ತುಂಬೆಯಲ್ಲಿ ಏಳು ಮೀಟರ್ ನಿಲ್ಲಿಸುವುದು ಮತ್ತು ಭಗೀರಥ ಗಂಗೆಯನ್ನು ಭೂಲೋಕಕ್ಕೆ ತರುವುದು ಎರಡೂ ಒಂದೇ!!!
ಏಳು ಮಹಡಿಯ ಮನೆ ಕಟ್ಟಬೇಕೆಂದು ನಿರ್ಧಾರ ಮಾಡುತ್ತೇವೆ. ಆದರೆ ಎರಡು ಸೆಂಟ್ಸ್ ಜಾಗ ಖರೀದಿಸುತ್ತೇವೆ. ನಂತರ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತೇವೆ. ನಂತರ ಅಕ್ಕಪಕ್ಕದಲ್ಲಿ ಜಾಗ ಎಲ್ಲಿಯಾದರೂ ಸಿಗುತ್ತದೆಯೋ ಎಂದು ನೋಡುತ್ತೇವೆ. ಸಿಗಲ್ಲ, ಸಿಕ್ಕಿದರೂ ನಮ್ಮ ಕನಸು ಈಡೇರಿಸಲು ಆಗದೇ ಬೇಸರಪಟ್ಟುಕೊಳ್ಳುತ್ತೇವೆ. ಇದು ಉದಾಹರಣೆ ಅಷ್ಟೆ. ಇಂತಹ ಕನಸನ್ನು ಜನಸಾಮಾನ್ಯರು ಕಂಡಿರುತ್ತಾರೆ ಮತ್ತು ಈಡೇರದೇ ಕೈ ಬಿಟ್ಟಿರುತ್ತಾರೆ.
ಆದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆ ಹಾಗಲ್ಲ. ಅಲ್ಲಿ ಅತೀ ಬುದ್ಧಿವಂತ ಇಂಜಿನಿಯರ್ ಗಳಿದ್ದಾರೆ. ಕಮೀಷನರ್ ಇದ್ದಾರೆ. ಒವರ್ ಸ್ಮಾರ್ಟ್ ಮೇಯರ್ ಗಳಿರುತ್ತಾರೆ. ಎಲ್ಲ ಗೊತ್ತಿರುವ ಕಾರ್ಪೋರೇಟರ್ ಗಳಿರುತ್ತಾರೆ. ಎಲ್ಲರೂ ಸೇರಿ ಏಳು ಮೀಟರ್ ಉದ್ದದ ಅಣೆಕಟ್ಟೊಂದನ್ನು ಕಟ್ಟುತ್ತಾರೆ. ಅಲ್ಲಿ ನೀರು ನಿಲ್ಲಿಸುವ ವಿಷಯ ಬಂದಾಗ ಎಷ್ಟು ಜಾಗ ಮುಳುಗಡೆಯಾಗುತ್ತದೆ ಎನ್ನುವ ವಿಷಯ ಇವರಿಗೆ ಗೊತ್ತಿರುವುದಿಲ್ಲ. ಕೆಲವರು ತಮ್ಮ ಜಾಗ ಮುಳುಗಡೆಯಾಗುತ್ತದೆ ಎಂದು ಆತಂಕದಿಂದ ಜನಪ್ರತಿನಿಧಿಗಳ ಬಳಿ ಬರುತ್ತಾರೆ. ನಿಮಗೆ ಹಣ ಕೊಡೋಣ ಎಂದು ಹಿಂದಿನ ಉಸ್ತುವಾರಿ ಸಚಿವರು, ಒಂದು ವರ್ಷದ ಹಿಂದೆ ಇದ್ದ ಶಾಸಕರುಗಳು ಭರವಸೆ ಕೊಡುತ್ತಾರೆ. ಅಲ್ಲಿಗೆ ಇವತ್ತು ಪರಿಹಾರ ಸಿಗುತ್ತೆ, ನಾಳೆ ಸಿಗುತ್ತೆ ಎಂದು ಆಸೆಯಿಂದ ಭೂಮಿ ಕಳೆದುಕೊಳ್ಳಲಿರುವ ಜನ ಕಾಯುತ್ತಾ ಇದ್ದಾರೆ. ಆದರೆ ಪರಿಹಾರ ಕೊಡಲು ರಾಜ್ಯ ಸರಕಾರ ಹಣ ಇಟ್ಟಿಲ್ಲ. ಹಣ ಇಲ್ಲ ಎಂದಲ್ಲ, ನನ್ನ ಪ್ರಕಾರ ನೂರಾ ಹದಿನೈದು ಕೋಟಿಯಷ್ಟು ಬೇಕಾಗುತ್ತದೆ. ಆದರೆ ಕೊಡುವುದು ಯಾರು?
