೆ, ಜನರಿಗೆ ಉಪದ್ರವ ಆಗುತ್ತದೆ. ಟ್ರಾಫಿಕ್ ಕಂಟ್ರೋಲ್ ಮಾಡಲು ಕಷ್ಟವಾಗುತ್ತೆ ಎಂದು ಹತ್ತು ಕಾರಣ ಕೊಟ್ಟು ಕಳುಹಿಸುತ್ತಾರೆ. ಅದೇ ನೀವು ಆರ್ಥಿಕವಾಗಿ ಪ್ರಭಾವಿಗಳಾದರೆ ಅಂತಹ ಯಾವ ಪ್ರಶ್ನೆಯೂ ನಿಮಗೆ ಎದುರಾಗುವುದಿಲ್ಲ. ಮಾಡಿ ಸರ್, ಎಲ್ಲವನ್ನು ನಾವು ನಿಭಾಯಿಸುತ್ತೇವೆ ಎಂದು ಪ್ರೋತ್ಸಾಹ ಸಿಗುತ್ತದೆ. ಹಾಗೆ ಆಗಿರುವುದರಿಂದಲೇ ಮೊನ್ನೆ ಶನಿವಾರ ನಗರ ಪ್ರದೇಶದಲ್ಲಿ ಆ ಪರಿ ತೊಂದರೆಯಾದದ್ದು. ಬೆಳಿಗ್ಗೆ 9 ಗಂಟೆಯಿಂದಲೇ ಪಿವಿಎಸ್ ಬಳಿಯಿಂದ ಡೊಂಗರಕೇರಿ ಕಡೆಗೆ ವಾಹನಗಳು ಹೋಗುವಂತಿಲ್ಲ ಎನ್ನುವುದರಿಂದ ಪಿವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ, ಹಂಪನಕಟ್ಟೆ, ಪುರಭವನ, ಸ್ಟೇಟ್ ಬ್ಯಾಂಕ್ ಎಲ್ಲಾ ಕಡೆ ಟ್ರಾಫಿಕ್ ಜಾಮ್ ಆದದ್ದೇ ಆದದ್ದು. ಇದು ಪೊಲೀಸರಿಗೆ ಮೊದಲೇ ಗೊತ್ತಿರಲಿಲ್ಲವೇ. ಅನುಮತಿ ಕೊಡುವಾಗಲೇ ಅವರು ಕಾರ್ಯಕ್ರಮಕ್ಕೆ ಎಷ್ಟು ಜನ ಎಂದು ಕೇಳಿಯೇ ಕೇಳುತ್ತಾರೆ. ಹಾಗಿರುವಾಗ ಟ್ರಾಫಿಕ್ ಜಾಮ್ ಆಗುವುದು ಗ್ಯಾರಂಟಿಯಾಗಿತ್ತಲ್ಲ ಅಥವಾ ಟ್ರಾಫಿಕ್ ಜಾಮ್ ಆಗಿ ಅದರ ನಡುವೆ ಯಾವುದಾದರೂ ರೋಗಿ ಸಿಲುಕಿಕೊಂಡು ಸತ್ತರೂ ಯಾವುದೇ ಮೀಡಿಯಾದವರು ಹಾಕುವುದಿಲ್ಲ ಎಂದು ಪೊಲೀಸಿನವರಿಗೂ ಖಚಿತವಾಗಿ ಗೊತ್ತಿತ್ತಾ. ಟ್ರಾಫಿಕ್ ಬ್ಲಾಕ್ ಆಗಿ ಎಂತಹ ಸಮಸ್ಯೆ ಆದರೂ ನಾವು ಹೊರಗೆ ಬರದಂತೆ ನೋಡಿಕೊಳ್ಳುತ್ತೇವೆ ಎಂದು ಗ್ಯಾರಂಟಿ ಮೊದಲೇ ಕೊಡಲಾಗಿತ್ತಾ?