ರಾಜ್ಯದಲ್ಲಿ ಇರುವುದು ಜೆಡಿಎಸ್ – ಕಾಂಗ್ರೆಸ್ ಸರಕಾರ. ನಾವು ಜೆಡಿಎಸ್ ಗೆ ಮತ ಹಾಕಿಲ್ಲ. ಕಾಂಗ್ರೆಸ್ ನಿಂದ ಇರುವುದು ಯುಟಿ ಖಾದರ್ ಮಾತ್ರ. ಅವರ ಉಳ್ಳಾಲಕ್ಕೆ ಇದೇ ತುಂಬೆಯಿಂದ ಪಂಪ್ ಮಾಡುವ ನೀರು ಹೋಗುತ್ತದೆಯಾದರೂ ಅವರಿಗೆ ಒಂದು ವಿಷಯ ಗೊತ್ತಿದೆ. ಜಾಗ ಕಳೆದುಕೊಳ್ಳಲಿರುವ ನಾಗರಿಕರು ಬಂಟ್ವಾಳದವರು. ಆ ವಿಧಾನಸಭಾ ಕ್ಷೇತ್ರದ ಮತದಾರರ ಯಾವ ಹಂಗೂ ಕೂಡ ಸನ್ಮಾನ್ಯ ಯುಟಿ ಖಾದರ್ ಅವರಿಗೆ ಇಲ್ಲ. ಆದ್ದರಿಂದ ಅವರು ತುಂಬೆ ಹೊಸ ವೆಂಟೆಂಡ್ ಡ್ಯಾಂನಲ್ಲಿ ಏಳು ಮೀಟರ್ ನೀರು ನಿಲ್ಲಿಸಿದರೆ ಜಾಗ ಕಳೆದುಕೊಳ್ಳುವವರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದ್ದರಿಂದ ಏಳು ಮೀಟರ್ ನೀರು ನಿಲ್ಲಿಸುವ ಸ್ಥಿತಿಯಲ್ಲಿ ಪಾಲಿಕೆ ಇಲ್ಲ. ರಾಜ್ಯ ಬಜೆಟಿನಲ್ಲಿ ಹಣ ಇದಕ್ಕಾಗಿ ಇಟ್ಟು ಅದು ಮಂಗಳೂರಿಗೆ ಬಂದು ಅದನ್ನು ಸಂತ್ರಸ್ತರಿಗೆ ಹಂಚಿ ನಂತರ ನೀರು ನಿಲ್ಲಿಸುವಾಗ ಭಗೀರಥ ಗಂಗೆಯನ್ನು ಭೂಮಿಗೆ ತಂದಂತೆ ಕಷ್ಟ ಆಗಲಿದೆ.
ಅದು ಎಷ್ಟು ಕಷ್ಟವಾಗುತ್ತೋ, ಬಿಡುತ್ತೋ ದೇವರಿಗೆ ಗೊತ್ತು. ಆದರೆ ಮಂಗಳೂರಿನ ಬೀದಿ ಬೀದಿಗಳಲ್ಲಿ ಇರುವ ಸಾರ್ವಜನಿಕ ಪೈಪುಗಳನ್ನು ತೆಗೆಸಲು ಪಾಲಿಕೆಗೆ ಕಷ್ಟವಾಗುವುದಿಲ್ಲ. ಆದರೆ ತೆಗೆಸಲು ಆಗುತ್ತಿಲ್ಲ. ಯಾಕೆಂದರೆ ಪಾಲಿಕೆಯ ಕಾರ್ಪೋರೇಟರ್ ಗಳು ಬಿಡುತ್ತಿರಲಿಲ್ಲ. ಹತ್ತು ವರ್ಷಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಲಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಅದರ ಮೂಲಕ 500 ರೂಪಾಯಿ ಕೊಟ್ಟು ನೀರಿನ ಪೈಪುಗಳನ್ನು ಹಾಕಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಲ್ಲಿಯ ತನಕ ಸಾರ್ವಜನಿಕ ಪೈಪುಗಳಲ್ಲಿ ಬರುತ್ತಿದ್ದ ನೀರನ್ನು ಬಳಸುತ್ತಿದ್ದ ಅನೇಕರು ಸ್ವಂತ ನೀರಿನ ಪೈಪು ಹಾಕಿಸಿಕೊಂಡರು. ಆದರೆ ಇಲ್ಲಿಯ ತನಕ ಅನೇಕ ಕಡೆಗಳಲ್ಲಿ ಆ ಸಾರ್ವಜನಿಕ ಪೈಪುಗಳು ಹಾಗೆ ಉಳಿದಿವೆ. ಅದರಿಂದ ಬರುವ ನೀರು ಬೇಕಾದಾಗ ಎಲ್ಲಾ ರಿಕ್ಷಾ, ಬಸ್ ತೊಳೆಯಲು, ರಸ್ತೆ ಬದಿಯ ಕ್ಯಾಂಟಿನ್, ಪಾನಿಪುರಿ ಅಂಗಡಿಗಳಿಗೆ ಲೆಕ್ಕವಿಲ್ಲದಷ್ಟು ಲೀಟರ್ ಖರ್ಚಾಗುತ್ತಿರುತ್ತದೆ. ಸಾರ್ವಜನಿಕ ಪೈಪುಗಳನ್ನು ಲೆಕ್ಕಪ್ರಕಾರ ತೆಗೆದುಹಾಕಬೇಕಿತ್ತು. ಆದರೆ ಕಾರ್ಪೋರೇಟರ್ ಗಳು ತೆಗೆಯಲು ಬಿಡುತ್ತಿಲ್ಲ. ಅವರಿಗೆ ಕೆಟ್ಟವರಾಗಲು ಇಷ್ಟವಿಲ್ಲ. ಒಟ್ಟಿನಲ್ಲಿ ಅತ್ತ ಏಳು ಮೀಟರ್ ನೀರನ್ನು ತುಂಬೆಯಲ್ಲಿ ನಿಲ್ಲಿಸಲು ಆಗುತ್ತಿಲ್ಲ. ಇತ್ತ ಸಾರ್ವಜನಿಕ ಪೈಪುಗಳನ್ನು ತೆಗೆಯಲು ಯಾರೂ ಮುಂದಾಗುತ್ತಿಲ್ಲ. ಹೀಗಿರುವಾಗ ನೀರು ಉಳಿಸುವುದು ಹೇಗೆ?
Leave A Reply