ಬಂದವರು ಎಷ್ಟು…
ಇನ್ನು ಕೇಂದ್ರ ಮೈದಾನದಲ್ಲಿ ಕ್ರಿಕೆಟ್ ಮತ್ತು ಫುಟ್ಬಾಲ್ ಮೈದಾನ ಎರಡೂ ಸೇರಿದರೆ ಹೆಚ್ಚೆಂದರೆ ಎಷ್ಟು ಸೇರಬಹುದು ಎಂದು ಎಲ್ಲ ಪತ್ರಕರ್ತರಿಗೆ ಗೊತ್ತಿದೆ. ಒಬ್ಬರ ಹತ್ತಿರ ಇನ್ನೊಬ್ಬರು ನಿಂತರೂ ಲಕ್ಷ ದಾಟಲ್ಲ. ಆಗಿರುವಾಗ ಎರಡು ಲಕ್ಷ ಜನ ಸೇರಿದ್ರು ಎಂದು ಹೇಳುವ ಮೂಲಕ ರಾಜೇಂದ್ರ ಕುಮಾರ್ ಅವರ ಇಮೇಜನ್ನು ಹೆಚ್ಚಿಸುವ ಕೆಲಸ ನಡೆಯಿತಾ? ಅದರೊಂದಿಗೆ ಎಲ್ಲಾ ಸಹಕಾರಿ ಸಂಘದ ಸದಸ್ಯರನ್ನು ಕಡ್ಡಾಯವಾಗಿ ಬರಲೇಬೇಕೆಂದು ಆದೇಶ ಹೋಗಿತ್ತಲ್ಲ. ಅವರಿಗೆ ಸರಿಯಾದ ಊಟ, ತಿಂಡಿಯ ವ್ಯವಸ್ಥೆ ಇತ್ತಾ? ಒಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಪೇಟಾ ಧರಿಸಿ ವೇದಿಕೆಯ ಮೇಲೆ ಮಿಂಚಿದ್ದೇ ಮಿಂಚಿದ್ದು. ಮುಖ್ಯಮಂತ್ರಿಯೊಬ್ಬರು ಬರಲಿಲ್ಲ. ಆದರೆ ಅವರ ಫೋಟೋ ಫ್ಲೆಕ್ಸ್ ಹಾಕಿಸಿ ಮಂಗಳೂರಿನ ಸಿಕ್ಕಿದ ಕಡೆ ಹಾಕಲಾಗಿತ್ತು.
ಪುರಭವನದ ಎದುರು ನೂತನವಾಗಿ ನಿರ್ಮಾಣವಾಗುತ್ತಿರುವ ಕ್ಲಾಕ್ ಟವರ್ ಕೂಡ ಇವರ ಫ್ಲೆಕ್ಸ್ ಭರಾಟೆಯಲ್ಲಿ ಮುಚ್ಚಿಹೋಗಿತ್ತು. ಹೋಗಲಿ, ಫ್ಲೆಕ್ಸ್ ಹಾಕಿ ಪ್ರಚಾರ ತೆಗೆದುಕೊಂಡರು ಎಂದೇ ಇಟ್ಟುಕೊಳ್ಳೋಣ. ಪಾಲಿಕೆಗೆ ಹಣ ಕಟ್ಟಿ ಅನುಮತಿ ಪಡೆದುಕೊಂಡಿದ್ದಾರಾ, ಇಲ್ಲ, ಅದು ಇಲ್ಲ. ಸುಮ್ಮನೆ ಮಂಗಳೂರಿನಲ್ಲಿ ನಮ್ಮನ್ನು ಕೇಳುವಂತಹ ಧೈರ್ಯ ಯಾರಿಗೆ ಇದೆ ಎಂದು ಅಂದುಕೊಂಡು ಹಾಕಿದ್ದಾರೆ. ಇದನ್ನು ಯಾವುದನ್ನೂ ದಕ್ಷಿಣ ಕನ್ನಡ ಜಿಲ್ಲಾಡಳಿತ ನೋಡಲ್ವಾ? ಅಥವಾ ಕಣ್ಣು ಮುಚ್ಚಿ ಶನಿವಾರ ಬೆಳಿಗ್ಗೆ ಮಲಗಿದವರು ಸಂಜೆ ಎದ್ರಾ ಅಥವಾ ಮುಖ್ಯಮಂತ್ರಿ ಅವರು ಬರುವ ಪ್ರೋಗ್ರಾಂ ಒಮ್ಮೆ ಆಗಿ ಹೋಗಲಿ ಎಂದು ನಿಶ್ಚಯಿಸಿದ್ರಾ? ಒಂದು ವೇಳೆ ಜಿಲ್ಲಾಧಿಕಾರಿ ಸೆಂಥಿಲ್ ಅವರು ಸಣ್ಣಗೆ ಏನ್ರೀ ಇದೆಲ್ಲಾ ಎಂದು ಕೇಳಿದರೂ ಎಲ್ಲಾ ಪಕ್ಷದ ರಾಜಕಾರಣಿಗಳನ್ನು ತಮ್ಮ ಕಿಸೆಯಲ್ಲಿ ಇಟ್ಟುಕೊಂಡಿರುವ ಮಹಾನುಭಾವರು ಮೇಲಿನಿಂದ ಒತ್ತಡ ತಂದು ಪ್ರೋಗ್ರಾಂ ಮಾಡಿಯೇ ಮಾಡುತ್ತಿದ್ದರು. ಆದರೆ ಊರಿಗೆ ತೊಂದರೆ ಕೊಟ್ಟು ಪೇಟಾ ಹಾಕಿಸಿಕೊಂಡು ವೇದಿಕೆಯಲ್ಲಿ ನಿಂತು ಭಾಷಣ ಮಾಡಿದರೆ ಸಹಕಾರಿ ತತ್ವದ ಉದ್ದೇಶ ಈಡೇರುತ್ತಾ ಅಥವಾ ಇದು ವೋಟ್ ಬ್ಯಾಂಕ್ ತೋರಿಸಿ ರಾಜಕೀಯ ಮುಖಂಡರಿಗೆ ಪವರ್ ತೋರಿಸುವ ವಿಧಾನವಾಗಿತ್ತಾ.
Leave A Reply